ಪುತ್ತೂರಿನ ಬಜತ್ತೂರು ಗ್ರಾಮ ಕಾಂಚನದ ಶ್ರೀ ಲಕ್ಷ್ಮೀನಾರಾಯಣ ಮ್ಯೂಸಿಕ್ ಅಕಾಡೆಮಿ ಟ್ರಸ್ಟ್ ಜ. 27 ಮತ್ತು 28ರಂದು ಕಾಂಚನದ ಲಕ್ಷ್ಮೀನಾರಾಯಣ ಸಂಗೀತ ಕಲಾ ಶಾಲೆಯಲ್ಲಿ ತ್ಯಾಗರಾಜ, ಪುರಂದರದಾಸರ ಆರಾಧನಾ ಮಹೋತ್ಸವ ಮತ್ತು ಸಂಗೀತ ರತ್ನ ಕಾಂಚನ ವೆಂಕಟಸುಬ್ರಹ್ಮಣ್ಯಂ, ಕರ್ನಾಟಕ ಕಲಾಶ್ರೀ ಕಾಂಚನ ವಿ.ಸುಬ್ಬರತ್ನಂ ಅವರ ಪುಣ್ಯ ದಿನಾಚರಣೆಯನ್ನು ಆಯೋಜಿಸಿದೆ. ಇದು 64ನೆಯ ಕಾಂಚನೋತ್ಸವ ಆಗಿದೆ.
ವಿವಿಧ ಕಾರ್ಯಕ್ರಮ
ಇದೇ ಸಂದರ್ಭ ಚಿತ್ರಕಲಾ ನಿಪುಣ, ಗಾಯಕ, ವೈಣಿಕಿ, ಶಿಲ್ಪಿ, ಸಂಗೀತ ವಿದ್ವಾನ್ ರಾ.ಸೀತಾರಾಂ (ಮೈಸೂರು) ಶತಮಾನೋತ್ಸವ, ಇವರ ಚಿತ್ರಕಲಾ ಪ್ರದರ್ಶನ ಜರುಗಲಿದೆ. ಜ. 27 ಸಂಜೆ 6ಕ್ಕೆ ಇವರ ಜೀವನ ಸಾಧನೆಗಳ ಸಾಕ್ಷ್ಯಚಿತ್ರವನ್ನು ಆಯೋಜಿಸಲಾಗಿದೆ.
ಜ. 27 ಬೆಳಗ್ಗೆ 9ಕ್ಕೆ ದಿವ್ಯನಾಮ ಸಂಕೀರ್ತನೆ “ಊಂಛ ವೃತ್ತಿ’ (ಸಂಪ್ರದಾಯದಂತೆ ಹಾಡುಗಳನ್ನು ಹಾಡುತ್ತ ಮನೆಗಳಿಗೆ ಹೋದಾಗ ಜನರು ಕೊಟ್ಟ ಭಿಕ್ಷೆಯಿಂದ ಅತಿಥಿ ಸತ್ಕಾರ ನಡೆಸುವುದು), 10ಕ್ಕೆ ಪಿಳ್ಳಾರಿ ಗೀತೆಗಳು, ಪಂಚರತ್ನ ಕೃತಿಗಳ ಗೋಷ್ಠಿ ಗಾಯನ, 11.30ರಿಂದ ಉಪ್ಪಿನಂಗಡಿ ಗಾನಭಾರತೀ ಸಂಗೀತ ಶಾಲೆ, ಪುತ್ತೂರು ಕಾಂಚನ ಸುಬ್ಬರತ್ನಂ ಸಂಗೀತ ಶಾಲೆ, ಸುಬ್ರಹ್ಮಣ್ಯದ ಸರಸ್ವತೀ ಸಂಗೀತ ಶಾಲೆ, ಕಾಂಚನ ಲಕ್ಷ್ಮೀ ನಾರಾಯಣ ಮ್ಯೂಸಿಕ್ ಅಕಾಡೆಮಿ ವಿದ್ಯಾರ್ಥಿಗಳು ಮತ್ತು ಅತಿಥಿ ಕಲಾವಿದರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ, ಸಂಜೆ 6ಕ್ಕೆ ತ್ಯಾಗರಾಜರ ಚರಿತೆ ಸಂಗೀತ ನಾಟಕ ನಡೆಯಲಿದೆ.
ಜ. 28 ಬೆಳಗ್ಗೆ 10ಕ್ಕೆ ಎ.ಸಿ.ಶ್ರೀನಿವಾಸ, ಎ.ಸಿ. ರಾಜಶೇಖರ್ ಅವರ ದ್ವಂದ್ವ ನಾಗಸ್ವರ ವಾದನ ಮತ್ತು ಬಿ.ಆರ್.ಶ್ರೀನಿವಾಸ್, ಡಿ.ರಾಮಸುಬ್ಬಯ್ಯ ಅವರ ದ್ವಂದ್ವ ತವಿಲ್‌ವಾದನ, 12ಕ್ಕೆ ಅತಿಥಿ ಕಲಾವಿದರು, ವಿದ್ಯಾರ್ಥಿಗಳಿಂದ ಕರ್ನಾಟಕ ಸಂಗೀತ ಕಛೇರಿ, ಸಂಜೆ 6ಕ್ಕೆ ಟಿ.ಎಂ.ಕೃಷ್ಣ ಅವರ ಹಾಡುಗಾರಿಕೆ ನಡೆಯಲಿದೆ. ತ್ರಿಕಾಲದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ.
ಅಪರೂಪದ ಕಲಾವಿದೆಯರು
ರೋಹಿಣಿ ಸುಬ್ಬರತ್ನಂ ಅವರ ಪುತ್ರಿಯರಾದ ಕಾಂಚನ ಶ್ರೀರಂಜನಿ, ಕಾಂಚನ ಶ್ರುತಿರಂಜನಿ, ಕಾಂಚನ ಸುಮನಸ ರಂಜನಿಯವರು ಸ್ವತಃ ಸಂಗೀತಜ್ಞರಾಗಿ, ಸಂಘಟಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರಲ್ಲಿ ಶ್ರೀರಂಜನಿ, ಶ್ರುತಿರಂಜನಿಯವರು ಅಪರೂಪದ ಕ್ಲಿಷ್ಟಕರ ದೇಸೀ ತಾಳಗಳಾದ ಸಿಂಹನಂದನ ಮತ್ತು ಶರಭನಂದನದಲ್ಲಿ ಅವಧಾನ ತಾಳಗಳನ್ನು ಸಂಯೋಜಿಸಿ ಪಲ್ಲವಿಗಳನ್ನು ಹಾಡುವುದರಲ್ಲಿ ನಿಷ್ಣಾತರು. ಕಾಂಚನದಲ್ಲಿ 1953ರಲ್ಲಿ ಆರಂಭವಾದ ಸಂಗೀತ ಶಾಲೆಯಲ್ಲೀಗ ಮೀನಾಕ್ಷಿ ಗಣೇಶ ರಾವ್ ಅವರು ಸಂಗೀತ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಕಾಂಚನ ಸಂಗೀತ ಕುಟುಂಬದ ದಿಗ್ಗಜರು: ಕಾಂಚನ ಆನಂದಲಕ್ಷ್ಮೀ ಅಮ್ಮಾಳ್ , ಕಾಂಚನ ವೆಂಕಟಸುಬ್ರಹ್ಮಣ್ಯಂ, ಕಾಂಚನ ವಿ. ಸುಬ್ಬರತ್ನಂ