Advertisement

ದರ್ಬೆಗೊಂದು ಸುಸಜ್ಜಿತ ಸರ್ಕಲ್‌

11:20 PM Jun 05, 2019 | Sriram |

ನಗರ: ಪುತ್ತೂರಿನಲ್ಲಿ “ದರ್ಬೆ ಸರ್ಕಲ್‌’ ಎಂಬ ಪದವು ಚಾಲ್ತಿಯಲ್ಲಿದ್ದರೂ ಅಲ್ಲಿ ಸುಸಜ್ಜಿತ ಸರ್ಕಲ್‌ ಇರಲಿಲ್ಲ. ಇದೀಗ ನಗರಸಭೆಯ ಎಸ್‌ಎಫ್‌ಸಿ ಅನುದಾನದಿಂದ ನೂತನವಾಗಿ ಸರ್ಕಲ್‌ ನಿರ್ಮಾಣಗೊಳ್ಳುತ್ತಿದ್ದು, ಮುಂದಿನ ದಿನಗಳಲ್ಲಿ ಇಲ್ಲಿನ ಟ್ರಾಫಿಕ್‌ ಗೊಂದಲಗಳು ನಿವಾರಣೆಯಾಗಲಿವೆ.

Advertisement

ದರ್ಬೆ ಸರ್ಕಲ್‌ ಸಹಿತ ಫಿಲೋಮಿನಾ ಕಾಲೇಜಿನ ಎದುರು ರಸ್ತೆಯಿಂದ ಪರ್ಲಡ್ಕ ರಸ್ತೆಗೆ ತಿರುಗುವಲ್ಲಿ ಡಿವೈಡರ್‌ ನಿರ್ಮಾಣ ಮತ್ತು ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದ ಎದುರಿನ ಕಾರ್‌ ಪಾರ್ಕಿಂಗ್‌ ಬಳಿ ಇಂಟರ್‌ಲಾಕ್‌ ಅಳವಡಿಕೆ ಸಹಿತ ಒಟ್ಟು ಮೂರು ಕಾಮಗಾರಿಗಳಿಗೆ ಎಸ್‌ಎಫ್‌ಸಿ ಅನುದಾನ ಮೀಸಲಿಡಲಾಗಿದ್ದು, ಪ್ರಸ್ತುತ ದರ್ಬೆ ವೃತ್ತದ ಕಾಮಗಾರಿ ನಡೆಯುತ್ತಿದೆ.

ಪುತ್ತೂರು ನಗರದಿಂದ ಸುಬ್ರಹ್ಮಣ್ಯ, ಮೈಸೂರು, ಮಡಿಕೇರಿ ಹಾಗೂ ತಾಲೂಕಿನ ಬಹುತೇಕ ಗ್ರಾಮೀಣ ಪ್ರದೇಶಗಳಿಗೆ ದರ್ಬೆಯ ಮೂಲಕವೇ ತೆರಳಬೇಕಿದ್ದು, ದರ್ಬೆ ಜಂಕ್ಷನ್‌ ಬಳಿ ನೇರವಾಗಿ ತೆರಳಿದರೆ ಮಾಣಿ-ಮೈಸೂರು ರಾ. ಹೆದ್ದಾರಿಯನ್ನು ಸೇರುತ್ತದೆ. ಎಡಕ್ಕೆ ತಿರುಗಿದರೆ ಸುಬ್ರಹ್ಮಣ್ಯ ಸಂಪರ್ಕದ ರಾಜ್ಯ ಹೆದ್ದಾರಿ ಸಿಗುತ್ತದೆ.

ಇಲ್ಲಿ ಸುಬ್ರಹ್ಮಣ್ಯ ರಸ್ತೆಯಿಂದ ನಗರಕ್ಕೆ ವಾಹನಗಳು ಆಗಮಿಸುವುದು ಹಾಗೂ ನಗರದಿಂದ ಬೈಪಾಸ್‌ ಜಂಕ್ಷನ್‌ಗೆ ಹೋಗುವ ಸಂದರ್ಭ ಗೊಂದಲ ಉಂಟಾಗುತ್ತಿತ್ತು. ಅಪಘಾತದ ಅಪಾಯವೂ ಇತ್ತು. ಹೀಗಾಗಿ ಇಲ್ಲಿ ಸುಸಜ್ಜಿತ ಸರ್ಕಲ್‌ಗಾಗಿ ಬೇಡಿಕೆ ಕೇಳಿಬರುತ್ತಿತ್ತು. ಸರ್ಕಲ್‌ ನಿರ್ಮಾಣವಾದರೆ ಸುಬ್ರಹ್ಮಣ್ಯ ರಸ್ತೆಯಿಂದ ನಗರಕ್ಕೆ ಬರುವ ವಾಹನಗಳು ಏಕಾಏಕಿ ನುಗ್ಗುವ ಸನ್ನಿವೇಶ ತಪ್ಪಲಿದೆ.

ಹೈಮಾಸ್ಟ್‌ ದೀಪವೇ ಸರ್ಕಲ್‌!
ದರ್ಬೆ ಸರ್ಕಲ್‌ನ ಗೊಂದಲ ಹಾಗೂ ಅಪಘಾತವನ್ನು ತಪ್ಪಿಸುವ ನಿಟ್ಟಿನಲ್ಲಿ ಡಾಮಾರು ಡಬ್ಬಗಳನ್ನಿಟ್ಟು ಸರ್ಕಲ್‌ ಮಾದರಿ ಮಾಡಲಾಗಿತ್ತು. ಕೆಲ ಸಮಯಗಳ ಹಿಂದೆ ಇಲ್ಲಿ ಅನುಷ್ಠಾನಗೊಳಿಸಲಾದ ಹೈಮಾಸ್ಟ್‌ ದೀಪ ಕಂಬವನ್ನೇ ಸರ್ಕಲ್‌ ಆಗಿ ಬಳಕೆ ಮಾಡಲಾಗುತ್ತಿತ್ತು. ಆದರೆ ಇಲ್ಲಿ ಬೃಹತ್‌ ವೃತ್ತ ಇಲ್ಲದೇ ಇರುವುದರಿಂದ ವಾಹನಗಳು ವೇಗದಿಂದ ಬಂದು ಸರ್ಕಲ್‌ನಲ್ಲಿ ನುಗ್ಗುತ್ತಿವೆ.

Advertisement

ನಗರದಿಂದ ಸುಬ್ರಹ್ಮಣ್ಯ ರಸ್ತೆಗೆ ತೆರಳುವ ವಾಹನಗಳು ದರ್ಬೆಯಲ್ಲಿ ಫ್ರಿ ಲೆಫ್ಟ್‌ ಮೂಲಕ ಸಾಗಿದರೆ, ಮಡಿಕೇರಿ ರಸ್ತೆಗೆ ತೆರಳುವ ವಾಹನಗಳು ನೇರವಾಗಿ ತೆರಳುತ್ತವೆ. ಆದರೆ ಸುಬ್ರಹ್ಮಣ್ಯ ರಸ್ತೆಯಿಂದ ನಗರ ಭಾಗಕ್ಕೆ ಬರುವ ವಾಹನಗಳೂ ಏಕಾಏಕಿ ಆಗಮಿಸುತ್ತಿದ್ದು, ಇಲ್ಲಿ ವಾಹನಗಳ ನಿಯಂತ್ರಣ ಸಂಚಾರ ಪೊಲೀಸರಿಗೆ ಸವಾಲೆನಿಸಿದೆ.

ಪ್ರಸ್ತುತ ಕಾಂಕ್ರೀಟ್‌ ಮೂಲಕ ವೃತ್ತ ನಿರ್ಮಾಣವಾಗುತ್ತಿದ್ದು, ಏಕಾಏಕಿ ನುಗ್ಗುವ ವಾಹನಗಳು ಸರ್ಕಲ್‌ ಮೂಲಕವೇ ಸಾಗಬೇಕಿರುವುದರಿಂದ ಗೊಂದಲ ನಿವಾರಣೆಯಾಗಲಿದೆ. ಈ ನಿಟ್ಟಿನಲ್ಲಿ ಪೊಲೀಸರೂ ಕ್ರಮ ಕೈಗೊಳ್ಳಬೇಕಿದೆ.

ಅಶ್ವತ್ಥ ಮರದ ಕಟ್ಟೆ
ದರ್ಬೆ ಜಂಕ್ಷನ್‌ನಲ್ಲೇ ಅಶ್ವತ್ಥ ಮರಕ್ಕೆ ಸುಸಜ್ಜಿತ ಕಟ್ಟೆಯೊಂದನ್ನು ನಿರ್ಮಿಸಲಾಗಿದ್ದು, ಆದರೆ ಇದು ನಗರದ ಮುಖ್ಯ ರಸ್ತೆಯನ್ನು ಪೂರ್ತಿ ಬಿಟ್ಟು ಸುಬ್ರಹ್ಮಣ್ಯ ರಸ್ತೆಗೆ ತಾಗಿ ಕೊಂಡಿರುವುದರಿಂದ ಇದನ್ನು ಸರ್ಕಲ್‌ ಆಗಿ ಬಳಸುವುದು ಅಸಾಧ್ಯವಾಗಿತ್ತು. ಆದರೆ ಕಟ್ಟೆಗೆ ತಾಗಿಕೊಂಡೇ ಸುಬ್ರಹ್ಮಣ್ಯ ರಸ್ತೆಯ ಡಿವೈಡರ್‌ ಇರುವುದರಿಂದ ಸ್ವಲ್ಪ ಮಟ್ಟಿನ ವಾಹನ ನಿಯಂತ್ರಣ ಇದು ಅನುಕೂಲವಾಗಿದೆ. ಇದೇ ರೀತಿ ಹಲವು ಕಡೆ ಇಂತಹ ಕಟ್ಟೆಗಳೇ ಸರ್ಕಲ್‌ ಆಗಿ ಬಳಕೆಯಾಗುತ್ತಿವೆ.

 ಸರ್ಕಲ್‌ ಕಾಮಗಾರಿ ಶೀಘ್ರ ಪೂರ್ಣ
ಪುರಸಭೆಯ ಒಟ್ಟು 8 ಲಕ್ಷ ರೂ.ಗಳ ಎಸ್‌ಎಫ್‌ಸಿ ಅನುದಾನದಲ್ಲಿ ದರ್ಬೆ ಸರ್ಕಲ್‌ ನಿರ್ಮಾಣ, ಫಿಲೋಮಿನಾ ಕಾಲೇಜಿನ ಎದುರು ರಸ್ತೆಯಿಂದ ಪರ್ಲಡ್ಕ ರಸ್ತೆಗೆ ತಿರುಗುವಲ್ಲಿ ಡಿವೈಡರ್‌ ನಿರ್ಮಾಣ ಮತ್ತು ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದ ಎದುರು ಇಂಟರ್‌ಲಾಕ್‌ ಅಳವಡಿಕೆ ಸಹಿತ ಮೂರು ಕಾಮಗಾರಿಗಳು ನಡೆಯುತ್ತದೆ. ಇಂಟರ್‌ಲಾಕ್‌ ಹಾಕಲಾಗಿದ್ದು, ಸರ್ಕಲ್‌ನ ಕಾಮಗಾರಿ ಶೀಘ್ರ ಮುಗಿಯಲಿದೆ.
– ಅರುಣ್‌
ಪ್ರಭಾರ ಮುಖ್ಯಾಧಿಕಾರಿ,ನಗರಸಭೆ ಪುತ್ತೂರು

Advertisement

Udayavani is now on Telegram. Click here to join our channel and stay updated with the latest news.

Next