ಮಂಡ್ಯ: ಮುಖ್ಯಮಂತ್ರಿ ಗ್ರಾಮ ವಾಸ್ತವ್ಯ ರಾಜಕೀಯ ನಾಟಕವೇ ಹೊರತು ಅದರಿಂದ ಯಾವುದೇ ಪ್ರಯೋಜನವಿಲ್ಲ ಎಂದು ಮಾಜಿ ಸಚಿವ ಎನ್.ಚಲುವರಾಯಸ್ವಾಮಿ ಟೀಕಿಸಿದ್ದಾರೆ. ಸುದ್ದಿಗಾರರ ಜತೆ ಮಾತನಾಡಿ, ಸರ್ಕಾರ ಅಭಿವೃದ್ಧಿ ಕೆಲಸದ ಮೂಲಕ ಜನರ ಹತ್ತಿರ ಹೋಗಬೇಕೇ ಹೊರತು ಗ್ರಾಮ ವಾಸ್ತವ್ಯದಿಂದಲ್ಲ.
ಒಂದಿಬ್ಬರು ಬಡವರನ್ನು ಮಾತಾಡಿಸುವುದರಿಂದ ಅಭಿವೃದ್ಧಿ ಸಾಧ್ಯವಾಗುವುದಿಲ್ಲ. ಬಡವರಲ್ಲಿ ಒಬ್ಬರನ್ನು ಮಾತನಾಡಿಸಿದರೆ ಮತ್ತೂಬ್ಬರನ್ನು ಬಿಡುವುದೂ ಅಲ್ಲ. ರಾಜ್ಯದ ಎಲ್ಲ ಬಡವರ ಸಮಸ್ಯೆಗಳಿಗೆ ಸ್ಪಂದಿಸುವ ರೀತಿ ಕೆಲಸ ಮಾಡಬೇಕೆಂದು ಸಲಹೆ ನೀಡಿದರು.
ಕಾಂಗ್ರೆಸ್ ವಿರೋಧ ಪಕ್ಷದಲ್ಲಿ ಇದ್ದಿದ್ದರೆ ಈ ಪರಿಸ್ಥಿತಿ ಬರುತ್ತಿರಲಿಲ್ಲ. ಲೋಕಸಭೆ ಚುನಾವಣೆಯಲ್ಲಿ 8ರಿಂದ 10 ಸೀಟು ಗೆಲ್ಲುತ್ತಿತ್ತು. ಸರ್ಕಾರ ನಾಲ್ಕು ವರ್ಷ ಪೂರೈಸಬೇಕೆಂಬ ಆಸೆ ಎಲ್ಲರಿಗೂ ಇದೆ. ಅವಕಾಶ ಸಿಗುವವರು ಗೌರವಯುತವಾಗಿ ಕೆಲಸ ಮಾಡಬೇಕು.
ಕಾಂಗ್ರೆಸ್ ಮತ್ತು ಜೆಡಿಎಸ್ ಹಾರ್ಟ್ ಟು ಹಾರ್ಟ್ ಸೇರಿ ಜನಪರ ಕೆಲಸ ಮಾಡಿಕೊಂಡು ಹೋಗಿದ್ದರೆ ಎಲ್ಲವೂ ಸರಿ ಹೋಗುತ್ತಿತ್ತು. ಸರ್ಕಾರದ ಪರಿಸ್ಥಿತಿ ಚೆನ್ನಾಗಿಲ್ಲ ಎಂಬುದು ನಿಮಗೂ ಗೊತ್ತು, ನಮಗೂ ಗೊತ್ತು ಎಂದರು.
ಮಾಧ್ಯಮದವರ ಜತೆ ಶಾಸಕಿ ಅನಿತಾ ಕುಮಾರಸ್ವಾಮಿ ಮಾತನಾಡಿರುವುದನ್ನು ನೋಡಿದ್ದೇನೆ. ಒಳ್ಳೆಯದನ್ನು ಹೇಳಿದಾಗ ಮಾಧ್ಯಮದವರು ಬೇಕು. ತಪ್ಪನ್ನು ಹೇಳಿದಾಗ ಬೇಡ ಎಂಬ ದ್ವಂದ್ವ ನಿಲುವು ಸರಿಯಲ್ಲ ಎಂದು ಹೇಳಿದರು.
ಲೋಕಸಭಾ ಚುನಾವಣೆ ಸೋಲಿನಿಂದ ಹೊರಬರಲು ಮುಖ್ಯಮಂತ್ರಿ ಕುಮಾರಸ್ವಾಮಿ ಗ್ರಾಮ ವಾಸ್ತವ್ಯ ಮಾಡುತ್ತಿದ್ದಾರೆ. ಬೇರೆ ಎಲ್ಲೋ ವಾಸ್ತವ್ಯ ಮಾಡುವ ಬದಲು ಮೈಸೂರಿನ ಚಾಮರಾಜ ಕ್ಷೇತ್ರದಲ್ಲಿ ಕುಸಿಯುವ ಹಂತದಲ್ಲಿರುವ ದೇವರಾಜ ಮಾರುಕಟ್ಟೆಯಲ್ಲಿ ವಾಸ್ತವ್ಯ ಹೂಡಲಿ. ಆ ಮೂಲಕ ಮಾರುಕಟ್ಟೆ ಸ್ಥಿತಿಗತಿಯನ್ನು ಕಣ್ಣಾರೆ ಕಾಣುವುದರೊಂದಿಗೆ ಜನರ ಸಮಸ್ಯೆ ಆಲಿಸಲಿ.
-ಎಲ್.ನಾಗೇಂದ್ರ, ಶಾಸಕ