Advertisement

ಆಧುನಿಕ ಮನೆಗೆ ಮಣ್ಣಿನ ಸ್ಪರ್ಶ

12:21 AM Aug 17, 2019 | mahesh |

ಆಧುನಿಕ ತಂತ್ರಜ್ಞಾನಕ್ಕೆ ನಾವು ಬಹುಬೇಗ ಮಾರು ಹೋಗುತ್ತೇವೆ. ಬದಲಾದ ಜೀವನ ಶೈಲಿಗೆ ನಮ್ಮನ್ನು ನಾವು ತೆರೆದುಕೊಳ್ಳುತ್ತೇವೆ. ಸಂಕೀರ್ಣ ಜೀವನ ರೀತಿಯನ್ನು ಆಧುನಿಕತೆ ಸರಳಗೊಳಿಸುತ್ತದೆ ನಿಜ. ಆದರೆ ಬಹು ಬೇಗ ನಮ್ಮ ಸ್ವಾಸ್ಥ್ಯ ಕೆಡಿಸುತ್ತವೆ ಎನ್ನುವುದು ಅನೇಕ ವಿಷಯಗಳಲ್ಲಿ ಸಾಬೀತಾಗಿದೆ. ಕೆಲವೊಂದು ತಂತ್ರಜ್ಞಾನ ಜೀವರಾಶಿಗಳಿಗೆ ಮಾತ್ರವಲ್ಲ ಪರಿಸರಕ್ಕೂ ಮಾರಕವಾಗಿ ಪರಿಣಮಿಸುತ್ತದೆ. ಆಗ ನಮ್ಮ ನೆನಪಿಗೆ ಬರುವುದೇ ಹಿರಿಯರು ಅನುಸರಿಸುತ್ತಿದ್ದ ಜೀವನ ರೀತಿ. ಅವುಗಳಲ್ಲಿ ಈಗ ಜನಪ್ರಿಯವಾಗುತ್ತಿರುವ ಮಣ್ಣಿನ ಮನೆಯೂ ಒಂದು.

Advertisement

ಸದ್ಯದ ಟ್ರೆಂಡ್‌
ಕಾಂಕ್ರೀಟ್ ಮನೆಗೆ ಮಾರು ಹೋದ ಬಹುತೇಕರು ಈಗ ಮಣ್ಣಿನ ಮನೆಯತ್ತ ಮುಖ ಮಾಡುತ್ತಿರುವುದು ಸದ್ಯದ ಟ್ರೆಂಡ್‌. ಮಂಗಳೂರು, ಬೆಂಗಳೂರು, ಹಾಸನ, ಕೇರಳದಲ್ಲಿ ಈ ಶೈಲಿಯತ್ತ ಜನರು ಆಕರ್ಷಿತರಾಗುತ್ತಿದ್ದಾರೆ.

ಏನು ಕಾರಣ?
ಪರಿಸರ ಸ್ನೇಹಿ ಜೀವನ ಶೈಲಿ ವಿಧಾನಗಳತ್ತ ಜನರು ಮುಖ ಮಾಡಿರುವುದರಿಂದ ಇದು ಕೂಡಾ ಜನಪ್ರಿಯವಾಗತೊಡಗಿದೆ ಎನ್ನುತ್ತಾರೆ ವಾಸ್ತು ಶಿಲ್ಪಿ ನಿರೇನ್‌ ಜೈನ್‌.

ಯಾವ ಥರದ ಮಣ್ಣು ಸೂಕ್ತ?
ಮನೆ ಕಟ್ಟಲು ಸಾಮಾನ್ಯ ಕೆಂಪು ಮಣ್ಣು ಬಳಸಲಾಗುತ್ತದೆ. ಆದರೆ ಮಣ್ಣಿನಲ್ಲಿ ಜೈವಿಕ ಅಂಶಗಳು ಇರಬಾರದು. ಅಂದರೆ ಗಿಡದ ಅವಶೇಷ, ಎಲೆಗಳ ಅಂಶ ಸೇರಿರುವ ಮಣ್ಣನ್ನು ಮನೆ ಕಟ್ಟಲು ಬಳಸುವುದಿಲ್ಲ.

ದೃಢತೆ
ಪ್ರಸ್ತುತ ಮಣ್ಣಿನ ಮನೆಯನ್ನು ಆಧುನಿಕ ತಂತ್ರಜ್ಞಾನದ ಸಹಾಯದೊಂದಿಗೆ ನಿರ್ಮಿಸುವುದರಿಂದ ದೃಢವಾಗಿಯೂ ಇರುತ್ತದೆ. ಹಿಂದಿನ ಕಾಲದಂತೆ ಒಂದೆರಡು ಮಳೆಗೆ ಗೋಡೆ ಕರಗುವುದಿಲ್ಲ. ದುರಸ್ತಿ ಮಾಡುವವರೆಗೆ ನೀರಿನ ಹೊಡೆತ ತಡೆಯಬಲ್ಲದು.

Advertisement

ಪರಿಸರ ಸ್ನೇಹಿ
ಮಣ್ಣಿನ ಮನೆ ನಿರ್ಮಾಣ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಪರಿಸರಕ್ಕೆ ಪೂರಕವಾಗಿರುತ್ತದೆ. ಸಿಮೆಂಟ್ ನಿರ್ಮಾಣ ಕಾರ್ಖಾನೆಗಳು ಅಪಾರ ಪ್ರಮಾಣದ ಹೊಗೆ, ತ್ಯಾಜ್ಯ ಸೃಷ್ಟಿಗೆ ಕಾರಣವಾಗುತ್ತವೆ. ಮಣ್ಣಿನ ಮನೆ ನಿರ್ಮಾಣದಿಂದ ಈ ಪ್ರಮಾಣವನ್ನು ತಗ್ಗಿಸಬಹುದು. ಜತೆಗೆ ಮಣ್ಣಿನ ಇಟ್ಟಿಗೆ ಮುಂತಾದವುಗಳಿಗೆ ಬೇಡಿಕೆ ಹೆಚ್ಚುವುದರಿಂದ ಸ್ಥಳೀಯವಾಗಿ ಉದ್ಯೋಗವಕಾಶಗಳೂ ಹೆಚ್ಚುತ್ತವೆ ಎನ್ನುತ್ತಾರೆ ತಜ್ಞರು.

ನಿರ್ಮಾಣ ಹೇಗೆ?

ಸೂಕ್ತ ಮಣ್ಣನ್ನು ಆಯ್ಕೆ ಮಾಡಿಕೊಂಡು ಅದಕ್ಕೆ ಅಗತ್ಯ ಪ್ರಮಾಣದಲ್ಲಿ ಮರಳು, ಸಿಮೆಂಟ್, ಸುಣ್ಣ ಮಿಶ್ರ ಮಾಡಿ ಮನೆ ನಿರ್ಮಿಸಲಾಗುತ್ತದೆ. ಮಣ್ಣಿನ ಗುಣಕ್ಕೆ ಹೊಂದಿಕೊಂಡು ಮರಳು, ಸಿಮೆಂಟ್, ಸುಣ್ಣದ ಪ್ರಮಾಣದಲ್ಲಿ ವ್ಯತ್ಯಾಸ ಮಾಡಲಾಗುತ್ತದೆ(ಸಿಮೆಂಟನ್ನು ಸಾಧಾರಣವಾಗಿ ಮಣ್ಣಿನ ಗುಣಕ್ಕೆ ಅನುಗುಣವಾಗಿ ತೂಕದ ಅಂದಾಜು ಶೇ. 3 ರಷ್ಟು ಬಳಸಲಾಗುತ್ತದೆ).

ಇದನ್ನು ಗಮನಿಸಿ

1 ಮನೆ ಕಟ್ಟುವ ಮುನ್ನ ಸರಿಯಾದ ಯೋಜನೆ ಹಾಕಿಕೊಳ್ಳಬೇಕು
2 ಮನೆ ಕಟ್ಟಲು ಮಣ್ಣು ಯೋಗ್ಯವಾಗಿದೆಯೇ ಎಂಬುದನ್ನು ತಜ್ಞರಿಂದ ಪರೀಕ್ಷಿಸಿಕೊಳ್ಳಿ
3 ಹೊರಗಿನಿಂದ ತರಿಸುವುದಕ್ಕಿಂತ ನಮ್ಮದೇ ಮಣ್ಣು ಬಳಸುವುದರಿಂದ ಖರ್ಚು ಉಳಿಸಬಹುದು
4 ಮನೆ ನಿರ್ಮಾಣದಲ್ಲಿ ನೀವೂ ತೊಡಗಿಸಿಕೊಳ್ಳುವುದು ಉತ್ತಮ
5 ಮನೆ ಕೆಲಸಕ್ಕೆ ಮುನ್ನ ಸೂಕ್ತ ಮಾರ್ಗದರ್ಶನ, ತರಬೇತಿ ನೀಡುವುದು ಅವಶ್ಯ

ಅನುಕೂಲತೆಗಳೇನು?
ಸಾಮಾನ್ಯವಾಗಿ ಬೇಸಗೆಯಲ್ಲಿ ತಾರಸಿ ಮನೆಗಳಲ್ಲಿ ಸೆಕೆ ಹೆಚ್ಚು. ಅಲ್ಲದೆ ಪ್ರಸ್ತುತ ವಾತಾವರಣದ ಉಷ್ಣಾಂಶ ಹೆಚ್ಚಳವಾಗಿರುವುದರಿಂದ ಕಾಂಕ್ರೀಟ್ ಕಟ್ಟಡಗಳಲ್ಲಿ ವಾಸಿಸುವುದು ಅಸಹನೀಯವಾಗತೊಡಗಿದೆ. ಮಣ್ಣಿನ ಮನೆ ಉಷ್ಣಾಂಶವನ್ನು ತಾರಸಿ ಮನೆಯಷ್ಟು ಒಳಗೆ ಬಿಡದೇ ಇರುವುದರಿಂದ ವಾತಾವರಣ ತಂಪಾಗಿರುತ್ತದೆ. ಅಲ್ಲದೆ ಸರಿಯಾದ ಯೋಜನೆ ಹಾಕಿಕೊಂಡರೆ ಮನೆಯನ್ನು ಬೇಕಾದ ರೀತಿಯಲ್ಲಿ ನಿರ್ಮಿಸಬಹುದು. ಎರಡು ಮಹಡಿವರೆಗೂ ಮನೆ ಕಟ್ಟಬಹುದಾಗಿದೆ. ಜಗಲಿ, ಅಂಗಳದಲ್ಲಿ ಮಣ್ಣಿನ ನೆಲವನ್ನೇ ಉಳಿಸಬಹುದು. ಒಳಗೆ ಬೇಕಾದರೆ ನೆಲಗಳಿಗೆ ಗ್ರಾನೈಟ್, ಟೈಲ್ಸ್ ಬಳಸಬಹುದು.

•ರಮೇಶ್‌ ಬಳ್ಳಮೂಲೆ

ವಿವರಗಳಿಗೆ ನಿರೇನ್‌ ಜೈನ್‌: ಇ-ಮೇಲ್

 

 

Advertisement

Udayavani is now on Telegram. Click here to join our channel and stay updated with the latest news.

Next