Advertisement
ಉಡುಪಿ: ಒಂದೇ ಹೆಸರಿನಲ್ಲಿ ಎರಡು ಕಡೆ ಪಡಿತರ ಚೀಟಿ ಹೊಂದಿ, ಸರಕಾರಿ ಸವಲತ್ತು ಅನುಭವಿಸುತ್ತಿರು ವವರಿಗೆ ಆಹಾರ, ನಾಗರಿಕ ಸರಬರಾಜು ಗ್ರಾಹಕ ವ್ಯವಹಾರ ಇಲಾಖೆ ಶಾಕ್ ನೀಡಿದೆ. ಉಭಯ ಜಿಲ್ಲೆಗಳಲ್ಲಿ ಒಟ್ಟು 4,494 ನಕಲಿ ಕಾರ್ಡ್‌ದಾರರನ್ನು ಪತ್ತೆ ಮಾಡಲಾಗಿದೆ. 1,632 ಕಾರ್ಡ್ ಡಿಲೀಟ್ ಮಾಡಲಾಗಿದ್ದು, ದಂಡ ವಸೂಲಿಗೆ ಚಿಂತನೆ ನಡೆಸಲಾಗುತ್ತಿದೆ.
ಪಡಿತರ ಚೀಟಿಗೆ ಆಧಾರ್ ಲಿಂಕ್ ಮತ್ತು ಬೆರಳಚ್ಚು ಕಡ್ಡಾಯ, ಕುಟುಂಬದ ಎಲ್ಲ ಸದಸ್ಯರು ಆಧಾರ್ ಲಿಂಕ್ ಜತೆಗೆ ಬೆರಳಚ್ಚು ನೀಡಬೇಕು. ತಾವಿರುವಲ್ಲಿಯೇ ಆಧಾರ್ ಲಿಂಕ್‌ಗೂ ಅವಕಾಶ ಇದೆ. ಒಂದು ದೇಶ- ಒಂದು ರೇಷನ್ ಕಾರ್ಡ್ ಅಡಿ ಬಹುತೇಕ ರಾಜ್ಯಗಳಲ್ಲಿ ಆಧಾರ್ ಲಿಂಕ್ ಕಡ್ಡಾಯ ಮಾಡಿರುವುದರಿಂದ ಎರಡು ಕಡೆ ಕಾರ್ಡ್ ಹೊಂದಿದವರ ಪಟ್ಟಿ ಸುಲಭವಾಗಿ ಲಭಿಸುತ್ತಿದೆ. ಹೀಗಾಗಿ ಇನ್ನು ಮುಂದೆ ಯಾರೂ ಎರಡು ಪಡಿತರ ಚೀಟಿ ಹೊಂದಲು ಸಾಧ್ಯವಿಲ್ಲ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
Related Articles
ಉಡುಪಿ ಮತ್ತು ದ. ಕನ್ನಡದಲ್ಲಿ ಎರಡು ಕಾರ್ಡ್ ಹೊಂದಿದವರು ಬಹುತೇಕ ಬೆಂಗಳೂರು, ಮುಂಬಯಿ, ಪುಣೆ, ಹೈದರಾ ಬಾದ್, ದಿಲ್ಲಿಯಲ್ಲಿದ್ದಾರೆ. ಬೇರೆ ಬೇರೆ ಜಿಲ್ಲೆಯಲ್ಲಿ ಅಥವಾ ಬೇರೆ ರಾಜ್ಯದಲ್ಲಿ ಪಡಿತರ ಚೀಟಿ ಮಾಡಿಸಿಕೊಂಡು, ಮೂಲ ಮನೆಯಪಡಿತರ ಚೀಟಿಯಲ್ಲೂ ಹೆಸರು ಉಳಿಸಿ ಕೊಂಡವರಿಗೆ ಈಗ ಸಂಕಷ್ಟ ಎದುರಾಗಿದೆ. ಉಭಯ ಜಿಲ್ಲೆಗಳಲ್ಲಿ ಅವರ ಸ್ವಂತ ಮನೆ ಯಿದ್ದು, ಅಲ್ಲಿರುವ ಕಾರ್ಡ್‌ನಲ್ಲಿ ಅವರ ಹೆಸರೂ ಇದೆ. ಉದ್ಯೋಗ ಅಥವಾ ಇತರ ಉದ್ದೇಶಕ್ಕೆ ಬೇರೆ ಊರುಗಳಿಗೆ ಹೋಗಿ ನೆಲೆಸಿರುವವರು ಸರಕಾರದ ಸವಲತ್ತು ಪಡೆ
ಯಲು ಮತ್ತು ಮಕ್ಕಳನ್ನು ಶಾಲೆಗೆ ಸೇರಿಸಲು, ಉದ್ಯೋಗಕ್ಕೆ ಸೇರಲು ಇತ್ಯಾದಿ ದಾಖಲೆಗಳಿಗೆ ಅಲ್ಲೊಂದು ಹೊಸ ಕಾರ್ಡ್ ಮಾಡಿಕೊಂಡಿರುವುದು ಇಲಾಖೆಯ ಗಮನಕ್ಕೆ ಬಂದಿದೆ.
Advertisement
ರಾಜ್ಯ ಮಟ್ಟದಿಂದಲೇ ಮಾಹಿತಿ ರವಾನೆ
ನಕಲಿ ಕಾರ್ಡ್‌ದಾರರ ಪಟ್ಟಿಯನ್ನು ಇಲಾಖೆಯ ಕೇಂದ್ರ ಕಚೇರಿಯಲ್ಲೇ ಸಿದ್ಧಪಡಿಸಲಾಗುತ್ತಿದೆ. ಒಂದೇ ಆಧಾರ್ ಸಂಖ್ಯೆಯಲ್ಲಿ ಎರಡು ಕಾರ್ಡ್ ಇರುವುದು ಅಥವಾ ಆದಾಯ ತೆರಿಗೆ ಪಾವತಿ, ಸರಕಾರಿ, ಅರೆಸರಕಾರಿ ಉದ್ಯೋಗದಲ್ಲಿದ್ದು ಬಿಪಿಎಲ್, ಅಂತ್ಯೋದಯ ಕಾರ್ಡ್ ಹೊಂದಿದವರ ಮಾಹಿತಿ ಯನ್ನು ಸಾಫ್ಟ್ ವೇರ್ ಮೂಲಕ ಪತ್ತೆ ಮಾಡಿ, ಆಯಾ ಜಿಲ್ಲೆಗಳಿಗೆ ಕಳುಹಿಸಲಾಗುತ್ತಿದೆ. ಜಿಲ್ಲೆಗಳಿಂದ ಮಾಹಿತಿಯನ್ನು ತಾಲೂಕುಗಳಿಗೆ ನೀಡಿ, ಅಲ್ಲಿಂದ ಸಂಬಂಧಪಟ್ಟವರಿಗೆ ನೋಟೀಸ್ ಜಾರಿ ಮಾಡಿ, ತಪಾಸಣೆ ನಡೆಸಿ, ಅನಂತರ ರದ್ದು ಅಥವಾ ಮುಂದಿನ ಕ್ರಮದ ನಿರ್ಣಯ ಮಾಡಲಾಗುತ್ತಿದೆ. ಎರಡು ಕಡೆ ಪಡಿತರ ಚೀಟಿ ಹೊಂದಿರುವುದನ್ನು ಆಧಾರ್ ಲಿಂಕ್ ಮೂಲಕ ಗುರುತಿಸಲಾಗುತ್ತಿದೆ. ರಾಜ್ಯ ಮಟ್ಟದಿಂದಲೇ ಈ ಪಟ್ಟಿ ಬರುತ್ತಿದ್ದು, ಇಲ್ಲಿ ಪರಿಶೀಲಿಸಿ, ನೋಟಿಸ್ ನೀಡಿ ರದ್ದತಿ ಅಥವಾ ಮುಂದಿನ ಕ್ರಮ ತೆಗೆದುಕೊಳ್ಳುತ್ತಿದ್ದೇವೆ.
-ಮೊಹಮ್ಮದ್ ಇಸಾಕ್
ಉಪ ನಿರ್ದೇಶಕ, ಆಹಾರ, ನಾಗರಕ ಸರಬರಾಜು, ಗ್ರಾಹಕ ವ್ಯವಹಾರ ಇಲಾಖೆ, ಉಡುಪಿ -ರಾಜು ಖಾರ್ವಿ ಕೊಡೇರಿ