Advertisement

8, 9ರಂದು ಜೆಸಿಟಿಯುನಿಂದ ಸಾರ್ವತ್ರಿಕ ಹರತಾಳ

10:42 AM Jan 04, 2019 | |

ದಾವಣಗೆರೆ: ಕೇಂದ್ರ ಸರ್ಕಾರದ ರೈತ, ಕಾರ್ಮಿಕ ವಿರೋಧಿ ನೀತಿ ಖಂಡಿಸಿ, ಕನಿಷ್ಠ ವೇತನ, ಡಾ| ಸ್ವಾಮಿನಾಥನ್‌ ವರದಿ ಜಾರಿ ಸೇರಿ ಇತರೆ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಜ. 8 ಮತ್ತು 9 ರಂದು ಸಾರ್ವತ್ರಿಕ ಮುಷ್ಕರ- ಹರತಾಳ ನಡೆಸಲಾಗುವುದು ಎಂದು ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ (ಜೆ.ಸಿ.ಟಿ.ಯು) ಮುಖಂಡ ಎಚ್‌.ಕೆ. ರಾಮಚಂದ್ರಪ್ಪ ತಿಳಿಸಿದ್ದಾರೆ.

Advertisement

ಎಐಟಿಯುಸಿ, ಐ.ಎನ್‌.ಟಿ.ಯು.ಸಿ, ಎಐಯುಟಿಯುಸಿ, ಸಿಐಟಿಯು ಒಳಗೊಂಡಂತೆ 10ಕ್ಕೂ ಹೆಚ್ಚು ಕೇಂದ್ರ ಕಾರ್ಮಿಕ ಸಂಘಟನೆಗಳು, ಬ್ಯಾಂಕ್‌, ವಿಮೆ, ಟೆಲಿಕಾಂ, ಕೇಂದ್ರ-ರಾಜ್ಯ ಸರ್ಕಾರ ನೌಕರರ ಸಂಘಟನೆಗಳು ದೇಶ ವ್ಯಾಪಿ ಕರೆ ನೀಡಿರುವ ಸಾರ್ವತ್ರಿಕ ಮುಷ್ಕರ, ಹರತಾಳದ ಹಿನ್ನೆಲೆಯಲ್ಲಿ ದಾವಣಗೆರೆಯಲ್ಲಿ ಪ್ರತಿಭಟನಾ ಮೆರವಣಿಗೆ, ಬಹಿರಂಗ ಸಭೆ ನಡೆಸಲಾಗುವುದು ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. 

ಜ. 5ರ ಶನಿವಾರ ಸಂಜೆ 6ಕ್ಕೆ ರಾಂ ಆ್ಯಂಡ್‌ ಕೋ ವೃತ್ತದಲ್ಲಿ, 7.30ಕ್ಕೆ ಭಗತ್‌ಸಿಂಗ್‌ ನಗರ, ಭಾನುವಾರ ಸಂಜೆ 6ಕ್ಕೆ ಹೊಂಡದ ವೃತ್ತ, 7.30ಕ್ಕೆ ಅಕ್ತರ್‌ ರಜಾ ಸರ್ಕಲ್‌ನಲ್ಲಿ ದಲ್ಲಿ ಬಹಿರಂಗ ಸಭೆ ನಡೆಯಲಿವೆ.

ಸೋಮವಾರ ಬೆಳಗ್ಗೆ 11ಕ್ಕೆ ಜಯದೇವ ವೃತ್ತದಿಂದ ಬೈಕ್‌ ರ್ಯಾಲಿ ನಡೆಸಲಾಗುವುದು. ಜ.8ರ ಮಂಗಳವಾರ ಬೆಳಗ್ಗೆ 9ಕ್ಕೆ ಜಯದೇವ ವೃತ್ತದಿಂದ ಮಹಾನಗರ ಪಾಲಿಕೆಯವರೆಗೆ ಕಾರ್ಮಿಕರ ಮೆರವಣಿಗೆ, ಬಹಿರಂಗ ಸಭೆ ನಡೆಯಲಿದೆ. ಬುಧವಾರ ಬೆಳಗ್ಗೆ 11ಕ್ಕೆ ಗಡಿಯಾರದ ಕಂಬದ ಬಳಿ ಬಹಿರಂಗ ಸಭೆ ನಡೆಸುವ ಮೂಲಕ ಹರತಾಳ- ಮುಷ್ಕರ ನಡೆಸಲಾಗುವುದು ಎಂದು ತಿಳಿಸಿದರು.

ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕಾಯ್ದೆಯಂತೆ ಕಾರ್ಮಿಕರಿಗೆ ಕನಿಷ್ಠ ವೇತನ ದೊರೆಯುತ್ತಿಲ್ಲ. ಅಸಂಘಟಿತ ವಲಯದ ಕಾರ್ಮಿಕರಿಗೆ ಮಾಸಿಕ 18 ಸಾವಿರ ರೂಪಾಯಿ ವೇತನ ಜಾರಿ, ಅಂಗನವಾಡಿ, ಬಿಸಿಯೂಟ, ಆಶಾ, ಎನ್‌ಆರ್‌ಎಚ್‌ಎಂ ಮುಂತಾದ ಯೋಜನೆ ಮತ್ತು ಗ್ರಾಮ ಪಂಚಾಯತಿ ನೌಕರರನ್ನು ಕಾರ್ಮಿಕರೆಂದು ಪರಿಗಣಿಸಿ ಸೌಲಭ್ಯ ಒದಗಿಸಬೇಕು. ಮಾಲೀಕರ ಪರವಾದ 4 ಕಾರ್ಮಿಕ ಕಾನೂನು ಕೋಡ್‌ ಜಾರಿಗೆ ತರುವುದನ್ನು ನಿಲ್ಲಿಸಲು ಒತ್ತಾಯಿಸಿ ಹೋರಾಟ ನಡೆಸಲಾಗುವುದು ಎಂದು ತಿಳಿಸಿದರು. 

Advertisement

ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ಅಧಿಕಾರಕ್ಕೆ ಬಂದ ನಂತರದಲ್ಲಿ ರೈತರ ಪರಿಸ್ಥಿತಿ ಬಿಗಡಾಯಿಸುತ್ತಿದೆ. ಕಾರ್ಮಿಕ ರಂಗದ ಬಿಕ್ಕಟ್ಟಿನಿಂದ ಸಂಕಷ್ಟದಲ್ಲಿರುವ ರೈತರು ಉತ್ತಮ ಜೀವನ ನಡೆಸಲು ಅನುಕೂಲ ಆಗುವಂತೆ ಚುನಾವಣಾ ಸಂದರ್ಭದಲ್ಲಿ ನೀಡಿರುವ ಭರವಸೆಯಂತೆ ಡಾ| ಸ್ವಾಮಿನಾಥನ್‌ ವರದಿ ಜಾರಿಗೊಳಿಸುವುದು, ಚಿಲ್ಲರೆ ವ್ಯಾಪಾರಿ ಕ್ಷೇತ್ರದಲ್ಲಿ ವಿದೇಶಿ ಕಂಪನಿಗಳ ಪ್ರವೇಶ ನಿಲ್ಲಿಸುವುದು… ಇತರೆ ಬೇಡಿಕೆ ಈಡೇರಿಸಬೇಕು ಎಂದು ಒತ್ತಾಯಿಸಿದರು. 

ಕೇಂದ್ರ ಸರ್ಕಾರದ ಜಿಎಸ್‌ಟಿ, ನೋಟು ಅಮಾನ್ಯ, ಕಾರ್ಮಿಕ ಕಾನೂನುಗಳ ತಿದ್ದುಪಡಿ, ಸಾರ್ವಜನಿಕ ರಂಗದ ಖಾಸಗೀಕರಣ, ಶಿಕ್ಷಣ, ಆರೋಗ್ಯ, ವಸತಿ ವೆಚ್ಚದಲ್ಲಿನ ಕಡಿತ, ಬಂಡವಾಳ ಶಾಹಿಗಳಿಂದ ತೆರಿಗೆ, ಬ್ಯಾಂಕ್‌ಗಳ ಲೂಟಿ ಹಾಗೂ ಕಾರ್ಪೋರೇಟ್‌ ಕಂಪನಿಗಳ ಪರವಾದ ನೀತಿಯಿಂದ ಶೇ. 1ರಷ್ಟು ಜನರ ಕೈಯಲ್ಲಿ ದೇಶದ ಶೇ. 73 ರಷ್ಟು ಆಸ್ತಿ-ಸಂಪತ್ತು ಕ್ರೋಢೀಕರಣವಾಗಿದೆ. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುವ ಮುನ್ನ 2013-14ರಲ್ಲಿ ಶೇ. 1ರಷ್ಟು ಜನರ ಕೈಯಲ್ಲಿ ದೇಶದ ಶೇ. 43 ರಷ್ಟು
ಆಸ್ತಿ-ಸಂಪತ್ತು ಕ್ರೋಢೀಕರಣವಾಗಿತ್ತು ಎಂದು ತಿಳಿಸಿದರು.

ಜೆಸಿಟಿಯು ಮುಖಂಡರಾದ ಕೆ.ಎಲ್‌, ಭಟ್‌, ಆವರಗೆರೆ ಎಚ್‌.ಜೆ. ಉಮೇಶ್‌, ಕೆ. ರಾಘವೇಂದ್ರ ನಾಯರಿ, ಮಂಜುನಾಥ್‌
ಕೈದಾಳೆ, ಆನಂದರಾಜ್‌, ಆರ್‌.ಎಸ್‌. ತಿಪ್ಪೇಸ್ವಾಮಿ, ಆವರಗೆರೆ ವಾಸು, ತಿಪ್ಪೇಸ್ವಾಮಿ, ಶ್ರೀನಿವಾಸಮೂರ್ತಿ, ಶಿವಾಜಿರಾವ್‌, ಆವರಗೆರೆ ಚಂದ್ರು ಇತರರು ಸುದ್ದಿಗೋಷ್ಠಿಯಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next