Advertisement

Kolar: ಗ್ರಾಮೀಣ ಭಾಗದ ಪ್ರತಿ ಮನೆಗೂ ಶೌಚಾಲಯ

03:10 PM Dec 14, 2023 | Team Udayavani |

ಕೋಲಾರ: ಗ್ರಾಮೀಣ ಪ್ರದೇಶದ ಪ್ರತಿ ಕುಟುಂಬವೂ ಶೌಚಾಲಯವನ್ನು ಹೊಂದಬೇಕು ಎಂಬ ಸಂಕಲ್ಪ ತೊಟ್ಟು, ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪದ್ಮಾ ಬಸವಂತಪ್ಪ ವಿಶೇಷ ಅಭಿಯಾನಕ್ಕೆ ಅವಕಾಶ ಕಲ್ಪಿಸಿದ್ದಾರೆ.

Advertisement

2014-15ನೇ ಸಾಲಿನಿಂದ ಜಿಲ್ಲೆಯಲ್ಲಿ ಸ್ವಚ್ಛ ಭಾರತ್‌ ಅಭಿಯಾನ ಆರಂಭವಾಗಿದ್ದು, ವಿವಿಧ ರೀತಿಯ ಸ್ವಚ್ಛತಾ ಕಾರ್ಯಕ್ರಮ ಚಾಲ್ತಿಯಲ್ಲಿವೆ. ಜಿಲ್ಲೆಯ ಬಹುತೇಕ ಗ್ರಾಮಗಳಲ್ಲಿ ಬಯಲೇ ಶೌಚಾಲಯವಾಗಿತ್ತು. ಇಂತಹದ್ದೊಂದು ವಾತಾವರಣವನ್ನು ಈ ಹತ್ತು ವರ್ಷಗಳಲ್ಲಿ ಬಹುತೇಕ ನಿವಾರಣೆ ಮಾಡಲಾಗಿದೆ. ಆದರೂ, ಕೆಲವೊಂದು ಭಾಗದಲ್ಲಿ ಬಯಲನ್ನೇ ಶೌಚಾಲಯವನ್ನಾಗಿ ಕೆಲವು ಕುಟುಂಬಗಳು ಬಳಸು ತ್ತಿರುವುದು ಕಂಡು ಬಂದಿದೆ. ಈ ಹಿನ್ನೆಲೆ ಕೋಲಾರ ಜಿಪಂ ವಿಶೇಷ ಅವಕಾಶವೊಂದನ್ನು ಗ್ರಾಮೀಣ ಭಾಗದ ಜನರಿಗೆ ಕಲ್ಪಿಸಿದ್ದು, ಶೌಚಾಲಯಗಳ ನಿರ್ಮಾಣಕ್ಕೆ ಅವಕಾಶ ಮಾಡಿಕೊಟ್ಟಿದೆ.

ಬಹಿರ್ದೆಸೆ ಮುಕ್ತ ಜಿಲ್ಲೆ: ಸ್ವಚ್ಛ ಭಾರತ ಮಿಷನ್‌ ಕಾರ್ಯಕ್ರಮ ಆರಂಭವಾದ ಮೂರು-ನಾಲ್ಕು ವರ್ಷಗಳಲ್ಲೇ ಕೋಲಾರ ಜಿಲ್ಲೆ ಸಂಪೂರ್ಣ ಬಹಿರ್ದೆಸೆ ಮುಕ್ತ ಜಿಲ್ಲೆಯಾಗಿ ಘೋಷಿಸಲ್ಪಟ್ಟಿತು. ಜಿಲ್ಲೆ ಬಹಿರ್ದೆಸೆ ಮುಕ್ತ ಜಿಲ್ಲೆಯಾಗಿರುವುದರಿಂದ ಶೌಚಾಲಯಗಳ ವಿಚಾರದಲ್ಲಿ ಏನಾ ದರೂ ಮಾಡಲೇಬೇಕಾದ ಅನಿವಾರ್ಯತೆಯೂ ಜಿಪಂ ಅಧಿಕಾರಿಗಳಿಗೆ ಇರಲಿಲ್ಲ. ಆದರೆ, ಜಿಪಂ ಸಿಇಒ ಪದ್ಮಾ ಬಸವಂತಪ್ಪ ಜಿಲ್ಲೆಗೆ ಆಗಮಿಸಿದ ಮೇಲೆ ತಾಪಂ ಇಒ ಮತ್ತು ಗ್ರಾಪಂ ಪಿಡಿಒ ಅಧಿಕಾರಿಗಳ ಮೂಲಕ ಸಮೀಕ್ಷೆಯೊಂದನ್ನು ನಡೆಸಿ ಶೌಚಾಲಯ ಇಲ್ಲದ ಕುಟುಂಬಇನ್ನೂ ಇರುವುದನ್ನು ಖಚಿತಪಡಿಸಿಕೊಂಡಿದ್ದರು. ಕೆಲವು ಕುಟುಂಬಗಳು ಇಂದಿಗೂ ಶೌಚಕ್ಕೆ ಬಯಲನ್ನೇ ಅವಲಂಬಿಸಿರುವುದನ್ನು ದೃಢಪಡಿಸಿಕೊಂಡಿದ್ದರು. ಇಂತಹ ವಾತಾವರಣದಲ್ಲಿ ಬಹಿರ್ದೆಸೆ ಮುಕ್ತ ಜಿಲ್ಲೆ ಘೋಷಣೆಗೆ ಅರ್ಥವಿರುವುದಿಲ್ಲವೆಂದು ಮನಗಂಡರು.

ಶೌಚಾಲಯ ನಿರ್ಮಾಣ ವಿಶೇಷ ಅಭಿಯಾನ: ನಗರದ ಪ್ರದೇಶಗಳಲ್ಲಿ ನಿರ್ಮಾಣವಾಗುವ ಪ್ರತಿ ಮನೆಯೂ ಶೌಚಾಲಯ ಹೊಂದಿರುತ್ತದೆ. ಆದರೆ, ಗ್ರಾಮೀಣ ಭಾಗದಲ್ಲಿ ಇಂತಹ ವಾತಾವರಣ ಇರುವು ದಿಲ್ಲ, ಆದ್ದರಿಂದ, ಗ್ರಾಮಾಂತರ ಪ್ರದೇಶದ ಪ್ರತಿ ಕುಟುಂಬವು ಶೌಚಾಲಯ ಹೊಂದಬೇಕು. ಪ್ರತಿ ವ್ಯಕ್ತಿಯೂ ಬಯಲು ಆಶ್ರಯಿಸದೆ ಶೌಚಾಲಯ ಬಳಸಬೇಕು ಎಂಬ ಧ್ಯೇಯದೊಂದಿಗೆ ವಿಶೇಷ ಶೌಚಾಲಯ ನಿರ್ಮಾಣ ಅಭಿಯಾನಕ್ಕೆ ಅವಕಾಶ ನೀಡಲಾಗಿದೆ.

ಜಿಲ್ಲೆಯಲ್ಲಿ 55 ಸಾವಿರಕ್ಕೂ ಹೆಚ್ಚುಕುಟುಂಬಕ್ಕೆ ಶೌಚಾಲಯ ಇಲ್ಲ : ಜಿಲ್ಲೆಯಲ್ಲಿ ಸರಿ ಸುಮಾರು 16 ಲಕ್ಷ ಜನಸಂಖ್ಯೆ ಇದ್ದು, 2.28 ಲಕ್ಷ ಕುಟುಂಬಗಳಿವೆ ಎಂದು ಗುರುತಿಸಲಾಗಿದೆ. ಆದರೆ, ಸ್ವಚ್ಛ ಭಾರತ್‌ ಮಿಷನ್‌ ಅಂಕಿ-ಅಂಶಗಳ ಪ್ರಕಾರ ಇದುವರೆಗೂ ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ನಿರ್ಮಾಣವಾಗಿರುವ ಶೌಚಾಲಯಗಳ ಸಂಖ್ಯೆ 1.73 ಲಕ್ಷ ಮಾತ್ರ. ಅಂದರೆ, ಮೇಲ್ನೋಟಕ್ಕೆ 55 ಸಾವಿರಕ್ಕೂ ಹೆಚ್ಚು ಕುಟುಂಬ ಶೌಚಾಲಯ ಹೊಂದಿಲ್ಲದಿರುವುದು ತಿಳಿಯುತ್ತದೆ. ಅಲ್ಲದೆ, ಬಹಿರ್ದೆಸೆ ಮುಕ್ತ ಜಿಲ್ಲೆಯಾಗಿ ಘೋಷಣೆಯಾದ ನಂತರವೂ, ಕುಟುಂಬಗಳ ವಿಭಾಗ ನಡೆದಿದೆ. ಆಸ್ತಿ ಹಂಚಿಕೆಯಾಗಿವೆ. ಹೊಸ ಮನೆಗಳ ನಿರ್ಮಾಣವೂ ಆಗು ತ್ತಿದೆ. ಆದರೆ, ಹೀಗೆ ಗ್ರಾಮೀಣ ಭಾಗದಲ್ಲಿ ನಿರ್ಮಾಣಗೊಳ್ಳುತ್ತಿರುವ ಪ್ರತಿ ಮನೆ ಯಲ್ಲಿಯೂ ಶೌಚಾಲಯ ನಿರ್ಮಾಣವಾಗುತ್ತಿಲ್ಲ ಎಂಬ ಅಂಶ ತಿಳಿದು ಬಂದಿದೆ.

Advertisement

ಗ್ರಾಮೀಣರಿಗೆ ವಿಶೇಷ ಅವಕಾಶ: ಪ್ರತಿ ಗ್ರಾಮೀಣ ಕುಟುಂಬವೂ ಶೌಚಾಲಯ ಹೊಂದಬೇಕು ಎಂಬ ಕಾರಣಕ್ಕೆ ಕೋಲಾರ ಜಿಪಂ ಸಿಇಒ ಮತ್ತೇ ಹೊಸದಾಗಿ ಶೌಚಾಲಯಗಳ ನಿರ್ಮಿಸಿಕೊಳ್ಳಲು ಅವಕಾಶ ಕಲ್ಪಿಸಿ ಕೊಟ್ಟಿದ್ದಾರೆ. ಹಿಂದಿನಂತೆಯೇ ಈಗಲೂ ಶೌಚಾಲಯ ನಿರ್ಮಾಣ ಮಾಡಿಕೊಳ್ಳುವವರಿಗೆ ಸಹಾಯಧನವನ್ನು ವಿತರಿಸುವ ಭರವಸೆ ನೀಡಿದ್ದಾರೆ. ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಹಿಂದೆ ನಿರ್ಮಾಣಗೊಂಡಿರುವ ಮನೆಗಳನ್ನು ಹೊರತುಪಡಿಸಿ, ಹೊಸದಾಗಿ ಕಟ್ಟಿರುವ ಮನೆಗಳಿಗೆ ಶೌಚಾಲಯ ನಿರ್ಮಾಣ ಮಾಡಿಕೊಳ್ಳಲು ಮುಂದಾಗುವವರಿಗೆ ಪ್ರತಿ ಘಟಕಕ್ಕೆ ಇತರೇ ವರ್ಗದವರಿಗೆ 12 ಸಾವಿರ ರೂ. ಮತ್ತು ಪರಿಶಿಷ್ಟ ಜಾತಿ ವರ್ಗದವರಿಗೆ 20 ಸಾವಿರ ರೂಪಾಯಿ ಸಹಾಯಧನ ನೀಡಲು ಅವಕಾಶ ನೀಡಲಾಗಿದೆ.

ಆನ್‌ಲೈನ್‌ ಅರ್ಜಿ ಸಲ್ಲಿಕೆ ಹೇಗೆ?: ಶೌಚಾಲಯ ರಹಿತ ಕುಟುಂಬದವರು ಆಧಾರ್‌ಕಾರ್ಡ್‌, ಪಡಿತರ ಚೀಟಿ, ಬ್ಯಾಂಕ್‌ ಪಾಸ್‌ ಬುಕ್‌ ಸಹಿತವಾಗಿ ಸಿಟಿಜನ್‌ ಪೋರ್ಟಲ್‌ ಮೂಲಕ ಖುದ್ದಾಗಿ ತಾವೇ ಅರ್ಜಿ ಸಲ್ಲಿಸಬಹುದು, ಇಲ್ಲವೇ ಗ್ರಾಪಂ ಕಚೇರಿಗಳನ್ನು ಭೇಟಿ ಮಾಡಿ ಅಲ್ಲಿನ ಸಿಬ್ಬಂದಿ ಸಹಕಾರದೊಂದಿಗೆ ಅರ್ಜಿ ಸಲ್ಲಿಸಿ ಶೌಚಾಲಯ ನಿರ್ಮಾಣಕ್ಕೆ ಸಹಾಯಧನದ ನೆರವು ಪಡೆದುಕೊಳ್ಳಬಹುದು. ಆ ಮೂಲಕ ಶೌಚಾಲಯ ನಿರ್ಮಾಣ ಮಾಡಿಕೊಂಡು ಬಯಲು ಶೌಚಾಲಯದಿಂದ ವಿಮುಕ್ತಿ ಪಡೆದುಕೊಳ್ಳಬಹುದು.

ಜಿಲ್ಲೆಯು ಬಹಿರ್ದೆಸೆ ಮುಕ್ತ ಜಿಲ್ಲೆಯಾಗಿ ಘೋಷಣೆಯಾಗಿ ದ್ದರೂ, ಹಲವಾರು ಹೊಸ ಕುಟುಂಬಗಳು ಶೌಚಾಲಯ ಹೊಂದಿಲ್ಲದಿರುವುದು ಸಮೀಕ್ಷೆಯಿಂದ ದೃಢಪಟ್ಟಿದೆ. ಇದರಿಂದ, ಹೊಸದಾಗಿ ಶೌಚಾಲಯಗಳ ನಿರ್ಮಾಣಕ್ಕೆ ಅವಕಾಶ ಕಲ್ಪಿಸಲಾಗಿದ್ದು, ಶೌಚಾಲಯ ರಹಿತರು ಈ ಸೌಲಭ್ಯ ಸದ್ಬಳಕೆ ಮಾಡಿಕೊಂಡು ಸ್ವಚ್ಛ ಸಮಾಜಕ್ಕೆ ಸಹಕರಿಸಬೇಕು. ● ಪದ್ಮಾ ಬಸವಂತಪ್ಪ, ಸಿಇಒ, ಜಿಪಂ ಕೋಲಾರ

ಹೊಸದಾಗಿ ನಿರ್ಮಾಣಗೊಂಡಿರುವ ಮನೆಗಳಲ್ಲಿ, ಕುಟುಂಬಗಳ ವಿಭಾಗೀಕರ, ಅಣ್ಣ-ತಮ್ಮಂದರಿಗೆ ಆಸ್ತಿ ಹಂಚಿಕೆ ಇತ್ಯಾದಿ ಕಾರಣಗಳಿಂದ ಶೌಚಾಲಯ ರಹಿತ ಕುಟುಂಬಗಳು ಕಂಡು ಬಂದಿದ್ದು, ಜಿಪಂ ಸಿಇಒ ಅವರ ವಿಶೇಷ ಆದ್ಯತೆ ಮೇರೆಗೆ ಮತ್ತೇ ಶೌಚಾಲಯ ನಿರ್ಮಾಣ ಮಾಡಿಕೊಳ್ಳಲು ಅವಕಾಶ ಕಲ್ಪಿಸಿದ್ದು, ಈ ಕಾರ್ಯವನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಅಧಿಕಾರಿ, ಸಿಬ್ಬಂದಿ ಶ್ರಮಿಸುತ್ತಿದ್ದೇವೆ. ● ಎನ್‌. ರವಿಚಂದ್ರ, ಜಿಪಂ ಯೋಜನಾ ನಿರ್ದೇಶಕ

-ಕೆ.ಎಸ್‌.ಗಣೇಶ್‌

Advertisement

Udayavani is now on Telegram. Click here to join our channel and stay updated with the latest news.

Next