ಪ್ರವಾಸ ಹೋಗುವುದೆಂದರೆ ಯಾರಿಗೆ ಇಷ್ಟವಿಲ್ಲ ಹೇಳಿ? ಮಳೆಗಾಲ ಚಳಿಗಾಲ ಎಂಬ ಕಾಲ ಭೇದವಿಲ್ಲದೆ ತುದಿಗಾಲಲ್ಲಿ ತಯಾರಾಗುತ್ತೇವೆ.ಬೇಸಗೆಯ ಬೇಗೆಯನ್ನು ಲೆಕ್ಕಿಸದೆ ಹೊರಟುಬಿಡುತ್ತೇವೆ.
ಚಿಕ್ಕಂದಿನಿಂದಲೂ ಕಾರಿಂಜ ಬೆಟ್ಟ ಹತ್ತುವ ಆಸೆ ಬೆಟ್ಟದಷ್ಟೇ ದೊಡ್ಡದಾಗಿತ್ತು.ಇತ್ತೀಚೆಗೆ ಕಾರಿಂಜಕ್ಕೆ ಕುಟುಂಬ ಸಮೇತ ಹೋಗುವ ಸಂದರ್ಭವು ಒದಗಿಬಂತು.
ಚಳಿಗಾಲವಾದರೂ ಮಧ್ಯಾಹ್ನದ ಬಿಸಿಲಿಗೇನೂ ಕೊರತೆ ಇರಲಿಲ್ಲ. ಪ್ರವಾಸ ಹೋಗುತ್ತಿದ್ದೇವೆ ಎಂಬ ಸಂತೋಷದಲ್ಲಿ ಇದ್ಯಾವುದೂ ಲೆಕ್ಕವೇ ಅಲ್ಲ . ಪುಟ್ಟ ಕಾರಿನಲ್ಲಿ ನಮ್ಮ ಪ್ರಯಾಣ ಆರಂಭಿಸಿದೆವು. ಸುಡು ಬಿಸಿಲಾದರೂ ಕಾರಿಂಜ ಬೆಟ್ಟದ ಸೌಂದರ್ಯವು ಕಣ್ಣಿಗೆ ತಂಪನ್ನು ನೀಡುತ್ತಿತ್ತು.
ದಕ್ಷಿಣ ಕನ್ನಡ ಬಂಟ್ವಾಳ ತಾಲೂಕಿನ ಕಾವಳ ಮುಡೂರು ಗ್ರಾಮದಲ್ಲಿ ಸಮುದ್ರದಿಂದ ಸಾವಿರ ಅಡಿಗೂ ಮಿಕ್ಕಿ ಎತ್ತರದಲ್ಲಿ ಹಚ್ಚ ಹಸಿರಿನ ಕೊಡ್ಯಮಲೆ ಅರಣ್ಯ ತಪ್ಪಲಿನ ಗಿರಿಯಲ್ಲಿ ಕಂಗೊಳಿಸುವ ಕಾರಿಂಜೇಶ್ವರ ದೇಗುಲ ನಾಲ್ಕು ಯುಗಗಳ ಪುರಾಣ ಇತಿಹಾಸ ಹೊಂದಿರುವ ಭೂ ಕೈಲಾಸವೆಂಬ ಪ್ರತೀತಿಯ ದೇವಸ್ಥಾನ. ಶಿವ ಪಾರ್ವತಿಯರ ಮಿಲನದ ಸುಂದರ ತಾಣ. ಬೆಟ್ಟದ ತುದಿ ಗಗನವನ್ನು ಚುಂಬಿಸುವಂತೆ ಕಂಡು ಬರುತ್ತಿತ್ತು. ಬೆಟ್ಟವೇರಲು ಪ್ರವಾಸಿಗರಿಗೆ ಸಹಾಯವಾಗುವ ರೀತಿಯಲ್ಲಿ ಮೆಟ್ಟಿಲುಗಳಿದ್ದವು. ನಮ್ಮನ್ನು ಬಿಟ್ಟು ಇತರ ಪ್ರವಾಸಿಗರು ಯಾರೂ ಇರಲಿಲ್ಲ.
ಹತ್ತುವಷ್ಟು ಕಷ್ಟವಿಲ್ಲ.ಇಳಿಯುವ ಮೋಜು ಬೇರೆಯೇ ಖುಷಿ ಎಂದಿತು ನನ್ನ ಮನಸ್ಸು. ಆದರೆ ಅಪ್ಪನಿಗೂ, ಅಪ್ಪನ ಕೈ ಹಿಡಿದ ಅಮ್ಮನಿಗೂ ಅಷ್ಟು ಸುಲಭವಲ್ಲ. ಅದಕ್ಕೆ ಕಾರಣ ಪಾತಾಳಕ್ಕೆ ಇಳಿಯುವಂತೆ ಭಾಸವಾಗುವ ಇಳಿಜಾರು ಮೆಟ್ಟಲುಗಳು ಮಲಗಿರುವ ದೃಶ್ಯ. ಹೆಜ್ಜೆಯ ಮೇಲೆ ಹೆಜ್ಜೆ ಹಾಕಿ ಅವರಿಬ್ಬರು ಇಳಿಯುವುದನ್ನು ನೋಡುತ್ತಾ ನಿಂತೆ. ನನ್ನ ಕೆಮರಾ ಕಣ್ಣುಗಳಲ್ಲಿಯೂ ಅದನ್ನು ಸೆರೆ ಹಿಡಿದೆ. ನನ್ನ ಹಿಂದೆ ಅಪ್ಪ ಅಮ್ಮನ ಜೋಡಿ ಬರುತ್ತಿದ್ದರೆ ಮುಂದೆ ಅಕ್ಕ-ಬಾವ. ನನಗೆ ಸಂಗಾತಿಯಾಗಿ ಅಕ್ಕನ ಮಗಳು ಸಾಧ್ವಿ. ದಾರಿ ಉದ್ದಕ್ಕೂ ಕೋತಿಗಳನ್ನು ಕಾಣುವಾಗಲೆಲ್ಲ ಹಲವು ರೀತಿಯ ಭಾವಗಳು ಅವಳ ಮುಖದಲ್ಲಿ ವ್ಯಕ್ತವಾಗುತ್ತಿದ್ದವು. ಕೆಲವೊಂದು ಕೋತಿಗಳನ್ನು ನನಗೆ ಹೋಲಿಸಿದ್ದೂ ಇದೆ.
ಮೆಟ್ಟಿಲುಗಳನ್ನು ಏರುವುದರ ಜತೆಗೆ ಎಣಿಕೆಯನ್ನು ಪ್ರಾರಂಭಿಸಿದೆ. ಬಹಳ ಉತ್ಸಾಹ. ನಾ ಮುಂದು ತಾನು ಮುಂದು ಎಂಬ ಸ್ಪರ್ಧೆ. ಹತ್ತುತ್ತ ಹೋದಂತೆ ಈಗ ತಲುಪಬಹುದು ಎಂಬ ಭಾವದೊಂದಿಗೆ ಪರಸ್ಪರ ಮುಖ ನೋಡಿದೆವು. ಬೆವರ ಹನಿಗಳು ಹಣೆಯಲ್ಲಿ ರಾರಾಜಿಸುತ್ತಿದ್ದವು.ಮತ್ತೂ ಹತ್ತಿದೆವು, ಅರೆ..ಇನ್ನೂ ತಲುಪಲಿಲ್ಲವೇ! ಎಂಬ ಭಾವನೆ ಮೂಡ ತೊಡಗಿತು. ಕೊನೆಗೆ ಅಯ್ಯೋ ಕೃಷ್ಣಾ ನನ್ನಿಂದ ಇನ್ನು ಸಾಧ್ಯವಿಲ್ಲ ಎನ್ನುತ್ತಾ ಅಪ್ಪ ಅಲ್ಲೇ ಕುಳಿತರು. ಈ ಎಲ್ಲ ನಾಟಕೀಯ ದೃಶ್ಯಗಳು ನಡೆದರೂ ಕೊನೆಗೆ ನಾವು ಬೆಟ್ಟದ ತುದಿಗೆ ತಲುಪಿಯೇ ಬಿಟ್ಟೆವು. ಮಂಗವೊಂದು ಟೇಪು ತಿರುಗಿಸಿ ನೀರು ಕುಡಿಯುವ ದೃಶ್ಯ ನೋಡಿದಾಗ ಹತ್ತಿದ ಆಯಾಸವು ಮರೆತು ಹೋಯಿತು.
ನಾನು ನೋಡುವುದನ್ನು ಆ ಕಪಿ ಗಮನಿಸಿತೋ ಏನೋ, ತಲೆ ಎತ್ತಿ ಕೂಡಾ ನೋಡದೆ ಅದು ಅಲ್ಲಿಂದ ಪರಾರಿಯಾಯಿತು. ಕೈಯ್ಯಲ್ಲಿದ್ದ ಕೆಮಾರಕ್ಕೂ ನಂಗೂ ಛೇ! ಎಂದೆನಿಸಿತು. ಹಿಂದಿರುಗಿ ನೋಡಿದಾಗ ಮರಿಕೋತಿಗಳ ಗುಂಪೊಂದು ನನ್ನನ್ನು ಗುರಾಯಿಸುತ್ತಿತ್ತು. ಇವುಗಳು ಯಾಕೆ ನನ್ನನ್ನು ಹೀಗೆ ದುರುಗುಟ್ಟುತ್ತಿವೆ? ಇನ್ನು ನನ್ನನ್ನು ಇವುಗಳ ಗುಂಪಿಗೆ ಸೇರಿಸುವ ಯೋಜನೆಯೋ ಹೇಗೆ? ಇಷ್ಟೆಲ್ಲ ಯೋಚಿಸುತ್ತಿರುವಾಗಲೇ ಹಿಂದಿನಿಂದ ಬಂದ ಮರಿ ಕೋತಿ ನನ್ನ ಕೈಯಲ್ಲಿರುವ ಕಡ್ಲೆಯ ಪ್ಯಾಕೆಟನ್ನು ಎಳೆದುಕೊಂಡು ಓಡಿತು. ಉಳಿದವುಗಳು ಹಿಂಬಾಲಿಸಿದವು. ನಾನು ಒಂದು ಕ್ಷಣ ಸ್ತಬ್ಧಳಾದೆ ಎಲ್ಲವೂ ಮಿಂಚಿನ ವೇಗದಲ್ಲಿ ನಡೆದ ಘಟನೆ.ದೊಡ್ಡ ಕಪಿಯೊಂದು ಬಿಸಿ ನೈವೇದ್ಯವನ್ನು ತಣಿಸಲು ತನ್ನ ಮರಿಯನ್ನು ಅನ್ನಕ್ಕೆ ತಿಕ್ಕುತ್ತಿತ್ತು. ಅವುಗಳು ಅರಚುವುದನ್ನು ಕೇಳುವಾಗ ಕರಳು ಚುರುಕ್ ಎನ್ನುತ್ತಿತ್ತು.ಆಶ್ಚರ್ಯದ ವಿಷಯವಾದರ ಈ ದೃಶ್ಯ ಇಲ್ಲಿ ಮಾಮೂಲು. ಅಷ್ಟರಲ್ಲಿ ವೃಂದಾ ಎಂಬ ಕರೆ ಕೇಳಿಸಿತು. ಆಗ ವಾಸ್ತವಕ್ಕೆ ಬಂದೆ.
ಸುಡು ಬಿಸಿಲಾದುದರಿಂದಲೇ ದೇವಸ್ಥಾನಕ್ಕೆ ಪ್ರದಕ್ಷಿಣೆ ಬರಲು ಸ್ವಲ್ಪ ಕಷ್ಟವಾಯಿತು. ಮಧ್ಯಾಹ್ನದ ಹೊತ್ತು ಹೋದ ಕಾರಣವೋ ಏನೊ, ಅರ್ಚಕರು ಇರಲಿಲ್ಲ. ಅಲ್ಲೇ ನೆರಳಿದ್ದ ಜಾಗದಲ್ಲಿ ಕುಳಿತುಕೊಳ್ಳಲು ನೋಡಿದೆವು. ಅಷ್ಟರಲ್ಲಿ ಮರಿಕೋತಿಗಳು ಪುನಃ ನನ್ನನ್ನು ದುರುಗುಟ್ಟಿಸಿ ನೋಡ ತೊಡಗಿದವು. ದೊಡ್ಡ ಕೋತಿಗಳ ತಂಡವೊಂದು “ಒಗ್ಗಟ್ಟಿನಲ್ಲಿ ಬಲವಿದೆ’ ಎಂಬಂತೆ ನಮ್ಮೆಡೆಗೆ ಬಂದವು. ಇನ್ನು ಇಲ್ಲಿ ಕುಳಿತುಕೊಳ್ಳುವುದು ಉಚಿತವಲ್ಲ ಎಂದೆನಿಸಿ ನಾವು ಬೆಟ್ಟ ಇಳಿಯಲು ಆರಂಭಿಸಿದೆವು.
ಅನಂತರ ಕಾರಿಂಜೆಯ ತಪ್ಪಲಲ್ಲಿರುವ ಗಧಾ ತೀರ್ಥದ ಬಳಿ ಹೋದೆವು. ವಿಶಾಲವಾದ ಕೆರೆ. ಗಧಾತೀರ್ಥದಲ್ಲಿ ಕಡು ಬೇಸಿಗೆಯಲ್ಲಿ ಸಿಹಿ ನೀರಿನ ನಿಧಿಯೇ ಇದೆ ಎಂಬ ನಂಬಿಕೆಯಿದೆ. ಈ ಕೆರೆಯು ಭೀಮನು ತನ್ನ ಗಧೆಯನ್ನು ಎಸೆ ದಾಗ ರೂಪುಗೊಂಡವೆಂಬ ಐತಿಹ್ಯವಿದೆ. ಕೆರೆಗೆ ಮುತ್ತಿಕ್ಕಿ ನಿಂತಿರುವ ಗಂಭೀರ ಬಂಡೆಗಳು. ಕೆರೆಯ ಮೆಟ್ಟಿಲುಗಳಲ್ಲಿ ಊಟದ ಚೀಲವನ್ನಿರಿಸಿ ದಂಪತಿ ಯನ್ನು ಕಾದೆವು. ಸ್ವಲ್ಪ ಹೊತ್ತಿನಲ್ಲೇ ಅಪ್ಪ-ಅಮ್ಮ, ಅಕ್ಕ-ಬಾವನ ಆಗಮನವಾಯಿತು. ಬಾಳೆ ಎಲೆಯಲ್ಲಿ ಸುತ್ತಿ ತಂದ ಊಟವನ್ನು ಸವಿದೆವು. ಇಲ್ಲಿ ಮಂಗಗಳ ಕಾಟ ಇರಲಿಲ್ಲ. ಆರಂಭದಲ್ಲಿ ನನಗೆ ಅನಿಸಿದ್ದು ಸುಳ್ಳಲ್ಲ. ಇಡೀ ಕಾರಿಂಜದಲ್ಲಿ ನಾವು ಮಾತ್ರ. ನಾವು ಮರಳಿ ಬರುವಷ್ಟರಲ್ಲಿ ಅಲ್ಲಿದ್ದ ಅಂಗಡಿ ಬಾಗಿಲು ಹಾಕಿತ್ತು. ಮೇಲೆ ದೇವಸ್ಥಾನದಲ್ಲಿ ಅರ್ಚಕರೂ ಇರಲಿಲ್ಲ. ಹಾಗಾದರೆ ನಾವು ಮಾತ್ರ ಅಲ್ಲವೇ…!
ವೃಂದಾ ಬಳ್ಳಮೂಲೆ, ಬಿ. ಎಡ್. ಕೇಂದ್ರ ಚಾಲ, ಕಾಸರಗೋಡು