ಸಾಗರ: ನಾನು 5 ಬಾರಿ ಶಾಸಕರಾಗಿದ್ದಾಗಲೂ ಇಷ್ಟು ಜನ ಬೆಂಬಲ ಸಿಕ್ಕಿರಲಿಲ್ಲ. ಶಿವಮೊಗ್ಗದ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಜನ ಬರುತ್ತಿದ್ದಾರೆ. ಸಾಗರ ತಾಲೂಕಿನ ಹತ್ತಾರು ಕಾಂಗ್ರೆಸ್ ಪ್ರಮುಖರು ಕರೆ ಮಾಡಿ ಮಾತನಾಡಿದ್ದಾರೆ. ಕಾಂಗ್ರೆಸ್ ಪಕ್ಷ ದುರ್ಬಲ ಅಭ್ಯರ್ಥಿ ಹಾಕಿಸಿಕೊಂಡು ಬಂದಿದ್ದಾರೆ ಎಂದು ಅವರೇ ಹೇಳುತ್ತಿದ್ದಾರೆ ಎಂದು ಶಿವಮೊಗ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಬಂಡಾಯ ಅಭ್ಯರ್ಥಿ ಕೆ.ಎಸ್. ಈಶ್ವರಪ್ಪ ಪ್ರತಿಪಾದಿಸಿದರು.
ನಗರದ ರಾಷ್ಟ್ರ ಭಕ್ತರ ಬಳಗದ ಕಚೇರಿಯಲ್ಲಿ ಬುಧವಾರ ನಡೆದ ನಗರ, ಹಾಗೂ ಗ್ರಾಮಾಂತರ ಭಾಗದ ಕಾರ‍್ಯಕರ್ತರ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ನಾನು ಸಾಮಾನ್ಯ ಜನರ ಮಧ್ಯೆಯಿದ್ದು, ಅವರಿಗೆ ಅಗತ್ಯ ಇರುವ ಕೆಲಸ ಮಾಡಿಕೊಂಡು ಬಂದವನು. ಬೊಗಳೆ ಭರವಸೆ ನಾನು ಕೊಡುವುದಿಲ್ಲ.
ಶಿವಮೊಗ್ಗದಲ್ಲಿ ಐದು ಬಾರಿ ಗೆದ್ದು ಬಂದಾಗಲೂ ನಾನು ಕೇವಲ ಭರವಸೆ ನೀಡಿಲ್ಲ. ಸಮಾಜದ ಪ್ರತಿ ವರ್ಗವರ ಅವಶ್ಯಕತೆಗಳನ್ನು ಅರಿತು, ಅವರಿಗೆ ಬೇಕಿರುವ ಎಲ್ಲ ಕೆಲಸಗಳನ್ನೂ ಮಾಡಿ ತೋರಿಸಿದ್ದೇನೆ. ಜನರಿಗೆ ಅಗತ್ಯವಿರುವ ಅಭಿವೃದ್ಧಿ ವಿಚಾರಗಳಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುವುದಕ್ಕೆ ಹಿಂದೇಟು ಹಾಕುವುದಿಲ್ಲ. ಹೀಗಾಗಿ ನಾನು ಬಿಜೆಪಿಯವರಂತೆ ಸುಳ್ಳು ಹೇಳಿಕೊಂಡು ಜನರ ಬಳಿ ಮತ ಕೇಳುತ್ತಿಲ್ಲ ಎಂದು ವಾಗ್ದಾಳಿ ನಡೆಸಿದರು.
ಮುಖ್ಯವಾಗಿ ಕ್ಷೇತ್ರದ ಸಾಮಾನ್ಯ ಜನ ಈಶ್ವರಪ್ಪರನ್ನು ಬೆಂಬಲಿಸುವ ಮಾತನಾಡಿದ್ದಾರೆ. ಅವರು ಯಾವ ಕಾರಣಕ್ಕೆ ಚುನಾವಣೆಗೆ ಇಳಿದಿದ್ದಾರೆನ್ನುವುದನ್ನು ಗುರುತಿಸಿದ್ದಾರೆ. ಜೆಡಿಎಸ್, ಬಿಜೆಪಿ ಸೇರಿದಂತೆ ಎಲ್ಲ ಪಕ್ಷದವರು, ಸಮಾಜದ ನೂರಾರು ಗಣ್ಯ ವ್ಯಕ್ತಿಗಳು, ವಕೀಲರು, ವೈದ್ಯರು, ವ್ಯಾಪಾರಿಗಳು, ಜನಸಾಮಾನ್ಯರು ಬೆಂಬಲ ನೀಡುತ್ತಿದ್ದಾರೆ. ಪ್ರಮುಖವಾಗಿ ಅದೃಷ್ಟ ಮತದಾರರು ನನ್ನ ಕೈ ಹಿಡಿಯುತ್ತಾರೆ ಎನ್ನುವುದು ಗೊತ್ತಾಗಿದೆ ಎಂದು ಹೇಳಿದರು.
ಮೊದಲ ಹಂತದಲ್ಲಿ ಜಿಲ್ಲಾ ಪಂಚಾಯ್ತಿ, ತಾಲೂಕು, ಗ್ರಾಮ ಪಂಚಾಯ್ತಿ, ಬೂತ್ ಮಟ್ಟದಲ್ಲಿ ಪ್ರಮುಖರನ್ನು ನೇಮಕ ಮಾಡಿಕೊಳ್ಳೋಣ. ನಂತರ ವಾರ್ಡಿನ ಪ್ರತಿ ಮನೆಗೂ ಪ್ರಮುಖರೊಂದಿಗೆ ಹೋಗಿ ಕರಪತ್ರ ಹಂಚಿ, ಅಚ್ಚುಕಟ್ಟಾಗಿ ಪ್ರಚಾರ ನಡೆಸೋಣ. ನಾವೆಲ್ಲರೂ ಒಟ್ಟಾಗಿ ಸೇರಿ ಪ್ರಚಾರ ಕಾರ‍್ಯದಲ್ಲಿ ತೊಡಗಿಕೊಳ್ಳೋಣ. ಕ್ಷೇತ್ರದಲ್ಲಿ ನಮ್ಮ ಪರವಾದ ಅಲೆ ಹೆಚ್ಚಿದೆ. ಶೇ. 70ರಷ್ಟು ಜನ ಬೆಂಬಲ ಲಭ್ಯವಾಗಿದ್ದು, ಗೆಲುವು ನಮ್ಮದಾಗುತ್ತದೆ ಎಂದರು.
ಕೃಷ್ಣಮೂರ್ತಿ, ಅಣ್ಣಪ್ಪ ಪೂಜಾರಿ, ರೇಣುಕಾ ಮೂರ್ತಿ, ಸತೀಶ್ ಅದರಂತೆ, ಗೌರೀಶ್, ಮೊದಲಾದವರು ಹಾಜರಿದ್ದರು. ಇದೇ ವೇಳೆ ಹಲವು ಕಾರ್ಯಕರ್ತರು ಬಳಗಕ್ಕೆ ಸೇರ್ಪಡೆಯಾದರು.