ಕುಮಟಾ: ಪಟ್ಟಣ ವ್ಯಾಪ್ತಿಯ ವಿವೇಕನಗರ ಉದ್ಯಾನವನಕ್ಕೆ ಪುರಸಭೆ ಕಳೆದ ವರ್ಷ ಲಕ್ಷಾಂತರ ರೂ. ವ್ಯಯಿಸಿ ವಾಕಿಂಗ್ ಟ್ರ್ಯಾಕ್ ಹಾಗೂ ಮಕ್ಕಳ ಆಟಿಕೆ ಸಾಮಗ್ರಿ ಅಳವಡಿಸಿತ್ತು. ಆದರೆ ಮಳೆಗಾಲದಲ್ಲಿ ಸರಿಯಾದ ನಿರ್ವಹಣೆ ಇಲ್ಲದೇ ಮಳೆನೀರು ನಿಂತು ಈಗಲೇ ಸಾಮಗ್ರಿಗಳೆಲ್ಲ ತುಕ್ಕು ಹಿಡಿಯಲಾರಂಭಿಸಿದೆ.
ಪುರಸಭೆಗೆ ಸಂಬಂಧಪಟ್ಟ ಈ ಗಾರ್ಡ್‌ನಿನಲ್ಲಿ ಪ್ರತೀವರ್ಷ ಒಂದಿಲ್ಲೊಂದು ಸಮಸ್ಯೆ ಉದ್ಭವವಾಗುತ್ತಲೇ ಇರುತ್ತದೆ. ಕಾರಣ ಪುರಸಭೆ ನಿರ್ಲಕ್ಷ ಧೋರಣೆ. ಗಾರ್ಡ್‌ನಿನ ಒಳಭಾಗದಲ್ಲಿ ಮಣ್ಣಿನ ರಾಶಿ ಒಂದೆಡೆಯಾದರೆ, ಗಿಡಗಳ ರಾಶಿ ಇನ್ನೊಂದೆಡೆ. ನಿರ್ವಹಣೆಗೆಂದು ಸರ್ಕಾರದಿಂದ ಬರುವ ಹಣವೆಲ್ಲ ಎಲ್ಲಿ ಪೋಲಾಗುತ್ತಿದೆ ಎಂಬುದು ಪ್ರತಿಯೊಬ್ಬರ ಪ್ರಶ್ನೆ. ಕಳೆದ ವರ್ಷ ಪುರಸಭೆ ಲಕ್ಷಾಂತರ ರೂ. ವ್ಯಯಿಸಿ ವಾಕಿಂಗ್ ಟ್ರ್ಯಾಕ್ ನಿರ್ಮಿಸಿ, ಮಕ್ಕಳ ಆಟಿಕೆಗಳನ್ನೂ ಅಳವಡಿಸಿತ್ತು. ಆದರೆ ಏರು ತಗ್ಗುಗಳಿರುವ ಈ ಗಾರ್ಡ್‌ನಿನೊಳಗೆ ಮಳೆ ನೀರು ಹರಿದು ಹೋಗಲು ಸರಿಯಾದ ವ್ಯವಸ್ಥೆ ಇಲ್ಲದ ಕಾರಣ ಅಲ್ಲಲ್ಲೇ ನೀರು ನಿಂತು ಈಗಲೇ ಸಾಮಗ್ರಿಗಳೆಲ್ಲ ತುಕ್ಕು ಹಿಡಿಯಲಾರಂಭಿಸಿದೆ. ಹೀಗಾದರೆ ಸಾರ್ವಜನಿಕರ ಹಿತಕ್ಕಾಗಿ ಸರ್ಕಾರ ಖರ್ಚು ಮಾಡಿದ ಹಣ ಉಪಯೋಗವಾಗುವುದಾರೂ ಹೇಗೆ.
ಗಾರ್ಡನಿನಲ್ಲಿ ಮಕ್ಕಳ ಆಟಿಕೆ ವಸ್ತುಗಳನ್ನು ಅಳವಡಿಸಿರುವ ಜಾಗ ತಗ್ಗು ಪ್ರದೇಶವಾಗಿದ್ದು, ಸುರಿದ ಮಳೆನೀರು ಆ ಭಾಗಕ್ಕೇ ಹೋಗುತ್ತದೆ. ಗಾರ್ಡನ್ನಿನ ಒಳಭಾಗದಲ್ಲಿನ ನೀರು ಹೊರ ಭಾಗದಲ್ಲಿರುವ ಗಟಾರಕ್ಕೆ ಸರಾಗವಾಗಿ ಹರಿದು ಹೋಗಲು ಯಾವುದೇ ವ್ಯವಸ್ಥೆ ಕಲ್ಪಿಸದಿರುವುದರಿಂದ ಸಾಮಗ್ರಿಗಳಿರುವ ಭಾಗದಲ್ಲೇ 1 ಫೀಟ್‌ಗೂ ಅಧಿಕ ನೀರು ಸಂಗ್ರಹವಾಗುತ್ತದೆ. ಇದರಿಂದಾಗಿ ಆ ಭಾಗ ಕೆಸರು ಗದ್ದೆಯಂತಾಗಿದ್ದು, ಅಲ್ಲಿರುವ ಸಾಮಗ್ರಿಗಳು ನಿಂತ ನೀರಿನಿಂದ ತುಕ್ಕು ಹಿಡಿಯಲಾರಂಭಿಸಿದೆ.
ಉದ್ಯಾನವನದ ನಿರ್ವಹಣೆಗೆಂದು ಪ್ರತಿವರ್ಷ ಸಾಕಷ್ಟು ಅನುದಾನಗಳು ಬಿಡುಗಡೆಯಾಗುತ್ತದೆ. ಆದರೆ ಆ ಹಣ ಎಲ್ಲಿ ಪೋಲಾಗುತ್ತಿದೆ ಎಂಬ ಪ್ರಶ್ನೆಗೆ ಪುರಸಭೆಯೇ ಉತ್ತರ ನೀಡಬೇಕಾಗಿದೆ. ಗಾರ್ಡನ್ ಮಧ್ಯದಲ್ಲಿ ಒಂದು ನೀರಿನ ಬಾವಿ, ಹೈಮಾಸ್ಕ್ ಲೈಟ್, ಗೇಟ್, ಪ್ರವೇಶ ದ್ವಾರ ಸೇರಿದಂತೆ ಎಲ್ಲವೂ ಹೆಸರಿಗೆ ಮಾತ್ರ ಎಂಬಂತಾಗಿದೆ. ಅದರ ಪ್ರಯೋಜನಗಳು ಮಾತ್ರ ಜನ ಸಾಮಾನ್ಯರಿಗೆ ದೊರೆಯುತ್ತಿಲ್ಲ. ಪುರಸಭೆ ಈಗಲಾದರೂ ಎಚ್ಚೆತ್ತು ಸರ್ಕಾರದಿಂದ ವ್ಯಯಿಸಿದ ಹಣದ ಪ್ರಯೋಜನ ಸಾರ್ವಜನಿಕರಿಗೆ ದೊರೆಯುವಂತೆ ಮಾಡಬೇಕೆಂಬುದು ಹಲವರ ಅಭಿಪ್ರಾಯ
ಮಳೆಗಾಲ ಪೂರ್ವದಲ್ಲಿ ಗಾರ್ಡನ್ನಿನ ಒಳಭಾಗದ ನೀರು ಹೊರ ಹೋಗುವಂತೆ ಸುತ್ತಲೂ ಕಾಲುವೆ ತೆಗೆದು, ಹರಿದು ಹೋಗುವಂತೆ ಮಾಡಿದರೆ ಇಲ್ಲಿ ನೀರು ಸಂಗ್ರಹವಾಗುತ್ತಿರಲಿಲ್ಲ. ನೀರು ಒಳಭಾಗದಲ್ಲೇ ಸಂಗ್ರಹವಾಗುತ್ತಿರುವುದರಿಂದ ಕೆಲ ಆಟಿಕೆ ಸಾಮಗ್ರಿಗಳು ಸೇರಿದಂತೆ ಹಲವು ಉಪಕರಣಗಳು ಈಗಲೇ ತುಕ್ಕು ಹಿಡಿಯಲಾರಂಭಿಸಿದೆ. ಈಗಲಾದರೂ ಪುರಸಭೆ ಈ ಬಗೆಗೆ ಸೂಕ್ತ ಕ್ರಮಕೈಗೊಂಡು ಸಾರ್ವಜನಿಕರಿಗೆ ಅನುಕೂಲ ಮಾಡಿ ಕೊಡಲಿ.
•ವಿಶ್ವನಾಥ ನಾಯ್ಕ ಹೊದ್ಕೆ ನಿವಾಸಿ.
ಸರ್ಕಾರ ಯಾವುದೇ ಯೋಜನೆಗಳನ್ನು ಜಾರಿಗೆ ತಂದರೂ ಸರಿಯಾದ ನಿರ್ವಹಣೆಯಿಲ್ಲದಿದ್ದರೆ ಅದರ ಪ್ರಯೋಜನಗಳು ಸಾರ್ವಜನಿಕರಿಗೆ ದೊರೆಯುವುದಿಲ್ಲ ಎಂಬುದಕ್ಕೆ ವಿವೇಕನಗರದ ಉದ್ಯಾನವೇ ನಿದರ್ಶನ. ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಗಮನಹರಿಸಿ, ಇಲ್ಲಿನ ಸಮಸ್ಯೆ ಬಗೆಹರಿಸಬೇಕು.
•ನಟರಾಜ ಗದ್ದೇಮನೆ ಹೆಗಡೆ ನಿವಾಸಿ
•ದಿನೇಶ ಗಾಂವಕರ್