Advertisement

ಅಮೆರಿಕ ಮಾದರಿಯಲ್ಲಿ ಸಿಗಲಿ ಲಸಿಕೆ

01:29 AM Mar 23, 2021 | Team Udayavani |

ದೇಶದಲ್ಲಿ ಲಸಿಕೆ ವಿತರಣೆ ಪ್ರಕ್ರಿಯೆ ವೇಗ ಪಡೆದಿದ್ದರೂ, ಅದರಲ್ಲಿ ಹಲವು ಕುಂದುಕೊರತೆಗಳು ಗೋಚರಿಸುತ್ತಿರುವುದು ಆತಂಕಕ್ಕೆ ದೂಡುವಂತಿದೆ. ಮುಖ್ಯವಾಗಿ, ದೇಶಾದ್ಯಂತ ಲಸಿಕೆಯ ಡೋಸ್‌ಗಳು ಬಳಕೆಯಾಗದೇ ವ್ಯರ್ಥವಾಗುತ್ತಿರುವುದು ಚಿಂತೆಯ ಗೆರೆ ಮೂಡುವಂತೆ ಮಾಡಿದೆ. ಕೋವಿಡ್‌ ಡೋಸ್‌ಗಳು ವ್ಯರ್ಥವಾಗುತ್ತಿರುವ ರಾಜ್ಯಗಳ ಪೈಕಿ ಕರ್ನಾಟಕ ನಾಲ್ಕನೇ ಸ್ಥಾನದಲ್ಲಿದ್ದು, ಇದುವರೆಗೂ ಒಂದೂವರೆ ಲಕ್ಷ ಡೋಸ್‌ಗಿಂತಲೂ ಅಧಿಕ ಪ್ರಮಾಣದ ಲಸಿಕೆ ವ್ಯರ್ಥವಾಗಿರುವ ಸುದ್ದಿ ಬಂದಿದೆ.

Advertisement

ಸಮಯಕ್ಕೆ ಸರಿಯಾಗಿ ಫ‌ಲಾನುಭವಿಗಳು ಬರದಿರುವುದೇ ಸಮಸ್ಯೆಗೆ ಮುಖ್ಯ ಕಾರಣ ಎಂದು ದೇಶದ ಆರೋಗ್ಯ ಇಲಾಖೆಗಳು ಹೇಳುತ್ತಿವೆ. ಈ ಕಾರಣಕ್ಕಾಗಿಯೇ ಲಸಿಕೆ ವಿತರಣೆಯ ವಿಚಾರದಲ್ಲಿ ಭಾರತವು ಅಮೆರಿಕದ ಮಾದರಿ ಅನುಸರಿಸುವುದು ಸೂಕ್ತ. ಅಮೆರಿಕದಲ್ಲಿ ಲಸಿಕೆ ವಿತರಣೆಯ ನಿಗದಿತ ಸಮಯದಲ್ಲಿ ಫ‌ಲಾನು ಭವಿಗಳು ಕಾರಣಾಂತರಗಳಿಂದ ಬರದಿದ್ದರೆ, ಅವರ ಪಾಲಿನ ಲಸಿಕೆ ಯನ್ನು ವಿತರಣ ಘಟಕದ ಸನಿಹದಲ್ಲಿರುವ ಸಾರ್ವಜನಿಕರಿಗೆ ನೀಡಲಾಗುತ್ತದೆ. ತನ್ಮೂಲಕ ಅನಗತ್ಯವಾಗಿ ಅಮೂಲ್ಯ ಲಸಿಕೆ ವ್ಯರ್ಥವಾ ಗುವುದನ್ನು ತಪ್ಪಿಸಲಾಗುತ್ತಿದೆ. ಭಾರತದಲ್ಲೂ ಈ ರೀತಿಯ ಕ್ರಮ ಕೈಗೊಂಡರೆ ಲಸಿಕೆ ಪೋಲಾಗುವುದನ್ನು ತಡೆಯಲು ಸಾಧ್ಯವಾಗುತ್ತದೆ.

ಇದಷ್ಟೇ ಅಲ್ಲದೆ ಕುಟುಂಬವೊಂದರಲ್ಲಿ ಒಬ್ಬರಿಗೆ ಸೋಂಕು ಬಂದರೆ ಇತರರಿಗೂ ಹರಡುವ ಸಾಧ್ಯತೆ ಅಧಿಕವಿರುತ್ತದೆ. ಹೀಗಾಗಿ ಕುಟುಂಬ ಸದಸ್ಯರು ಮನೆಯ ಹಿರಿಯರಿಗೆ ಲಸಿಕೆ ಹಾಕಿಸಲು ಕರೆದೊಯ್ದಾಗ, ವಿತರಣ ಘಟಕದಲ್ಲಿ ಫ‌ಲಾನುಭವಿಗಳಿಲ್ಲದೇ ಲಸಿಕೆ ಉಳಿದಿದ್ದರೆ ಅದನ್ನು ಕಸದಬುಟ್ಟಿಗೆ ಎಸೆಯುವ ಬದಲು, ಆ ಕುಟುಂಬ ವರ್ಗಕ್ಕೆ ನೀಡುವಂಥ ಕ್ರಮದ ಬಗ್ಗೆ ಯೋಚಿಸಬೇಕು. ಹೀಗಾಗಿ ರೋಗ ಪ್ರಸರಣವನ್ನು ತ್ವರಿತವಾಗಿ ತಡೆಯಲು ಸದ್ಯದ ವಯೋಮಿತಿ ನಿಯಮ ಬದಲಿಸಿ ವ್ಯಾಕ್ಸಿನ್‌ ಕೊಡಲಾರಂಭಿಸುವುದು ಒಳ್ಳೆಯದು. ಹೀಗೆ ಮಾಡುವುದರಿಂದ ಲಸಿಕೆ ವ್ಯರ್ಥವಾಗುವುದನ್ನು ತಪ್ಪಿಸುವ ಜತೆಗೆ, ಸಾಂಕ್ರಾಮಿಕದ ವೇಗವನ್ನೂ ಗಣನೀಯವಾಗಿ ತಗ್ಗಿಸಬಹುದು.

ಗಮನಿಸಬೇಕಾದ ಅಂಶವೆಂದರೆ, ದೇಶದಲ್ಲೀಗ 20-45 ವಯಸ್ಸಿನ ವರನ್ನು ಸೂಪರ್‌ ಸ್ಪ್ರೆಡರ್‌ಗಳೆಂದು ಕರೆಯಲಾಗುತ್ತಿದೆ. ಅಂದರೆ ಈ ವಯೋಮಾನದವರಿಂದಾಗಿ ಪ್ರಕರಣಗಳು ವೇಗವಾಗಿ ಹಬ್ಬುತ್ತಿವೆ. ಲಾಕ್‌ಡೌನ್‌ ತೆರವುಗೊಂಡ ಅನಂತರದಿಂದ ನೌಕರ ವರ್ಗವೇ ಅಧಿಕವಿರುವ ಈ ವಯೋಮಾನದವರು ನಿತ್ಯ ಕಚೇರಿಗಳಿಗೆ ತೆರಳುತ್ತಿದ್ದಾರೆ. ಹೊರಗೆ ಓಡಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿಯೇ ಲಸಿಕೆ ಫ‌ಲಾನುಭವಿಗಳ ವಯೋಮಿತಿಯ ವ್ಯಾಪ್ತಿಯನ್ನೂ ಕೂಡಲೇ ಬದಲಿಸುವುದು ಅಗತ್ಯವಾಗಿದೆ. ಆರೋಗ್ಯ ಇಲಾಖೆ, ಸರಕಾರ ಈ ನಿಟ್ಟಿನಲ್ಲಿ ತ್ವರಿತ ನಿರ್ಣಯಕ್ಕೆ ಬರುವುದು ಸೂಕ್ತ.

ಬೇಸರದ ಸಂಗತಿಯೆಂದರೆ ಕೋವಿಡ್‌ ಸೃಷ್ಟಿಸಿರುವ ಅನಾಹುತದ ಅರಿವಿದ್ದರೂ ಲಸಿಕೆ ಪಡೆಯುವ ವಿಚಾರದಲ್ಲಿ ಜನರು ಅಸಡ್ಡೆ ತೋರಿಸುತ್ತಿರುವುದು. ಸರಕಾರಗಳು ಹಾಗೂ ವಿಜ್ಞಾನ ಲೋಕದ ಅವಿರತ ಪ್ರಯತ್ನದ ಫ‌ಲವಾಗಿ ಇಷ್ಟು ತ್ವರಿತವಾಗಿ ಲಸಿಕೆ ಲಭ್ಯವಾಗಿರುವುದೇ ದೊಡ್ಡ ಸಂಗತಿ. ಹೀಗಿರುವಾಗ ಈ ವಿಚಾರದಲ್ಲಿ ಸಾರ್ವಜನಿಕರು ಅಸಡ್ಡೆ ತೋರಿಸುವುದು ಯಾವುದೇ ಕಾರಣಕ್ಕೂ ಸಮರ್ಥನೀಯವಲ್ಲ.

Advertisement
Advertisement

Udayavani is now on Telegram. Click here to join our channel and stay updated with the latest news.

Next