ಓದದೆ, ಹೆಚ್ಚು ಅಭ್ಯಾಸ ಮಾಡದೆ, ಒತ್ತಡ, ಜಂಜಡಗಳಲ್ಲೂ ಇರದೆ ಪರೀಕ್ಷೆಯನ್ನು ಆರಾಮವಾಗಿ ಸಂಭ್ರಮದಿಂದ ಎದುರಿಸುವಂತಹ ಮಕ್ಕಳೂ ಇದ್ದಾರಾ… ಎಂಬ ಪ್ರಶ್ನೆಗೆ ಮಂಗಳೂರಿನ ಸ್ವರೂಪ ಅಧ್ಯಯನ ಕೇಂದ್ರದ ವಿದ್ಯಾರ್ಥಿಗಳಿದ್ದಾರೆ ಎಂಬ ಉತ್ತರ ಲಭಿಸುತ್ತದೆ. “ಇದು ಅದಲ್ಲ’ ಎಂಬುದೇ ಸ್ವರೂಪ ಶಿಕ್ಷಣ ಸಂಸ್ಥೆಯ ಉಪ ಶೀರ್ಷಿಕೆ. ಅಂದರೆ ಸ್ವರೂಪ ಸಂಸ್ಥೆ ಎಲ್ಲ ಶಿಕ್ಷಣ ಸಂಸ್ಥೆಗಳಂತಲ್ಲ, ಅಲ್ಲಿನ ಶಿಕ್ಷಣದ ರೀತಿ ನೀತಿಗಳೇ ವಿಭಿನ್ನ. ಪಾಠಗಳನ್ನು ಚಿತ್ರಕಲೆ, ನೃತ್ಯ, ನಾಟಕ, ಸಂಗೀತ, ಕ್ರೀಡೆ ಮುಂತಾದವುಗಳಲ್ಲೇ ಕಲಿಯುವಂತಹ ರೀತಿಯಾಗಿದ್ದು ಅದಕ್ಕಿಂತಲೂ ಹೆಚ್ಚಾಗಿ ನೆನಪಿನ ತಂತ್ರಗಳಲ್ಲೇ ಎಲ್ಲವನ್ನೂ ಕಲಿಯುವಂತಹ ವೈಶಿಷ್ಟ್ಯತೆಯೇ ಸ್ವರೂಪದ ಒಂದು ವಿಭಿನ್ನ ರೂಪ.
ಕಲಾವಿದ ಗೋಪಾಡ್ಕರ್ ನೇತೃತ್ವದ ಮಂಗಳೂರಿನ ಸ್ವರೂಪ ಅಧ್ಯಯನ ಕೇಂದ್ರ ಒಂದು ವಿಭಿನ್ನ ಶಿಕ್ಷಣ ಸಂಸ್ಥೆಯಾಗಿದ್ದು, ಅಲ್ಲಿ ಮಕ್ಕಳಿಗೆ ಪುಸ್ತಕದ ಭಾರ ಹೊರುವ ಹಾಗೂ ಅತಿ ಓದುವಿಕೆಯ ಒತ್ತಡವಿಲ್ಲ.ಪರೀಕ್ಷಾ ಮುನ್ನಾ ದಿನ ಮೋಜು ಮಾಡಬಹುದು. ಆದರೂ ಸ್ವರೂಪದ ಮಕ್ಕಳ ಶಿಕ್ಷಣ, ನೀತಿ-ರೀತಿ, ಶಿಸ್ತು, ಸೃಜನಶೀಲತೆ, ಬದ್ಧತೆ, ಕ್ರೀಯಾಶೀಲತೆ ಎಲ್ಲವೂ ಉತ್ತಮ ಗುಣಮಟ್ಟದಲ್ಲಿದೆ. ಚಿತ್ರ, ನೃತ್ಯ, ಸಂಗೀತ, ಹಾಡು, ನಾಟಕ,ಮಿಮಿಕ್ರಿ ಮುಂತಾದವುಗಳಲ್ಲೇ ಶಾಲಾ ಶಿಕ್ಷಣದ ಪಾಠಗಳನ್ನು ಕಲಿಯುವ ರೀತಿ, ಅದಕ್ಕಿಂತಲೂ ಹೆಚ್ಚಾಗಿ ನೂರು ಪುಟದ ಪಾಠವನ್ನು ಮೂರು ಪುಟಕ್ಕೆ ಸರಳೀಕರಿಸಿ ನೆನಪಿನ ತಂತ್ರಜ್ಞಾನದಿಂದಲೇ ಇಡೀ ಪಠ್ಯಪುಸ್ತಕವನ್ನು ಮನವೆಂಬ ಹಾರ್ಡ್‌ಡಿಸ್ಕಿನಲ್ಲಿ ನಿರಂತರ ಇಟ್ಟುಕೊಳ್ಳುವುದೇ ಸ್ವರೂಪದ ವಿಶಿಷ್ಟತೆ. ಹಾಗಂತ ಇದು ಇತರ ಶಾಲೆಗಳಲ್ಲಿ ಪ್ರಯೋಗ ಮಾಡಿದರೂ ಅಸಾಧ್ಯ ಪ್ರಯತ್ನಗಳಾಗಿ ಸ್ವರೂಪದಿಂದ ಮಾತ್ರ ಸಾಧ್ಯವೆಂಬ ಹೆಗ್ಗಳಿಕೆಯನ್ನು ಪಡೆದುಕೊಂಡಿದೆ. ರಾಜ್ಯ, ರಾಷ್ಟ್ರ, ಅಂತರ್‌ರಾಷ್ಟ್ರೀಯ ಮಟ್ಟದಲ್ಲೂ ಸ್ವರೂಪ ತನ್ನ ಗುರುತಿಸುವಿಕೆಯನ್ನು ಗಳಿಸಿಕೊಂಡಿದೆ. ಇಲ್ಲಿ ಕಲಿತ ವಿದ್ಯಾರ್ಥಿಗಳು ಗಿನ್ನೆಸ್ ದಾಖಲೆ, ಇಂಡಿಯಾ ರೆಕಾರ್ಡ್, ಲಿಮ್ಕಾ ರೆಕಾರ್ಡ್ ಮುಂತಾದ ಸಾಧನೆ ಮಾಡಿದ್ದಾರೆ. ಸ್ವರೂಪದ ಪ್ರತಿ ವಿದ್ಯಾರ್ಥಿ, ವಿದ್ಯಾರ್ಥಿನಿಯೂ ಬಹುಮುಖೀ ಪ್ರತಿಭೆಯ ಪ್ರಭೆಗಳಾಗಿದ್ದು ಸಮಾಜಕ್ಕೊಂದು ಬೆಳಕಿನ ಶೋಭೆಗಳಾಗಿರುತ್ತಾರೆ. ಬೀದಿ ನಾಟಕಗಳ ಮೂಲಕ ಪ್ರಕೃತಿ, ಪರಿಸರ, ನೆಲ-ಜಲ, ಸ್ವತ್ಛತಾ ಅಭಿಯಾನಗಳಿಗೆ ಹೋರಾಟವನ್ನೂ ಮಾಡಿದ್ದು ಎಲ್ಲವೂ ಈ ನೆಲದ ಪ್ರೀತಿಗಾಗಿ ಎಂದು ಹಣೆಪಟ್ಟಿಯನ್ನು ಕಟ್ಟಿಕೊಂಡು ಪರಿಸರ ಜಾಗೃತಿಗೂ ಮಕ್ಕಳಲ್ಲಿ ಅರಿವು ಮೂಡಿಸುತ್ತಾ ಬರುತ್ತಿದೆ ಸ್ವರೂಪ ಶಿಕ್ಷಣ ಸಂಸ್ಥೆ.
ಬಲ್ಲಾಳ್‌ಬಾಗ್‌ನ ಪ್ರಸಾದ್ ಆರ್ಟ್‌ಗ್ಯಾಲರಿಯ ಸ್ವರೂಪದ ವಿದ್ಯಾರ್ಥಿ(ನಿ)ಯರು ಇತ್ತೀಚೆಗೆ ಈ ವರ್ಷದ ಶೈಕ್ಷಣಿಕ ಪಠ್ಯಗಳನ್ನು ಒಂದು ಕ್ಯಾನ್ವಾಸ್‌ನಲ್ಲಿ ಚಿತ್ರಿಸಿ “ಟೆಕ್ಟ್ಆರ್ಟ್’ ಚಿತ್ರಕಲಾ ಪ್ರದರ್ಶನವನ್ನು ಮಾಡಿದ್ದಾರೆ. ಈ ಚಿತ್ರಕಲಾ ಪ್ರದರ್ಶನ ಈವರೆಗೂ ಎಲ್ಲೂ ಆಗಿಲ್ಲ, ಮುಂದೆಯೂ ಯಾರಿಂದಲೂ ಅಸಾಧ್ಯ, ಸ್ವರೂಪದಿಂದಲೇ ಸಾಧ್ಯವೆಂಬುದನ್ನು ಸಾಧಿಸಿ ತೋರಿಸಿದ್ದಾರೆ. ಪ್ರತಿಯೊಂದು ಕ್ಯಾನ್ವಾಸಿನಲ್ಲೂ ಆಯಾ ವಿದ್ಯಾರ್ಥಿ ಬಿಡಿಸಿದ ಚಿತ್ರವನ್ನು ಬರೀ ವೀಕ್ಷಿಸಿದರೆ ಒಂದು ಮಾಮೂಲಿ ಅಮೂರ್ತ ಕಲಾಕೃತಿಯನ್ನು ವೀಕ್ಷಿಸಿದಂತೆ ಆಗಬಹುದು. ಆದರೆ ಆ ಕಲಾಕೃತಿಯ ಬಗ್ಗೆ ಆಯಾ ವಿದ್ಯಾರ್ಥಿಯಲ್ಲಿ ಪ್ರಶ್ನಿಸಿದರೆ ಅಬ್ಬಬ್ಟಾ…. ಇಡೀ ಪಠ್ಯಪುಸ್ತಕದ ಎಲ್ಲಾ ವಿಚಾರಗಳೂ ಆ ಕ್ಯಾನ್ವಾಸ್‌ನಲ್ಲಿ ಬಣ್ಣಗಳಲ್ಲಿ ರೇಖೆಗಳಲ್ಲಿ ಸಾಂಕೇತಿಕವಾಗಿ ತುಂಬಿಕೊಂಡಿದೆ. ಆ ಕಲಾಕೃತಿಯನ್ನು ಕಂಡಕೂಡಲೇ ಆ ವಿದ್ಯಾರ್ಥಿ ಮತ್ತೆ ಇಡೀ ಪಠ್ಯಪುಸ್ತಕವನ್ನು ಓದಬೇಕಂತಿಲ್ಲ. ಸಂಪೂರ್ಣ ಪಾಠದ ವಿಷಯಗಳು ಅಲ್ಲಿ ಇರುವುದರಿಂದ ಓದುವ, ಬರೆಯುವ ಮತ್ತೆ ಮತ್ತೆ ಜ್ಞಾಪಿಸುವ ಮಾನಸಿಕ ಪ್ರಕ್ರಿಯೆಗಳಿಲ್ಲದೆ ನಿರಾಳವಾಗಿ ಪರೀಕ್ಷೆಗೆ ಉತ್ತರ ಬರೆದು ಉತ್ತಮ ಅಂಕಗಳಿಸಬಹುದು. ಇದು ಸ್ವರೂಪದ ವಿದ್ಯಾರ್ಥಿಗಳ ಸಾಮರ್ಥ್ಯ ಎನ್ನುವುದಕ್ಕಿಂತಲೂ ತಾಕತ್ತು ಎಂತಲೇ ಹೇಳಬಹುದು. ಇದು ಹೇಗೆ ಸಾಧ್ಯ ಎಂಬ ಪ್ರಶ್ನೆ ಉದ್ಬವಿಸಬಹುದು. ಸ್ವರೂಪದ ಶಿಕ್ಷಣ ಸಂಸ್ಥೆಯನ್ನು ದೂರದಿಂದ ನೋಡುವುದಕ್ಕಿಂತ ಶಿಕ್ಷಣ ಸಂಸ್ಥೆಯ ಮತ್ತು ವಿದ್ಯಾರ್ಥಿಗಳೊಡನೆ ಹತ್ತಿರದಿಂದ ಸ್ನೇಹ ಒಡನಾಟದಿಂದ ಬೆರೆತುಕೊಂಡರೆ ಹೌದು ಇದು ಸಾಧ್ಯ ಎಂಬುದು ಸ್ಪಷ್ಟವಾಗುತ್ತದೆ. ಇತರ ಶಾಲೆಗಳಲ್ಲಿನ ಪುಸ್ತಕಭಾರ ಮತ್ತು ಸ್ವರೂಪದ ಮಸ್ತಕ ಹಾರವನ್ನು ಸೂಕ್ಷ್ಮವಾಗಿ ಗಮನಿಸಿದರೆ ಇವರ ಇದು ಅದಲ್ಲ ಎಂಬ ಶೀರ್ಷಿಕೆಗೆ ಉತ್ತರ ಲಭಿಸುತ್ತಿದೆ. ಈ ಚಿತ್ರಕಲಾ ಪ್ರದರ್ಶನದಲ್ಲಿ ವಿದ್ಯಾರ್ಥಿಗಳ ಕಲಾಕೃತಿಗಳೊಂದಿಗೆ ಶಿಕ್ಷಕರೂ ತಮ್ಮ ಕಲಾಕೃತಿಗಳನ್ನು ಪ್ರದರ್ಶನಕ್ಕೆ ಇಟ್ಟಿದ್ದು ಇದುವೇ ಸ್ವರೂಪದ ವಿಶೇಷತೆ. ಶಿಕ್ಷಕರಿಗೂ ವಿದ್ಯಾರ್ಥಿಗಳಿಗೂ ಅಭಿಪ್ರಾಯ ಬೇಧಗಳಿಲ್ಲದೆ ಇರುವುದರಿಂದ ಸಮಾನವಾಗಿ ಹೊಂದಾಣಿಕೆಯಲ್ಲಿರುವುದರಿಂದ ಸ್ವರೂಪದ ವಿದ್ಯಾರ್ಥಿಗಳಿಗೆ ತಮ್ಮ ಪ್ರತಿಭೆ ವಿಕಸನವಾಗುವುದಕ್ಕೆ ಮೂಲ ಪ್ರೇರಣೆಯಾಗಿರುತ್ತದೆ.
ದಿನೇಶ್ ಹೊಳ್ಳ