Advertisement

ಬಾಂಗ್ಲಾ ನಂಬಿಕಸ್ಥ ಮಿತ್ರ, ಹೊಸ ಮಜಲಿನಲ್ಲಿ ದ್ವಿಪಕ್ಷೀಯ ಸಂಬಂಧ 

12:43 PM Apr 10, 2017 | Harsha Rao |

ಕೋಲ್ಕತ್ತದಿಂದ ಬಾಂಗ್ಲಾದ ಖುಲಾ° ನಗರದ ನಡುವೆ ಸಂಚರಿಸುವ ಬಸ್‌ ಮತ್ತು ಪ್ರಯಾಣಿಕ ರೈಲಿನ ಪ್ರಾಯೋಗಿಕ ಓಡಾಟಕ್ಕೆ ಚಾಲನೆ ನೀಡಿರುವುದು ಉಭಯ ದೇಶಗಳ ಜನರಿಗೆ ನೀಡಿದ ಕೊಡುಗೆ ಎನ್ನಬಹುದು. 

Advertisement

ಬಾಂಗ್ಲಾ ದೇಶದ ಪ್ರಧಾನಿ ಶೇಖ್‌ ಹಸೀನಾ ಅವರ ನಾಲ್ಕು ದಿನಗಳ ಭಾರತ ಭೇಟಿ ಉಭಯ ರಾಷ್ಟ್ರಗಳ ನಡುವಿನ ಸ್ನೇಹವನ್ನು ಇನ್ನಷ್ಟು ಗಟ್ಟಿಗೊಳಿಸುವ ಹಲವು ಸಕಾರಾತ್ಮಕ ನಡೆಗಳನ್ನು ಒಳಗೊಂಡಿದೆ. ಎರಡೂ ದೇಶಗಳಿಗೆ ಈಗ ವ್ಯೂಹಾತ್ಮಕ ಸ್ನೇಹವನ್ನು ಇನ್ನಷ್ಟು ಗಟ್ಟಿಗೊಳಿಸುವುದು ಅಗತ್ಯವೂ ಹೌದು ಅನಿವಾರ್ಯವೂ ಹೌದು. ನೆರೆಯ ಎರಡು ಪ್ರಮುಖ ದೇಶಗಳಾದ ಪಾಕಿಸ್ಥಾನ ಮತ್ತು ಚೀನಾ ಜತೆಗಿನ ಸಂಬಂಧ ಹದಗೆಟ್ಟಿರುವಾಗ ಭಾರತಕ್ಕೆ ಪಕ್ಕದಲ್ಲೇ ನಂಬಬಹುದಾದ ಮಿತ್ರನ ಅಗತ್ಯವಿದೆ. ಈ ಅಗತ್ಯವನ್ನು ಬಾಂಗ್ಲಾ ಈಡೇರಿಸಿದೆ. ಅಂತೆಯೇ ಬಾಂಗ್ಲಾಕ್ಕೂ ತನ್ನ ಆರ್ಥಿಕ ಮತ್ತು ರಕ್ಷಣಾತ್ಮಕ ಕಾರಣಗಳಿಗೆ ಭಾರತದಂತಹ ದೊಡ್ಡಣ್ಣನ ಆಶ್ರಯದ ಅಗತ್ಯವಿದೆ. 
ಈ ಹಿನ್ನೆಲೆಯಲ್ಲಿ ಶೇಖ್‌ ಹಸೀನಾ ಭೇಟಿಗೆ ಭಾರೀ ಮಹತ್ವವಿದೆ.

ಪ್ರಧಾನಿ ನರೇಂದ್ರ ಮೋದಿ ನೆರೆ ರಾಷ್ಟ್ರಗಳಿಗೆ ಸ್ನೇಹದಲ್ಲಿ ಮೊದಲ ಆದ್ಯತೆ ಎಂದು ಅಧಿಕಾರಕ್ಕೇರಿದ ಆರಂಭದಲ್ಲಿಯೇ ಮಾತು ಮತ್ತು ಕೃತಿಯ ಮೂಲಕ ತೋರಿಸಿಕೊಟ್ಟಿದ್ದರು. ಪಾಕ್‌ ಮತ್ತು ಚೀನ ಹೊರತುಪಡಿಸಿ ಉಳಿದ ದೇಶಗಳ ಜತೆಗೆ ಅವರ ಈ ಧೋರಣೆ ಸರಿಯಾದ ಫ‌ಲವನ್ನು ನೀಡಿದೆ. ಹೀಗಾಗಿ ಇಂದು ಭೂತಾನ್‌, ನೇಪಾಳ, ಶ್ರೀಲಂಕಾ ಭಾರತದ ಜತೆಗೆ ಉತ್ತಮ ಬಾಂಧವ್ಯ ಇಟ್ಟುಕೊಂಡಿವೆ. ಅದರಲ್ಲೂ ಮೋದಿ ಏಷ್ಯಾದ ದೇಶಗಳ ಪೈಕಿ ಬಾಂಗ್ಲಾಕೆ ಪ್ರಥಮ ಆದ್ಯತೆಯನ್ನು ನೀಡಿದ್ದರು. ಇದು ಶೇಖ್‌ ಹಸೀನಾ ಭೇಟಿಯಲ್ಲಿ ಪ್ರತಿಫ‌ಲಿಸಿದೆ. ಶಿಷ್ಟಾಚಾರಗಳನ್ನು ಬದಿಗಿಟ್ಟು ಹಸೀನಾರನ್ನು ಸ್ವಾಗತಿಸಲು ಮೋದಿ ಸ್ವತಃ ವಿಮಾನ ನಿಲ್ದಾಣಕ್ಕೆ ಹೋಗಿರುವುದು ಅವರ ನಡುವಿನ ನಿಕಟತೆಯನ್ನು ತೋರಿಸುತ್ತಿದೆ. ಹಸೀನಾಗೆ ಭಾರತದ ಜತೆಗೆ ಭಾವನಾತ್ಮಕವಾದ ಸಂಬಂಧವೂ ಇದೆ. ಬಾಂಗ್ಲಾ ಸಂಸ್ಥಾಪಕರೂ ಆಗಿರುವ ಹಸೀನಾರ ತಂದೆ ಶೇಖ್‌ ಮುಜಿಬರ್‌ ರೆಹಮಾನ್‌ ಮತ್ತು ಅವರ ಕುಟುಂಬ  ಕಗ್ಗೊಲೆಯಾದಾಗ ಅನಾಥರಂತಿದ್ದ ಶೇಖ್‌ ಹಸೀನಾಗೆ ಆಶ್ರಯ ನೀಡಿದ್ದು ಭಾರತ. ಹಸೀನಾ ಮತ್ತು ಅವರ ಸಹೋದರಿ ಆಗ ಜರ್ಮನಿಯಲ್ಲಿದ್ದ ಕಾರಣ ಈ ಹತ್ಯಾಕಾಂಡದಲ್ಲಿ ಬದುಕುಳಿದಿದ್ದರು. 1975ರಿಂದ 1981ರ ತನಕ ಆರು ವರ್ಷ ಹಸೀನಾ ಕುಟುಂಬ ದಿಲ್ಲಿಯಲ್ಲಿ ಸುರಕ್ಷಿತವಾಗಿತ್ತು. 

ಈ ಸಂದರ್ಭದಲ್ಲಿ ಭಾರತ ತುರ್ತು ಪರಿಸ್ಥಿತಿಯನ್ನು ಎದುರಿಸಿದರೂ ಹಸೀನಾ ಕುಟುಂಬಕ್ಕೆ ಯಾವುದೇ ತೊಂದರೆಯಾಗಲಿಲ್ಲ. ಹಸೀನಾ ದಂಪತಿ ಮಗ ಸಾಜಿದ್‌ ಆರಂಭಿಕ ಶಿಕ್ಷಣ ಪಡೆದುಕೊಂಡಿರುವುದೂ ಭಾರತದಲ್ಲೇ. ಹಸೀನಾ ಪಾಲಿಗೆ ಭಾರತ ಭೇಟಿ ಭಾವನತ್ಮಾಕ ಪ್ರವಾಸವೂ ಹೌದು. 

ಈ ಭೇಟಿಯಲ್ಲಿ ಎರಡೂ ದೇಶಗಳ ಬಾಂಧವ್ಯ ವೃದ್ದಿಗೆ ಸಹಕಾರಿಯಾಗುವ 22 ಒಪ್ಪಂದಗಳಿಗೆ ಅಂಕಿತ ಹಾಕಲಾಗಿದೆ. ಇದಲ್ಲದೆ ಭಾರತ ಸೇನಾ ಸಾಮಾಗ್ರಿ ಖರೀದಿಗಾಗಿ 3213 ಕೋ. ರೂ. ಸಾಲ  ಮತ್ತು 28,900 ಕೋ. ರೂ.ಗಳ ವಿನಾಯಿತಿ ದರದ ಸಾಲವನ್ನು ನೀಡುವ  ಔದಾರ್ಯ ಮೆರೆದು ರಕ್ಷಣಾ  ಸಹಕಾರ ಕ್ಷೇತ್ರದಲ್ಲಿ ಬಾಂಗ್ಲಾವನ್ನು ತನ್ನ ಪಾಲುದಾರನನ್ನಾಗಿ ಮಾಡಿಕೊಂಡಿದೆ. ಕೋಲ್ಕತ್ತದಿಂದ ಬಾಂಗ್ಲಾದ ಖುಲಾ° ನಗರದ ನಡುವೆ ಸಂಚರಿಸುವ ಬಸ್‌ ಮತ್ತು ಪ್ರಯಾಣಿಕ ರೈಲಿನ ಪ್ರಾಯೋಗಿಕ ಓಡಾಟಕ್ಕೆ ಚಾಲನೆ ನೀಡಿರುವುದು ಉಭಯ ದೇಶಗಳ ಜನರಿಗೆ ನೀಡಿದ ಕೊಡುಗೆ ಎನ್ನಬಹುದು. ಹಿಂದೆ ವಾಜಪೇಯಿ ಪ್ರಧಾನಿಯಾಗಿದ್ದಾಗ ಲಾಹೋರ್‌ಗೆ ಬಸ್‌ ಪ್ರಾರಂಭಿಸುವ ಐತಿಹಾಸಿಕ ನಡೆಯಿಟ್ಟಿದ್ದರು. ಎಷ್ಟೇ ಶತ್ರುತ್ವವಿದ್ದರೂ ಈ ಬಸ್‌ ಪಾಕ್‌ ಮತ್ತು ಭಾರತದ ಜನರ ಹೃದಯಗಳನ್ನು ಬೆಸೆಯುವ ಕೆಲಸ ಮಾಡಿದೆ ಎನ್ನುವುದು ಸುಳ್ಳಲ್ಲ. ಇದೇ ಮಾದರಿಯಲ್ಲಿ ಬಾಂಗ್ಲಾ ಮತ್ತು ಭಾರತ ಜನರು ಹೃದಯ ಬೆಸೆಯಲು ಬಸ್‌ ಮತ್ತು ರೈಲು ಸಹಕಾರಿಯಾಗಬಹುದು.  ಆದರೆ ಬಹುನಿರೀಕ್ಷಿತ ತೀಸ್ತಾ ನದಿ ನೀರು ಹಂಚಿಕೆ ಒಪ್ಪಂದ ಏರ್ಪಡದಿರುವುದು ಈ ಭೇಟಿಯ ದೊಡ್ಡ ಹಿನ್ನಡೆ. ಇದೊಂದು ರೀತಿಯಲ್ಲಿ ಕಾವೇರಿ ವಿವಾದದ ಮಾದರಿಯ ವಿವಾದ. ಈಗ ತೀಸ್ತಾದಲ್ಲಿ ನೀರಿಲ್ಲ, ಹಂಚಿಕೆ ಒಪ್ಪಂದ ಮಾಡಿಕೊಂಡು ಏನು ಪ್ರಯೋಜನ ಎನ್ನುವುದು ಬಾಂಗ್ಲಾ ಪ್ರಶ್ನೆ. ಉಭಯ ದೇಶಗಳ ನಡುವೆ 50ಕ್ಕೂ ಹೆಚ್ಚು ನದಿಗಳು ಹರಿಯುತ್ತವೆ. ಈ ನದಿಗಳ ಮೂಲಕ ಜಲಸಾರಿಗೆಯನ್ನು ಅಭಿವೃದ್ಧಿಪಡಿಸಿ ಸರಕು ಸಾಗಾಟ ಮತ್ತು ಸಂಚಾರವನ್ನು ಅಗ್ಗಗೊಳಿಸುವ ಯೋಜನೆಯೂ ಇದೆ. ತೀಸ್ತಾ ನದಿ ಒಪ್ಪಂದವಾದರೆ ಈ ಯೋಜನೆಗಿರುವ ದೊಡ್ಡ ಅಡ್ಡಿ ನಿವಾರಣೆಯಾಗುತ್ತದೆ. ಏನೇ ಆದರೂ ಉಭಯದೇಶಗಳಿಗೂ‌ ಈ‌  ಸೌಹಾರ್ದದಿಂದ  ದೀರ್ಘ‌ಕಾಲದಲ್ಲಿ ಒಳಿತಾಗಲಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next