Advertisement

ಯಲ್ಲಾಪುರದಲ್ಲಿದೆ ಸುಸಜ್ಜಿತ ವಾಚನಾಲಯ

03:46 PM Nov 04, 2019 | Suhan S |

ಯಲ್ಲಾಪುರ: ಒಂದು ಕಾಲದಲ್ಲಿ ಜೋಪಡಿಯಲ್ಲಿ ನಡೆಯುತ್ತಿದ್ದ ಯಲ್ಲಾಪುರತಾಲೂಕು ಶಾಖಾ ಗ್ರಂಥಾಲಯ ಈಗ ಜಿಲ್ಲೆಯಲ್ಲೇ ಮಾದರಿಯಾಗಿ ಭವ್ಯ ಕಟ್ಟಡದಲ್ಲಿ ಸುಸಜ್ಜಿತ ವ್ಯವಸ್ಥೆಯೊಂದಿಗೆ ನಗರದ ಹೃದಯ ಭಾಗದಲ್ಲೇ ಕಾರ್ಯ ನಿರ್ವಹಿಸುತ್ತಿದೆ. ಈ ಹಿಂದೆ ಬಾಡಿಗೆ ಸ್ಥಳದಲ್ಲಿದ್ದು ನಾಲ್ಕು ವರ್ಷಗಳ ಹಿಂದಷ್ಟೇ ಸ್ವಂತ ನಿವೇಶನದಲ್ಲಿ ಸುಸಜ್ಜಿತ ಭವ್ಯ ಕಟ್ಟಡ ಹೊಂದಿದೆ.ಪ್ರಾಚೀನ ಇತಿಹಾಸ ಹೊಂದಿರದಿದ್ದರೂ ಸುಭಾಸ ಗ್ರಂಥಾಲಯ ಎಂಬ ಹೆಸರಿನಲ್ಲಿ ಸ್ಥಳದಿಂದ ಸ್ಥಳಕ್ಕೆ ಎತ್ತಂಗಡಿಗೊಳ್ಳುತ್ತಲೇ ಇತ್ತು.

Advertisement

1982ರಲ್ಲಿ ಪ್ರಾರಂಭವಾದ ಗ್ರಂಥಾಲಯ ಕಾರವಾರ ಹುಬ್ಬಳ್ಳಿ ಹೆದ್ದಾರಿ ಪಕ್ಕದ ಜೋಡಕೆರೆ ಬಳಿ ಬಾಡಿಗೆ ಕಟ್ಟಡದಲ್ಲಿತ್ತು. ನಂತರ ದೇವಿ ದೇವಸ್ಥಾನ ರಸ್ತೆಯಲ್ಲಿರುವ ಖಾಸಗಿ ಕಟ್ಟಡದಲ್ಲಿ ಬಾಡಿಗೆ ಸ್ಥಲದಲ್ಲಿ ಕರ್ಯನಿರ್ವಹಿಸಿ ನಂತರ ಜೈಲ್‌ ಕಟ್ಟಡದಲ್ಲಿಕೆಲಕಾಲ ನಡೆದು ನಂತರ ಪಪಂ ಪಕ್ಕಕ್ಕೆ ನಗರದ ಮಧ್ಯಭಾಗಕ್ಕೆ ಬಂದು ತಳವೂರಿತು. ಈ ಕಾಲಕ್ಕೆ ಗ್ರಂಥಪಾಲಕರಾಗಿ ಬಂದ ಎಫ್‌.ಎಚ್‌. ಬಾಸೂರ ಗ್ರಂಥಾಲಯ ವ್ಯವಸ್ಥೆ ಬಗ್ಗೆ ಬಹಳ ಕಾಳಜಿ ಹೊಂದಿದವರಾಗಿದ್ದು ನಿರ್ಮಾಣ ವ್ಯವಸ್ಥೆಯಲ್ಲಿ ಇವರೊಬ್ಬ ಗ್ರಂಥಪಾಲಕರಾಗಿಯೂ ಮುತುವರ್ಜಿ ವಹಿಸಿದ್ದರು. ಇವರ ಈ ಕ್ಷೇತ್ರದಲ್ಲಿನ ಆಸಕ್ತಿ ಅಚ್ಚುಕಟ್ಟುತನ, ನಿರ್ವಹಣೆ, ಓದುಗರ ಸೆಳೆಯುವ ರೀತಿಯಿಂದಾಗಿ ಗ್ರಂಥಾಲಯಕ್ಕೆ ಹೆಚ್ಚು ಮಹತ್ವ ಬಂದಿತು. ಸ್ಥಳ, ಹಣ ಮಂಜೂರಿಯಂತಹ ಸಂದರ್ಭದಲ್ಲಿ ಕಡತ ವಿಲೆವಾರಿಯಲ್ಲಿ ನೇರವಾಗಿ ಭಾಗಿಯಾಗಿ ಕೆಲಸ ನಿರ್ವಹಿಸಿದರು. ಪರಿಣಾಮ ಮಂಜೂರಾದ ಮೂರು ಗುಂಟೆ ಸ್ಥಳದಲ್ಲಿ ನ.18, 2014 ರಂದು 42 ಲಕ್ಷ ರೂ ವೆಚ್ಚದ ಸುಸಜ್ಜಿತ ಕಟ್ಟಡದಲ್ಲಿ ಲೋಕಾರ್ಪಣೆಗೊಂಡಿದೆ.

ಏನಿದೆ ಏನಿಲ್ಲ: ವಾಸ್ತವವಾಗಿ ಈ ಗ್ರಂಥಾಲಯ ಜಿಲ್ಲಾ ಕೇಂದ್ರ ಗ್ರಂಥಾಲಯಕ್ಕೇನೂ ಕಮ್ಮಿಯಿಲ್ಲ. ಜಿಲ್ಲಾ ಕೇಂದ್ರ ಗ್ರಂಥಾಲಯದ ನಂತರದ ಭವ್ಯ ಕಟ್ಟಡ ಹೊಂದಿದ್ದು ಇಲ್ಲಿನ ಶಾಖಾ ಗ್ರಂಥಾಲಯ. ಸಧ್ಯಕ್ಕಂತೂ ಈ ಗ್ರಂಥಾಲಯ ಹೊಕ್ಕರೆ ಖುಷಿಯಾಗುತ್ತದೆ. ಇಲ್ಲಿ ಧೂಳು ಕೂಡ್ರಲು ಬರೀ ತೆರೆದ ಕಪಾಟಿನಲ್ಲಿ ಪುಸ್ತಕಗಳಿಲ್ಲ. ಸರಿಯಾದ ಅಲೆಮಾರಗಳಲ್ಲಿ ಜೋಡಿಸಲಾಗಿದೆ. ಓದುವವರಿಗೆ ಪತ್ರಿಕೆ, ಪುಸ್ತಕ, ಜೊತೆಗೆ ಮಹಿಳೆಯರಿಗೇ ಪ್ರತ್ಯೇಕ ವಿಭಾಗ ಇಲ್ಲಿನ ವಿಶೇಷ.

ಟೇಬಲ್‌ ಗಳು ಕುಷನ್‌ ಖುರ್ಚಿಗಳು, ಸಾಕಷ್ಟು ಬೆಳಕಿನ ವ್ಯವಸ್ಥೆ, ಶೌಚಾಲಯ ವ್ಯವಸ್ಥೆ, ಕಡಿಯುವ ನೀರಿನ ಸೌಕರ್ಯವೆಲ್ಲವೂ ಉತ್ತಮವಾಗಿಯೇ ಇದೆ. ನಿತ್ಯ 24 ನಿಯತಕಾಲಿಕಗಳು, ಪಾಕ್ಷಿಕ, ಮಾಸಿಕ ವಿವಿಧ ಪತ್ರಿಕೆಗಳು ಸೇರಿ 75-ರಿಂದ 80 ರಷ್ಟು ಬರುತ್ತವೆ. ಈ ಗ್ರಂಥಾಲಯದಲ್ಲಿ 33551 ರಷ್ಟು ಪುಸ್ತಕಗಳಿದ್ದು ಇದರಲ್ಲಿ ಕಥೆ, ಕಾದಂಬರಿ ಜೊತೆಗೆ ಶಾಲಾ ವಿದ್ಯಾರ್ಥಿಗಳ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಬೇಕಾಗುವ ಪುಸ್ತಕಗಳ ಸಂಗ್ರಹವಿದೆ. ಪ್ರತಿವರ್ಷ ಹೆಚ್ಚಿನ ಪುಸ್ತಕ ಬರುತ್ತಿದೆ. 1228 ರಷ್ಟು ಸದಸ್ಯರಿದ್ದು ನಿತ್ಯ 150 ರಷ್ಟು ಓದುಗರು ಇಲ್ಲಿಗೆ ಬರುತ್ತಾರೆ.

ಪುಸ್ತಕಗಳನ್ನು ಮನೆಗೆ ಕೊಂಡೊಯ್ಯಲು ಅವಕಾಶವಿದ್ದು ಅವರ ಸಂಖ್ಯೆಯೂ ಸಾಕಷ್ಟಿದೆ. ಆದರೆ ಅದೇ ಇದರ ಶಾಖಾ ಗ್ರಾಮೀಣ ಗ್ರಂಥಾಲಯಗಳ ಸ್ಥಿತಿ ಚಿಂತಾಜನಕವಿದೆ. ತಾಲೂಕಿನ 14 ಗ್ರಾಪಂಗಳಲ್ಲಿಯೂ ಕಾರ್ಯನಿರ್ವಹಿಸುತ್ತಿದೆ. ಸಿಬ್ಬಂದಿ ಕೊರತೆಯೇನೋ ಇಲ್ಲ. ಆದರೆ ಮೂಲ ಸೌಕರ್ಯದ ನಡುವೆಯೂ ನಡೆಯುತ್ತಿದೆ. ಅದರಲ್ಲಿಯೂ ವಜ್ರಳ್ಳಿಯಲ್ಲಿ ಸ್ವಾಮಿ ವಿವೇಕಾನಂದ ಬಳಗದಡಿ ನಡೆಯುತ್ತಿರುವ ಗರಂಥಾಲಯ ಗ್ರಂಥಪಾಲಕ ದತ್ತಾತ್ರಯ ಕಣ್ಣಿಪಾಲ್‌ರ ಮುತುವರ್ಜಿಯಿಂದಾಗಿ ಓದುಗರ ಗಮನ ಸೆಳೆಯುತ್ತಿದೆ.  ನೂತನ ಪಂಚಾಯತ ಚಂದ್ಗುಳಿಗೆ ಇನ್ನೂ ಶಾಖಾ ಗ್ರಾಮೀಣ ಗ್ರಂಥಾಲಯ ಮಂಜೂರಾತಿ ದೊರೆತಿಲ್ಲ. ಕೆಲವಷ್ಟು ಪಂಚಾಯತ ನೀಡಿರುವ ಹರಕು ಮುರಕು ಸೋರುವ ಕಟ್ಟಡಗಳಿವೆ. ಇನ್ನು ಕೆಲವಲ್ಲಿ ಆಸನಗಳಿಲ್ಲ. ಇನ್ನೂ ಕೆಲವುಕಡೆ ಓದುಗರೇ ಬರುವುದು ಕಡಿಮೆ.

Advertisement

ಇದೊಂದು ಇಲ್ಲಿಯ ದೌರ್ಭಾಗ್ಯ: ಜಿಲ್ಲಾ ಕೇಂದ್ರದ ತಾಲೂಕು ಶಾಖಾ ಕೇಂದ್ರ ಗ್ರಂಥಾಲಯ ನಗರದ ಹೃದಯ ಭಾಗದಲ್ಲೆನೋ ಇದೆ. ಪಕ್ಕದಲ್ಲಿಯೇ ಶಹರ ಪೊಲೀಸ್‌ ಠಾಣೆಯಿದೆ. ಪಕ್ಕದಲ್ಲಿ ಪ.ಪಂ ಕಟ್ಟಡವಿದೆ. ಮಧ್ಯೆ ಗ್ರಂಥಾಲಯವಿದೆ. ಆದರೆ ಇಲ್ಲಿ ರಾತ್ರಿ ಮಜಾ ಉಡಾಯಿಸಲು ಬಂದು ಅಂದ ಕೆಡಿಸುವವರ ಕಾಟ ಹೆಚ್ಚಿದೆ. ಎಣ್ಣೆ ಕುಡಿದು ಬಿಸಾಡಿದ ಬಾಟಲಿ, ಗಲೀಜು ಇತ್ಯಾದಿಗಳ ರಾಶಿಯೇ ಬಿದ್ದಿರುತ್ತದೆ. ಬಾಗಿಲು ತೆರೆದು ಇಂತಹುದನ್ನು ಶುಚಿಗೊಳಿಸುವುದೆ ನಮ್ಮ ಕಾಯಕವಾಗಿಬಿಟ್ಟಿದೆ ಎನ್ನುತ್ತಾರೆ ಗ್ರಂಥಪಾಲಕರು. ಅಲ್ಲದೇ ಕಿಟಕಿಯ ಗಾಜು ಒಡೆದು ಹಾಕಿದ ಸಂಗತಿಗಳೂ ಇವೆ.

ನಿಲುಗಡೆ ವ್ಯವಸ್ಥೆ: ಗ್ರಂಥಾಲಯಕ್ಕೆ ಬರುವ ಓದುಗರಿಗೆ ವಾಹನ ನಿಲುಗಡೆಗೆ ಸರಿಯಾದ ಪಾರ್ಕಿಂಗ್‌ ವ್ಯವಸ್ಥೆಯೊಂದು ಇಲ್ಲಿನ ಕೊರತೆಯಾಗಿದೆ.

ಓದುಗರೇ ಗ್ರಂಥಾಲಯದ ಆಸ್ತಿ. ಇಲ್ಲಿ ಅವರ ಎಲ್ಲಾ ಬೇಡಿಕೆ ಈಡೇರಸಲಾಗುತ್ತಿಲ್ಲ. ಆದರೂ ಓದುಗರು ಜ್ಞಾನದಾಹ ತೀರಿಸಿಕೊಳ್ಳಲು ಬಂದು ಓದುತ್ತಾರೆ. ಇದು ತೀರಾ ಗ್ರಾಮೀಣವಾದರೂ ಓದುಗರಿಗೆ ಪುಸ್ತಕ ಕೆಲ ಅಗತ್ಯ ಸವಲತ್ತಿನ ಕೊರತೆ ಮಾಡಿಲ್ಲ. ನಾವೂ ಸರಕಾರದಿಂದ ಏನು ಬರುತ್ತದೆಂಬುದನ್ನಷ್ಟೇ ನೋಡದೆ ಓದುಗರಿಗೆ ನ್ಯಾಯ ನೀಡುತ್ತೇವೆ. -ದತ್ತಾತ್ರಯ ಕಣ್ಣಿಪಾಲ್‌, ಗ್ರಾಮೀಣ ಶಾಖಾ ಗ್ರಂಥಪಾಲಕ

 

-ನರಸಿಂಹ ಸಾತೊಡ್ಡಿ

Advertisement

Udayavani is now on Telegram. Click here to join our channel and stay updated with the latest news.

Next