Advertisement

ಸುಸಜ್ಜಿತ ಕ್ರೀಡಾಂಗಣ ನಿರ್ಮಾಣ ಮರೀಚಿಕೆ

11:29 AM Jan 31, 2019 | Team Udayavani |

ಚನ್ನಪಟ್ಟಣ: ಬಹುವರ್ಷಗಳ ಬೇಡಿಕೆಯಾಗಿರುವ ಸುಸಜ್ಜಿತ ಕ್ರೀಡಾಂಗಣ ನಿರ್ಮಾಣಕ್ಕೆ ಬಡಿದಿರುವ ಗ್ರಹಣ ಬಿಡುವ ಯಾವುದೇ ಲಕ್ಷಣಗಳು ಕಾಣುತ್ತಿಲ್ಲ. ತಾಲೂಕು, ಜಿಲ್ಲಾ ಮಟ್ಟದ ಪ್ರತಿ ಕ್ರೀಡಾಕೂಟಕ್ಕೂ ಬಾಲಕರ ಕಾಲೇಜು ಮೈದಾನವೇ ಖಾಯಂ ಕ್ರೀಡಾಂಗಣವಾಗಿದೆ. ಇದರಿಂದ ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗಿದೆ.

Advertisement

ಕ್ರೀಡಾಪಟುಗಳ ನಿರೀಕ್ಷೆ ಹುಸಿ: ಪಟ್ಟಣದ ತಟ್ಟೆಕರೆ ಬಳಿಯ 14 ಎಕರೆ ಜಮೀನನ್ನು ಕ್ರೀಡಾಂಗಣ ನಿರ್ಮಾಣಕ್ಕಾಗಿ ಈ ಹಿಂದೆ ಕಂದಾಯ ಇಲಾಖೆ ಮಂಜೂರು ಮಾಡಿತ್ತು. ಆದರೂ, ಆ ಜಾಗದ ವಿವಾದ ಇದುವರೆಗೂ ಬಗೆಹರಿಯದ ಕಾರಣ ಕ್ರೀಡಾಂಗಣ ನಿರ್ಮಾಣದ ಕನಸು ಕಂಡಿದ್ದ ಸಾವಿರಾರು ಕ್ರೀಡಾಪಟುಗಳ ನಿರೀಕ್ಷೆ ಹುಸಿಯಾಗಿದೆ.

ಪಟ್ಟಣದ ತಟ್ಟೆಕರೆ ಬಳಿಯ 78, 79 ಹಾಗೂ 100 ಸರ್ವೆ ನಂಬರಿನ ಒಟ್ಟು 14 ಎಕರೆ ಜಮೀನನ್ನು ಅಂದಿನ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಸಿ.ಪಿ.ಯೋಗೇಶ್ವರ್‌ ಅವರ ಉಲ್ಲೇಖದ ಮೇರೆಗೆ ಜಿಲ್ಲಾಧಿಕಾರಿಗಳು ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆಗೆ ಮಂಜೂರು ಮಾಡಿದ್ದರು. ಈ ಹಿಂದೆ ಅದೇ ಸ್ಥಳವನ್ನು ಖಾಸಗಿ ಸಂಸ್ಥೆಗಳಿಗೆ ಹಂಚಿಕೆ ಮಾಡಲಾಗಿತ್ತು. ಆದರೂ, ಆ ಎಲ್ಲಾ ಆದೇಶವನ್ನು ರದ್ದುಗೊಳಿಸಿ ಮಂಜೂರು ಮಾಡಲಾಗಿತ್ತು.

ಮಂಜೂರಾಗಿದ್ದ ಆದೇಶ ರದ್ದು: ಸರ್ವೆ ನಂ.78ರ 10 ಎಕರೆ ಜಮೀನನ್ನು ಕೆಂಗಲ್‌ ಶ್ರೀಆಂಜನೇಯ ಸ್ವಾಮಿ ದೇವಾಲಯಕ್ಕೆ, ಸರ್ವೆ ನಂ. 79ರ 1.18 ಎಕರೆ ಜಮೀನನ್ನು ಅಗ್ನಿಶಾಮಕ ಇಲಾಖೆಗೆ, ಸರ್ವೆ ನಂ.100ರ 10 ಗುಂಟೆ ಜಮೀನನ್ನು ಖಾಸಗಿ ಸಂಸ್ಥೆಯೊಂದಕ್ಕೆ ನೀಡಲಾಗಿತ್ತು. ಕ್ರೀಡಾಂಗಣ ನಿರ್ಮಾಣದ ಉದ್ದೇಶಕ್ಕಾಗಿ ಈ ಎಲ್ಲರಿಗೂ ಮಂಜೂರಾಗಿದ್ದ ಆದೇಶವನ್ನು ರದ್ದುಪಡಿಸಲಾಗಿತ್ತು. ಆದರೂ, 5 ಎಕರೆ ಜಮೀನು ತಮಗೆ ಸೇರಬೇಕು ಎಂದು ಖಾಸಗಿ ವ್ಯಕ್ತಿಯೊಬ್ಬರು ನ್ಯಾಯಾಲಯದ ಮೊರೆಹೋಗಿದ್ದಾರೆ. ಹಾಗೆಯೇ 10 ಗುಂಟೆ ಜಾಗಕ್ಕೂ ಖಾಸಗಿ ಸಂಸ್ಥೆ ನ್ಯಾಯಾಲಯ ಮೊರೆಹೋಗಿದೆ. ಉಳಿಕೆ 9 ಎಕರೆ ಜಮೀನಿನಲ್ಲಿಯೂ ತಮಗೆ ಜಾಗ ಸೇರಬೇಕು ಎಂದು ಕೆಲವರು ಒತ್ತುವರಿ ಮಾಡಿಕೊಂಡಿದ್ದು, ಒತ್ತುವರಿ ತೆರವಾಗದಿರುವುದರಿಂದ ಕ್ರೀಡಾಂಗಣ ನಿರ್ಮಾಣ ಬಿಕ್ಕಟ್ಟು ಬಗೆಹರಿಯುತ್ತಿಲ್ಲ.

ಕ್ರೀಡಾಂಗಣಕ್ಕೆ ಕ್ರೀಡಾ ಇಲಾಖೆ ಸಿದ್ಧತೆ: ಜಮೀನು ತನ್ನ ವಶಕ್ಕೆ ಬರುವ ಮುಂಚೆಯೇ ಕ್ರೀಡಾಂಗಣ ನಿರ್ಮಾಣಕ್ಕೆ ಕ್ರೀಡಾ ಇಲಾಖೆ ಸಿದ್ಧತೆ ಮಾಡಿಕೊಂಡಿತ್ತು. ಉದ್ದೇಶಿತ ಜಾಗದಲ್ಲಿ ಹೊರಾಂಗಣ ಹಾಗೂ ಒಳಾಂಗಣ ಕ್ರೀಡಾಂಗಣ ರೂಪಿಸಲು ಯೋಜನೆ ರೂಪಿಸಿತ್ತು. 400 ಮೀಟರ್‌ ಉದ್ದದ ಕಬಡ್ಡಿ, ಖೋಖೋ, ಅಥ್ಲೆಟಿಕ್ಸ್‌ ಕ್ರೀಡಾಂಗಣವನ್ನು ನಿರ್ಮಾಣ ಮಾಡಲು ಇಲಾಖೆ ಆಸಕ್ತಿ ತೋರಿತ್ತು. ಇದರ ಜತೆಗೆ ಹೊರಾಂಗಣದಲ್ಲಿ ಫುಟ್ಬಾಲ್‌ ಹಾಗೂ ಹಾಕಿ ಆಟಕ್ಕೆ ಅಂಕಣ ಮಾಡಲು ಮುಂದಾಗಿತ್ತು. ಆದರೆ, ಆರಂಭದಲ್ಲಿ ತೋರಿದ ಶೂರತ್ವ ನಂತರದ ದಿನಗಳಲ್ಲಿ ಮರೆಯಾದ್ದರಿಂದ ಇಡೀ ಪ್ರಸ್ತಾಪ ನೆನೆಗುದಿಗೆ ಬಿದ್ದಿದೆ.

Advertisement

ಸಮಸ್ಯೆ ಪರಿಹಾರಕ್ಕೆ ಪ್ರಯತ್ನ: ಕ್ರೀಡಾಂಗಣ ನಿರ್ಮಾಣಕ್ಕೆ ಮಂಜೂರಾಗಿರುವ ಜಮೀನಿನಲ್ಲಿನ ತೊಡಕು ನಿವಾರಣೆ ಮಾಡಲು ಪ್ರಯತ್ನಪಟ್ಟಿದ್ದರೂ ಇದುವರೆಗೂ ಅದು ಸಾಧ್ಯವಾಗಿಲ್ಲ. ಇದರಿಂದ ಜಮೀನು ಸಿಕ್ಕಿತು ಎಂಬ ಖಷಿಯಲ್ಲಿ ತಯಾರಿ ನಡೆಸಿದ್ದ ಕ್ರೀಡಾ ಇಲಾಖೆ ಏನೂ ಮಾಡಲಾಗದೇ ಸುಮ್ಮನಾಗಿದೆ.

ಮಾಜಿ ಸಚಿವ ಯೋಗೇಶ್ವರ್‌ ಅವರು ಉಸ್ತುವಾರಿ ಸಚಿವರಾಗಿದ್ದ ಸಮಯದಲ್ಲಿ ವಿವಾದಗಳನ್ನು ಶೀಘ್ರವಾಗಿ ಬಗೆಹರಿಸಿ ಕ್ರೀಡಾಂಗಣ ನಿರ್ಮಾಣ ಮಾಡುವಂತೆ ಜಿಲ್ಲಾಧಿಕಾರಿಗಳು ಹಾಗೂ ತಹಶೀಲ್ದಾರ್‌ ಅವರಿಗೆ ಆದೇಶಿಸಿದ್ದರು. ನಂತರದ ದಿನಗಳಲ್ಲಿ ಈ ಬಗ್ಗೆ ಪ್ರಸ್ತಾಪವಾಗದಿರುವುದು ಸಮಸ್ಯೆ ಜಟಿಲವಾಗಲು ಕಾರಣವಾಯಿತು ಎಂದು ತಿಳಿದು ಬಂದಿದೆ. ಕಂದಾಯ ಇಲಾಖೆಯ ಉನ್ನತಾಧಿಕಾರಿಯಾಗಿರುವ ಜಿಲ್ಲಾಧಿಕಾರಿಗಳೇ ಜಾಗವನ್ನು ಮಂಜೂರು ಮಾಡಿದ್ದರೂ, ಇದುವರೆಗೂ ಉದ್ದೇಶ ನೆರವೇರುತ್ತಿಲ್ಲ.

ಕ್ರೀಡಾಂಗಣ ನಿರ್ಮಾಣಕ್ಕೆ ಮುಂದಾಗಿ: ಕ್ರೀಡಾಂಗಣ ನಿರ್ಮಾಣ ಕನಸು ಹೊತ್ತು ಕಾಯುತ್ತಿರುವ ತಾಲೂಕಿನ ನೂರಾರು ಮಂದಿ ಕ್ರೀಡಾಪಟುಗಳ ಬವಣೆ ತಪ್ಪಿಸಲು ಈಗಲಾದರೂ ಸಾಧ್ಯವಾಯಿತಲ್ಲ ಎಂದು ನಿಟ್ಟುಸಿರು ಬಿಡುವಷ್ಟರಲ್ಲೇ ಮೂಲ ಉದ್ದೇಶವೇ ತಣ್ಣಗಾಗಿದ್ದು ಕ್ರೀಡಾಪಟುಗಳ ನಿರಾಸೆಗೆ ಕಾರಣವಾಗಿದೆ. ಈ ಬಗ್ಗೆ ಸಂಬಂಧಿಸಿದ ಜಿಲ್ಲಾಡಳಿತ, ತಾಲೂಕು ಆಡಳಿತ ಹಾಗೂ ಕ್ರೀಡಾ ಇಲಾಖೆ ಗಮನಹರಿಸಿ, ಸಮಸ್ಯೆಗಳನ್ನು ಸರಿಪಡಿಸಿ ಸುಸಜ್ಜಿತ ಕ್ರೀಡಾಂಗಣ ನಿರ್ಮಾಣ ಮಾಡಲು ಮುಂದಾಗಬೇಕಿದೆ.

ಇಚ್ಛಾಶಕ್ತಿ ಕೊರತೆ
ಅಧಿಕಾರಿಗಳ ನಿರ್ಲಕ್ಷ್ಯ, ಜನಪ್ರತಿನಿಧಿಗಳ ಇಚ್ಛಾಶಕ್ತಿಯ ಕೊರತೆಯಿಂದ ಕ್ರೀಡಾಂಗಣಕ್ಕೆ ನಿಗದಿಪಡಿಸಿರುವ ಜಮೀನು ಸ್ವಾಧೀನ ಪಡಿಸಿಕೊಳ್ಳಲು ಸಾಧ್ಯವಾಗಿಲ್ಲ. ಮುಖ್ಯಮಂತ್ರಿಗಳಿಗೆ ನಿಜಕ್ಕೂ ಕ್ರೀಡಾ ಕ್ಷೇತ್ರದ ಬಗ್ಗೆ ಆಸಕ್ತಿ ಇದ್ದರೆ ಕೂಡಲೇ ಒತ್ತುವರಿ ತೆರವುಗೊಳಿಸಿ ಸುಸಜ್ಜಿತ ಕ್ರೀಡಾಂಗಣ ನಿರ್ಮಾಣಕ್ಕೆ ಮುಂದಾಗಬೇಕು. ಖಾಸಗಿ ವ್ಯಕ್ತಿಗಳು ತಮ್ಮದು ಎನ್ನುವ ಜಾಗವನ್ನು ಸ್ವಾಧೀನಪಡಿಸಿಕೊಳ್ಳಬೇಕು ಎಂದು ಅಥ್ಲೆಟಿಕ್ಸ್‌ ಕ್ರೀಡಾಪಟು ಪಿ.ಜೆ.ಗೋವಿಂದರಾಜು ತಿಳಿಸಿದರು.

ಎಂ.ಶಿವಮಾದು

Advertisement

Udayavani is now on Telegram. Click here to join our channel and stay updated with the latest news.

Next