ಬೆಂಗಳೂರು: ಯು ಟ್ಯೂಬ್ ಹಾಗೂ ಖಾಸಗಿ ವಾಹಿನಿಗಳಲ್ಲಿ ಬರುವ ಕ್ರೈಂ ಕಾರ್ಯಕ್ರಮಗಳಿಂದ ಪ್ರಭಾವಿತನಾಗಿ ಹಣವಂತರ ಮನೆಗಳಿಗೆ ಬಾಂಬ್ ಬೆದರಿಕೆ ಪತ್ರಗಳನ್ನು ರವಾನಿಸಿ ವಸೂಲಿಗೆ ಮುಂದಾಗಿದ್ದ ಸ್ನಾತಕೋತ್ತರ ಪದವಿಧರನೊಬ್ಬ ಎಚ್‌ಎಸ್‌ಆರ್ ಲೇಔಟ್ ಪೊಲೀಸರ ಅತಿಥಿಯಾಗಿದ್ದಾನೆ. ಆಂಧ್ರಪ್ರದೇಶ ಮೂಲದ ದೇವೇಂದ್ರ ಕುಮಾರ್ (24) ಬಂಧಿತ. ಕಿರಣ್ ಮತ್ತು ನಿವೃತ್ತಿ ಉದ್ಯೋಗಿ ಈಶ್ವರ್ ಭಟ್ ಎಂಬವರು ನೀಡಿದ ದೂರಿನ ಮೇರೆಗೆ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.
ಆಂಧ್ರದ ಖಾಸಗಿ ಕಾಲೇಜಿನಲ್ಲಿ ಎಂಸಿಎ ಸ್ನಾತಕೋತ್ತರ ಪದವಿ ಪಡೆದಿರುವ ಆರೋಪಿ ಉದ್ಯೋಗ ಅರಸಿ ನಗರಕ್ಕೆ ಬಂದಿದ್ದ. ನಾನಾ ಕಡೆಗಳಲ್ಲಿ ಹುಡುಕಾಟ ನಡೆಸಿದರೂ ಕೆಲಸ ಸಿಕ್ಕಿರಲಿಲ್ಲ. ಕೊನೆಗೆ ಹೆಬ್ಟಾಳದಲ್ಲಿರುವ ಕಾಲ್‌ಸೆಂಟರ್‌ವೊಂದರಲ್ಲಿ 10 ಸಾವಿರ ರೂ. ಸಂಬಳಕ್ಕೆ ಸೇರಿದ್ದ. ಆದರೆ, ತನ್ನ ಓದಿಗೆ ತಕ್ಕಂತೆ ಕೆಲಸಕ್ಕೆ ಸಿಗದಕ್ಕೆ ಬೇಸರಗೊಂಡಿದ್ದ ಆರೋಪಿ, ಬರುವ ಹಣದಲ್ಲಿ ಪೋಷಕರನ್ನು ನೋಡಿಕೊಳ್ಳಲು ಆಗುತ್ತಿಲ್ಲವೆಂದು ನೊಂದಿದ್ದ.
ಈ ಮಧ್ಯೆ ಕೆಲಸ ತೊರೆದು ಊರಿಗೆ ಹೋಗಿದ್ದ ದೇವೇಂದ್ರ, ಕೆಲ ದಿನಗಳ ಬಳಿಕ ಮತ್ತೆ ಬೆಂಗಳೂರಿಗೆ ಬಂದು ಕಾರು ಖರೀದಿ ಮಾಡಿ ಊಬರ್ ಸಂಸ್ಥೆ ಜತೆ ಒಪ್ಪಂದ ಮಾಡಿಕೊಂಡು ಜೀವನ ನಡೆಸುತ್ತಿದ್ದ. ಈ ಕೆಲಸದಲ್ಲೂ ತೃಪ್ತಿಕಾಣದ ಆರೋಪಿ, ಹೊಸ ರೀತಿಯಲ್ಲಿ ಹಣ ಸಂಪಾದಿಸಲು ಮುಂದಾಗಿದ್ದ ಎಂದು ಪೊಲೀಸರು ಹೇಳಿದರು.
ಅಪರಾಧ ಕಾರ್ಯಕ್ರಮಗಳ ವೀಕ್ಷಣೆ: ಯುಟ್ಯೂಬ್ ನೋಡುವ ಹವ್ಯಾಸ ಹೊಂದಿದ್ದ ದೇವೇಂದ್ರ, ಇತ್ತೀಚೆಗೆ ಆಂಧ್ರ ಪ್ರದೇಶದಲ್ಲಿ ನಡೆದ ಅಪರಾಧ ಪ್ರಕರಣವನ್ನು ಯುಟ್ಯೂಬ್ ನೋಡಿದ್ದ. ಆರೋಪಿಯೊಬ್ಬ ಶ್ರೀಮಂತರ ಮನೆಗಳನ್ನು ಗುರುತಿಸಿ ಅಂತಹವರ ಮನೆ ಮುಂದೆ ಬೆದರಿಕೆ ಪತ್ರ ಎಸೆಯುತ್ತಿದ್ದ. ಆ ಪತ್ರದಲ್ಲಿ ನಾನು ಕೇಳಿದಷ್ಟು ಹಣ ನೀಡದಿದ್ದರೆ, ಮನೆಗೆ ಬಾಂಬ್ ಹಾಕುವುದಾಗಿ ಬೆದರಿಸುತ್ತಿದ್ದ.
ಆತಂಕಗೊಂಡ ಶ್ರೀಮಂತರು ಆರೋಪಿ ನೀಡಿದ್ದ ಇ-ಮೇಲ್ ವಿಳಾಸದ ಮೂಲಕ ಆರೋಪಿಯನ್ನು ಸಂಪರ್ಕ ಮಾಡಿ, ಆರೋಪಿ ಕೊಟ್ಟ ಖಾತೆಗೆ ಹಣ ಜಮೆ ಮಾಡುತ್ತಿದ್ದರು. ಈ ಸ್ಟೋರಿಯಿಂದ ಪ್ರಭಾವಿತನಾದ ಆರೋಪಿ, ನ 1ರಂದು ಬೆಳಗ್ಗೆ ಎಚ್‌ಎಸ್‌ಆರ್ ಲೇಔಟ್‌ನಲ್ಲಿರುವ ಈಶ್ವರ್ ಭಟ್ ಹಾಗೂ ಕಿರಣ್ ಅವರ ಮನೆಗಳ ಆವರಣದೊಳಗೆ ನಾಲ್ಕು ಪುಟಗಳ ಪತ್ರಗಳನ್ನು ಎಸೆದು ಹೋಗಿದ್ದ. ಅದನ್ನು ಗಮನಿಸಿದ ಭದ್ರತಾ ಸಿಬ್ಬಂದಿ ಮನೆ ಮಾಲೀಕರಿಗೆ ನೀಡಿದ್ದರು.
ಮಧ್ಯಾಹ್ನ 12.30ರೊಳಗಾಗಿ ಐದು ಲಕ್ಷ ರೂ. ನೀಡದಿದ್ದರೆ, ನಿಮ್ಮ ಮನೆಯಲ್ಲಿ ಬಾಂಬ್ ಸ್ಫೋಟಿಸುವುದಾಗಿ ಬೆದರಿಕೆ ಹಾಕಿದ್ದ. ಕೂಡಲೇ ಈಶ್ವರ್‌ಭಟ್ ಮತ್ತು ಕಿರಣ್ ಪೊಲೀಸರಿಗೆ ವಿಷಯ ತಿಳಿಸಿದ್ದರು. ಕೂಡಲೇ ಕಾರ್ಯ ಪ್ರವೃತ್ತರಾದ ಪೊಲೀಸರು ದೂರುದಾರರ ಸೋಗಿನಲ್ಲಿ ಈ ಮೇಲ್ ಮೂಲಕ ಆರೋಪಿಗೆ ಹಣ ನೀಡುವುದಾಗಿ ಸಂದೇಶ ಕಳುಹಿಸಿದ್ದರು. ಬಳಿಕ ಆರೋಪಿ ಕೊಟ್ಟ ಬ್ಯಾಂಕ್ ಖಾತೆಯ ಆಧರಿಸಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.