Advertisement

ಸ್ವಾಭಿಮಾನಿ ಸಮಾಜದ ದಾರ್ಶನಿಕ ಡಾ|ಟಿಎಂಎ ಪೈ

11:14 PM Apr 29, 2023 | Team Udayavani |

ಮಣಿಪಾಲ ಸಮೂಹ ಸಂಸ್ಥೆಗಳ ವತಿಯಿಂದ ಸ್ಥಾಪಕರ ದಿನವನ್ನು ಮಣಿಪಾಲದ ಹೊಟೇಲ್‌ ವ್ಯಾಲಿ ವ್ಯೂನ ಸಭಾಂಗಣದಲ್ಲಿ ಎ. 30ರ ಸಂಜೆ 5 ಗಂಟೆಗೆ ಆಚರಿಸಲಾಗುತ್ತಿದೆ. ಖಾಸಗಿ
ವೈದ್ಯಕೀಯ ಕಾಲೇಜನ್ನು 1953ರಲ್ಲಿ ಮಣಿಪಾಲದಂತಹ ಕಾಡು, ಗುಡ್ಡದಲ್ಲಿ ಆರಂಭಿಸುವ ಸಂದರ್ಭ ಶ್ರೀಕೃಷ್ಣ ಮಠದಲ್ಲಿ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥರೂ (ಮೊದಲ ಪರ್ಯಾಯ 1952-53), ಡಾ| ಟಿಎಂಎ ಪೈಯವರೂ ದೇವರೆದುರು ಪ್ರಾರ್ಥನೆ ಸಲ್ಲಿಸಿದರು. “ಶ್ರೀಕೃಷ್ಣ ದೇವರಲ್ಲಿ ಪ್ರಾರ್ಥಿಸುವಾಗ ಗದ್ಗದಿತರಾದರು, ಕಣ್ಣೀರು ಬಂತು. ಇದು ಇಂದಿಗೂ ನನ್ನ ಕಣ್ಣಿಗೆ ಕಟ್ಟಿದಂತಿದೆ. ಆ ಸಂಸ್ಥೆಗಳು ಶ್ರೇಷ್ಠ ದರ್ಜೆಯಲ್ಲಿ ಮುನ್ನಡೆಯುತ್ತಿವೆ’ ಎಂದು ಶ್ರೀ ವಿಶ್ವೇಶತೀರ್ಥರು ಇಳಿವಯಸ್ಸಿನಲ್ಲಿ “ಉದಯವಾಣಿ’ಗೆ ನೀಡಿದ ಸಂದರ್ಶನವೊಂದರಲ್ಲಿ ಭಾವುಕರಾಗಿ ಸ್ಮರಿಸಿದ್ದರು. ಈಗ ಡಾ| ಪೈಯವರ 125ನೆಯ ಜನ್ಮದಿನೋತ್ಸವವನ್ನು ಅವರ ಎರಡನೆಯ, ಮೂರನೆಯ ತಲೆಮಾರಿನವರು ಆಚರಿಸುತ್ತಿದ್ದಾರೆ, ಪೇಜಾವರ ಮಠ ಪರಂಪರೆಯ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಹರಸುತ್ತಿದ್ದಾರೆ.

Advertisement

ಮಣಿಪಾಲವೀಗ 50ಕ್ಕೂ ಹೆಚ್ಚು ರಾಷ್ಟ್ರಗಳ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣವನ್ನು ನೀಡುವ ಕೇಂದ್ರ ಬಿಂದು, ಜಾಗತಿಕ ಸ್ತರದ ಸಂಸ್ಥೆಗಳನ್ನು ಹೊಂದಿದೆ. ಕೋಟ್ಯಂತರ ರೂ. ವ್ಯವಹಾರ, ಸಾವಿರಾರು ವ್ಯಕ್ತಿಗಳ ಕಾರ್ಯನಿರ್ವಹಣೆ ಮತ್ತು ಸಾವಿರಾರು ಯುವಪೀಳಿಗೆ ತಯಾರಿ ಇವೆಲ್ಲ ಏಕಕಾಲದಲ್ಲಿ ನಡೆಯುತ್ತಿದೆ.

ಈಗಿನ ಮಣಿಪಾಲ ಸಂಸ್ಥೆಗಳ ಗಾತ್ರ, ಗುಣ ಮಟ್ಟವನ್ನು ನೋಡಿದರೆ, ಸ್ಥಾಪಕ ಡಾ|ಟಿಎಂಎ ಪೈ (30.4.1898-29.5.1979) ಅವರೂ ಅಂತಹ ಮನೆತನದಲ್ಲಿ ಹುಟ್ಟಿದ್ದು ಕಾರಣವೆ ಎಂಬ ಪ್ರಶ್ನೆ ಮೂಡಬಹುದು. ಸಾಮಾನ್ಯ ಕುಟುಂಬದಲ್ಲಿ ಜನಿಸಿದ ಪೈಯವರು ತನ್ನ ದೂರಗಾಮಿ ಚಿಂತನೆ ಮಾತ್ರದಿಂದಲೇ ಬೃಹತ್‌ ಸಂಸ್ಥೆಗಳ ಹುಟ್ಟಿಗೆ ಕಾರಣವಾಯಿತು ಎನ್ನುವುದು ಎಲ್ಲ ಸಾಮಾನ್ಯ ಕುಟುಂಬದವರಿಗೆ ಸಾಧನೆ ಮಾಡಲು ಸ್ಫೂರ್ತಿದಾಯಕ.

ತೋನ್ಸೆ ಪೈ ಕುಟುಂಬದ ಅನಂತ ಪೈ- ಕಲ್ಯಾಣಪುರದ ಬಾಳಿಗಾ ಕುಟುಂಬದ ಯಶೋದಾ ದಂಪತಿಗೆ ಮಾಧವ ಜನಿಸಿದರು. ಬ್ರಹ್ಮಾವರದಲ್ಲಿ ಸಣ್ಣ ಅಂಗಡಿಯೊಂದನ್ನು ನಡೆಸುತ್ತಿದ್ದ ಅನಂತ ಪೈಯವರು 1907ರಲ್ಲಿ ನಿಧನ ಹೊಂದಿದಾಗ ಯಶೋದಾ ಕುಟುಂಬ ನಿರ್ವಹಣೆಗಾಗಿ ಕಲ್ಯಾಣಪುರಕ್ಕೆ ಬಂದು ಮಕ್ಕಳನ್ನು ಬೆಳೆಸಿದರು, ಹೇಗೆಂದರೆ ಮಣಿಪಾಲ ಸಂಸ್ಥೆಗಳ ಸ್ಥಾಪಕರಿಗೆ ಚಿಕ್ಕಂದಿನಿಂದಲೇ ಸಂಸ್ಕಾರವನ್ನು ಕೊಟ್ಟು -ಎಲ್ಲ ತಾಯಂದಿರಿಗೂ ಮಾದರಿಯಾಗುವಂತೆ.

10ನೆಯ ತರಗತಿ ಬಳಿಕ ಮಂಗಳೂರಿಗೆ ಮುಂದಿನ ಶಿಕ್ಷಣಕ್ಕೆ ಹೋದ ಪೈಯವರು ಕಲ್ಯಾಣಪುರದಲ್ಲಿ ತಾವು ಓದಿದ ಶಾಲೆ ಮುಚ್ಚುವ ಹಂತಕ್ಕೆ ಬಂದಾಗ ಹಣ ಸಂಗ್ರಹದಲ್ಲಿ ತೊಡಗಿದರು. ಈ ಕೆಲಸ ಮುಗಿದ ಬಳಿಕ ಮದ್ರಾಸ್‌ಗೆ ತೆರಳಿ ಎಂಬಿಬಿಎಸ್‌ ಶಿಕ್ಷಣ ಮುಗಿಸಿದಾಗ ಹಾಂಕಾಂಗ್‌ ನಲ್ಲಿ ಐಷಾರಾಮಿ ಬದುಕು ನಡೆಸುವಷ್ಟು ಹಣ ಸಂಪಾದನೆ ಅವಕಾಶ ದೊರಕಿತು. “ನಿನ್ನ ಜ್ಞಾನದ
ಪ್ರಯೋಜನ ಸ್ಥಳೀಯರಿಗೆ ದೊರಕಬೇಕು’ ಎಂದು ತಾಯಿ ಒತ್ತಾಯಿಸಿದರು, ವಿದೇಶದ ಭಾರೀ ಹಣ ಗಳಿಕೆ ಆಕರ್ಷಿಸಲಿಲ್ಲ. ಮಗನನ್ನು ದೇಶದಲ್ಲಿಯೇ, ಹುಟ್ಟಿದೂರಿನಲ್ಲಿಯೇ (ಜನನೀ
ಜನ್ಮ ಭೂಮಿಶ್ಚ…) ತಾಯಿ ಉಳಿಸಿಕೊಂಡದ್ದು ಹೀಗೆ. “ಆ ದಿನವೇ ಮಣಿಪಾಲ ಸಾಮ್ರಾಜ್ಯಕ್ಕೆ ಬೀಜಾಂಕುರವಾಯಿತು’ ಎನ್ನುತ್ತಿದ್ದರು ಹಿರಿಯ ಪತ್ರಕರ್ತ ದಿ| ಡಾ| ಎಂ.ವಿ. ಕಾಮತ್‌.

Advertisement

ಸ್ವಾತಂತ್ರ್ಯಪೂರ್ವದಲ್ಲಿಯೇ ಬ್ಯಾಂಕಿಂಗ್‌, ವಿಮಾ ಸಂಸ್ಥೆಗಳನ್ನು ಸ್ಥಾಪಿಸುವಾಗ ಮಾನವ ಸಂಪನ್ಮೂಲವನ್ನು ಹೇಗೆ ಸಂಗ್ರಹಿಸಿದರು ಎನ್ನುವುದು ಕುತೂಹಲ. ಇದನ್ನು ಹಿರಿಯ ಪತ್ರಕರ್ತ ದಿ| ಪಾ.ವೆಂ. ಆಚಾರ್ಯ ದಾಖಲಿಸಿ ದ್ದಾರೆ. ಒಂದು ಬಾರಿ ಡಾ| ಪೈಯವರು ಹತ್ತಿರ ಬಂದು ಬಲ ತೋಳನ್ನು ಪಾ.ವೆಂ. ಭುಜಗಳಿಗೆ ಸುತ್ತಿದರಂತೆ. “ಕೊಟ್ಟ ಸಲಹೆ ಮುಖ್ಯವಲ್ಲ. ಆದರೆ ನಾನು ಅದನ್ನು ತತ್‌ಕ್ಷಣ ಒಪ್ಪಿದೆ’ ಎನ್ನುತ್ತಾರೆ ಪಾ.ವೆಂ. ಡಾ| ಪೈಯವರು ಭೇಟಿ ಮಾಡಿದಾಗ ಮುಗುಳ್ನಕ್ಕು ನಿಮ್ಮ ಕನಸಿನಲ್ಲಿಯೂ ಸುಳಿಯದ ವಿಚಾರ ಮುಂದಿಡುತ್ತಾರೆ. ಪೈಯವರು ಚುಟುಕಾಗಿ ಹೇಳಿದ ಬಳಿಕ ಆ ವಿಚಾರ ಅವರ ದ್ದಲ್ಲವೆಂದೂ, ಅನೇಕ ಸಮಯದಿಂದ ನಿಮ್ಮ ಮನಸ್ಸಿನಲ್ಲಿತ್ತೆಂದೂ ಅನಿಸತೊಡಗುತ್ತದೆ. ಆ ಕೆಲಸ ಸಾಧ್ಯವಾಗುತ್ತದೆಂಬ ಆತ್ಮ ವಿಶ್ವಾಸವೂ ಉಕ್ಕುತ್ತದೆ… ಇದು ಪಾ.ವೆಂ. ಅಭಿಪ್ರಾಯ.

ದೇಶಭಕ್ತಿಗೆ ಮೂರ್ತ ಸ್ಥಾನ ಹೇಗಿರಬೇಕು? ಉದಾಹರಣೆಗೆ: ಮಣಿಪಾಲದ ಕೆಎಂಸಿ ದೇಶದ ಮೊದಲ ಮಿಶನರಿಯೇತರ ಖಾಸಗಿ ವೈದ್ಯಕೀಯ ಕಾಲೇಜು. ಮಹಾತ್ಮಾ ಗಾಂಧಿ ಯವರ ಹೆಸರನ್ನು ಉಡುಪಿಯ ಪದವಿ ಕಾಲೇಜಿಗೆ 1949ರಲ್ಲಿ ಇರಿಸಿದರೆ, ಕಸ್ತೂರ್ಬಾ ಹೆಸರನ್ನು ವೈದ್ಯಕೀಯ ಕಾಲೇಜಿಗೆ 1953ರಲ್ಲಿ ಇಟ್ಟರು. ಡಾ| ಟಿಎಂಎ ಪೈ, ಅಣ್ಣ ಉಪೇಂದ್ರ ಪೈ ಅವರು 1925ರಲ್ಲಿ ಸಿಂಡಿಕೇಟ್‌ ಬ್ಯಾಂಕ್‌ನ್ನು ಕೈಮಗ್ಗದ ಉದ್ದಿಮೆಗೆ ನೆರವಾಗಲು ಆರಂಭಿಸಿದರು. ಜನರಲ್ಲಿ ಉಳಿತಾಯ ಪ್ರವೃತ್ತಿ ಬೆಳೆಸಲು 1928ರಲ್ಲಿ ಎರಡು ಆಣೆಗಳ ಪಿಗ್ಮಿ ಠೇವಣಿ ಸಂಗ್ರಹವನ್ನು ಆರಂಭಿಸಿದರು. ಅದೇ ವರ್ಷ ತಂದೆ ಅನಂತ ಪೈಯವರು ಬ್ರಹ್ಮಾವರ ದಲ್ಲಿ ವ್ಯಾಪಾರ ಮಾಡಿಕೊಂಡಿದ್ದ ಸ್ಥಳದ ಎದುರೇ (ಮಹಾಲಿಂಗೇಶ್ವರ ದೇವಸ್ಥಾನದ ಸುತ್ತಿನ
ಪಕ್ಕ) ಬ್ಯಾಂಕ್‌ನ ಪ್ರಥಮ ಶಾಖೆಯನ್ನು ಆರಂಭಿ ಸಿದರು. 1969ರಲ್ಲಿ ಬ್ಯಾಂಕ್‌ ರಾಷ್ಟ್ರೀಕರಣ ಗೊಂಡಾಗ “ಮಗಳಿಗೆ ಭಾರತ ಸರಕಾರದಂತಹ ವರ ಸಿಕ್ಕಿದ್ದಾನೆ’ ಎಂದು ಹರ್ಷಿಸಿದರು.
ಉಚಿತವಾಗಿ ಕೊಡುವುದನ್ನು “ಧರ್ಮ’ಕ್ಕೆ ಕೊಡುವುದು ಎನ್ನುವುದಿದೆ. “ಧರ್ಮಾಸ್ಪತ್ರೆ’ ಬದಲು “ಸರಕಾರಿ ಆಸ್ಪತ್ರೆ’ ಆಗಿದೆ. ಯಾವುದನ್ನೂ “ಧರ್ಮ’ಕ್ಕೆ ಕೊಡಲೂಬಾರದು, ತೆಗೆದುಕೊಳ್ಳ
ಲೂಬಾರದು ಎಂಬ ನೀತಿ ಡಾ| ಪೈ ಅವರದು. “ಧರ್ಮ’ಕ್ಕೆ ಏನನ್ನಾದರೂ ಕೊಟ್ಟರೆ ಬೆಲೆ ಇಲ್ಲವಾಗುತ್ತಿರುವುದು ಲೋಕಾನುಭವ, ಪಡೆದುಕೊಂಡವರಿಗೂ ಕೀಳರಿಮೆ ಉಂಟಾಗುತ್ತದೆ. ಆರ್ಥಿಕ ಸಮಸ್ಯೆ ಇದ್ದವರಿಗೆ ಕೆಲಸ ಪಡೆದು, ವೇತನ ಕೊಟ್ಟು ಸಮಸ್ಯೆ ಬಗೆಹರಿಸುತ್ತಿದ್ದರು. “ಮೀನು ಹಿಡಿಯಲು ಕಲಿಸಬೇಕು, ಮೀನು ತಂದು ಕೊಡಬಾರದು’ ಎಂಬ ಚೀನಿ ಗಾದೆ ಯಂತೆ. ಸ್ವಾತಂತ್ರಾéನಂತರದಲ್ಲಿ ಪುಕ್ಕಟೆ ಕೊಡು ವುದನ್ನು ಆರಂಭಿಸಿ ಅದು ಎಲ್ಲಿಗೆ ಹೋಗಿ ನಿಲ್ಲುತ್ತದೋ ಎಂಬ ಭಯಾನಕ ಸನ್ನಿವೇಶದಲ್ಲಿ ಇಂದು ಇದ್ದೇವೆ. ಅಧಿಕಾರ ಸ್ಥಾನದಲ್ಲಿದ್ದವರು ತಮ್ಮದೇ ಕಿಸೆಯಿಂದ ಕೊಡುವಂತೆ ಪೋಸು ಕೊಡುತ್ತಾರೆ. ತೆರಿಗೆ ಹಣ ಪೂರ್ಣ ಪ್ರಮಾಣದಲ್ಲಿ ಬಡವರನ್ನು ತಲುಪುವುದೂ ಇಲ್ಲ. “ಉಚಿತ’ಗಳನ್ನು ಪಡೆ ಯುವುದು ತಮ್ಮ ಹಕ್ಕು ಎಂದು ಸಶಕ್ತ ಪ್ರಜೆಗಳೂ ಭಾವಿಸುತ್ತಿದ್ದಾರೆ. ತೆರಿಗೆ ಹಣ ಸಮರ್ಪಕವಾಗಿ ಉಪಯೋಗವಾಗುವುದಿಲ್ಲ ಎಂಬ ಕಾರಣಕ್ಕೆ ತೆರಿಗೆದಾರರು ವಂಚನೆ ದಾರಿ ತುಳಿಯುತ್ತಾರೆ. ಇಂತಹ ಕಾಲಘಟ್ಟದಲ್ಲಿ ಡಾ| ಪೈಯವರ ಸ್ವಾಭಿ ಮಾನಿ ಜಾಗೃತಿ ಸಮಾಜ ರೂಪಣೆ ಅಗತ್ಯವಾಗಿ ಕಂಡುಬರುತ್ತದೆ.

ಸ್ವಂತ ಹಿತ-ದೇಶ ಹಿತ -ಇನ್‌ಕ್ಲೂಸಿವ್‌ ಗ್ರೋತ್‌
ಡಾ| ಟಿಎಂಎ ಪೈ ಅವರ ನಡವಳಿಕೆ, ಮಾತುಗಳಲ್ಲಿ “ದೇಶಭಕ್ತಿ’ ಎಂಬ ಶಬ್ದಕ್ಕೆ ಕೇವಲ ಅಮೂರ್ತವಲ್ಲ, ಮೂರ್ತ ಸ್ಥಾನ. “ತ್ಯಾಗ’ಕ್ಕಿಂತಲೂ ಶ್ರೀಕೃಷ್ಣ ಗೀತೋಪದೇಶದಲ್ಲಿ ಹೇಳು ವಂತೆ “ಕರ್ತವ್ಯ ಕರ್ಮ’ಕ್ಕೆ ಮಾನ್ಯತೆ ಇತ್ತು. ವ್ಯಕ್ತಿಗಳ ಸ್ವಂತ ಹಿತವು ಸಂಸ್ಥೆಯ, ಪ್ರದೇಶದ (ರಾಜ್ಯ/ದೇಶ/ ಪ್ರಪಂಚದ) ಹಿತದೊಡನೆ ಸೇರಿಕೊಂಡಿದೆ ಎಂಬ ಅನುಭೂತಿ ಹುಟ್ಟುವಂತೆ (ಇನ್‌ಕ್ಲೂಸಿವ್‌ ಗ್ರೋತ್‌ ಮಾದರಿ) ಪ್ರೇರಣೆ ದೊರಕುತ್ತದೆ. ಅವರವರ ಕೆಲಸದಿಂದ ವ್ಯಕ್ತಿಯ ಸುಖವೂ, ದೇಶದ ಸುಖವೂ ಒಳಗೊಂಡ ಚಿಂತನೆ ಇದು. ಭಾರತೀಯ ಸಂಸ್ಕೃತಿಯಲ್ಲಿ ಧರ್ಮ, ಅರ್ಥ, ಕಾಮ, ಮೋಕ್ಷಗಳಿಗೆ ಸಮಾನ ಸ್ಥಾನ ಕೊಟ್ಟಂತೆ…

– ಮಟಪಾಡಿ ಕುಮಾರಸ್ವಾಮಿ

Advertisement

Udayavani is now on Telegram. Click here to join our channel and stay updated with the latest news.

Next