ಚನ್ನಪಟ್ಟಣ: ನಗರದ ಹೃದಯಭಾಗವಾದ ಕೆಎಸ್ ಆರ್‌ಟಿಸಿ ಬಸ್ ನಿಲ್ದಾಣದ ಬಳಿಯೇ ಇರುವ ಶತಮಾನ ಪೂರೈಸಿರುವ ಪ್ರವಾಸಿ ಮಂದಿರವು ಸರಿಯಾದ ನಿರ್ವಹಣೆ ಇಲ್ಲದೆ ನಿರಂತರವಾಗಿ ನರಳುತ್ತಿದೆ. ಪ್ರವಾಸಿ ಮಂದಿರ ನಿರ್ವಹಣೆಗಾಗಿ ಸಿಬ್ಬಂದಿ ಇದ್ದರೂ, ಪ್ರವಾಸಿ ಮಂದಿರದ ಕಾಂಪೌಂಡ್ ಸುತ್ತಲೂ ಗಿಡ, ಮರ, ಕಸ ಕಡ್ಡಿ ಬೆಳೆದು ನಿಂತು ಭಯದ ವಾತಾವರಣ ನಿರ್ಮಾಣವಾಗಿದೆ.
ಸುಮಾರು ನೂರು ವರ್ಷಗಳ ಹಿಂದಿನ ಕಟ್ಟಡದ ಪ್ರವಾಸಿ ಮಂದಿರದಲ್ಲಿ ಮೈಸೂರು ಮಹಾರಾಜಾ ಶ್ರೀ ಜಯಚಾಮರಾಜೇಂದ್ರ ಒಡೆಯರ್, ಆಗಿನ ದಿವಾನರಾಗಿದ್ದ ಪೂರ್ಣಯ್ಯ ಪ್ರಥಮ ವಿದ್ಯಾ ಮಂತ್ರಿಯಾಗಿದ್ದ ಟಿ.ವಿ. ವೆಂಕಟಪ್ಪ, ಅಬ್ಬೂರು ಗೋಪಾಲಯ್ಯ ಪುರಸಭೆ ಅಧ್ಯಕ್ಷರಾಗಿದ್ದ ಕೋಲೂರು ತಿರುಮಲೇಗೌಡ ಸೇರಿದಂತೆ ಅನೇಕ ಗಣ್ಯರು ಈ ಪ್ರವಾಸಿ ಮಂದಿರದಲ್ಲಿ ರಾಜ್ಯ ಹಾಗೂ ತಾಲೂಕಿನ ಬಗ್ಗೆ ಹಲವಾರು ಚರ್ಚೆ ಮಾಡಿರುವ ನಿದರ್ಶನವಿದೆ.
ಪಾಳು ಬಿದ್ದಂತೆ ಕಾಣುತ್ತಿದೆ: ಈ ಹಿಂದೆ ಇಲ್ಲಿ ಹಲವಾರು ರಾಜಕೀಯ ಮುಖಂಡರು ಸಭೆ ಸೇರಿ ತಾಲೂಕಿನ ಬಗ್ಗೆ ಸಮಗ್ರ ಚಟುವಟಿಕೆಯಲ್ಲಿ ತೊಡಗುವಂತಹ ವಿಚಾರ ವಿನಿಮಯವಾಗುತ್ತಿದ್ದವು. ಇತ್ತೀಚೆಗೆ ಶಾಸಕರು ಸೇರಿದಂತೆ ಯಾವುದೇ ಪಕ್ಷದ ರಾಜಕೀಯ ಮುಖಂಡರು ಇಲ್ಲಿ ಬರುತ್ತಿಲ್ಲ. ಆದ್ದರಿಂದ ಪಾಳು ಬಿದ್ದಂತೆ ಕಾಣುತ್ತಿದೆ ಎನ್ನುತ್ತಾರೆ ಇಲ್ಲಿಗೆ ನಿತ್ಯ ಭೇಟಿ ನೀಡುವ ನಾಗರಿಕರು. ಇಲ್ಲಿನ ಮೇಲ್ವಿಚಾರಣೆಗೆ ಒಬ್ಬ ಪುರುಷ ಹಾಗೂ ಒಬ್ಬ ಮಹಿಳೆಯನ್ನು ನೇಮಕ ಮಾಡಿಕೊಂಡ್ಡಿದ್ದಾರೆ.
ನ್ಯಾಯ ತೀರ್ಮಾನದ ಅಡ್ಡ: ಇಲ್ಲಿ ಸಂಘ -ಸಂಸ್ಥೆಗಳವರದ್ದೇ ಕಾರುಬಾರಾಗಿದೆ. ಇರುವ ಇಬ್ಬರು ಸಿಬ್ಬಂದಿಯನ್ನು ಇವರಿಗೆ ಹೆದರಿಸಿ ಮಿನಿ ಸಭೆಗಳು, ಕಗ್ಗಂಟಾಗಿರುವ ನ್ಯಾಯ ತೀರ್ಮಾನಗಳನ್ನು ಮಾಡಿಕೊಂಡು ಹೋಗುತ್ತಾರೆ ಎಂಬುದು ಅನೇಕರ ದೂರಾಗಿದೆ. ಹಿಂದೆ ಈ ಪ್ರವಾಸಿ ಮಂದಿರದಲ್ಲಿ ಕಾಲೇಜಿನ ವಿದ್ಯಾರ್ಥಿಗಳು ಮರದ ಕೆಳಗಡೆಗೆ ಓದಿಕೊಳ್ಳುತ್ತಿದ್ದರು. ಈಗ ಅದೂ ಇಲ್ಲವಾಗಿದೆ. ಹೊರಗಡೆಯಿಂದ ಬಂದ ಅತಿಥಿಗಳು ಉಳಿದು ಕೊಳ್ಳುವುದಕ್ಕೆ ಕೊಠಡಿಗಳು ಯೋಗ್ಯವಲ್ಲವಾಗಿದೆ. ಗಲೀಜಿನಿಂದ ಕೂಡಿದ್ದು ದುರ್ವಾಸನೆ ಬೀರುತ್ತಿದೆ.
ಸಾರ್ವಜನಿಕರ ಆರೋಪ: ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿರುವ ಈ ಪ್ರವಾಸಿ ಮಂದಿರಕ್ಕೆ ಮುಖ್ಯಮಂತ್ರಿಗಳು ವಿಶ್ರಾಂತಿ ಪಡೆದು ಬೆಂಗಳೂರಿಗೆ ತೆರಳಿದ್ದ ಅನೇಕ ನಿದರ್ಶನವಿದೆ. ಆದರೆ, ಇಂತಹ ಕೆಟ್ಟ ಪ್ರವಾಸಿ ಮಂದಿರ ರಾಜ್ಯದಲ್ಲಿ ಯಾವುದೂ ಇಲ್ಲ. ಇಲ್ಲಿನ ಅಧಿಕಾರಿಗಳು ಈ ಸಮಸ್ಯೆಯನ್ನು ಕಂಡು ಕಾಣದಂತೆ ಇದ್ದಾರೆ ಎಂಬುದು ಸಾರ್ವಜನಿಕರ ಆರೋಪವಾಗಿದೆ.
ನಿರ್ವಹಣೆ ಮಾಡುತ್ತಿಲ್ಲ: ಶುಚಿತ್ವ ಯಾವ ಕಾರಣಕ್ಕೆ ನಿರ್ವಹಣೆ ಮಾಡುತ್ತಿಲ್ಲ. ಸುಣ್ಣ ಬಣ್ಣ ಯಾಕೆ ಮಾಡುತ್ತಿಲ್ಲ. ನೆಮ್ಮದಿ-ಶಾಂತಿ ನೆಲೆಸುವ ಈ ಸುಂದರ ಮಂದಿರಕ್ಕೆ ಯಾಕೆ ಪ್ರಾಮುಖ್ಯತೆ ನೀಡುತ್ತಿಲ್ಲ ಎನ್ನುವ ಯಕ್ಷ ಪ್ರಶ್ನೆ ಉದ್ಭವವಾಗಿದೆ ಎಂದು ನಾಗರಿಕರು ದೂರುತ್ತಾರೆ. ಹೊಸಬರಿಗೆ ಇಲ್ಲಿ ಪ್ರವಾಸಿ ಮಂದಿರ ಇದೆ ಎಂದು ಗೊತ್ತಾಗುವುದೇ ಇಲ್ಲ. ಇದಕ್ಕೆ ಎಲ್ಲೂ ಪ್ರವಾಸಿಮಂದಿರದ ಇರುವ ಜಾಗ ಹಾಗೂ ಮಾರ್ಗ ತೋರುವ “ಬೋರ್ಡ್’ ಇಲ್ಲ. ನಾಲ್ಕು ಕೊಠಡಿಗಳು ಹಳೆಯದು ಆಗಿರುವುದರಿಂದ ಬೀಗ ಜಡಿದಿದೆ.
ಉತ್ತಮ ನಿರ್ವಹಣೆ ಮರೀಚಿಕೆಯಾಗಿದೆ: ವೃತ್ತಾಕಾರದ ನೀರಿನ ತೊಟ್ಟಿಯಿಂದ ನೀರು ಚಿಮ್ಮುವ ದೃಶ್ಯ ಬಹುಸುಂದರವಾಗಿತ್ತು. ಆದರೆ, ಸ್ಥಗಿತ ಗೊಂಡಿದ್ದು, ನೋಡುಗರಿಗೆ ಬಿಕೋ ಎನ್ನುವಂತಾಗಿದೆ. ಹೂವಿನ ತೋಟದಂತೆ ಶೃಂಗರಿಸಿಗೊಂಡು ಬರುವ ಅತಿಥಿಗಳನ್ನು ಸ್ವಾಗತಿಸುತ್ತಿದ್ದ ಪ್ರವಾಸಿಮಂದಿರ ಈಗ ಭಯದ ಮಂದಿರವಾಗಿ ಮಾರ್ಪಟ್ಟಿದೆ. ಈಗ ಪ್ರವಾಸಿ ಮಂದಿರದಲ್ಲಿ ಹಾವು, ಚೇಳು, ಹೆಗ್ಗಣ ಮತ್ತು ನವಿಲು ಸಂಚರಿಸುವಂತಾಗಿದ್ದು, ಉತ್ತಮ ನಿರ್ವಹಣೆ ಮರೀಚಿಕೆಯಾಗಿದೆ.
-ಎಂ.ಶಿವಮಾದು