ಗಾಯಕ ಕಮ್ ನಾಯಕ ಸುನೀಲ್ ರಾವ್ ಮತ್ತೆ ಬಂದಿದ್ದಾರೆ. ವರ್ಷಗಳ ಗ್ಯಾಪ್ ಬಳಿಕ “ತುರ್ತು ನಿರ್ಗಮನ’ ಎಂಬ ಸಿನಿಮಾ ಮೂಲಕ ಕಾಣಿಸಿಕೊಳ್ಳುತ್ತಿದ್ದಾರೆ. ಈಗಾಗಲೇ ಚಿತ್ರೀಕರಣ ಮುಗಿದಿದ್ದು, ಚಿತ್ರತಂಡ, ಇತ್ತೀಚೆಗೆ ಹಾಡು ಹಾಗು ಟೀಸರ್ ತೋರಿಸುವ ಮೂಲಕ ಒಂದಷ್ಟು ಮಾಹಿತಿ ಹಂಚಿಕೊಳ್ಳಲೆಂದೇ ಪತ್ರಕರ್ತರ ಮುಂದೆ ಬಂದಿತ್ತು.
ಮೊದಲು ಮಾತು ಶುರುಮಾಡಿದ್ದು, ನಿರ್ದೇಶಕ ಹೇಮಂತ್‌ಕುಮಾರ್. ಅವರಿಗೆ ಇದು ಮೊದಲ ಸಿನಿಮಾ. ಹಿಂದೆ “ಗೋಧಿ ಬಣ್ಣ ಸಾಧಾರಣ ಮೈಕಟ್ಟು’ ಚಿತ್ರದಲ್ಲಿ ಸಹ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ. ಸಿನಿಮಾ ಕುರಿತು ಹೇಳುವ ಅವರು, “ನನಗೆ “ತುರ್ತು ನಿರ್ಗಮನ’ ಎಂಬ ಬೋರ್ಡ್ ಹೆಚ್ಚು ಕಾಡಲು ಶುರುವಾಗಿತ್ತು. ಬಸ್‌ನಲ್ಲಿ, ಆಸ್ಪತ್ರೆಯಲ್ಲಿ, ಮಾಲ್‌ನಲ್ಲಿ ಈ ರೀತಿಯ ಬೋರ್ಡ್‌ಗಳನ್ನು ಗಮನಿಸಿದ್ದೆ. ಈ ಪದದ ಬಳಕೆ ಕಡಿಮೆ. ಇದರ ಹಿಂದೆ ಒಂದು ಜಗತ್ತು ಇದ್ದರೆ ಹೇಗೆ ಎಂಬ ಯೋಚನೆ ಬಂತು. ಫ್ರಂಟ್ ಮತ್ತು ಬ್ಯಾಕ್ ಡೋರ್ ಇದೆ. ಈ “ತುರ್ತುನಿರ್ಗಮನ’ ಬೋರ್ಡ್ ನನಗೆ ವಿಶೇಷ ಎನಿಸಿತು. ಅದರ ಮೇಲೊಂದು ಕಥೆ ಹೆಣೆದೆ. ಇದೊಂದು ಈಗಿನ ಟ್ರೆಂಡ್ ಸ್ಟೋರಿ. ನಾಯಕ ಒಬ್ಬ ಸೋಂಬೇರಿ. ಪ್ರತಿಯೊಬ್ಬರ ಲೈಫಲ್ಲೂ ಬಂದು ಹೋಗುವಂತಹ ವಿಷಯ ಇಲ್ಲಿ ಹೇಳಿದ್ದೇನೆ. ಚಿತ್ರದ ನಾಯಕನ ಪಾತ್ರ ಜನನ ಮತ್ತು ಮರಣದ ಸುತ್ತ ಸಾಗುತ್ತೆ. ನಾಯಕನಿಗೆ ಕೊನೆಯ ಮೂರು ದಿನಗಳು ಪುನಃ ಜೀವಿಸುವ ಅವಕಾಶ ಸಿಕ್ಕಾಗ, ಅವನು ಏನೆಲ್ಲಾ ಸಮಸ್ಯೆ ಎದುರಿಸುತ್ತಾನೆ ಎನ್ನುವ ಅಪರೂಪದ ಕಥೆ ಇಟ್ಟುಕೊಂಡು ಸಿನಿಮಾ ಮಾಡಿದ್ದೇನೆ. ಮಾಂತ್ರಿಕತೆ ಹಾಗು ವಾಸ್ತವಿಕತೆ ನಡುವಿನ ವಿಷಯ ಇಲ್ಲಿದೆ’ ಎಂದು ವಿವರ ಕೊಟ್ಟರು ಹೇಮಂತ್ ಕುಮಾರ್.
ನಾಯಕ ಸುನೀಲ್‌ಗೆ ಈ ಕಥೆ ಕೇಳಿದಾಗ, ಇಲ್ಲೊಂದು ಸ್ಪೆಷಲ್ ಎಲಿಮೆಂಟ್ಸ್ ಇದೆ ಎಂದೆನಿಸಿ, ಅವರು ಒಪ್ಪಿದರಂತೆ. ನಾನು ಜಿಮ್‌ಗೆ ಹೋಗಿ ಫಿಟ್ ಆಗಿದ್ದೆ. ಆದರೆ, ಈ ಪಾತ್ರಕ್ಕೆ ಫಿಟ್ ಆಗಿರೋದು ಬೇಡ ಅಂತ ನಿರ್ದೇಶಕರು ಹೇಳಿ, ಸುಮಾರು ನಾಲ್ಕು ಕೆಜಿ ತೂಕ ಜಾಸ್ತಿ ಮಾಡಿಕೊಂಡು ದಪ್ಪ ಆದೆ. ಎಲ್ಲರ ಲೈಫಲ್ಲೂ ಬರುವಂತಹ ಘಟನೆಗಳು ಇಲ್ಲಿರುವ ಹೀರೋ ಬದುಕಲ್ಲೂ ಬರುತ್ತೆ. ಅದೊಂದು ರೀತಿ ಸೋಂಬೇರಿಯಾಗಿರುವ ಪಾತ್ರ. ಸದಾ ಕ್ರಿಕೆಟ್ ಆಡಿಕೊಂಡು, ಲೇಟ್ ಆಗಿ ಎದ್ದು, ಅತ್ತಿತ್ತ ಸುತ್ತಾಡುವ ಪಾತ್ರ. ಒಂದು ಘಟನೆ ಸಂಭವಿಸಿದಾಗ, ಅವನು ಹೇಗೆಲ್ಲಾ ರಿಯಾಕ್ಟ್ ಮಾಡ್ತಾನೆ ಎಂಬುದು ಕಥೆ. ಎಲ್ಲರಿಗೂ ಇಷ್ಟವಾಗುವಂತಹ ಸಿನಿಮಾ ಇದಾಗಲಿದೆ’ ಎಂದರು ಸುನೀಲ್‌ರಾವ್.
ರಾಜ್ ಬಿ.ಶೆಟ್ಟಿ ಅವರಿಲ್ಲಿ ಕ್ಯಾಬ್ ಚಾಲಕರಾಗಿ ನಟಿಸಿದ್ದಾರಂತೆ. ಅವರೇ ಹೇಳುವಂತೆ, “ನಾನು “ಒಂದು ಮೊಟ್ಟೆಯ ಕಥೆ’ ನಂತರ ಕೇಳಿದ ಕಥೆ ಇದು. ಆದರೆ, ಇದಕ್ಕೂ ಮೊದಲು ಒಂದಷ್ಟು ಸಿನಿಮಾ ಬಂದು ಹೋದವು. ನಾನು ಇದಕ್ಕೆ ಆಡಿಷನ್ ಕೊಟ್ಟು ನಟಿಸಿದ್ದೇನೆ. ಇಲ್ಲಿ ಕಥೆಯೇ ಹೈಲೈಟ್. ಸಾವು ಮತ್ತು ಬದುಕಿನ ನಂಬಿಕೆಗಳನ್ನು ವಿಭಿನ್ನವಾಗಿ ತೋರಿಸುವ ಪ್ರಯತ್ನ ಇಲ್ಲಾಗಿದೆ’ ಎಂದರು ಅವರು.
ಸಂಯುಕ್ತಾ ಹೆಗ್ಡೆ ಚಿತ್ರದಲ್ಲಿ ಸದಾ ಖುಷಿಯಾಗಿರುವ ಹುಡುಗಿಯ ಪಾತ್ರ ನಿರ್ವಹಿಸಿದ್ದಾರಂತೆ. “ಹೀರೋ ಲೈಫಲ್ಲಿ ಎಂಟ್ರಿಯಾಗಿ, ಅವರನ್ನು ಖುಷಿ ಯಾಗಿರಿಸುವ ಹುಡುಗಿ ನಾನು. ಸಿಂಧು ಎಂಬ ಪಾತ್ರ ಮೂಲಕ ಚಿಕ್ಕ ಮಕ್ಕಳಿಗೆ ಕ್ರಿಕೆಟ್ ತರಬೇತಿ ಕೊಡುವ ಪಾತ್ರ ಮಾಡಿ ದ್ದೇನೆ’ ಎಂಬುದು ಸಂಯುಕ್ತಾ ಹೆಗ್ಡೆ ಮಾತು. ಧೀರೇಂದ್ರ ಡಾಸ್ ಚಿತ್ರದ ಆರು ಹಾಡುಗಳಿಗೆ ಸಂಗೀತ ಸಂಯೋಜಿಸಿದ್ದಾರೆ. ಜಯಂತ್ ಕಾಯ್ಕಿಣಿ, ಧನಂಜಯ್ ರಂಜನ್, ಶರತ್ ಭಗವಾನ್ ಸಾಹಿತ್ಯವಿದೆ. ವಿಜಯ ಪ್ರಕಾಶ್, ವರಿಜಾಶ್ರೀ, ವೇಣುಗೋಪಾಲ್, ಸಿದ್ಧಾರ್ಥ್, ಬೆಲ್ಮನು ಚೈತ್ರಾ, ಸುನಿಲ್‌ರಾವ್ ಇತರರು ಹಾಡಿದ್ದಾರೆ. ಪ್ರಯಾಗ್ ಮುಕುಂದನ್ ಛಾಯಾಗ್ರಹಣವಿದೆ. ಬಿ.ಅಜಿತ್ ಕುಮಾರ್ ಸಂಕಲನ ಮಾಡಿದ್ದಾರೆ. ಚಿತ್ರದಲ್ಲಿ ಸುಧಾರಾಣಿ, ಅಚ್ಯುತ್ ಕುಮಾರ್, ಹಿತಾ ಚಂದ್ರಶೇಖರ್, ನಾಗೇಂದ್ರ ಶಾ,ಅರುಣ ಬಾಲರಾಜ್ ಇದ್ದಾರೆ.