Advertisement
ಕೃಷ್ಣ ಪವನ್ ಅವರು ಸುಮಾರು ಎರಡು ಗಂಟೆ ಕಾಲ ಉತ್ಕೃಷ್ಟವಾದ ವೇಣುವಾದನದಿಂದ ಸಂಮೋಹನಗೊಳಿಸಿದರು. ನಾಟಕುರುಂಜಿ ವರ್ಣ ಮತ್ತು ಮಲಹರಿ (ಪಂಚ ಮಾತಂಗ) ಕೃತಿಯ ನಂತರ ಸಂಕ್ಷಿಪ್ತ ಆಲಾಪನೆಯೊಂದಿಗೆ ನುಡಿಸಲಾದ ಆನಂದ ಭೈರವಿ (ಮರಿವೇರೆ) ಕೃತಿ ವಿಳಂಬದಲ್ಲಿ ರಾಗ ಮಾಧುರ್ಯವನ್ನು ಎತ್ತಿ ಹಿಡಿಯಿತು. ಮುಂದಿನ ಕಲ್ಯಾಣ ವಸಂತವನ್ನು (ನಾದಲೋಲುಡೈ) ರಾಗ, ಸ್ವರ ಪ್ರಸ್ತಾರಗಳೊಂದಿಗೆ ವಿಸ್ತರಿಸಿ ಆರೈಕೆ ನೀಡಿದ ಕಲಾವಿದರು ಮತ್ತು ವಯಲಿನ್ ಸಹವಾದಕರು (ಸಿ.ಎನ್. ತ್ಯಾಗರಾಜು) ಇಡೀ ಪ್ರಸ್ತುತಿಗೆ ನ್ಯಾಯ ಒದಗಿಸಿದರು.
Related Articles
Advertisement
“ಭೀಂ ಪಲನ್‌ನ ವಿಲಂಬಿತನಲ್ಲಿ “ಭವ ಸಾಗರ ಮೇ ಡೂಬತ್’ ಖ್ಯಾಲ್‌ನ್ನು ಮತ್ತು ಧ್ರುತನಲ್ಲಿ “ಬಲಮಾ ಚಾಚಾ’ ಪ್ರಸ್ತುತಿಗಳನ್ನು ಪರಿಣಾಮಕಾರಿಯಾಗಿ ಹಾಡಿದ ಗಾಯಕರು, ಮಧ್ಯಮ ಕಾಲದಲ್ಲಿ ಶುದ್ಧ ಸಾರಂಗ ಠುಂರಿಯನ್ನು ಸೌಖ್ಯವಾಗಿ ನಿರೂಪಿಸಿದರು. ಮುತ್ತುಗಳು ಚಿಮ್ಮಿದಂತಹ “ತಾನ್’ಗಳು ಅಂತೆಯೇ ತಾರದಿಂದ ಜಾರುತ್ತ ಮಂದ್ರದ ನಿರ್ದಿಷ್ಟ ಸ್ವರವನ್ನು ಖಚಿತವಾಗಿ ಹಿಡಿಯುವ ಪರಿ ಮನ ಸೆಳೆಯಿತು.
ಗಝಲ್‌ಗಳನ್ನು ನೆನಪಿಸುವ ಮಾಂಡ್, ದರ್ಬಾರಿ ಕಾನಡಾ ಗೀತೆಗಳು ಮತ್ತು ಭೈರವಿಯಲ್ಲಿ ದೇವರನಾಮದೊಂದಿಗೆ ಕಛೇರಿ ಕೊನೆಗೊಂಡಿತು. ಶಂಕರ ಶೆಣೈ ಹಾರ್ಮೋನಿಯಂನಲ್ಲೂ ದೀಪಕ್ ನಾಯಕ್ ತಬ್ಲಾದಲ್ಲೂ ಸಾಥ್ ನೀಡಿದ್ದಾರೆ.
ಸಂಜೆಯ ಪ್ರಧಾನ ಕಛೇರಿ ಚೆನ್ನೈನ ಕು| ಕೃತಿ ಭಟ್ ಇವರಿಂದ.ಇಂಪಾದ ಕಂಠಸಿರಿ, ನಗುಮುಖ, ಉದ್ವೇಗವೇನೂ ಇಲ್ಲದೆ ಸೌಖ್ಯವಾಗಿ ಹಾಡುವ ನಿರಾಳ ಭಾವ. ಒಳ್ಳೆಯ ಪಾಠಾಂತರ, ಪರಿಶ್ರಮ ಮತ್ತು ಸೃಜನಶೀಲತೆ, ಎಳೆ ವಯಸ್ಸಿಗೆ ಅನೂಹ್ಯವೆನಿಸುವ ಪ್ರತಿಭಾವಂತೆ.ಉತ್ತಮವಾದ ಶ್ರಾವ್ಯ ಗುಣವನ್ನು ಹೊಂದಿದ್ದ ಈ ಕಛೇರಿ, ಆರಂಭದ ಕಮಾಚ್ ದರುವಿನಿಂದ ಹಿಡಿದು ಕೊನೆಯ ತಿಲ್ಲಾನದವರೆಗೂ ಏಕ ಪ್ರಕಾರವಾಗಿ ರಸಿಕರನ್ನು ಹಿಡಿದಿಟ್ಟುಕೊಲುವಲ್ಲಿ ಯಶಸ್ವಿಯಾಗಿದೆ.
ಶ್ರೀ ರಂಜನಿ (ಸೊಗಸುಗಾ), ಕಲ್ಯಾಣಿ (ಶ್ರೀ ಮಧುರಾಂಬಿಕೇ) ರಾಗಗಳನ್ನು ಚಿಕ್ಕ ಮತ್ತು ಚೊಕ್ಕವಾಗಿ ಹಾಡಿ ಸ್ವರಗಳಿಂದ ಸಿಂಗರಿಸಿದ ಗಾಯಕಿ ತೋಡಿಯನ್ನು (ಗತಿನೀವನಿ) ಮುಖ್ಯ ರಾಗವಾಗಿ ಎತ್ತಿಕೊಂಡರು. ಕೃತಿಯ ಘನತೆಗೆ ಒಪ್ಪುವಂತೆ ಸಾಂದ್ರವಾದ ಆಲಾಪನೆ, ನೆರವಲ್ ಪುನರುಕ್ತವಾಗದ ಸ್ವರ ತೋರಣಗಳು ಮತ್ತು ಆಯಾಚಿತವಾಗಿ ಎಂಬಂತೆ ತಾನಾಗಿ ಒದಗಿ ಬರುವ “ಪೊರುತ್ತಂ’ಗಳೊಂದಿಗೆ ಈ ಪ್ರಸ್ತುತಿ ಶೋಭಿಸಿತು.
ಗಮಕಯುಕ್ತವಾಗಿ ಒಳ್ಳೆ ನಿಧಾನಗತಿಯಲ್ಲಿ ಶರಣಾಗತ ಭಾವದೊಂದಿಗೆ ಆದ್ರìವಾಗಿ ಹಾಡಲಾದ ಮಾಂಜಿ (ಬ್ರೋವವನ್ನು) ಕರುಣಾರಸ ಪ್ರಧಾನವಾಗಿದ್ದು ರಸಿಕರ ತಲೆದೂಗಿಸಿತು. ತ್ವರಿತಗತಿಯ ಕನ್ನಡ (ಪರಿತಾಪಮು) ಕೃತಿ ಹುರುಪಿನಿಂದ ಕೂಡಿತ್ತು.
ರಾಗಂ-ತಾನಂ-ಪಲ್ಲವಿಗಾಗಿ ಗಾಯಕಿ ಆಯ್ದುಕೊಂಡ ರಾಗ ಕಾನಡಾ. ವಿಸ್ತಾರಕ್ಕೆ ಹೆಚ್ಚಾಗಿ ತೆರೆದುಕೊಳ್ಳದ ರಾಗವಾದರೂ, ಅದನ್ನು ಎಳೆ ಎಳೆಯಾಗಿ ಬಿಡಿಸಿ ಸುಂದರವಾಗಿ ನೇಯ್ದ ಕಲಾವಿದೆ. “ತಾನಂ’ ನಂತರ “ಷಣ್ಮುಖಾ ಮುರುಗಾ ಗುಹಾ| ಕಾ… ನಟರಾಜ ಮೈಂ || ದಾ’ಎಂಬ ಪಲ್ಲವಿಯನ್ನು, ಚತುರಸ್ತ ತ್ರಿಪುಠ ತಾಳದಲ್ಲಿ, ನಡೆ ಮತ್ತು ಕಾಲ ವೈವಿಧ್ಯದೊಂದಿಗೆ ನಿರೂಪಿಸಿದರು. ರಾಗಮಾಲಿಕೆಯಲ್ಲಿ ಸ್ವರ ವಿನಿಕೆಗಳನ್ನು ಮತ್ತು ಮುಕ್ತಾಯದ ಅಂದವಾದ ಗೋಪುರಗಳನ್ನು ನಿರ್ಮಿಸಿದರು. ಬಹುಶ್ರುತವಲ್ಲದ ಅನೇಕ ರಚನೆಗಳನ್ನು ಹಾಡಿದ ಕಲಾವಿದೆ ಲಘು ಪ್ರಸ್ತುತಿಗಳನ್ನು ಭಾವಪೂರ್ಣವಾಗಿ ಹಾಡಿ ಘನ, ನಯ ಎರಡರಲ್ಲೂ ಸೈಯೆನಿಸಿಕೊಂಡರು.
ಸೂಕ್ಷ್ಮವಾದ ಪಲುಕುಗಳನ್ನು ಎಚ್ಚರಿಕೆಯಿಂದ ಅನುಸರಿಸಿದ ವಿಠಲರಂಗನ್ (ವಯಲಿನ್) ಮತ್ತು ಅರ್ಜುನ್ ಗಣೇಶ್ (ಮೃದಂಗ) ಕಛೇರಿಯ ಯಶೋಭಾಗಿಗಳಾಗಿದ್ದಾರೆ.
ಸರೋಜಾ ಆರ್. ಆಚಾರ್ಯ