ಹೊನ್ನಾವರ: ಸಂಸದೆ ಶೋಭಾ ಕರಂದ್ಲಾಜೆ ಅವರು ಪ್ರಚೋದನಾತ್ಮಕ ಟ್ವೀಟ್ ಮಾಡಿದ್ದಾರೆಂದು ಹೊನ್ನಾವರ ಪೊಲೀಸರು ಗುರುವಾರ ರಾತ್ರಿ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದ್ದಾರೆ.
“ಹೊನ್ನಾವರ ತಾಲೂಕಿನ 9ನೇ ತರಗತಿ ವಿದ್ಯಾರ್ಥಿನಿಯೊಬ್ಬಳನ್ನು ಜಿಹಾದಿಗಳು ಬಲಾತ್ಕಾರ ಮಾಡಿ ಕೊಲೆ ಮಾಡಲು ಯತ್ನಿಸಿದ್ದರು. ಸರ್ಕಾರ ಈ ಘಟನೆ ಕುರಿತು ಯಾಕೆ ಸುಮ್ಮನಿದೆ? ಬಲಾತ್ಕಾರಕ್ಕೆ ಯತ್ನಿಸಿದ ಮತ್ತು ಗಾಯಗೊಳಿಸಿದ ವ್ಯಕ್ತಿಗಳನ್ನು ಯಾಕೆ ಬಂಧಿಸಿಲ್ಲ? ಮುಖ್ಯಮಂತ್ರಿಗಳೇ ಎಲ್ಲಿದ್ದೀರಿ?’ ಎಂದು ಸಂಸದೆ ಶೋಭಾ ಕರಾಂದ್ಲಾಜೆ ತಮ್ಮ ಶೋಭಾ ಅಟ್ ಬಿಜೆಪಿ ಟ್ವೀಟರ್ ಅಕೌಂಟ್‌ನಿಂದ ಟ್ವೀಟ್ ಮಾಡಿದ್ದರು.
ವಿದ್ಯಾರ್ಥಿನಿ ನ್ಯಾಯಾಧೀಶರ ಎದುರು ಪ್ರಕರಣ ಸುಳ್ಳು, ಪರೀಕ್ಷೆ ಹಾಗೂ ಕೆಲವು ಪುಂಡರಿಂದ ತಪ್ಪಿಸಿಕೊಳ್ಳಲು ಹೀಗೆ ಮಾಡಿರುವುದಾಗಿ ಹೇಳಿಕೆ ನೀಡಿದ್ದಳು. ಅದಕ್ಕೂ ಮೊದಲು ಅವಳನ್ನು ಮನೋ ವೈದ್ಯರ ತಪಾಸಣೆಗೆ ಒಳಪಡಿಸಲಾಗಿತ್ತು. ವಿದ್ಯಾರ್ಥಿನಿ ಮೊದಲು ಹಬ್ಬಿಸಿದ ಸುದ್ದಿಯಿಂದ ಕೋಮು ದ್ವೇಷ ತೀವ್ರಗೊಂಡಿತ್ತು. ಈ ಪ್ರಕರಣದಲ್ಲಿ ಇನ್ನೊಂದು ಕೋಮಿನ 100ಕ್ಕೂ ಹೆಚ್ಚು ಜನ ಪಾಲ್ಗೊಂಡಿದ್ದರು ಎಂದು ಪ್ರಕರಣ ದಾಖಲಿಸಲಾಗಿತ್ತು. 25 ಜನರನ್ನು ಬಂಧಿಸಲಾಗಿದೆ.
ಉಳಿದವರು ಊರು ಬಿಟ್ಟಿದ್ದಾರೆ. ಗುರುವಾರ ರಾತ್ರಿ ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಶೋಭಾ ಕರಂದ್ಲಾಜೆಯವರ ವಿರುದ್ಧ ಪ್ರಚೋದನಾತ್ಮಕ ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ಎಚ್‌ಪಿಸಿ 153, 153ಎ, 505 ಪ್ರಕಾರ ಪ್ರಕರಣ ದಾಖಲಿಸಲಾಗಿದೆ. ಇದೇ ವೇಳೆ ಹೊನ್ನಾವರ ಪ್ರಕರಣಕ್ಕೆ ಸಂಬಂಧಿಸಿ ಬಂಧಿಸಲಾದ ಉಭಯ ಕೋಮಿನ 42 ಜನರ ನ್ಯಾಯಾಂಗ ಬಂಧನ ಅವಧಿಯನ್ನು ನ್ಯಾಯಾಲಯ ಜ.3 ವರೆಗೆ ವಿಸ್ತರಿಸಿದೆ.
ಮಹಿಳೆಯರಿಗೆ ರಕ್ಷಣೆ ಕೊಡಲು ವಿಫಲವಾದ ಹಾಗೂ ಅಪರಾಧಿಗಳನ್ನು ಪತ್ತೆಹಚ್ಚಲು ತಾಕತ್ತಿಲ್ಲದ ಸರ್ಕಾರದಿಂದ ಎಫ್ಐಆರ್ ಮೂಲಕ ನನ್ನ ಬಾಯಿ ಮುಚ್ಚಿಸಲು ಯತ್ನ ನಡೆದಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರ ಜಿಹಾದಿಗಳಿಗೆ ರಕ್ಷಣೆ ನೀಡುತ್ತಿದೆ.
– ಶೋಭಾ ಕರಂದ್ಲಾಜೆ, ಸಂಸದೆ (ಟ್ವೀಟ್‌ನಲ್ಲಿ)