Advertisement

ನಿರ್ವಹಣೆ ಇಲ್ಲದೇ ಸೊರಗುತ್ತಿದೆ ವೃಕ್ಷೋದ್ಯಾನ

06:30 PM Nov 05, 2019 | Team Udayavani |

ಚನ್ನಪಟ್ಟಣ: ಹೆದ್ದಾರಿ ಪ್ರಯಾಣಿಕರಿಗೆ ಅನುಕೂಲ ಕಲ್ಪಿಸಿಕೊಡುವ ದೃಷ್ಟಿಯಿಂದ ಇಲ್ಲಿನ ಕೆಂಗಲ್‌ ಬಳಿ ಅರಣ್ಯ ಇಲಾಖೆ ಅಭಿವೃದ್ಧಿಪಡಿಸಿರುವ ಕೆಂಗಲ್‌ ಹನುಮಂತಯ್ಯ ವೃಕ್ಷೋದ್ಯಾನ ನಿರ್ವಹಣೆ ಇಲ್ಲದೆ ಪ್ರವಾಸಿಗರನ್ನು ಸೆಳೆಯುವಲ್ಲಿ ವಿಫಲವಾಗುತ್ತಿದೆ.

Advertisement

ಲಕ್ಷಾಂತರ ರೂ.ವೆಚ್ಚದಲ್ಲಿ ಚಿಕ್ಕಮಣ್ಣುಗುಡ್ಡೆ ಅರಣ್ಯ ಪ್ರದೇಶದಲ್ಲಿ ಅಭಿವೃದ್ಧಿ ಪಡಿಸಲಾಗಿರುವ ಈ ಸುಂದರ ವೃಕ್ಷೋದ್ಯಾನ ಬೆಂಗಳೂರು ಮೈಸೂರು ನಡುವೆ ಪ್ರವಾಸಿಗರಿಗೆ ಅಗತ್ಯವಾದ ಉದ್ಯಾನವನದ ಕೊರತೆ ಯನ್ನು ನೀಗಿಸುತ್ತದೆಂಬ ನಿರೀಕ್ಷಿಸಲಾಗಿತ್ತು. ಆದರೆ ಅಧಿಕಾರಿಗಳ ಇಚ್ಚಾಶಕ್ತಿ ಕೊರತೆಯಿಂದಾಗಿ ನಿರ್ಲಕ್ಷ್ಯಕ್ಕೊಳಗಾಗುತ್ತಿದೆ. ವೃಕ್ಷೋದ್ಯಾನದಲ್ಲಿ ಪ್ರವಾಸಿಗರು ಕುಳಿತುಕೊಳ್ಳಲು ಆಸನ ವ್ಯವಸ್ಥೆ, ನೆಡಿಗೆ ಮಾರ್ಗ, ಮಕ್ಕಳ ಆಟದ ಉಪಕರಣಗಳು, ವೀಕ್ಷಣಾ ಗೋಪುರಗಳು, ಊಟ ಮಾಡಲು ಸಭಾಂಗಣ ಹಾಗೂ ನೀರಿನ ವ್ಯವಸ್ಥೆ ಇದ್ದರೂ, ನಿರ್ವಹಣೆಯ ಕೊರೆತೆ ಎದುರಿಸುತ್ತಿವೆ.

ಇಬ್ಬರು ಗಾರ್ಡ್ಗಳು: ನೂರಾರು ಹೆಕ್ಟೇರ್‌ ವಿಸ್ತೀರ್ಣದ ವೃಕ್ಷೋದ್ಯಾನದ ನಿರ್ವಹಣೆಗಾಗಿ ಅರಣ್ಯ ಇಲಾಖೆ ಇಬ್ಬರು ಗಾರ್ಡುಗಳನ್ನು ನಿಯೋಜಿಸಿ ಕೈತೊಳೆದುಕೊಂಡಿದೆ. ಬೆಳಿಗ್ಗೆಯಿಂದ ಸಂಜೆವರೆಗೆ ಇಬ್ಬರು, ರಾತ್ರಿವೇಳೆ ಇಬ್ಬರು ಉದ್ಯಾನದ ಉಸ್ತುವಾರಿ ಹೊರುತ್ತಿದ್ದಾರೆ. ಇವರಲ್ಲಿ ಇಬ್ಬರು ಖಾಯಂ ನೌಕರರಾದರೆ ಇನ್ನಿಬ್ಬರು ಗುತ್ತಿಗೆ ಆಧಾರದ ನೌಕರರು. ಶೌಚಾಲಯ ಸ್ವತ್ಛಗೊಳಿಸುವುದರಿಂದ ಹಿಡಿದು ಪ್ರವಾಸಿಗರನ್ನು ನಿಯಂತ್ರಿಸವರೆಗೂ ಎಲ್ಲ ಕೆಲಸಗಳೂ ಈ ಗಾರ್ಡುಗಳ ವ್ಯಾಪ್ತಿಗೆ ಬರುತ್ತವೆ. ಅರಣ್ಯ ಕಾಯುವುದಲ್ಲದೇ ಪ್ರವಾಸಿಗರನ್ನು ನೋಡಿಕೊಳ್ಳುವುದರ ಜೊತೆಗೆ ಸಾಧ್ಯವಾದಷ್ಟು ಕೆಲಸ ನಿರ್ವಹಿಸುತ್ತಾ ದಿನದೂಡುತ್ತಿದ್ದಾರೆ.

ಪ್ರವಾಸಿಗರ ಸಂಖ್ಯೆ ಇಳಿಕೆ: ವೃಕ್ಷೋದ್ಯಾನ ಸಾರ್ವಜನಿಕರಿಗೆ ಸೇವೆಗೆ ಮುಕ್ತವಾದ ದಿನದಿಂದ ಪ್ರವಾಸಿಗರನ್ನು ಸೆಳೆಯುವಲ್ಲಿ ಸಾಕಷ್ಟು ಯಶಸ್ವಿಯಾಗಿತ್ತು. ಪ್ರತಿದಿನ ಹೆದ್ದಾರಿ ಪ್ರಯಾಣಿಕರು ಇಲ್ಲಿ ಕೆಲಕಾಲ ಕಳೆದು ಹೋಗುವುದು ಸಾಮಾನ್ಯವಾಗಿತ್ತು. ರಜಾ ದಿನಗಳಲ್ಲಿ 500 ರಿಂದ 600 ಮಂದಿ ಇಲ್ಲಿಗೆ ಭೇಟಿ ನೀಡಿ ತೆರಳುತ್ತಿದ್ದರು. ಈಗ ನಿರ್ವಹಣೆ ಇಲ್ಲದೆ ನಿರ್ಲಕ್ಷ್ಯಕ್ಕೆ ಒಳಗಾಗಿ ನಿತ್ಯ ಬೆರಳೆಣಿಕೆಯಷ್ಟು ಮಂದಿ ಮಾತ್ರ ಭೇಟಿ ನೀಡುತ್ತಿದ್ದಾರೆ. ರಜಾ ದಿನಗಳಲ್ಲಿ 100 ಮಂದಿ ಪ್ರವಾಸಿಗರು ಭೇಟಿ ನೀಡುತ್ತಿದ್ದಾರೆ. ಎಲ್ಲೆಂದರಲ್ಲಿ ಕಸ ಹರಡುವುದು, ಶೌಚಾಲಯವನ್ನು ಸಮರ್ಪಕವಾಗಿ ಬಳಸದಿರುವುದು, ಅಮೂಲ್ಯ ಗಿಡಗಳನ್ನು ಕೀಳುವುದು, ಹುಲ್ಲು ಹಾಸು ಹಾಳು ಮಾಡುವುದು, ಮಕ್ಕಳಿಗೆ ಇರುವ ಆಟದ ವಸ್ತುಗಳನ್ನು ವಯಸ್ಕರುಬಳಸುವುದು ಸೇರಿದಂತೆ ಅವ್ಯವಸ್ಥೆಗಳು ಹೆಚ್ಚಾಗಿವೆ.

ಹೋಟೆಲ್ಇದೆ ಊಟ ಸಿಕ್ಕಲ್ಲ: ವೃಕ್ಷೋದ್ಯಾನದಲ್ಲಿ ಸಕಲ ವ್ಯವಸ್ಥೆ ಕಲ್ಪಿಸುವ ದೃಷ್ಟಿಯಿಂದ ಅರಣ್ಯ ಇಲಾಖೆ ಮೇಲಧಿಕಾರಿಗಳು ಹೋಟೆಲ್‌ಗೆಚಾಲನೆ ನೀಡಿದ್ದರು. ಆದರೆ ಉದ್ಘಾಟನೆಯಾಗಿ ವರ್ಷಗಳು ಕಳೆದರೂ ಅಲ್ಲಿ ಆಹಾರ ಮಾತ್ರ ಲಭ್ಯವಾಗುತ್ತಿಲ್ಲ. ಹೋಟೆಲ್‌ಅನ್ನು ಅರಣ್ಯ ಇಲಾಖೆ ವತಿಯಿಂದಲೇ ನಡೆಸಲಾಗುತ್ತದೋ, ಅಥವಾ ಖಾಸಗಿಯವರಿಗೆ ನೀಡುವ ಪ್ರಕ್ರಿಯೆ ನಡೆದಿದೆಯೋ ಎಂಬ ಬಗ್ಗೆ ಮಾಹಿತಿಯೇ ಇಲ್ಲ. ಅರಣ್ಯ ಪ್ರವೇಶಿಸುವ ಪ್ರವಾಸಿಗರು: ಇನ್ನು ಉದ್ಯಾನಕ್ಕೆ ಹೊಂದಿಕೊಂಡಂತೆಯೇ ಅರಣ್ಯ

Advertisement

ಪ್ರದೇಶವು ಇರುವುದರಿಂದ ಉದ್ಯಾನಕ್ಕೆ ಆಗಮಿಸುವ ಪ್ರವಾಸಿಗರು ಕಾಡಿನೊಳಗೆ ಪ್ರವೇಶ ಮಾಡುತ್ತಿರುವುದು ಅರಣ್ಯ ಇಲಾಖೆಗೆ ತಲೆನೋವು ತರಿಸಿದೆ. ಚಿರತೆ, ಕರಡಿ ಸೇರಿದಂತೆ ವಿವಿಧ ಪ್ರಾಣಿಗಳು ಓಡಾಡುವುದರಿಂದ ಅನಾಹುತ ಸಂಭವಿಸುವುದು ನಿಶ್ಚಿತವಾಗಿದೆ. ಇದನ್ನು ತಡೆಯಲು ಪರಿಣಾಮಕಾರಿಯಾಗಿ ಇಲಾಖೆ ಕ್ರಮ ವಹಿಸಬೇಕಿದೆ. ಪ್ರವಾಸಿಗರಿಂದ ಹಣ ಪಡೆಯುವ ಇಲಾಖೆ ನಿರ್ವಹನೆಗೆ ಆದ್ಯತೆ ನಿಡುತ್ತಿಲ್ಲ. ಅಧಿಕಾರಿಗಳು ಮುಂದಿನ ದಿನಗಳಲ್ಲಾದರೂ ವ್ಯವಸ್ಥೆ ಸರಿಪಡಿಸಿ ಪ್ರವಾಸಿಗರಿಗೆ ಅನುಕೂಲ ಮಾಡಿಕೊಡುವರೇ ಎಂಬುದನ್ನು ನೋಡಬೇಕಿದೆ.

 

-ಎಂ.ಶಿವಮಾದು

Advertisement

Udayavani is now on Telegram. Click here to join our channel and stay updated with the latest news.

Next