Advertisement

ಎಂದೂ ಮರೆಯದ ಸ್ಯಾಕ್ಸೋಫೋನ್‌ ಸ್ವರಮಾಧುರ್ಯ 

10:12 AM Oct 12, 2019 | Hari Prasad |

ಕದ್ರಿ ಗೋಪಾಲ್‌ನಾಥ್‌ ಅವರ ಜೀವನವೇ ಒಂದು ಸಂದೇಶ. ಸರಳ, ಸಜ್ಜನಿಕೆಯ ವ್ಯಕ್ತಿತ್ವ. ವ್ಯಕ್ತಿತ್ವದಷ್ಟೇ ಸೊಗಸಾದ ಸ್ಯಾಕ್ಸೋಫೋನ್‌ ವಾದನ. ಜೀವನ ಸಂಗೀತಕ್ಕಾಗಿಯೇ ಮುಡಿಪಾಗಿಟ್ಟ ಅವರು, ದೇಶ ವಿದೇಶಗಳಲ್ಲೂ ಕರ್ನಾಟಕ ಶಾಸ್ತ್ರೀಯ ಸಂಗೀತದ ಇಂಪನ್ನು ಪಸರಿಸಿದವರು. ಇವರು ಖ್ಯಾತ ಸ್ಯಾಕ್ಸೋಫೋನ್‌ ವಾದಕರಾಗಿ ಬದಲಾಗಲು ಕಾರಣವಾದವರು ಸುಪ್ರಸಿದ್ಧ ಸ್ಯಾಕ್ಸೋಫೋನ್‌ ವಾದಕ ತಮಿಳುನಾಡಿನ ಟಿ.ಎನ್‌. ಗೋಪಾಲಕೃಷ್ಣ ಅವರು.

Advertisement

ತಮ್ಮ ಸಂಗೀತ ಗುರುಗಳಾದ ಎನ್‌. ಗೋಪಾಲಕೃಷ್ಣ ಐಯ್ಯರ್‌ ಕಲಾನಿಕೇತನ್‌ ಅವರಿಂದ ಸಂಗೀತವನ್ನು ಅಭ್ಯಾಸ ಮಾಡಿ ಬಳಿಕ ಸ್ಯಾಕ್ಸೋಫೋನ್‌ ನತ್ತ ಚಿತ್ತ ನೆಟ್ಟಿದ್ದರು. 1978ರಲ್ಲಿ ಮಂಗಳೂರು ಆಕಾಶವಾಣಿಯಲ್ಲಿ ತಮ್ಮ ಮೊದಲ ಸಂಗೀತ ಕಛೇರಿ ನೀಡಿದ್ದರು. ಇದು ಅವರ ಸಂಗೀತ ಸಂಪತ್ತನ್ನು ಹೊರ ಜಗತ್ತಿಗೆ ತೆರೆದಿಡುವಲ್ಲಿ ಪ್ರಮುಖ ಪಾತ್ರ ವಹಿಸಿತ್ತು.

ಬಿಬಿಸಿಯಲ್ಲಿ ಪ್ರಸಾರ
ಲಂಡನ್‌ನಿನ ರಾಯಲ್‌ ಆಲ್ಬರ್ಟ್‌ ಹಾಲ್‌ನಲ್ಲಿ ಕಛೇರಿ ನೀಡುವ ಆಹ್ವಾನ ಬಂದಾಗ ಇಂಗ್ಲೆಂಡಿಗೆ ತೆರಳಿದ್ದರು. 1994ರಲ್ಲಿ ಬಿಬಿಸಿ ಆಯೋಜಿಸಿದ ಕಾರ್ಯಕ್ರಮ ಅದಾಗಿತ್ತು. ಇಲ್ಲಿ ಅವರು ನೀಡಿದ ಕಛೇರಿ ಬಿಬಿಸಿಯಲ್ಲಿ ಪ್ರಸಾರವಾಗಿತ್ತು. ಬ್ರಿಟನ್‌ ನ ರಾಯಲ್‌ ಆಲ್ಬರ್ಟ್‌ ಹಾಲ್‌ ನಲ್ಲಿ ಕಾರ್ಯಕ್ರಮ ನೀಡಿದ ಮೊದಲ ಕರ್ನಾಟಕ ಸಂಗೀತ ಕಲಾವಿದ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.

ಎಲ್ಲೆಲ್ಲಿ ಕಛೇರಿ?
ವಿಶ್ವದಾದ್ಯಂತ ನೂರಾರು ಸಂಗೀತ ಕಛೇರಿಯನ್ನು ನೀಡಿದ್ದ ಗೋಪಾಲ್‌ನಾಥ್‌ ಅವರು ಯುರೋಪ್‌, ಅಮೆರಿಕ, ಕೆನಡ, ಆಸ್ಟ್ರೇಲಿಯಾ, ಶ್ರಿಲಂಕಾ ಮತ್ತು ಪಶ್ಚಿಮ ಏಷ್ಯಾದ ರಾಷ್ಟ್ರಗಳಲ್ಲಿ  ನೀಡಿದ್ದಾರೆ.

ಡಾಕ್ಟರೆಟ್‌
ಬೆಂಗಳೂರು ಮತ್ತು ಮಂಗಳೂರು ವಿಶ್ವವಿದ್ಯಾನಿಲಯ ಇವರ ಸಂಗೀತ ಕ್ಷೇತ್ರದಲ್ಲಿನ ಸಾಧನೆಯನ್ನು ಗುರುತಿಸಿ ಗೌರವ ಡಾಕ್ಟರೆಟ್‌ ಪ್ರದಾನ ಮಾಡಿದೆ.

Advertisement

ಪಾಶ್ವಿ‌ಮಾತ್ಯ ವಾದ್ಯದ ಸೆಳೆತ
ಎನ್‌. ಗೋಪಾಲ್‌ ಅಯ್ಯರ್‌ ಅವರಿಂದ ಶಾಸ್ತ್ರೀಯ ಸಂಗೀತ ಅಭ್ಯಸಿಸಿ ಬಳಿಕ ಸ್ಯಾಕ್ಸೋಫೋನ್‌ ನುಡಿಸಲು ಆರಂಭಿಸುತ್ತಾರೆ. ಪಾಶ್ಚಿಮಾತ್ಯ ಸಂಗೀತ ಉಪಕರಣವಾದ ಈ ಸ್ಯಾಕ್ಸೋಫೋನ್‌  ಅನ್ನು ಕರ್ನಾಟಕ ಸಂಗೀತಕ್ಕೆ ಪ್ರಯೋಗಿಸುತ್ತಾರೆ. ಶಾಸ್ತ್ರೀಯ ಸಂಗೀತವನ್ನು ಸ್ಯಾಕ್ಸೋಫೋನ್‌ ಮೂಲಕ ಅಭಿವ್ಯಕ್ತಗೊಳಿಸುವುದು ಬಹಳ ಕಷ್ಟ. ಆದರೆ ಕದ್ರಿ ಅವರಿಗೆ ಸಂಗೀತದ ಮೇಲಿದ್ದ ಹಿಡಿತ, ಅಭ್ಯಾಸ ಮತ್ತು ಸಾಧನೆಗೆ ದಿವ್ಯವಾದ ತಪಸ್ಸು ಅದನ್ನು ಸುಲಲಿತಗೊಳಿಸಿತ್ತು.

25 ಪೈಸೆಯ ಯಕ್ಷಗಾನ
ಕದ್ರಿ ಅವರು ಪೌರಾಣಿಕ ಕತೆಗಳ ಮೇಲೆ ಹೆಚ್ಚು ಆಸಕ್ತಿ ಹೊಂದಿದ್ದರು. ರಾಮಾಯಣ ಮತ್ತು ಮಹಾಭಾರತದ ಕುರಿತು ತಿಳಿದುಕೊಳ್ಳುವ ತುಡಿತ ಬಾಲ್ಯದಿಂದಲೂ ಅವರಲ್ಲಿ ಆಳವಾಗಿ ಬೇರೂರಿತ್ತು. ಇದಕ್ಕಾಗಿ ಅವರು ಯಕ್ಷಗಾನದ ಮೇಲೆ ಹೆಚ್ಚು ಆಕರ್ಷಿತಗೊಂಡಿದ್ದರು. ಪೌರಾಣಿಕ ಕಥೆಗಳ ಯಾವುದೇ ಪ್ರಸಂಗ ಎಲ್ಲೇ ಇದ್ದರೂ ಅವರು ಅಲ್ಲಿ ಹಾಜರಾಗುತ್ತಿದ್ದರು.

ಈ ಹಿಂದೆ 25 ಪೈಸೆಗೆ ಒಂದು ಯಕ್ಷಗಾನ ಟಿಕೆಟ್‌ ದೊರೆಯುತ್ತಿದ್ದ ಕಾಲದಲ್ಲಿ ಅದನ್ನು ತಪ್ಪಿಸಿಕೊಳ್ಳುತ್ತಿರಲಿಲ್ಲ. “ನನಗೆ  ಮಹಾಭಾರತ ಮತ್ತು ರಾಮಾಯಣದ ಮೇಲೆ ಇದ್ದ ಆಸಕ್ತಿಗಾಗಿ ನಾನು ಯಕ್ಷಗಾನವನ್ನು ತಪ್ಪದೇ ವೀಕ್ಷಿಸಲು ಬಯಸುತ್ತೇನೆ’ ಎಂದು ಈ ಹಿಂದೆ ಒಮ್ಮೆ ಹೇಳಿದ್ದರು.

ಜೋಗಿ ಮಠದ ರಹಸ್ಯ
ಸ್ಯಾಕ್ಸೋಪೋನ್‌ ವಾದಕರಾಗಿ ಅವರು ಜಗತ್ತಿನಲ್ಲಿ ಹೆಸರು ಸಂಪಾದಿಸಿದ್ದರೂ, ತಾವು ಬಾಲ್ಯದಲ್ಲಿ ಕಲಿತ ದಿನಗಳು ಮತ್ತು ಆ ವಾತಾವರಣವನ್ನು ಅವರು ಮರೆದವರಲ್ಲ. ಸಂಗೀತ ತರಗತಿ ಬಳಿಕ ಅವರು ಕದ್ರಿಯ ಜೋಗಿ ಮಠದ ಬಳಿ ಇರುವ “ಪಾಂಡವ ಗುಹೆ’ಯಲ್ಲಿ ಅಭ್ಯಾಸ ಮಾಡುತ್ತಿದ್ದರು. ಅದು ಸೌಮ್ಯತೆ ವಾತಾವರಣ ಹಾಗೂ ಶಾಂತಿಯಿಂದ ಕೂಡಿದ ಪರಿಸರವಾಗಿತ್ತು. ಅಂತಹ ಒಂದು ಪ್ರಕೃತಿಯ ಒಡಲಲ್ಲಿ ಕುಳಿತು ಸಂಗೀತದ ಧ್ಯಾನದಲ್ಲಿ ಮುಳುಗೇಳುತ್ತಿದ್ದರು.

ವೇದಿಕೆಯಲ್ಲೇ ಪ್ರಾಣ ಹೋಗಲಿ!
ಕದ್ರಿ ಅವರಿಗೆ ವೇದಿಕೆಯ ಮೇಲೆ ಕಛೇರಿ ನೀಡುತ್ತಿರುವಾಗಲೇ ಪ್ರಾಣಪಕ್ಷಿ ಹಾರಿಹೋಗಬೇಕು ಎಂಬ ಮಹಾದಾಸೆ ಇತ್ತು! “ಅನಾಯಾಸೇನ ಮರಣಂ, ವಿನಾ ದೈನ್ಯೇನ ಜೀವನಂ’ ಎಂಬ ಮಾತನ್ನು ಕದ್ರಿಯವರು ಸಂದರ್ಶನ ಒಂದರಲ್ಲಿ ಹೇಳಿಕೊಂಡಿದ್ದರು.

ಉದಾರತ್ವ
ಇತರರಿಗೆ ಒಳ್ಳೆಯದನ್ನು ಬಯಸಿ ಮತ್ತು ಉದಾರತ್ವ ಮನೋಭಾವವನ್ನು ಬೆಳೆಸಿಕೊಳ್ಳಿ ಎಂದು ಯಾರಾದರೂ ಸಂದರ್ಶನಕ್ಕೆ ಬಂದರೆ ಹೇಳುತ್ತಿದ್ದರು. ಡು ಗುಡ್‌ ಟು ದ ಪೀಪಲ್‌, ಬಿ ಜನರಸ್‌’ ಎಂದು ಹೇಳಿ ಮಾತು ಮುಗಿಸುವ ವ್ಯಕ್ತಿತ್ವ ಅವರದ್ದಾಗಿತ್ತು.

ಸಂತೋಷಕ್ಕೆ ಕದ್ರಿ ವ್ಯಾಖ್ಯಾನ
ಸದಾ ಸೌಮ್ಯತೆವೆತ್ತ ಮೂರ್ತಿಯಂತೆ ಕಂಡು ಬರುತ್ತಿದ್ದ ಕದ್ರಿ ಅವರು ಸಂತೋಷ ಮತ್ತು ನೆಮ್ಮದಿಗೆ ತಮ್ಮದೇ ವ್ಯಖ್ಯಾನವನ್ನು ನೀಡಿದ್ದರು. ನಾನು ಯಾರಿಗೂ ತೊಂದರೆಯನ್ನು ಕೊಡದೇ ಇದ್ದರೆ ನಾನು ಸಂತೋಷದಿಂದ ಇರಲು ಸಾಧ್ಯವಾಗುತ್ತದೆ. ನಿಮ್ಮ ಸುತ್ತ ಮುತ್ತ ಇರುವವರು ಎಲ್ಲರೂ ಖುಷಿಯಾಗಿದ್ದರೆ ನೀವು ಖುಷಿಯಾಗಿರಲು ಸಾಧ್ಯ. ನಿಮ್ಮ ಸುತ್ತಮುತ್ತ ವಾತಾವರಣ ಹಿತಕರವಾಗಿಲ್ಲದಿದ್ದರೆ ನೀವು ಸುತರಾಂ ಸಂತೋಷದಿಂದ ಇರಲು ಸಾಧ್ಯವಿಲ್ಲ 2012ರಲ್ಲಿ “ದಿ ಹಿಂದೂ’ ಪತ್ರಿಕೆ ನೀಡಿದ ಸಂದರ್ಶನದಲ್ಲಿ ಹೇಳಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next