“ಇವತ್ತಿನಿಂದ ನೀನು ಫ್ರೀ ಬರ್ಡ್. 72 ದಿನಗಳ ನಮ್ಮ ಎಗ್ರಿಮೆಂಟ್ ಇವತ್ತಿಗೆ ಮುಗಿದು ಹೋಯಿತು …’ ನಾಯಕ ಅರ್ಜುನ್ ತುಂಬಾ ಕೂಲ್ ಆಗಿ, ಅಷ್ಟೇ ಪ್ರಾಕ್ಟಿಕಲ್ ಆಗಿ ಹೇಳುವ ಹೊತ್ತಿಗೆ ನಾಯಕಿ ನಂದಿನಿಗೆ ಕನಸುಗಳ ಗೋಪುರ ಒಮ್ಮೆಲೇ ಕುಸಿದು ಬಿದ್ದಂತಾಗುತ್ತದೆ. ಮೊದಲ ಬಾರಿಗೆ ಚಿಗುರೊಡೆದ ಪ್ರೀತಿಯನ್ನು ಹೇಳಲು ನಾಯಕಿ ಬಂದರೆ, ನಾಯಕ ಅರ್ಜುನ್ ಭಾವನೆಯ ಪಟ್ಟಪಸೆ ಇಲ್ಲದಂತೆ ವರ್ತಿಸುತ್ತಾನೆ.
ಹಾಗಾದರೆ, ನಂದಿನಿಯ ಪ್ರೀತಿ ಬಿಧ್ದೋಯ್ತಾ, ಶ್ರೀಮಂತ ಹುಡುಗ ಅರ್ಜುನ್ ಮುಂದೇನಾಗುತ್ತಾನೆ ಎಂಬ ಕುತೂಹಲವಿದ್ದರೆ ನೀವು “ಕಿಸ್’ ಚಿತ್ರ ನೋಡಬಹುದು. ನಿರ್ದೇಶಕ ಎ.ಪಿ.ಅರ್ಜುನ್ ಸಿಕ್ಕಾಪಟ್ಟೆ ಸಮಯ ತೆಗೆದುಕೊಂಡು ಒಂದು ಮುದ್ದಾದ ಲವ್‌ಸ್ಟೋರಿಯನ್ನು ಕಟ್ಟಿಕೊಟ್ಟಿದ್ದಾರೆ. ಇತ್ತೀಚಿನ ದಿನಗಳಲ್ಲಿ ಔಟ್ ಅಂಡ್ ಔಟ್ ಲವ್‌ಸ್ಟೋರಿಗಳು ಬಂದಿರೋದು ಕಡಿಮೆ. ಬಂದರೂ ಅದರಲ್ಲಿ ಫ್ಯಾಮಿಲಿ ಸೆಂಟಿಮೆಂಟ್, ಇನ್ನೇನೋ ಕಥೆಗೆ ಸಂಬಂಧವಿಲ್ಲದ ಸಮಸ್ಯೆಗಳಿದ್ದು, ಲವ್‌ಸ್ಟೋರಿ ಸೈಡ್‌ಲೈನ್ ಆಗುತ್ತಿತ್ತು.
ಆದರೆ, ಅರ್ಜುನ್ ಮಾತ್ರ “ಕಿಸ್’ನಲ್ಲಿ ಲವ್‌ಸ್ಟೋರಿ ಬಿಟ್ಟು ಆಚೀಚೆ ಕದಡಿಲ್ಲ. ಅವರ ಟಾರ್ಗೇಟ್ ಇಂದಿನ ಯೂತ್. ಅದು ಕೂಡಾ ಕಾಲೇಜ್ ಸ್ಟೂಡೆಂಟ್ ಎಂಬುದು ಸಿನಿಮಾ ನೋಡಿದಾಗ ಗೊತ್ತಾಗುತ್ತದೆ. ತುಂಬಾ ಗಂಭೀರವಲ್ಲದ ಪ್ರೇಮಕಥೆಯನ್ನು ಕಟ್ಟಿಕೊಡಲು ಆಳವಾದ ಕಥೆ ಬೇಕಾಗಿಲ್ಲ ಎಂಬುದು ಅರ್ಜುನ್ ಚೆನ್ನಾಗಿ ಗೊತ್ತು. ಅದೇ ಕಾರಣದಿಂದ ಅವರು ಕಥೆಗಿಂತ ಚಿತ್ರಕಥೆ, ಸನ್ನಿವೇಶಗಳಲ್ಲೇ ಇಡೀ ಸಿನಿಮಾವನ್ನು ಕಟ್ಟಿಕೊಡಲು ಪ್ರಯತ್ನಿಸಿದ್ದಾರೆ.
ಮುಖ್ಯವಾಗಿ “ಕಿಸ್’ ಚಿತ್ರದ ಒನ್‌ಲೈನ್ ತುಂಬಾ ಫ್ರೆಶ್ ಆಗಿದೆ. ಇದು ಕಣ್ಣೀರಿನ ಲವ್‌ಸ್ಟೋರಿಯಲ್ಲ. ಇವತ್ತಿನ ಟ್ರೆಂಡ್‌ಗೆ ತಕ್ಕಂತಹ ಅಪ್‌ಡೇಟೆಡ್ ಲವ್ ಇಲ್ಲಿದೆ. ಕಾಮಿಡಿ, ಆ್ಯಕ್ಷನ್, ಸೆಂಟಿಮೆಂಟ್ … ಹೀಗೆ ಎಲ್ಲವನ್ನು ಬೆರೆಸಿ “ಕಿಸ್’ ಕೊಟ್ಟಿದ್ದಾರೆ ಅರ್ಜುನ್. ಮೊದಲೇ ಹೇಳಿದಂತೆ ಇದು ಇಂದಿನ ಯೂತ್ಸ್ ಗಮನದಲ್ಲಿಟ್ಟುಕೊಂಡು ಮಾಡಿರುವ ಸಿನಿಮಾ. ಜೊತೆಗೆ ಲವ್‌ಸ್ಟೋರಿ. ಹಾಗಾಗಿ, ಇಲ್ಲಿ ಹೆಚ್ಚು ಗಂಭೀರವಾದ, ಸಿಕ್ಕಾಪಟ್ಟೆ ಚಿಂತಿಸುವ ಅಂಶಗಳೇನೂ ಇಲ್ಲ. ತುಂಬಾ ಕೂಲ್ ಆಗಿ ಸಿನಿಮಾವನ್ನು ಎಂಜಾಯ್ ಮಾಡಬಹುದು.
ಮೊದಲರ್ಧ ಹೆಚ್ಚು ಜಾಲಿಯಾಗಿ ಸಾಗಿದರೆ, ದ್ವಿತೀಯಾರ್ಧದಲ್ಲಿ ಒಂದಷ್ಟು ಟ್ವಿಸ್ಟ್ ಇಡಲಾಗಿದೆ. ಮುಖ್ಯವಾಗಿ ಈ ಚಿತ್ರದ ಸಮಸ್ಯೆ ಎಂದರೆ ಅವಧಿ. ಸಿನಿಮಾ ನೋಡಿ ಹೊರಬಂದಾಗ ಚಿತ್ರದ ಅವಧಿ ಸ್ವಲ್ಪ ಹೆಚ್ಚಾಯಿತೇನೋ ಎಂಬ ಭಾವನೆ ಇರದು. ದ್ವಿತೀಯಾರ್ಧದಲ್ಲಿ ಬರುವ ಒಂದಷ್ಟು ದೃಶ್ಯಗಳಿಗೆ ಕತ್ತರಿ ಹಾಕಿ, ಚಿತ್ರದ ವೇಗವನ್ನು ಇನ್ನಷ್ಟು ಹೆಚ್ಚಿಸುವ ಅವಕಾಶವಿತ್ತು. ಮೊದಲ ಬಾರಿಗೆ ನಟಿಸಿರುವ ನಾಯಕ ವಿರಾಟ್ ಭವಿಷ್ಯದ ಭರವಸೆ ಮೂಡಿಸಿದ್ದಾರೆ.
ಇವತ್ತಿನ ಜನರೇಶನ್‌ನ ಟ್ರೆಂಡಿ ಬಾಯ್ ಆಗಿ ಅವರು ಇಷ್ಟವಾಗುತ್ತಾರೆ. ಭಾವನಾತ್ಮಕ ದೃಶ್ಯಗಳಲ್ಲಿ ವಿರಾಟ್ ಪಳಗಬೇಕಿದೆ. ಈ ಸಿನಿಮಾದ ಮತ್ತೂಂದು ಅಚ್ಚರಿ ಎಂದರೆ ಅದು ನಾಯಕಿ ಶ್ರೀಲೀಲಾ. ಸಖತ್ ಬೋಲ್ಡ್ ಕ್ಯೂಟ್ ನಟನೆಯ ಮೂಲಕ ಶ್ರೀಲೀಲಾ ಕನ್ನಡ ಚಿತ್ರರಂಗದಲ್ಲಿ ಒಂದಷ್ಟು ವರ್ಷ ನೆಲೆ ನಿಲ್ಲುವ ಸೂಚನೆ ನೀಡಿದ್ದಾರೆ. ಉಳಿದಂತೆ ಚಿಕ್ಕಣ್ಣ, ಸಾಧುಕೋಕಿಲ, ಅವಿನಾಶ್ ತಮ್ಮ ಪಾತ್ರಗಳಲ್ಲಿ ಮಿಂಚಿದ್ದಾರೆ. ವಿ.ಹರಿಕೃಷ್ಣ ಸಂಗೀತದ ಹಾಡುಗಳು ಇಷ್ಟವಾಗುತ್ತದೆ. ಅರ್ಜುನ್ ಶೆಟ್ಟಿ ಛಾಯಾಗ್ರಹಣದಲ್ಲಿ “ಕಿಸ್’ ಸುಂದರ.
ಚಿತ್ರ: ಕಿಸ್
ನಿರ್ಮಾಣ: ಎ.ಪಿ.ಅರ್ಜುನ್ ಫಿಲಂಸ್
ನಿರ್ದೇಶನ: ಎ.ಪಿ.ಅರ್ಜುನ್
ತಾರಾಗಣ: ವಿರಾಟ್, ಶ್ರೀಲೀಲಾ, ಚಿಕ್ಕಣ್ಣ, ಸಾಧುಕೋಕಿಲ ಮತ್ತಿತರರು.
* ರವಿಪ್ರಕಾಶ್ ರೈ