Advertisement

ಮಠಾಧೀಶರಿಂದ ದಾರಿ ತಪ್ಪಿಸುವ ಕೆಲಸ

12:21 PM Apr 15, 2018 | Team Udayavani |

ಬೆಂಗಳೂರು: ಕೆಲ ಮಠಾಧೀಶರು ಸಮಾಜಕ್ಕೆ ತಪ್ಪು ಸಂದೇಶ ನೀಡುವ ಮೂಲಕ ಜನರನ್ನು ಗೊಂದಲಕ್ಕೆ ನೂಕುತ್ತಿದ್ದಾರೆ ಎಂದು ಬೈಲೂರು ನಿಷ್ಕಲ ಮಂಟಪದ ನಿಜಗುಣಾನಂದ ಸ್ವಾಮೀಜಿ ಆರೋಪಿಸಿದರು.

Advertisement

ಸಪ್ನ ಬುಕ್‌ ಹೌಸ್‌ ವತಿಯಿಂದ ಶನಿವಾರ ನಯನ ಸಭಾಂಗಣದಲ್ಲಿ ಆಯೋಜಿಸಿದ್ದ ಡಾ.ಕುಂ.ವೀರಭದ್ರಪ್ಪ ಅವರ “ಕತ್ತೆಗೊಂದು ಕಾಲ’ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಅವರು, ಜನಸಾಮಾನ್ಯರಲ್ಲಿ ಕಾವಿ ತೊಟ್ಟವರು ಪವಾಡ ಪುರುಷರು ಎಂಬ ತಪ್ಪು ಕಲ್ಪನೆಯಿದೆ. ಜ್ಞಾನವನ್ನೇ ಬಂಡವಾಳ ಮಾಡಿಕೊಂಡಿರುವ ಕೆಲವರು ತಪ್ಪು ಸಂದೇಶ ನೀಡಿ ಸಮಾಜವನ್ನು ದಾರಿ ತಪ್ಪಿಸುತ್ತಿದ್ದಾರೆ. ಮಠಾಧೀಶರು ಎಲ್ಲರಂತೆ ಮನುಷ್ಯರೇ ಎಂದು ಹೇಳಿದರು.

ಜಗತ್ತಿನಲ್ಲಿ ಜೀವಿಸುತ್ತಿರುವ ಯಾವುದೇ ಪ್ರಾಣಿಗೆ ಪುರಾಣ ಗ್ರಂಥ, ಧರ್ಮ ಗುರುವಿಲ್ಲ. ಆದರೂ ಅವು ಸಹಬಾಳ್ವೆಯಿಂದ ಜೀವಿಸುತ್ತಿವೆ. ನಮ್ಮಲ್ಲಿ 84 ಲಕ್ಷ ಪ್ರಾಣಿಗಳಿದ್ದರೂ, ಗೋವನ್ನು ಅತ್ಯಂತ ಶ್ರೇಷ್ಠ ಪ್ರಾಣಿ ಎಂದು ಬಿಂಬಿಸಲಾಗುತ್ತಿದೆ. ಕತ್ತೆ, ನಾಯಿ, ಕುದರೆ ಸೇರಿ ಇತರೆ ಪ್ರಾಣಿಗಳು ಸಹ ಗೋವಿನಷ್ಟೇ ಶ್ರೇಷ್ಠವಾದವು ಎಂಬ ಸತ್ಯವನ್ನು ಮಠಾಧೀಶರು ಅರ್ಥ ಮಾಡಿಕೊಳ್ಳಬೇಕಿದೆ ಎಂದು ಹೇಳಿದರು.

ಸಾಹಿತಿ ಡಾ.ಒ.ಎಲ್‌.ನಾಗಭೂಷಣಸ್ವಾಮಿ ಮಾತನಾಡಿ, ವಿಡಂಬನೆಯೇ ತುಂಬಿರುವ ಈ ಕಾದಂಬರಿ ಪ್ರಸ್ತುತ ಸಮಾಜದ ಲೋಪ ದೋಷಗಳನದನು ಓರೆಗೆ ಹಚ್ಚುವ ಕೆಲಸ ಮಾಡಿದೆ. ಇತಿಹಾಸ ಎಂಬ ತಿಪ್ಪೆಗುಂಡಿ ಜತೆಗೆ ವರ್ತಮಾನದ ಜಗುಲಿಯನ್ನು ಒಂದುಗೂಡಿಸುವ ಕಾರ್ಯವನ್ನು ಕುಂ.ವೀರಭದ್ರಪ್ಪ ಅವರು ಮಾಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ನಿವೃತ್ತ ಐಎಎಸ್‌ ಅಧಿಕಾರಿ ಎಸ್‌.ಎಂ.ಜಾಮದಾರ್‌, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ಎನ್‌.ಆರ್‌.ವಿಶುಕುಮಾರ್‌, ಸಪ್ನ ಬುಕ್‌ ಹೌಸ್‌ ವ್ಯವಸ್ಥಾಪಕ ನಿರ್ದೇಶಕ ನಿತಿನ್‌ ಷಾ ಹಾಜರಿದ್ದರು. 

ರಾಜಕಾರಣಿಗಳಿಗೆ ಪ್ರವೇಶವಿಲ್ಲ ಎಂಬ ಬೋರ್ಡ್‌ ಹಾಕಬೇಕು: ಚುನಾವಣೆ ಸಮೀಪಿಸಿದಾಗ ಮಾತ್ರ ರಾಜಕಾರಣಿಗಳು ಮಠಗಳಿಗೆ ಪ್ರವೇಶಿಸುತ್ತಾರೆ. ಮತಗಳನ್ನು ಲೂಟಿ ಹೊಡೆಯುವುದು ಅವರ ತಂತ್ರವಾಗಿದೆ. ಆದರೆ, ಕುಂಬಾರ ಸಮುದಾಯದ ಅನುಯಾಯಿಗಳ ಸಂಖ್ಯೆ ಕಡಿಮೆಯಿದೆ ಎಂಬ ಕಾರಣಕ್ಕೆ ಆ ಸಮುದಾಯದ ಮಠಗಳಿಗೆ ರಾಜಕಾರಣಿಗಳು ಹೋಗುವುದಿಲ್ಲ. ಮಠಗಳಲ್ಲಿ ರಾಜಕಾರಣಿಗಳಿಗೆ ಪ್ರವೇಶವಿಲ್ಲ ಎಂಬ ಬೋರ್ಡ್‌ ಹಾಕಬೇಕಿದೆ ಎಂದು ಲೇಖಕ ಡಾ.ಕುಂ.ವೀರಭದ್ರಪ್ಪ ಒತ್ತಾಯಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next