Advertisement
ದೇಶದಲ್ಲಿ ಎಎಸ್‌ಐನ ಅಡಿ 3691 ಪ್ರಮುಖ ಪಾರಂಪರಿಕ ತಾಣಗಳಿದ್ದು, ಕೊರೊನಾ ಹಿನ್ನೆಲೆಯಲ್ಲಿ ಪ್ರವಾಸಿಗರ ಪ್ರವೇಶವನ್ನು ತಡೆಯಲಾಗಿದೆ. ಗಮನಾರ್ಹಅಂಶವೆಂದರೆ, ಉತ್ತರಪ್ರದೇಶದ ನಂತರ, ಭಾರತದಲ್ಲಿ ಎಎಸ್‌ಐ ವ್ಯಾಪ್ತಿಗೊಳಪಡುವ ಅತಿಹೆಚ್ಚು ಪಾರಂಪರಿಕ ತಾಣಗಳು ಇರುವುದು ಕರ್ನಾಟಕದಲ್ಲಿ(506). ಉತ್ತರಪ್ರದೇಶದಲ್ಲಿ ಈ ಸಂಖ್ಯೆ 745 ಇದ್ದು, ಮೂರನೇ ಸ್ಥಾನದಲ್ಲಿ ತಮಿಳುನಾಡು(413) ಇದೆ. ಈ ಪಾರಂಪರಿಕ ತಾಣಗಳನ್ನು ವೀಕ್ಷಿಸಲು ಪ್ರತಿವರ್ಷ ಕೋಟ್ಯಂತರ ಪ್ರವಾಸಿಗರು ಭಾರತಕ್ಕೆ ಬರುತ್ತಾರೆ, ಇವರಿಂದ ದೇಶಕ್ಕೆ ಸಾಕಷ್ಟು ಆದಾಯವೂ ಲಭಿಸುತ್ತಿದ್ದು, ಸ್ಥಳೀಯರ ಜೀವನೋಪಾಯವೂ ಆಗಿದೆ. ಕಳೆದ ಕೆಲವು ತಿಂಗಳಿಂದ ಸಿಎಎ ಪ್ರತಿಭಟನೆಗಳ ಹಿನ್ನೆಲೆಯಲ್ಲಿ ಪ್ರವಾಸಿಗರ ಸಂಖ್ಯೆ ಇಳಿಮುಖವಾಗತೊಡಗಿತ್ತು, ಈಗ ಕರೊನಾ ಹಾವಳಿಯಿಂದಾಗಿ, ಭಾರತೀಯ ಪ್ರವಾಸೋದ್ಯಮಕ್ಕೆ ಮತ್ತಷ್ಟು ದೊಡ್ಡ ಪೆಟ್ಟು ಬೀಳಲಾರಂಭಿಸಿದೆ. ಕಳೆದ ವರ್ಷದ ಡಿಸೆಂಬರ್‌ನಲ್ಲಿ ದೇಶಾದ್ಯಂತ ಸಿಎಎ ಪ್ರತಿಭಟನೆಗಳು ಆರಂಭವಾದಾಗ, ಅಮೆರಿಕ, ಬ್ರಿಟನ್, ಇಸ್ರೇಲ್, ಕೆನಡಾ ಮತ್ತು ಸಿಂಗಾಪುರ ಸೇರಿದಂತೆ ಒಟ್ಟು ಏಳು ರಾಷ್ಟ್ರಗಳು, ಭಾರತಕ್ಕೆ ಪ್ರಯಾಣ ಬೆಳೆಸಲು ಬಯಸುತ್ತಿರುವ ತಮ್ಮ ನಾಗರಿಕರಿಗೆ ಎಚ್ಚರಿಕೆ ನೀಡಿದ್ದವು. ಅದರಲ್ಲೂ ಈಶಾನ್ಯ ರಾಜ್ಯಗಳಿಗೆ ಪ್ರಯಾಣಿಸದಂತೆ ವಿಶೇಷವಾಗಿ ಎಚ್ಚರಿಸಿದ್ದವು. ಇನ್ನು ಭಾರತದಲ್ಲಿ, ಅದರಲ್ಲೂ ರಾಜಧಾನಿ ದೆಹಲಿಯಲ್ಲಿ ಹೆಚ್ಚುತ್ತಿರುವ ಮಾಲಿನ್ಯದ ಕಾರಣದಿಂದಲೂ ವಿದೇಶಿ ಪ್ರವಾಸಿಗರ ಸಂಖ್ಯೆ ಕಡಿಮೆಯಾಗಿತ್ತು. ಈಗ ಭಾರತದ ಪ್ರವಾಸೋದ್ಯಮಕ್ಕೆ ಕೊರೊನಾ ಕಂಟಕ.
ಕೊರೊನಾ ವೈರಸ್ ಭೀತಿಯ ದುಷ್ಪರಿಣಾಮ ಮೈಸೂರಿನ ಪ್ರವಾಸೋದ್ಯಮ ಮೇಲೆಯೂ ಬಿದ್ದಿದೆ. ಸದಾ ಪ್ರವಾಸಿಗರಿಂದ ತುಳುಕುತ್ತಿದ್ದ ಸಾಂಸ್ಕೃತಿಕ ನಗರಿಯ ಪ್ರವಾಸಿ ತಾಣಗಳು ಖಾಲಿಹೊಡೆಯುತ್ತಿವೆ. ಪ್ರವಾಸೋದ್ಯಮವನ್ನೇ ನಂಬಿ ಬದುಕುತ್ತಿರುವ ಹೋಟೆಲ್, ಲಾಡ್ಜ್, ಅಂಗಡಿಗಳು, ಟ್ಯಾಕ್ಸಿಗಳು, ಆಟೋ ಚಾಲಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಪ್ರತಿದಿನ ಅಂದಾಜು 50 ಕೋಟಿ ನಷ್ಟ ಉಂಟಾಗುತ್ತಿದೆ ಎಂದು ಮೈಸೂರು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷರು ಹೇಳುತ್ತಾರೆ. ಇನ್ನು ಅರಮನೆ, ಮೃಗಾಲಯ, ಚಾಮುಂಡಿ ಬೆಟ್ಟ ಎಲ್ಲಾ ಕಡೆ ಪ್ರವಾಸಿಗರ ಸಂಖ್ಯೆಯು ಗಮನಾರ್ಹವಾಗಿ ಕುಸಿದಿದೆ. ಪ್ರವಾಸೋದ್ಯಮವನ್ನೇ ನಂಬಿ ಬದುಕಿರುವ ಕೊಡಗಿನ ವ್ಯಾಪಾರೋದ್ಯಮಿಗಳು ಕೊರೊನಾದಿಂದಾಗಿ ತತ್ತರಿಸಿದ್ದಾರೆ. ಕರ್ನಾಟಕದಲ್ಲೂ ಕೊರೊನಾ ವೈರಸ್ ಪ್ರಕರಣಗಳು ಪತ್ತೆಯಾಗುತ್ತಿದ್ದಂತೆಯೇ, ಕೊಡಗಿನ ಪ್ರವಾಸೋದ್ಯಮ ಸಂಪೂರ್ಣವಾಗಿ ನೆಲಕಚ್ಚಿದೆ. ಜಿಲ್ಲೆಯಲ್ಲಿರುವ 4000ಕ್ಕೂ ಹೆಚ್ಚು ಹೋಂ ಸ್ಟೇ ಮತ್ತು ರೆಸಾರ್ಟ್‌ಗಳು ತೀವ್ರ ಸಂಕಷ್ಟಕ್ಕೆ ಸಿಲುಕಿವೆ. ಪ್ರವಾಸಿಗರು ರೆಸಾರ್ಟ್ ಮತ್ತು ಹೋಂ ಸ್ಟೇಗಳಲ್ಲಿ ಮಾಡಿಕೊಂಡಿದ್ದ ಬುಕಿಂಗ್‌ಗಳನ್ನು ಕ್ಯಾನ್ಸಲ್ ಮಾಡಿಕೊಂಡಿದ್ದಾರೆ.
Related Articles
Advertisement
ಅತಿಹೆಚ್ಚು ಆದಾಯ ತಾಜ್ಮಹಲ್ನಿಂದಲೇಈಗಲೂ ದೇಶದಲ್ಲಿ ಅತಿಹೆಚ್ಚು ಆದಾಯ ಗಳಿಸುತ್ತಿರುವ ಪಾರಂಪರಿಕ ತಾಣವೆಂದರೆ ತಾಜ್‌ಮಹಲ್. ದೇಶದ 116 ಪ್ರಮುಖ ಸ್ಮಾರಕಗಳಲ್ಲಿ ಟಿಕೆಟ್ ಮಾರಾಟದ ಮೂಲಕ ಅತಿಹೆಚ್ಚು ಆದಾಯ ಗಳಿಸುತ್ತಲೇ ಬಂದಿದೆ ತಾಜ್. 2018-2019ರಲ್ಲಿ ತಾಜ್‌ಮಹಲ್‌ನ ವಾರ್ಷಿಕ ಆದಾಯ 77 ಕೋಟಿ ರೂಪಾಯಿಯಷ್ಟಾಗಿತ್ತು. ಇದಷ್ಟೇ ಅಲ್ಲದೆ, ತಾಜ್ ಪ್ರಾಂಗಣದಲ್ಲಿರುವ ಮುಖ್ಯ ಸಮಾಧಿ ವೀಕ್ಷಣೆಯ ಟಿಕೆಟ್‌ನಿಂದ 4 ಕೋಟಿ ರೂಪಾಯಿ ಹೆಚ್ಚುವರಿ ಆದಾಯ ದೊರಕಿತ್ತು. ಅದೇ ವರ್ಷ ತಾಜ್‌ಮಹಲ್ ಅಷ್ಟೇ ಅಲ್ಲದೇ ಆಗ್ರಾ ಕೋಟೆ(24 ಲಕ್ಷ ಪ್ರವಾಸಿಗರು ಮತ್ತು 34 ಕೋಟಿ ರೂ. ಆದಾಯ), ಕೆಂಪು ಕೋಟೆ
(35 ಲಕ್ಷ ಪ್ರವಾಸಿಗರು 21 ಕೋಟಿ ಆದಾಯ) ಮತ್ತು ಕುತುಬ್ ಮಿನಾರ್ (29 ಲಕ್ಷ ಪ್ರವಾಸಿಗರು ಮತ್ತು 26 ಕೋಟಿ ರೂಪಾಯಿ ಆದಾಯ) ಗಳಿಸಿದ್ದವು. ಅಂದಹಾಗೆ, ತಾಜ್‌ಮಹಲ್‌ಗೆ ಸಾರ್ವಜನಿಕ ಪ್ರವೇಶವನ್ನು ನಿಷೇಧಿಸಿದ್ದು, ಇದೇ ಮೊದಲಬಾರಿಯೇನೂ ಅಲ್ಲ. 1942ರಲ್ಲಿ 2ನೇ ವಿಶ್ವಯುದ್ಧದ
ಸಮಯದಲ್ಲಿ ಹಾಗೂ 1971ರಲ್ಲಿ, ಅಂದರೆ, ಭಾರತ-ಪಾಕ್ ನಡುವೆ ಯುದ್ಧ ಆರಂಭವಾದಾಗ ಮುಚ್ಚಲಾಗಿತ್ತು. 1978ರಲ್ಲಿ ಪ್ರವಾಹದಿಂದಾಗಿ ತಾಜ್ ಅನ್ನು ಮುಚ್ಚಲಾಗಿತ್ತು.