Advertisement

ಪ್ಯಾರಾಲಿಸಿಸ್ ನಿಂದ ಪ್ಯಾರಾ ಒಲಿಂಪಿಕ್ಸ್ ವರೆಗೆ: ದೀಪಾ ಮಲಿಕ್ ಎಂಬ ಸ್ಫೂರ್ತಿಯ ಸೆಲೆ

09:40 AM Aug 27, 2019 | keerthan |

ಕಷ್ಟಗಳು ಯಾರ ಜೀವನದಲ್ಲಿ ಬರುವುದಿಲ್ಲ ಹೇಳಿ. ಕಷ್ಟಗಳನ್ನೇ ಮೆಟ್ಟಿಲಾಗಿಸಿ ಯಶಸ್ಸು ಕಾಣುವವನೇ ನಿಜವಾದ ಸಾಧಕ. ನಿಮ್ಮಲ್ಲಿ ಸಾಧಿಸುವ ಛಲ ಒಂದಿದ್ದರೇ ಸಾಕು ಈ ಕಷ್ಟಗಳೂ ನಿಮಗೆ ಶರಣಾಗುತ್ತದೆ. ಇಂತಹದೇ ಅಪ್ಪಟ ಸಾಧಕಿಯ ಕಥೆಯಿದು. ದೃಢ  ಸಂಕಲ್ಪವೊಂದಿದ್ದರೆ ಈ ಲೋಕದಲ್ಲಿ ಯಾರೂ ಅಶಕ್ತರಲ್ಲ ಎಂದು ತೋರಿಸಿದ ಹೆಣ್ಣು ಮಗಳ ಕಥೆ.

Advertisement

1999ರಲ್ಲಿ ಈಕೆಗೆ  ಮೊದಲ ಬಾರಿಗೆ ತನಗಿರುವ ರೋಗದ ಅರಿವಾಗಿತ್ತು. ಆಕೆಗೆ ಬಂದೆರಗಿದ್ದು ಸ್ಪೈನಲ್ ಟ್ಯೂಮರ್ ಎಂಬ ಮಹಾಮಾರಿ. ಮಂದಿನ 14 ವರ್ಷಗಳು ಯಾವ ಪಾಪಿಗೂ ಬರಬಾರದ ನರಕ ಯಾತನೆ ! ಈ ವರ್ಷಗಳಲ್ಲಿ ಈಕೆಗೆ ಭುಜಕ್ಕೆ ಸಂಬಂಧಿಸಿದ ಮೂರು ಶಸ್ತ್ರಚಿಕಿತ್ಸೆ ಮಾಡಲಾಗಿತ್ತು. ಬರೋಬ್ಬರಿ 183 ಸ್ಟಿಚ್ ಹಾಕಲಾಗಿತ್ತು.! ದೇಹ ಅಕ್ಷರಶಃ ಜರ್ಜರಿತಗೊಂಡಿತ್ತು. ಇಷ್ಟೆಲ್ಲಾ ಕಷ್ಟ ಅನುಭವಿಸಿದ ಈಕೆ ನಂತರ ಮಾಡಿದ ಸಾಧನೆ ಎಂತವರಿಗೂ ಸ್ಫೂರ್ತಿಯಾಗುವಂಥದ್ದು.

ಇವಳು ಸಾಮಾನ್ಯ ಹೆಣ್ಣು ಮಗಳಲ್ಲ. ಅಸಾಮಾನ್ಯವನ್ನು ಸಾಧಿಸಿದ ಛಲಗಾತಿ. ಕ್ರೀಡಾ ಲೋಕದ ಕಣ್ಮಣಿ. ಭಾರತದ ಹೆಮ್ಮೆ . ಇವರು ಬೇರೆ ಯಾರು ಅಲ್ಲ, ಇತ್ತೀಚೆಗೆ ಭಾರತದ ಅತ್ಯುನ್ನತ ಕ್ರೀಡಾ ಪ್ರಶಸ್ತಿ ರಾಜೀವ್ ಗಾಂಧಿ ಖೇಲ್ ರತ್ನಕ್ಕೆ ಆಯ್ಕೆಯಾದ ದೀಪಾ ಮಲಿಕ್.

ದೀಪಾ ಮಲಿಕ್ ಹುಟ್ಟಿದ್ದು 1970ರ ಸಪ್ಟೆಂಬರ್‌ 30ರಂದು ಹರ್ಯಾಣದ ಭೈಸ್ವಾಲ್‌ ನಲ್ಲಿ. ಇವರದು ಸೈನಿಕರ ಕುಟುಂಬ. ಹಾಗಾಗಿಯೇ ಏನೋ ಧೈರ್ಯ, ಛಲ ಇವರ ಆಸ್ತಿ.  ಇವರು ಮದುವೆಯಾಗಿದ್ದು ಕೂಡಾ ಭಾರತೀಯ ಯೋಧನನ್ನೇ. ಇಬ್ಬರು ಮಕ್ಕಳ ತಾಯಿ, ಯೋಧನ ಹೆಂಡತಿಯಾಗಿದ್ದ ಸಾಮಾನ್ಯ ದೀಪಾ ಮಲಿಕ್ ಮುಂದೆ ದೇಶ ಮೆಚ್ಚುವ ಸಾಧಕಿಯಾಗಿದ್ದು ಮಾತ್ರ ರೋಚಕ. ನೋವೆಂಬ ಕತ್ತಲ ಹಿಂದಿನ ಬೆಳಕಿನ ಆಶಾಕಿರಣ ಹಿಡಿದು ಹೊರಟವರು ಏರಿದ್ದು ಸಾಧನೆಯ ಶಿಖರವನ್ನು. ಸಾಧಿಸಿದ್ದು ಅಸಾಧ್ಯವೆಂದು ನಂಬಿದ್ದನ್ನು.

ಅದೊಂದು ಕರಾಳ ದಿನ ದೀಪಾರ ಪಾಲಿಗೆ ಆ ಶನಿ ಬಡಿದಿತ್ತು. ಮಗಳು ಜ್ವರದಿಂದ ಮಲಗಿದ್ದಳು, ಗಂಡ ಕಾರ್ಗಿಲ್ ಕದನದಲ್ಲಿ ಶತ್ರುಗಳೆದುರು ಹೋರಾಡುತ್ತಿದ್ದರು. ಇಲ್ಲಿ ದೀಪಾ ಸ್ಪೈನಲ್ ಟ್ಯೂಮರ್ ಗೆ ಒಳಗಾಗಿದ್ದರು. ಸೊಂಟದಿಂದ ಕೆಳಗೆ ಸ್ವಾಧೀನವೇ ಇರಲಿಲ್ಲ. ಮುಂದಿನ ಆಯಸ್ಸೆಲ್ಲಾ ವ್ಹೀಲ್ ಚೇರ್ ಮೇಲೆಯೇ ! ದೀಪಾ ಮುಂದೆ ಜೀವನದಲ್ಲಿ ಎಂದೂ ನಡೆಯುವುದಿಲ್ಲ ಎಂದು ವೈದ್ಯರು ಘೋಷಿಸಿಯಾಗಿತ್ತು. ಆದರೆ ಸುಮ್ಮನೆ ಬಿಟ್ಟು ಬಿಡುವ ಜಾಯಮಾನವೇ ದೀಪಾರದಲ್ಲ. ನಡೆಯಲಾರದ ಅವರು ಕಲಿತಿದ್ದು ಬೈಕಿಂಗ್, ಸ್ವಿಮ್ಮಿಂಗ್ ! ಇಷ್ಟೆಲ್ಲಾ ಕಷ್ಟವನು ಅನುಭವಿಸಿ, ಕ್ರೀಡಾ ಪಟುವಾಗಬೇಕೆಂದು ನಿರ್ಧರಿಸುವಾಗ ದೀಪಾರ ಪ್ರಾಯ 36 ವರ್ಷ ! ಅಂದರೆ ಸಾಮಾನ್ಯ ಕ್ರೀಡಾಪಟುಗಳು ನಿವೃತ್ತಿ ಹೊಂದುವ ಪ್ರಾಯ. ಈ ಪ್ರಾಯದಲ್ಲಿ ಕ್ರೀಡಾ ತರಬೇತಿ ಆರಂಭಿಸಿದ ದೀಪಾ ತಮ್ಮ 45ರ ಹರೆಯದಲ್ಲಿ ಪ್ಯಾರಾ ಒಲಂಪಿಕ್ಸ್‌ ನಲ್ಲಿ ಬೆಳ್ಳಿ ಗೆದ್ದರು. ಅಂತಹ ಛಲಗಾತಿ ದೀಪಾ ಮಲಿಕ್.

Advertisement

ವ್ಹೀಲ್‌ ಚೇರ್‌ ನಲ್ಲೇ ಕಾಲ ಕಳೆಯಬೇಕಿದ್ದ ದೀಪಾ ಮಲಿಕ್ ಗೆ ಬೈಕ್‌ ರೈಡ್‌ ಮಾಡಬೇಕೆಂಬ ಆಸೆ ಉಂಟಾಗಿತ್ತು. ಹಿಮಾಲಯನ್‌ ಮೋಟಾರ್‌ ಸ್ಪೋರ್ಟ್ಸ್‌ ಅಸೋಸಿಯೇಶನ್‌ ಸೇರಿದ ದೀಪಾ ಕೇವಲ ಎಂಟು ದಿನದಲ್ಲಿ 1700 ಕಿ.ಮೀ ಬೈಕ್‌ ರೈಡ್‌ ಮಾಡಿ ದಾಖಲೆ ಬರೆದರು. ಜಗತ್ತಿನ ಅತೀ ಎತ್ತರದ ಮೋಟಾರ್‌ ವಾಹನ ರಸ್ತೆ ಲಡಾಖ್‌ ನ ಖಾರ್ದುಂಗಾ ಲಾ ನಲ್ಲಿ ಬೈಕ್‌ ಚಲಾಯಿಸಿ, ಈ ಸಾಧನೆ ಮಾಡಿದ ಮೊತ್ತ ಮೊದಲ ಕಾಲುಗಳ ಸ್ವಾಧೀನ ಕಳೆದುಕೊಂಡ ಮಹಿಳೆ ಎಂಬ ವಿಶಿಷ್ಟ ವಿಶ್ವದಾಖಲೆ ಬರೆದರು.

ಬೈಕ್‌ ಕ್ರೇಜ್‌ ಜಾಸ್ತಿಯೇ ಇದ್ದ ಕಾರಣ ತನ್ನ ತೋಳು ಮತ್ತು ಭುಜವನ್ನು ಇನ್ನಷ್ಟು ಗಟ್ಟಿಗೊಳಿಸಬೇಕು ಎಂದು ದೀಪಾ ಈಜಲು ಆರಂಭಿಸುತ್ತಾರೆ. ಆದರೆ ಈಜುಕೊಳದಲ್ಲಿ ದೀಪಾರ ಸಾಧನೆಗೆ ಯಾವುದೇ ಅಡ್ಡಿಯಾಗಲಿಲ್ಲ. ಈಕೆ ಹವ್ಯಾಸಕ್ಕಾಗಿ ಆರಂಭಿಸಿದ ಈಜು ಮುಂದೆ ಹಲವು ದಾಖಲೆಗಳಿಗೆ ವೇದಿಕೆಯಾಯಿತು. ನುರಿತ ಈಜುಗಾರರು ಸಹ ನದಿ ಪ್ರವಾಹದ ವಿರುದ್ಧ ಈಜುವುದು ಕಷ್ಟ. ಅದರಲ್ಲೂ ಕಾಲುಗಳ ಸ್ವಾಧೀನವನ್ನೇ ಕಳೆದುಕೊಂಡಿದ್ದ 38ರ ಹರೆಯದ ದೀಪಾ 2008ರಲ್ಲಿ ಯಮುನಾ ನದಿಯಲ್ಲಿ ಪ್ರವಾಹದ ವಿರುದ್ಧವಾಗಿ ಈಜುವ ಸಂಕಲ್ಪ ತೊಟ್ಟರು. ಅದರಲ್ಲಿ ಯಶಸ್ವಿಯೂ ಆದರು. ಅದು ಕೂಡಾ ಬರೋಬ್ಬರಿ ಒಂದು ಕಿ.ಮೀಟರ್!‌

ಈಕೆಯ ಇಷ್ಟು ಸಾಧನೆಗೆ ನೀವು ಬೆರಳನ್ನು ಮೂಗಿನ ಮೇಲಿಟ್ಟುಕೊಂಡಿರ. ಇಷ್ಟಕ್ಕೆ ಮುಗಿದಿಲ್ಲ ಈಕೆಯ ಸಾಧನೆಯ ಪಟ್ಟಿ. ತನ್ನ ದೈಹಿಕ ಅಶಕ್ತತೆಯ ಕಾರಣವನ್ನು ಬದಿಗಿರಿಸಿ ಅಸಾಧ್ಯವನ್ನೆಲ್ಲಾ ಸಾಧ್ಯವಾಗಿಸುವ ಪಣ ತೊಟ್ಟರು. ಇಂತಹ ಗಟ್ಟಿಗಿತ್ತಿ ದೀಪಾ ಮುಂದೆ ಕಣ್ಣು ಹಾಯಿಸಿದ್ದು ಜಾವೆಲಿನ್‌ ಥ್ರೋ ಮತ್ತು ಶಾಟ್‌ ಪುಟ್‌ ಕ್ರೀಡೆಯ ಮೇಲೆ. ಗುಂಡೆಸತದಲ್ಲಿ ಪರಿಣಿತಿ ಪಡೆದ ದೀಪಾ 2016ರ ರಿಯೋದಲ್ಲಿ ನಡೆದ ಪ್ಯಾರಾ ಒಲಿಂಪಿಕ್ಸ್‌ ನಲ್ಲಿ ಭಾರತವನ್ನು ಪ್ರತಿನಿಧಿಸಿದರು ಮತ್ತು ಬೆಳ್ಳಿ ಪದಕಕ್ಕೂ ಕೊರಳೊಡ್ಡಿದರು.

2012 ಲಂಡನ್‌ ಪ್ಯಾರಾ ಒಲಿಂಪಿಕ್ಸ್‌ ಗೂ ದೀಪಾ ಮಲಿಕ್‌ ಹೆಸರು ಪರಿಗಣಿಸಲಾಗಿತ್ತು. ಆದರೆ ಭಾರತದಿಂದ ಕೇವಲ ಪುರುಷ ಕ್ರೀಡಾಳುಗಳನ್ನು ಕಳುಹಿಸುವ ನಿರ್ಧಾರ ಮಾಡಿದ್ದರಿಂದ ದೀಪಾ ತಮ್ಮ ಪ್ರಥಮ ಪ್ಯಾರಾ ಒಲಿಂಪಿಕ್ಸ್‌ ಪದಕಕ್ಕೆ ಮತ್ತೆ ನಾಲ್ಕು ವರ್ಷ ಕಾಯಬೇಕಾಯಿತು.

ಜಾವೆಲಿನ್‌ ಥ್ರೋ, ಈಜು ಮತ್ತು ಶಾಟ್‌ ಪುಟ್‌ ನಲ್ಲಿ 20 ಕ್ಕೂ ಹೆಚ್ಚು ಅಂತಾರಾಷ್ಟ್ರೀಯ ಪ್ರಶಸ್ತಿ ಪಡೆದಿರುವ ದೀಪಾ ಮಲಿಕ್‌, 2010, 2014, 2018 ಹೀಗೆ ಸತತ ಮೂರು ಏಶ್ಯನ್‌ ಪ್ಯಾರಾ ಗೇಮ್ಸ್‌ ನಲ್ಲಿ ಪದಕ ಗೆದ್ದ ಭಾರತದ ಏಕೈಕ ಮಹಿಳೆ.

2012ರಲ್ಲಿ ಅರ್ಜುನ ಪ್ರಶಸ್ತಿ ಪುರಸ್ಕ್ರತರಾದ ದೀಪಾ, 2017ರ ಪದ್ಮಶ್ರೀ ಗೌರವ ಪಡೆದರು.  2019ರ ಸಾಲಿನ ಕ್ರೀಡಾ ಲೋಕದ ಅತ್ಯುನ್ನತ ಗೌರವ ರಾಜೀವ್‌ ಗಾಂಧಿ ಖೇಲ್‌ ರತ್ನ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

48ರ ಹರೆಯದ ದೀಪಾ ಮಲಿಕ್‌ ಸಾಧನೆಯ ಶಿಖರವೇರಿದ್ದಾರೆ. ತನಗಿರುವ ದೈಹಿಕ ದೌರ್ಬಲ್ಯವನ್ನು ಮೆಟ್ಟಿ ನಿಂತು, ಮನಸ್ಸು ಮಾಡಿದರೆ ಯಾರು ಬೇಕಾದರೂ, ಯಾವ ವಯಸ್ಸಿನಲ್ಲೂ ಸಾಧಸಿಬಹುದು ಎಂದು ವಿಶ್ವಕ್ಕೆ ತೋರಿಸಿದ ಗಟ್ಟಿಗಿತ್ತಿ. “ಸಾಧಿಸದರೆ ಸಬಳ ನುಂಗಬಹುದು” ಎಂಬ ನಾಣ್ಣುಡಿ ಬಹುಶಃ ಇಂತವರನ್ನೇ ನೋಡಿಯೇ ಹುಟ್ಟಿರಬೇಕು.

ಕೀರ್ತನ್‌ ಶೆಟ್ಟಿ ಬೋಳ

Advertisement

Udayavani is now on Telegram. Click here to join our channel and stay updated with the latest news.

Next