ರಾಯಚೂರು: ಹೊಟ್ಟೆಗೆ ಹಿಟ್ಟಿಲ್ಲವೆಂದರೂ ಜುಟ್ಟಿಗೆ ಮಲ್ಲಿಗೆ ಕೇಡು ಎಂಬ ಗಾದೆ ಮಾತಿನಂತಾಗಿದೆ ಪ್ರವಾಸೋದ್ಯಮ ಇಲಾಖೆ ಪರಿಸ್ಥಿತಿ. ಜಿಲ್ಲೆಯ ಪ್ರೇಕ್ಷಣೀಯ ಸ್ಥಳಗಳು ನಿರ್ವಹಣೆ ಇಲ್ಲದೇ ಹಾಳು ಬಿದ್ದಿದ್ದರೂ ಜನರಿಗೆ ಮಾಹಿತಿ ನೀಡಲು ಮಾತ್ರ ಲಕ್ಷಗಟ್ಟಲೇ ಖರ್ಚು ಮಾಡಲಾಗುತ್ತಿದೆ.
ಜಿಲ್ಲೆಯಲ್ಲಿರುವ ಕೆಲವೊಂದು ಪ್ರವಾಸಿ ತಾಣಗಳ ಬಗ್ಗೆ ಜನರಿಗೆ ಮಾಹಿತಿ ನೀಡುವ ಉದ್ದೇಶದಿಂದ ನಗರದಲ್ಲಿ ಎರಡು ಡಿಜಿಟಲ್ ವಾಲ್‌ಗಳನ್ನು ಅಳವಡಿಸಲಾಗಿದೆ. ನಗರದ ತಹಶೀಲ್ದಾರ್ ಕಚೇರಿ ಬಳಿ ಹಾಗೂ ರೈಲ್ವೆ ನಿಲ್ದಾಣ ಹತ್ತಿರ ಸೋಲಾರ್ ಡಿಜಿಟಲ್ ವಾಲ್‌ಗಳನ್ನು ಅಳವಡಿಸಿದ್ದು, ಅವುಗಳಲ್ಲಿ ಜಿಲ್ಲೆಯ 11 ಪ್ರವಾಸಿ ತಾಣಗಳ ಮಾಹಿತಿ ಪ್ರಕಟಗೊಳ್ಳಲಿದೆ. ಅದರ ಜತೆಗೆ ಪ್ರವಾಸಿ ತಾಣಗಳ ದೊಡ್ಡ ದೊಡ್ಡ ಚಿತ್ರಗಳನ್ನು ಸಿದ್ಧಪಡಿಸಿದ್ದು, ನಗರದ ಪ್ರಮುಖ ಸ್ಥಳಗಳಲ್ಲಿ ಅಳವಡಿಸಲು ಪ್ರವಾಸೋದ್ಯಮ ಇಲಾಖೆ ಮುಂದಾಗಿದೆ.
ಡಿಜಿಟಲ್ ಬೋರ್ಡ್‌ನಲ್ಲಿ ರಾಯಚೂರು ಕೋಟೆ, ಮಾವಿನ ಕೆರೆ, ಕುರ್ವಾಪುರದ ದತ್ತಪೀಠ, ಪಂಚಮುಖೀ ಆಂಜನೇಯ ಸ್ವಾಮಿ ದೇವಸ್ಥಾನ, ಮಸ್ಕಿ ಅಶೋಕ ಶಾಸನ, ಮುದಗಲ್ ಕೋಟೆ, ಹಟ್ಟಿ ಚಿನ್ನದ ಗಣಿ, ಕಲ್ಲೂರು ಮಹಾಲಕ್ಷ್ಮೀ, ಗಬ್ಬೂರಿನ ಐತಿಹಾಸಿಕ ಸ್ಮಾರಕಗಳು, ಅಂಬಾಮಠ ಸಿಂಧನೂರು, ಗುರುಗುಂಟ ಅಮರೇಶ್ವರ ದೇವಸ್ಥಾನಗಳ ಮಾಹಿತಿ ಇರಲಿದೆ. ಇಷ್ಟೊಂದು ಪ್ರವಾಸಿ ತಾಣಗಳಿಗೆ ಜನರನ್ನು ಕೈ ಬೀಸಿ ಕರೆಯುವ ಪ್ರವಾಸೋದ್ಯಮ ಇಲಾಖೆ, ಒಮ್ಮೆಯಾದರೂ ಅದರಲ್ಲಿನ ಕೆಲ ಸ್ಥಳಗಳಿಗೆ ಭೇಟಿ ನೀಡಿ ಬರಬೇಕಿದೆ. ಪ್ರಚಾರಕ್ಕಾಗಿ ಲಕ್ಷಗಟ್ಟಲೇ ಹಣ ಸುರಿಯುವ ಮುನ್ನ ಆ ಸ್ಥಳಗಳಲ್ಲಿ ಕನಿಷ್ಠ ಸೌಲಭ್ಯ ಕಲ್ಪಿಸಲು ಜಿಲ್ಲಾಡಳಿತ, ಸರ್ಕಾರದೊಟ್ಟಿಗೆ ಚರ್ಚಿಸಿ ಅಭಿವೃದ್ಧಿಗೆ ಮುಂದಾಗಬೇಕಿದೆ.
ನಿರ್ವಹಣೆ ಕಾಣದ ತಾಣಗಳು
Related Articles
ಸರ್ಕಾರ ಪ್ರಚಾರ ಮಾಡುತ್ತಿರುವ ಕೆಲ ತಾಣಗಳು ನಿರ್ವಹಣೆ ಇಲ್ಲದೇ ಅಕ್ಷರಶಃ ಹಾಳು ಕೊಂಪೆಯಾಗಿವೆ. ರಾಯಚೂರು ಕೋಟೆಯೇ ಹುಲ್ಲು ಬೆಳೆದು, ಹೋಗಲು ದಾರಿ ಇಲ್ಲದೇ ಹಾಳು ಸೂಸುತ್ತಿದೆ. ಕೋಟೆಯನ್ನೆಲ್ಲ ಒತ್ತುವರಿ ಮಾಡಿಕೊಂಡಿದ್ದು ಹೇಳುವವರು ಕೇಳುವವರೇ ಇಲ್ಲದ ಸ್ಥಿತಿ ಇದೆ.
ಕೋಟೆ ಆರಂಭದಲ್ಲಿ ಸ್ಥಾಪಿಸಿದ್ದ ವಾಚನಾಲಯ ಕೂಡ ಹಾಳು ಬಿದ್ದು, ಮೊಣಕಾಲುದ್ದ ಹುಲ್ಲು ಬೆಳೆದಿದೆ. ಕೋಟೆ ಮೇಲೆ ಅಳವಡಿಸಿದ್ದ ಕುರ್ಚಿಗಳೆಲ್ಲ ಹಾಳಾಗಿದ್ದು, ವಿದ್ಯುದ್ದೀಪಗಳು ಹಾಳಾಗಿವೆ. ಕೋಟೆ ಅಭಿವೃದ್ಧಿ ಸಮಿತಿ ಕೂಡ ಇದ್ದೂ ಇಲ್ಲದಂತಾಗಿದೆ. ಇನ್ನೂ ಮಾವಿನ ಕೆರೆಯಂತೂ ಗಬ್ಬು ನಾರುವ ತಾಣವಾಗಿ ಮಾರ್ಪಟ್ಟಿದ್ದು, ಅದನ್ನು ಆಸ್ವಾದಿಸಲು ಒಂದು ಸುಂದರ ಸ್ಥಳ ಕೂಡ ಮಾಡಿಲ್ಲ. ಚರಂಡಿ ನೀರನ್ನೆಲ್ಲ ಕೆರೆಗೆ ಹರಿಸಲಾಗುತ್ತಿದೆ. ವರ್ಷದಿಂದ ವರ್ಷಕ್ಕೆ ಕೆರೆ ಒತ್ತುವರಿಯಾಗುತ್ತಿದ್ದು ತಡೆಯುವ ಇಚ್ಛಾಶಕ್ತಿ ಯಾರಿಗೂ ಕಾಣುತ್ತಿಲ್ಲ. ಅದೆಲ್ಲದಕ್ಕಿಂತ ಎಂಟು ಕೋಟಿ ರೂ. ಹಣ ಮೀಸಲಿಟ್ಟಿದ್ದರೂ ಈವರೆಗೆ ಅಭಿವೃದ್ಧಿ ಕೆಲಸ ಶುರುವಾಗಿಲ್ಲ. ಗಬ್ಬೂರಿನ ಐತಿಹಾಸಿಕ ಸ್ಥಳ ವಿಜಯನಗರ ಸಾಮ್ರಾಜ್ಯಕ್ಕೆ ಒಳಪಟ್ಟಿತ್ತು. ಅಲ್ಲಿ ಇಂದಿಗೂ ಅನೇಕ ದೇಗುಲಗಳು ನೆಲದೊಳಗೆ ಅವಿತು ಹೋಗಿವೆ ಎನ್ನುತ್ತಾರೆ ಇತಿಹಾಸ ತಜ್ಞರು.
ಎಲ್ಲ ದೇವಸ್ಥಾನಗಳನ್ನು ಜೀರ್ಣೋದ್ಧಾರ ಮಾಡಿದರೆ ಇದೊಂದು ಅದ್ಭುತ ಪ್ರೇಕ್ಷಣೀಯ ಸ್ಥಳವಾಗುವುದರಲ್ಲಿ ಶಂಕೆ ಬೇಡ. ಆದರೆ, ಪ್ರವಾಸೋದ್ಯಮ ಇಲಾಖೆಯಾಗಲಿ, ಪ್ರಾಚ್ಯವಸ್ತು ಇಲಾಖೆಯಾಗಲಿ ಈ ಸ್ಥಳದ ಬಗ್ಗೆ ಗಂಭೀರವಾಗಿ ಪರಿಗಣಿಸಿಯೇ ಇಲ್ಲ. ಒಂದು ವಿಜಯ ವಿಠ್ಠಲ ದೇವಸ್ಥಾನ ಉತ್ಖನನ ಮಾಡಿದ್ದು, ಅದನ್ನು ನೋಡಲು ಹೋಗಬೇಕಷ್ಟೇ. ಕುರ್ವಪುರ ದತ್ತಪೀಠಕ್ಕೆ ಹೋಗಲು ಇಂದಿಗೂ ಕೃಷ್ಣ ನದಿಯಲ್ಲಿ ತೆಪ್ಪದ ಮೂಲಕವೇ ಹೋಗಬೇಕು. ಸೇತುವೆ ನಿರ್ಮಾಣ ಕಾರ್ಯ ಇಂದಿಗೂ ನನೆಗುದಿಗೆ ಬಿದ್ದಿದೆ. ಕಾಟಾಚಾರಕ್ಕೆ ಪ್ರಚಾರ ಮಾಡುತ್ತಿರುವ ಪ್ರವಾಸೋದ್ಯಮ ಇಲಾಖೆ ನಡೆ ಹಾಸ್ಯಾಸ್ಪದ ಎನಿಸುತ್ತಿದೆ.
ಜಿಲ್ಲೆಯಲ್ಲಿರುವ ಪ್ರವಾಸಿ ತಾಣಗಳ ಬಗ್ಗೆ ಪ್ರಚಾರ ಮಾಡುವ ಉದ್ದೇಶದಿಂದ ಡಿಜಿಟಲ್ ವಾಲ್ ಅಳವಡಿಸಲಾಗಿದೆ. ಅದರ ಜತೆಗೆ ಕೆಲವೊಂದು ದೊಡ್ಡ ಫೋಟೋಗಳನ್ನು ಅಳವಡಿಸಲು ಸರ್ಕಾರದ ಆದೇಶವಾಗಿದ್ದರಿಂದ ಕ್ರಮ ವಹಿಸಲಾಗಿದೆ. ನಾನು ಈಚೆಗೆ ಪ್ರಭಾರನಾಗಿ ಅಧಿಕಾರ ವಹಿಸಿಕೊಂಡಿದ್ದು, ಪ್ರವಾಸಿಗಳ ತಾಣಗಳ ಸ್ಥಿತಿಗತಿ ಕುರಿತು ಶೀಘ್ರದಲ್ಲೇ ಮಾಹಿತಿ ಪಡೆದು ಕ್ರಮ ವಹಿಸುವೆ. -ಎಂ.ಡಿ. ಬಿಲಾಲ್, ಪ್ರಭಾರ ಸಹಾಯಕ ನಿರ್ದೇಶಕ, ಪ್ರವಾಸೋದ್ಯಮ ಇಲಾಖೆ
-ಸಿದ್ಧಯ್ಯಸ್ವಾಮಿ ಕುಕನೂರು