Advertisement

ನಿರ್ವಹಣೆಯಿಲ್ಲದೆ ಸೊರಗಿದ ರಂಗಮಂದಿರ

05:01 PM Nov 12, 2019 | Team Udayavani |

ಮಾಗಡಿ: ಕೆಂಪೇಗೌಡರ ತವರೂರು ಹಾಗೂ ಕಲಾರಂಗ ಸಜ್ಜಿಕೆ ಸಾಂಸ್ಕೃತಿಕ ತೊಟ್ಟಿಲು ಎಂದೆಲ್ಲ ಕರೆಯಿಸಿಕೊಳ್ಳುವ ಮಾಗಡಿ, ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಕಷ್ಟು ಪ್ರತಿಭೆಗಳ ಬೆಳವಣಿಗೆಗೆ ಕಾರಣವಾಗಿದೆ. ಆದರೆ ಪಟ್ಟಣದ ಹೃದಯಭಾಗದಲ್ಲಿರುವ ಕೆಂಪೇಗೌಡ ಬಯಲು ರಂಗ ಮಂದಿರದ ಸೂಕ್ತ ನಿರ್ವಹಣೆಯಿಲ್ಲದೆ, ಮೂಲ ಸೌಕರ್ಯಗಳ ಕೊರತೆ, ಶಿಥಿಲಗೊಂಡಿರುವ ಕಟ್ಟಡ, ಶುಚಿತ್ವವಿಲ್ಲದೆ ಪಾಳುಬಿದ್ದಿದೆ. ಆದರೂ ಸಂಬಂಧಿಸಿದವರು ರಂಗಮಂದಿರ ಅಭಿವೃದ್ಧಿಗೊಳಿಸಲು ಕ್ರಮಕೈಗೊಂಡಿಲ್ಲ ಎಂದು ರಂಗಕಲಾವಿದರು, ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Advertisement

ಹಿಂದೆ ಸರಿಯುವ ಆಯೋಜಕರು: ಕೆಂಪೇಗೌಡ ಬಯಲು ರಂಗ ಮಂದಿರದಲ್ಲಿ ಪ್ರತಿವರ್ಷ ಅನೇಕ ನಾಟಕ, ಸಾಂಸ್ಕೃತಿಕ ಕಾರ್ಯಕ್ರಮಗಳು, ಕಲಾವೇದಿಕೆ, ರಾಜಕೀಯ ಸಮಾರಂಭಗಳು ನಡೆಯುತ್ತವೆ. ಆದರೆ ಕಟ್ಟಡದಲ್ಲಿ ಮೂಲ ಸೌಕರ್ಯ ಗಳಿಲ್ಲದೆ ನರಳುತ್ತಿದ್ದು, ಸಾಂಸ್ಕೃತಿಕ ಕಾರ್ಯಕ್ರಮಗಳು ಒಂದೊಂದಾಗಿ ದೂರಾಗುತ್ತಿವೆ. ಜತೆಗೆ ಕಾರ್ಯಕ್ರಮ ಆಯೋಜಕರು, ಇಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸಲು ಆಸಕ್ತಿ ವಹಿಸುತ್ತಿಲ್ಲ. ಮೂಲ ಸೌಲಭ್ಯಗಳಿಲ್ಲ, ಸೂಕ್ತ ನಿರ್ವಹಣೆಯಿಲ್ಲ. ಸುತ್ತಲೂ ಗಲೀಜು ತುಂಬಿಕೊಂಡಿದೆ. ಚಾವಣಿಗಳ ಮೇಲೆ ಗಿಡಗಂಟಿಗಳು ಬೆಳೆದು ನಿಂತಿವೆ. ಇಲ್ಲಿ ಹೇಗೆ ಕಾರ್ಯಕ್ರಮ ನಡೆಸಲು ಸಾಧ್ಯ ಎಂದು ಆರೋಪಿಸಿ, ಆಯೋಜನೆಯಿಂದ ಹಿಂದೆ ಸರಿಯುತ್ತಾರೆ.

ಪುರಸಭೆ ಗಮನಹರಿಸಲಿ: ಪಟ್ಟಣದಲ್ಲಿ ಇರುವುದೊಂದೇ ಕೆಂಪೇಗೌಡ ಬಯಲು ರಂಗಮಂದಿರ. ಈ ರಂಗಮಂದಿರದ ರಕ್ಷಣೆ ಪುರಸಭೆ ಹೊಣೆ. ರಂಗಕಲಾವಿದರು, ರಂಗಕಲೆ ಉಳಿಯಬೇಕಾದರೆ ಪುರಸಭೆ ಅಧಿಕಾರಿಗಳು ಇತ್ತ ಗಮನ ಹರಿಸಿ, ಸೂಕ್ತ ಕ್ರಮಕೈಗೊಳ್ಳಬೇಕು. ಜನಪ್ರತಿನಿಧಿಗಳು ಎಚ್ಚೆತ್ತು ಶಿಥಿಲ ರಂಗಮಂದಿರವನ್ನು ಕೆಡವಿ, ನೂತನವಾಗಿ ಸುಸಜ್ಜಿತವಾದ ರಂಗಮಂದಿರ ನಿರ್ಮಾಣ ಮಾಡಬೇಕಿದೆ. ಈ ಮೂಲಕ ರಂಗಕಲೆ ಪ್ರೋತ್ಸಾಹಿಸಿ, ಜೀವಂತವಾಗಿ ಉಳಿಸಿ, ಬೆಳೆಸುವತ್ತ ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದು ಕಲಾವಿದರು, ರಂಗಕರ್ಮಿಗಳು ಒತ್ತಾಯಿಸಿದ್ದಾರೆ.

ಮನವಿ ಮಾಡಿದರೂ ಪ್ರಯೋಜನವಾಗಿಲ್ಲ: ಕೆಂಪೇಗೌಡ ಬಯಲು ರಂಗ ಮಂದಿರದ ಸೂಕ್ತನಿರ್ವಹಣೆ ಹಾಗೂ ಮೂಲಸೌಕರ್ಯಗಳ ಅಭಿವೃದ್ಧಿಗೆ ಹಲವು ಬಾರಿ ಮನವಿ ಮಾಡಿದರೂ ಪ್ರಯೋಜನ ವಾಗಿಲ್ಲ. ಮಳೆ ಬಂದರೆ ಕಟ್ಟಡದ ಚಾವಣಿ ಸೋರುತ್ತಿದ್ದು, ಕಟ್ಟಡ ಬಹುತೇಕ ಶಿಥಿವಾಗುವತ್ತ ಸಾಗಿದೆ. ಜತೆಗೆ ಸುತ್ತಲೂ ಕಸ, ತ್ಯಾಜ್ಯಗಳಿಂದ ತುಂಬಿದ್ದು, ನೈರ್ಮಲ್ಯದ ಕೊರತೆಯಿದೆ. ಜತೆಗೆ ಸುತ್ತಲು ವಾಹನ ಗಳನ್ನು ನಿಲ್ಲಿಸುತ್ತಾರೆ. ಈ ಸಂಬಂಧ ಹಲವು ಬಾರಿ ಮನವಿ ಮಾಡಿದರೂ ಪ್ರಯೋಜನ ವಾಗಿಲ್ಲ ಎಂದು ರಂಗಕರ್ಮಿಗಳು ಆರೋಪಿಸಿದ್ದಾರೆ.

ಪಟ್ಟಣದಲ್ಲಿರುವ ರಂಗಮಂದಿರದ ಕಟ್ಟಡ ಬಹುತೇಕ ಶಿಥಿಲವಾಗಿದೆ. ಈ ಕುರಿತು ಶಾಸಕರ ಗಮನಕ್ಕೆ ತರಲಾಗುವುದು. ನೂತನ ರಂಗಮಂದಿರ ನಿರ್ಮಾಣಕ್ಕೆ ಶಾಸಕರೊಂದಿಗೆ ಚರ್ಚಿಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಎಚ್‌.ಎನ್‌.ನಟರಾಜ್‌,  ಪುರಸಭೆ ಮುಖ್ಯಾಧಿಕಾರಿ

Advertisement

 

-ತಿರುಮಲೆ ಶ್ರೀನಿವಾಸ್‌

Advertisement

Udayavani is now on Telegram. Click here to join our channel and stay updated with the latest news.

Next