Advertisement

ಡಾ.ರಾಜ್‌ರಿಂದ ದುಡಿಯುವ ವರ್ಗಕ್ಕೆ ಗೌರವ; ಲೇಖಕ ಮಂಜುನಾಥ್‌ ಎಂ.ಅದ್ದೆ

03:43 PM Sep 20, 2022 | Team Udayavani |

ದೊಡ್ಡಬಳ್ಳಾಪುರ: ದುಡಿಯುವ ಹಾಗೂ ಸಮಾಜದ ಕೆಳಸ್ತರದ ವರ್ಗದ ಆಸ್ಮಿತೆಯನ್ನು ಎತ್ತಿ ಹಿಡಿಯುವ ಮೂಲಕ ಸಮಾಜದಲ್ಲಿ ಸಮಾನತೆಯ ತತ್ವವನ್ನು ತಮ್ಮ ಚಿತ್ರಗಳ ಮೂಲಕ ತೋರಿಸಿದ ಮೇರು ನಟ ಡಾ. ರಾಜ್‌ಕುಮಾರ್‌ ಆದರ್ಶ ವ್ಯಕ್ತಿ ಎಂದು ಲೇಖಕ ಮಂಜುನಾಥ್‌ ಎಂ.ಅದ್ದೆ ಹೇಳಿದರು.

Advertisement

ನಗರದ ಕನ್ನಡ ಜಾಗೃತ ಭವನದಲ್ಲಿ ನಡೆದ ಗೆಳೆಯರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ  ಡಾ.ರಾಜ್‌ಕುಮಾರ್‌ ಅವರ ಕುರಿತು ತಾವು ಪಿಎಚ್‌ ಡಿಗಾಗಿ ಬರೆದಿರುವ ಡಾ.ರಾಜ್‌ಕುಮಾರ್‌ ಪುಸ್ತಕ ಕುರಿತು ಮಾತನಾಡಿದರು. ಡಾ.ರಾಜ್‌ಕುಮಾರ್‌ ಅವರು ಅಭಿನಯಿಸಿರುವ ಒಂದೊಂದು ಚಿತ್ರವು ಸಹ ಮಹಾಕಾವ್ಯಗಳಂತೆ ಇವೆ. ಯಾವುದೇ ಒಂದು ಜಾತಿ, ವರ್ಗ, ಧರ್ಮಕ್ಕೆ ನೋವಾಗದಂತೆ ಎಲ್ಲಾ ಜಾತಿ, ಧರ್ಮದವರು ಶ್ರೇಷ್ಠ ಎನ್ನುವುದನ್ನು ಮನಮುಟ್ಟುವಂತೆ ತಾವು ನಿರ್ವಹಿಸಿರುವ ಪಾತ್ರಗಳ ಮೂಲಕ ತೋರಿಸಿದ್ದಾರೆ ಎಂದು ಹೇಳಿದರು.

ಯಾರ ಮನಸ್ಸನ್ನೂ ನೋಯಿಸಿಲ್ಲ: ದೈವ ಭಕ್ತಿ ಎನ್ನುವುದು ಹೀಗೇ ಇರಬೇಕು ಎನ್ನುವ ನಿಯಮವೇ ಇಲ್ಲ ಎನ್ನುವುದನ್ನು ಬೇಡರ ಕಣ್ಣಪ್ಪ ಚಿತ್ರದ ಮೂಲಕ ಹೇಳಿದರೆ, ಸ್ಮಶಾನ ಕಾಯುವ ಕೆಲಸದ ಪಾತ್ರವನ್ನು ಸತ್ಯಹರಿಶ್ಚಂದ್ರ ಚಿತ್ರದಲ್ಲಿ ಅತ್ಯಂತ ಶ್ರದ್ಧೆಯಿಂದಲೇ ನಿರ್ವಹಿಸಿ ಶರಣರ ಕಾಯಕವೇ ಕೈಲಾಸ ಎನ್ನುವ ಸಂದೇಶವನ್ನು ಪ್ರೇಕ್ಷಕರಿಗೆ ತಿಳಿಸಿದ್ದಾರೆ. ಕಥೆ ಪಾತ್ರಗಳ ಘನತೆಗೆ ಚ್ಯುತಿ ಆಗದಂತೆ ಯಾರ ಮನಸ್ಸನ್ನೂ ನೋಯಿಸದೇ ಇರುವ ಸಂಭಾಷಣೆಗಳನ್ನು ಮೊದಲೇ ಆಲಿಸಿ ನಂತರ ಪಾತ್ರ ನಿರ್ವಹಿಸುತ್ತಿದ್ದರು ಎಂದು ತಿಳಿಸಿದರು.

ಜೀವನದ ಅನುಭವಗಳೇ ಪಾಠ: ಕಡುಬಡತನದ ಕುಟುಂಬದಲ್ಲಿ ಬೆಳೆದು ಬಂದ ರಾಜ್‌ಕುಮಾರ್‌ ಅವರು ವಿದ್ಯೆ ಕಲಿತು ದೊಡ್ಡ ಮನುಷ್ಯನಾಗಬೇಕು ಎನ್ನುವ ಆಸೆಯಿಂದ ಅವರ ತಂದೆ ಶಾಲೆಗೆ ಕಳುಹಿಸಿದರೆ, ಓದು ತಲೆಗೆ ಹತ್ತದೇ 3ನೇ ತರಗತಿಗೆ ಶಾಲೆ ಬಿಡುತ್ತಾರೆ. ಆದರೆ, ಹೇಗಾದರೂ ಮಾಡಿ ತಮ್ಮ ಮಗನನ್ನು ಓದಿಸಲೇಬೇಕು ಎನ್ನುವ ಹಠದಿಂದ ರಾಜಕುಮಾರ್‌ ಅವರ ತಂದೆ ಪುಟ್ಟಶಾಮಯ್ಯ ಅವರು ಮಗನಿಗೆ ಶಿಕ್ಷೆ ನೀಡಿಯಾದ್ರೂ ಶಾಲೆಗೆ ಹೋಗುವಂತೆ ಮಾಡುವ ಎಲ್ಲಾ ಪ್ರಯತ್ನಗಳು ವಿಫಲವಾಗುತ್ತವೆ. ಆದರೆ, ಜೀವನದ ಅನುಭವಗಳೇ ರಾಜಕುಮಾರ್‌ ಅವರಿಗೆ ಎಲ್ಲಾ ರೀತಿಯ ವಿದ್ಯೆಯನ್ನು ಕಲಿಸುತ್ತವೆ ಎಂದು ಹೇಳಿದರು.

ಸಮಾನತೆ ಎತ್ತಿ ಹಿಡಿದಿದ್ದರು: ತಾವು ಅಭಿನಯಿಸುತ್ತಿದ್ದ ಚಿತ್ರಗಳಲ್ಲಿ ಯಾವುದೇ ಜಾತಿ, ಧರ್ಮದ ಜನರಿಗೂ ನೋವುಂಟು ಮಾಡುವಂತಹ ಸಂಭಾಷಣೆಗಳು ಇಲ್ಲದಂತೆ ಎಚ್ಚರ ವಹಿಸುತ್ತಿದ್ದ ಮಹಾನ್‌ ಮಾನವತವಾದಿಯಾಗಿದ್ದರು. ಅಂದಿನ ಕಾಲದ ಪಾಳೇಗಾರಿಕೆ, ಮನುವಾದಿ ಸಂಸ್ಕೃತಿಗೆ ಸದ್ದಿಲ್ಲದೆ ಪೆಟ್ಟು ನೀಡುವ ಮೂಲಕ ಸ್ತ್ರೀ, ಪುರುಷ ಎಲ್ಲರೂ ಸಮಾನರು ಎನ್ನುದನ್ನು ತೋರಿಸಿಕೊಟ್ಟವರು ಎಂದರು.

Advertisement

ಸಮಾಜಕ್ಕೆ ಕೊಡುಗೆ: ಬಂಗಾರದ ಮನುಷ್ಯ ಚಿತ್ರದಿಂದ ಪ್ರೇರಿತರಾಗಿ ಸಹಸ್ರಾರು ಮಂದಿ ನಗರದ ಕಡೆ ಮುಖ ಮಾಡಿದ್ದ ಯುವ ಜನತೆ ಮತ್ತೆ ಹಳ್ಳಿಗಳಿಗೆ ಹಿಂದಿರುಗಿದರು. ತಮ್ಮ ಮಕ್ಕಳು ಸಮಾಜದಲ್ಲಿ ನಾಲ್ಕು ಜನರಿಗೆ ಒಳ್ಳೆಯದನ್ನು ಮಾಡುವಂತೆ ಬೆಳೆಯ ಬೇಕೆಂದರೆ ರಾಜ್‌ಕುಮಾರ್‌ ಅಭಿನಯಿಸಿರುವ ಚಿತ್ರಗಳನ್ನು ನೋಡಬೇಕು ಎಂದು ಪೋಷಕರು ಇಂದಿಗೂ ಹೇಳುವಂತ ಸಿನಿಮಾನಗಳನ್ನು ಕನ್ನಡಿಗರಿಗೆ ಕೊಡುಗೆಯಾಗಿ ನೀಡಿ¨ªಾರೆ ಎಂದು ಸ್ಮರಿಸಿದರು.

ಕನ್ನಡ ಜಾಗೃತ ಪರಿಷತ್‌ ಅಧ್ಯಕ್ಷ ಕೆ.ವೆಂಕಟೇಶ್‌ ಮಾತನಾಡಿ, ಇತಿಹಾಸವನ್ನು ಕಾಲಕ್ಕೆ ತಕ್ಕಂತೆ, ಆಯಾ ಕಾಲದ ಆಡಳಿತದ ಚುಕ್ಕಾಣಿ ಹಿಡಿದವರು ತಿರುಚಿ ಪ್ರಚಾರ ಮಾಡಬಹುದು. ಆದರೆ, ಸಾಹಿತ್ಯದಲ್ಲಿನ ಇತಿಹಾಸವನ್ನು ತಿರುಚಲು ಸಾಧ್ಯವಾಗುವುದಿಲ್ಲ ಎನ್ನುವ ಅರಿವು ಶತಮಾನಗಳ ಹಿಂದೆಯೇ ಸಾಭೀತವಾಗಿದೆ ಎಂದರು. ಆಧುನಿಕ ಕನ್ನಡ ಸಾಹಿತ್ಯ ಅಭಿವೃದ್ಧಿ ಸಂಕಥನ ಕುರಿತು ಅಧ್ಯಯನ ನಡೆಸಿರುವ ಉಪನ್ಯಾಸಕ ಡಿ.ಆರ್‌ .ದೇವರಾಜ, ಕನ್ನಡ ಸಾಹಿತ್ಯ ಕಟಿxಕೊಂಡಿರುವ ಆಧನಿಕತೆಯ ಅಧ್ಯಯನ ಕುರಿತು ಲೇಖಕ ಹುಲಿಕುಂಟೆ ಮೂರ್ತಿ ಮಾತನಾಡಿದರು. ಸಂವಾದದಲ್ಲಿ ಡಾಕ್ಟರೆಟ್‌ ಪಡೆದ ಮಂಜುನಾಥ್‌
ಎಂ.ಅದ್ದೆ, ಲೇಖಕ ಹುಲಿಕುಂಟೆ ಮೂರ್ತಿ, ಉಪ ನ್ಯಾಸಕ ಡಿ.ಆರ್‌.ದೇವರಾಜ ಅವರನ್ನು ಅಭಿನಂದಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next