Advertisement

Desi Swara: ಜರ್ಮನಿಯಲ್ಲಿ ಮಕ್ಕಳಿಂದ ಪುಣ್ಯಕೋಟಿ ನೆರಳಿನಾಟ ವಿಭಿನ್ನ ಪ್ರದರ್ಶನ

12:29 PM Jan 14, 2025 | Team Udayavani |

ಮ್ಯೂನಿಕ್‌: ಗೋವಿನ ಹಾಡು ಪುಣ್ಯಕೋಟಿ ಕಥೆಯನ್ನು ಕೇಳದೆ ಇರುವ ಕನ್ನಡಿಗರು ಯಾರು ಇಲ್ಲ ಅನ್ನಿಸುತ್ತೆ. ಎಲ್ಲರಿಗೂ ತಮ್ಮ ಬಾಲ್ಯದಲ್ಲಿ ಅಜ್ಜಿನೋ, ತಾತನೋ, ಅಮ್ಮನೋ, ಅಪ್ಪನೋ, ಅಧ್ಯಾಪಕರೋ ಹೇಳಿರುತ್ತಾರೆ. ಈ ಹಾಡನ್ನು ಕೇಳಿ ಬೇಜಾರಾಗಿ ದುಃಖ ಉಮ್ಮಳಿಸಿ ಕೊನೆಯಲ್ಲಿ ಕಣ್ಣೀರಿಟ್ಟವರು ನಾವೆಲ್ಲರೂ. ಈಗಲೂ ಆ ಕಥೆ, ಹಾಡು ಕೇಳಿದರೆ ಮೈನವಿರೇಳುತ್ತದೆ ಮತ್ತು ಬೇಸರವಾಗುತ್ತದೆ.

Advertisement

ಹಾಗೇನೇ ಕಣ್ಣಂಚಲ್ಲಿ ನೀರು ತರಿಸುತ್ತೆ. ಈ ಹಾಡಿನ ಪ್ರತಿಯೊಂದು ಸಾಲುಗಳು ಅದೆಷ್ಟು ಅರ್ಥಪೂರ್ಣವಾಗಿದೆ. ಅಷ್ಟೊಂದು ಭಾವಪೂರ್ಣ ಹಾಡು ಬರೆದ ಕವಿ ಯಾರೆಂದು ಇಂದಿಗೂ ಸರಿಯಾಗಿ ತಿಳಿದಿಲ್ಲ. ಕನ್ನಡದಲ್ಲಿ ಇಂತಹದೊಂದು ಅದ್ಭುತ ಹಾಡು ಪಡೆಯೋಕೆ ನಾವೆಲ್ಲ ಕನ್ನಡಿಗರು ಅದೆಷ್ಟು ಅದೃಷ್ಟ ಮಾಡಿದ್ದೇವು.

ಪುಣ್ಯಕೋಟಿ 2.0 ಗೋವಿನ ಹಾಡನ್ನೇ ವಿಭಿನ್ನವಾಗಿ ವರ್ಣಿಸಿ ಸ್ವಲ್ಪ ತಿರುವು ಕೊಡಲಾಗಿದೆ. ಪುಣ್ಯಕೋಟಿ ಹಸು ತನ್ನ ಕರುವನ್ನು ಉಳಿದ ಹಸುಗಳ ಜತೆಗೆ ಬಿಟ್ಟು ಗವಿಯ ಬಾಗಿಲಿಗೆ ಬಂದು ಹುಲಿ ಅರ್ಭುತನಿಗೆ ತನ್ನನ್ನು ಸಮರ್ಪಿಸಿಕೊಂಡಿತು. ಇತ್ತ ದೊಡ್ಡಿಯಲ್ಲಿದ್ದ ಕರು ಧೈರ್ಯದಿಂದ ಉಳಿದ ಹಸುಗಳನ್ನು ಕೂಡಿಕೊಂಡು ಬಂದು ಹುಲಿಯನ್ನು ಓಡಿಸಿ ಒಗ್ಗಟ್ಟಿನ ಬಲವನ್ನು ಸಾರುವ ಕಥೆಯನ್ನು ಹಾಡು ಮತ್ತು ನಿರೂಪಣೆಯೊಂದಿಗೆ ನಮ್ಮ ಕೂಟದ ಮಕ್ಕಳು ನಮ್ಮ ಮನೆ ಹಬ್ಬ ಕರ್ನಾಟಕ ರಾಜ್ಯೋತ್ಸವ ಸಂಭ್ರಮದಲ್ಲಿ ಅದ್ಭುತವಾಗಿ ನೆರಳಿನಾಟದಲ್ಲಿ ಪ್ರದರ್ಶಿಸಿ ಪ್ರೇಕ್ಷಕರ ಮನಸೂರೆಗೈದರು.‌

ಗೋವಿನ ಹಾಡನ್ನು ಹೊಸ ತರದಲ್ಲಿ ವಿಭಿನ್ನವಾಗಿ ವಿವರಿಸುವ ಯೋಚನೆ ಮೊಳಕೆಯೊಡೆದದ್ದು ಸಿರಿಗನ್ನಡಕೂಟ E.V.ಯ ಉಪಾಧ್ಯಕ್ಷೆಯಾದ ವೈಷ್ಣವಿ ಕುಲಕರ್ಣಿ ಅವರಿಗೆ. ಇವರೊಂದಿಗೆ ಕೂಟದ ಸಾಹಿತ್ಯ ವೇದಿಕೆಯಲ್ಲಿ ಕಥೆ ಕವನ ಬರೆಯುವ ಸಾಹಿತ್ಯಮನಗಳುಳ್ಳ ವಿಭಾ ಡೋಂಗ್ರೆ , ಕಮಲಾಕ್ಷ ಎಚ್‌.ಎ., ಅರವಿಂದ ಸುಬ್ರಹ್ಮಣ್ಯ ಅವರುಗಳ ಪ್ರಯತ್ನದಿಂದ ಸೇರಿ ಪುಣ್ಯಕೋಟಿ 2.0 ಹೊಸ ತರದಲ್ಲಿ ರೂಪ ತೆಳೆದು ಸುಂದರ ಕವಿತೆಯಾಗಿ ಮೂಡಿಬಂತು. ಕಥೆಯನ್ನು ಪ್ರೇಕ್ಷಕರಿಗೆ ವಿವರಿಸಲು ಅಜ್ಜಿ ಮತ್ತು ಮೊಮ್ಮಕ್ಕಳ ಸಂಭಾಷಣೆಯನ್ನು ಬರೆಯಲಾಯಿತು.

Advertisement

ಸರಿಯಾದ ರಾಗ ಸಂಯೋಜನೆಯನ್ನು ಮಾಡಿ ಇಂಪಾಗಿ ಹಾಡಿ ಮುದ್ರಿಸಿಕೊಟ್ಟವರು ಕೂಟದ ಪ್ರಕಾಶ ಜಾಬ್ಳಿ ಅವರು. ಪುಣ್ಯಕೋಟಿಯ ಸ್ವರವಾಗಿ ಶುಭಾ ಶ್ಯಾಮ್‌ ಮತ್ತು ಕರುವಿನ ಸ್ವರವಾಗಿ ಆದಿಶೇಷ ಬಾಯರಿ ಅರವಿಂದ ಭಾವನಾತ್ಮಕವಾಗಿ ದನಿಗೂಡಿಸಿ ಹಾಡಿದರು. ಇವರೆಲ್ಲರ ಸಾಹಿತ್ಯಾಸಕ್ತಿಯ ಶ್ರಮದಿಂದ ನ.17ರಂದು ಜರ್ಮನಿಯ ಗಾರ್ಶಿಂಗ್‌ನ ಸಭಾಂಗಣದಲ್ಲಿ ಜರಗಿದ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ನೆರಳಿನಾಟ ಸುಂದರವಾಗಿ ವಿಶೇಷವಾಗಿ ಮೂಡಿಬಂತು.

ನೆರಳಿನಾಟದ ಕಲ್ಪನೆಯನ್ನು ವಿದೇಶದ ಕನ್ನಡ ಕೂಟದಲ್ಲಿ ಕನ್ನಡದ ಹಾಡಿಗೆ ಮಕ್ಕಳು ನಟಿಸಿರುವುದು ಇದೆ ಮೊದಲ ಬಾರಿಗೆ. ವೈಷ್ಣವಿಯವರ ಆಲೋಚನಾ ಲಹರಿಗೆ ಸೂಕ್ತವಾದ ಪರಿಕರಗಳನ್ನು ತಯಾರಿಸಿ ಪೋಷಕರ ಸಹಾಯದೊಂದಿಗೆ ಮತ್ತು ಮಕ್ಕಳೊಡನೆ ಸೇರಿ ಅಂದವಾಗಿ ನಿರ್ವಹಣೆ ಮಾಡಿ ಪ್ರಸ್ತುತ ಪಡಿಸುವಲ್ಲಿ ನಾನು ಭಾಗಿಯಾಗಿದ್ದೇನೆ ಎನ್ನೋದು ಹೆಮ್ಮೆಯೆನಿಸಿದೆ.

11 ಮಕ್ಕಳ ತಂಡವು ನವೆಂಬರ್‌ನ ಜರ್ಮನಿಯ ಚಳಿಯನ್ನು ಲೆಕ್ಕಿಸದೆ ಶಾಲೆ ಪಾಠಗಳನ್ನು ಮುಗಿಸಿ ಶಾಡೋ ಆ್ಯಕ್ಟ್ ಅಭ್ಯಾಸಕ್ಕೆ ಬರುತ್ತಿದ್ದರು. ಒಬ್ಬರು ಅಭ್ಯಾಸದ ದಿನ ತಪ್ಪಿಸಿದರೂ ನೆರಳಿನಾಟ ಪರಿಪೂರ್ಣ ಆಗೋದು ಅಸಾಧ್ಯ. ಹಾಗೆ ಮಕ್ಕಳು ಮತ್ತು ಪೋಷಕರ ಸಹಕಾರದೊಂದಿಗೆ ಒಂದು ವೈಶಿಷ್ಟ್ಯಪೂರ್ಣ ಕಾರ್ಯಕ್ರಮ ಸಿರಿಗನ್ನಡ ಕೂಟದಲ್ಲಿ ಪ್ರದರ್ಶನಗೊಂಡಿತು.

ಇಂತಹ ವಿಭಿನ್ನ ಕಾರ್ಯಕ್ರಮಗಳನ್ನು ಮಕ್ಕಳನ್ನು ಕೂಡಿಕೊಂಡು ಮಾಡಿದರೆ ನಮ್ಮ ಮುಂದಿನ ಪೀಳಿಗೆಯ ಮಕ್ಕಳು ಸೃಜಾನಾತ್ಮಕವಾಗಿ ಯೋಚಿಸಲು ಮತ್ತು ನಮ್ಮ ಕಲೆ ಸಂಸ್ಕೃತಿಯೊಂದಿಗೆ ಬೆರೆಯಲು ಅವರಿಗೆ ಸಹಾಯಕವಾಗುತ್ತದೆ. ಗೋವಿನ ಹಾಡಿನಲ್ಲಿರುವ ಸತ್ಯವನ್ನು ನುಡಿಯಬೇಕು, ನಿಷ್ಠೆಯಿಂದ ನಡೆದುಕೊಳ್ಳಬೇಕು ಮತ್ತು ಮಾತಿಗೆ ತಪ್ಪಬಾರದೆಂಬ ನೀತಿಯ ಜತೆಗೆ ಪುಣ್ಯಕೋಟಿ 2.0 ಒಗ್ಗಟ್ಟಿನಲ್ಲಿ ಬಲವಿದೆ ಎನ್ನುವ ನೀತಿಯನ್ನು ತಿಳಿಹೇಳುತ್ತದೆ.

ಈ ತಂಡದಲ್ಲಿ ಭಾಗವಹಿಸಿದ ಮಕ್ಕಳೆಲ್ಲರೂ ಹಾಡನ್ನು ಚೆಂದವಾಗಿ ಗುನುಗುತ್ತಾ ಅರ್ಥಮಾಡಿಕೊಂಡು ಅಭಿನಯಿಸಿದರು.
ನೆರಳಿನಾಟದ ತಂಡ 10 ರಿಂದ 5 ವರ್ಷಗಳ ಮಕ್ಕಳನೊಳಗೊಂಡಿದ್ದು. ತಂಡದ ಪರಿಚಯ: ಗೊಲ್ಲ ಮತ್ತು ಬಂಡೆ: ಚಿರಾಗ್‌ ರಾವಂದೂರ್‌, ಹಸುಗಳಾಗಿ – ಗಂಗೆ: ರಿ .ಗೌಡ, ಗೌರಿ : ಅಧ್ವಯ್‌ ಲೊಕ್ಕೂರ್‌, ತುಂಗಭದ್ರೆ: ವನಿಶಾ ವಾರುಣವಿ ಮಲ್ಲಿಕಾರ್ಜುನ, ಕಾವೇರಿ: ದಕ್ಷ್ ದರ್ಶನ್‌, ಪುಣ್ಯಕೋಟಿ: ಸಂವಿದ್‌ ಶ್ಯಾಮ್‌, ಪುಣ್ಯಕೋಟಿ ಕರು: ಆದಿಶೇಷ ಬಾಯರಿ ಅರವಿಂದ, ಹುಲಿ ಅಭುìತಾ: ಚಿರಂತ್‌ ರಾವಂದೂರ್‌, ನಿರೂಪಣೆ: ಅಜ್ಜಿಪಾತ್ರದಲ್ಲಿ : ತನ್ವಿ ಕೌಶಿಕ್‌, ಮೊಮ್ಮಗು 1: ವಿಭಾ ನಂದಕುಮಾರ್‌, ಮೊಮ್ಮಗು 2: ಪ್ರಣವ್‌ ಸಣ್ಣಬಡ್ತಿ. ‌

ಈ ವಿಭಿನ್ನ ಕಾರ್ಯಕ್ರಮದಲ್ಲಿ ಭಾಗಿಯಾಗಿ ಕಾರ್ಯಕ್ರಮವನ್ನು ಅಂದಗಾಣಿಸಿದ ಪುಟಾಣಿಗಳಿಗೆಲ್ಲ ಅಭಿನಂದನೆಗಳು.
ಈ ವಿಶೇಷವಾದ ನೆರಳಿ ನಾಟವನ್ನು ಪ್ರೇಕ್ಷಕರು ಮೂಕವಿಸ್ಮಿತರಾಗಿ ಸದ್ದುಗದ್ದಲವಿಲ್ಲದೆ ವೀಕ್ಷಿಸಿ ಪ್ರಶಂಶಿಸಿದರು. ಇಂತಹದೊಂದು ಕಾರ್ಯಕ್ರಮವನ್ನು ಕರ್ನಾಟಕ ರಾಜ್ಯೋತ್ಸವದಲ್ಲಿ ಏರ್ಪಡಿಸಿ ವಿದೇಶದಲ್ಲೂ ನಮ್ಮ ಕನ್ನಡ ಸಾಹಿತ್ಯ ಕಲೆ ಸಂಸ್ಕೃತಿಯನ್ನು ಉಳಿಸಿ ಬೆಳೆಸಲು ಸಿರಿಗನ್ನಡಕೂಟ ಮ್ಯೂನಿಕ್‌ e . V. ಪ್ರೋತ್ಸಾಹಿಸುತ್ತಿದೆ.

ವರದಿ: ರೇಶ್ಮಾ ಎಂ.

Advertisement

Udayavani is now on Telegram. Click here to join our channel and stay updated with the latest news.