Advertisement

ಪಡೀಲ್‌ನಲ್ಲಿ ಸುಸಜ್ಜಿತ “ಇವಿಎಂ”ಉಗ್ರಾಣ

11:54 AM Feb 15, 2023 | Team Udayavani |

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲ 8 ವಿಧಾನಸಭೆ ಕ್ಷೇತ್ರಗಳಿಗೆ ಸಂಬಂಧಿಸಿ ಮತ ಯಂತ್ರದ ವಿವಿಧ ವಿಭಾಗಗಳಾದ ಇವಿಎಂ, ವಿವಿ ಪ್ಯಾಟ್‌ ಮತ್ತು ಕಂಟ್ರೋಲ್‌ ಯುನಿಟ್‌ಗಳನ್ನು ಸಂಗ್ರಹಿಸಿಡಲು ಪಡೀಲ್‌ನಲ್ಲಿ ಉಗ್ರಾಣ (ಇವಿಎಂ ವೇರ್‌ಹೌಸ್‌) ನಿರ್ಮಾಣಗೊಂಡಿದ್ದು ಮತಯಂತ್ರಗಳನ್ನು ಸುರಕ್ಷಿತವಾಗಿ ಸಂಗ್ರಹಿಸಿಡಲಾಗಿದೆ.

Advertisement

ಪಡೀಲ್‌ನಲ್ಲಿ ಪ್ರಗತಿಯಲ್ಲಿರುವ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದ ಹಿಂಭಾಗದಲ್ಲೇ 2 ಅಂತಸ್ತಿನ ಈ ಉಗ್ರಾಣ ಇದ್ದು 5.19 ಕೋ. ರೂ. ವೆಚ್ಚದಲ್ಲಿ ನಿರ್ಮಿಸ ಲಾಗಿದೆ. ಈ ಮೊದಲು ಸ್ಟೇಟ್‌ಬ್ಯಾಂಕ್‌ ಬಳಿಯ ಜಿಲ್ಲಾಧಿಕಾರಿ ಕಚೇರಿಯ ಸ್ಟ್ರಾಂಗ್‌ ರೂಮ್‌ನಲ್ಲಿ ಇವಿಎಂಗಳನ್ನು ಇರಿಸಲಾಗಿತ್ತು. ಪ್ರಸ್ತುತ ಅವುಗಳಲ್ಲಿ ಲೋಕಸಭೆ ಚುನಾವಣೆಗೆ ಸಂಬಂಧಿಸಿದ ಮತಯಂತ್ರಗಳನ್ನು ಹೊಸ ಕಟ್ಟಡಕ್ಕೆ ಸ್ಥಳಾಂತರಿಸಲಾಗಿದೆ. ವಿಧಾನಸಭೆ, ಜಿ.ಪಂ., ತಾ.ಪಂ., ಚುನಾವಣೆಗಳ ಮತಯಂತ್ರಗಳನ್ನು ಜಿಲ್ಲಾಧಿಕಾರಿ ಕಚೇರಿಯಲ್ಲೇ ಇರಿಸಲಾಗಿದೆ. ಅವುಗಳನ್ನು ಚುನಾವಣೆಗಳು ನಡೆದ ಬಳಿಕ ಸ್ಥಳಾಂತರಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸುಸಜ್ಜಿತ ಕಟ್ಟಡ ಇವಿಎಂ ಸಂಗ್ರಹ ಉಗ್ರಾಣ ಸುಸಜ್ಜಿತ ಕಟ್ಟಡವಾಗಿದ್ದು, ಒಂದೇ ಪ್ರವೇಶ ದ್ವಾರ ಹೊಂದಿದೆ. ಕಿಟಕಿ ಬಾಗಿಲುಗಳನ್ನು ಮೊಹರು ಮಾಡಿ ಮುಚ್ಚಿರುವುದರಿಂದ ಗಾಳಿ ಅಡ್ಡಾಡಲು ಸಣ್ಣ ಗವಾಕ್ಷಿ, ಸೇಫ್ಟಿ ಅಲರಾಮ್‌ ಸಿಸಿ ಕೆಮರಾ, ಅಗ್ನಿಶಮನ ವ್ಯವಸ್ಥೆ, 24 ಗಂಟೆಗಳ ಪೊಲೀಸ್‌ ಕಾವಲನ್ನು ಒಳಗೊಂಡಿದೆ. ಮುಂದಿನ 30 ವರ್ಷಗಳ ಅವಧಿಗೆ ಎಷ್ಟು ಮತಯಂತ್ರಗಳನ್ನು ಇರಿಸಬಹುದು ಎಂದು ಅಂದಾಜಿಸಿ ಚುನಾವಣಾ ಆಯೋಗದ ನಿಯಮಾವಳಿಯಂತೆ ನಿರ್ಮಿಸಲಾಗಿದೆ. ಪ್ರತೀ ವಿಧಾನಸಭಾ ಕ್ಷೇತ್ರದ ಇವಿಎಂಗೂ ಪ್ರತ್ಯೇಕ ಕೊಠಡಿಗಳಿವೆ.

ತಿಂಗಳಿಗೊಮ್ಮೆ ಪರಿಶೀಲನೆ

ಮತ ಯಂತ್ರಗಳನ್ನು ಪಡೀಲ್‌ನಲ್ಲಿರುವ ನೂತನ ಉಗ್ರಾಣದಲ್ಲಿ ಇರಿಸಲಾಗಿದೆ. ತಿಂಗಳಿಗೊಮ್ಮೆ ಪರಿಶೀಲನೆ ಮಾಡುತ್ತಿದ್ದು ಹೊಸ ಕಟ್ಟಡಕ್ಕೆ ಸ್ಥಳಾಂತರಗೊಂಡ ಬಳಿಕ ಮೂರು ಬಾರಿ ಪರಿಶೀಲಿಸಲಾಗಿದೆ.
– ರವಿಕುಮಾರ್‌ ಎಂ.ಆರ್‌. ಜಿಲ್ಲಾಧಿಕಾರಿ, ಜಿಲ್ಲಾ ಚುನಾವಣಾಧಿಕಾರಿ

Advertisement

ಪ್ರತೀ ತಿಂಗಳು ಪರಿಶೀಲನೆ

ಇವಿಎಂ, ವಿವಿ ಪ್ಯಾಟ್‌ ಮತ್ತು ಕಂಟ್ರೋಲ್‌ ಯುನಿಟ್‌ಗಳನ್ನು ಜಿಲ್ಲಾ ಕೇಂದ್ರದಲ್ಲೇ ಸಂಗ್ರಹಿಸಿ ಇಡಬೇಕು ಎನ್ನುವುದು ಚುನಾವಣ ಆಯೋಗದ ನಿರ್ದೇಶನ. ಹಾಗಾಗಿ ಮಂಗಳೂರಿನಲ್ಲೇ ಉಗ್ರಾಣ ನಿರ್ಮಿಸಲಾಗಿದೆ. ಸದ್ಯ ಉಗ್ರಾಣದಲ್ಲಿರುವ ಮತಯಂತ್ರಗಳನ್ನು ಪ್ರತೀ ತಿಂಗಳು ಎಲ್ಲ ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಉಪಸ್ಥಿತಿಯಲ್ಲಿ ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಅಥವಾ ಉಪ ಚುನಾವಣಾಧಿಕಾರಿಯಾಗಿರುವ ಅಪರ ಜಿಲ್ಲಾಧಿಕಾರಿಗಳು ಪರಿಶೀಲಿಸಿ ಕೊಠಡಿಗಳಿಗೆ ಮತ್ತೆ ಮೊಹರು ಮಾಡುತ್ತಾರೆ. ಕೊಠಡಿಗಳ ಕೀಲಿಕೈಗಳು ಈ ಇಬ್ಬರ ಸುಪರ್ದಿಯಲ್ಲೇ ಇರುತ್ತವೆ.

~ಭರತ್‌ ಶೆಟ್ಟಿಗಾರ್‌

Advertisement

Udayavani is now on Telegram. Click here to join our channel and stay updated with the latest news.

Next