ನಭದಲ್ಲಿ ಹಾರುವ ವಿಮಾನದ ವೇಗಕ್ಕೂ ಮಂಗಳೂರಿನ ರಸ್ತೆಗಳಲ್ಲಿ ಚಲಿಸುವ ಬೆಳಗ್ಗಿನ ಸಿಟಿ ಬಸ್ ಗಳ ವೇಗಕ್ಕೂ ಯಾವುದೇ ವ್ಯತ್ಯಾಸ ಇಲ್ಲ. ಕಾಲೇಜಿಗೆ ಹೋಗಲು ಈ ಬಸ್ ಹತ್ತಿ ನಡು ಭಾಗದಲ್ಲಿ ಹೋಗಿ ನಿಂತು ಬ್ಯಾಗನ್ನು ಬೆನ್ನಿನಿಂದ ಇಳಿಸಿದರೆ ಒಂದು ಕ್ಷಣ ಮನ ನಿರಾಳವೆನಿಸುತ್ತದೆ. ಅಲ್ಲಿಗೆ ಕಂಡಕ್ಟರ್ ನ ದುಂಬು ಪೋಲೇ, ಪಿರ ಪೋಲೇ, ಬ್ಯಾಗ್ ದೆಪ್ಪುಲೆ ಎಂಬ ಮಾತಿನಿಂದ ಪಾರಾದಂತೆ ಎಂಬುದು ನನ್ನ ಲೆಕ್ಕಾಚಾರ. ನಾವು ಇಳಿಯಬೇಕಾದ ತಾಣ ಬಂದಾಗ ಬ್ಯಾಗ್ ಯಾರ ಕೈಯಲ್ಲಿದೆ ಎಂದು ಪತ್ತೆ ಮಾಡಿ ಇಳಿದರೆ ಅಲ್ಲಿಗೆ ಬೆಳಗ್ಗಿನ ಒಂದು ಯುದ್ದವನ್ನು ಜಯಿಸಿದಂತೆ.
ನಮ್ಮ ಮಂಗಳೂರಿನ ಬಸ್ಸುಗಳಲ್ಲಿ ಬೆಳಗ್ಗಿನ ವೇಳೆ ಸೀಟು ಸಿಗುವುದಿಲ್ಲ ಎಂಬ ಬಲವಾದ ನಂಬಿಕೆ ಇರುವುದರಿಂದ ಬಸ್ ಹತ್ತುವಾಗಲೇ ದೇವೆರೇ ಉಂತ್ಯೆರೆ ಒಂಜಿ ಜಾಗ ಕೊರ್ಲೆ ಎಂಬ ಪ್ರಾರ್ಥನೆಯೊಂದಿಗೆ ಬಸ್ಸು ಹತ್ತುವುದರಿಂದ ಹಿಡಿದು, ನಿಂತು ಸಾಕಾದಾಗ ನನಗೊಂದು ಸೀಟು ಸಿಗಲಿ, ನಿಲ್ದಾಣ ಬರುವಾಗ ನಾನೊಮ್ಮೆ ಬೇಗ ಇಳಿದರಾಯ್ತು ಎಂಬ ಭಾವದವರೆಗೂ ನಾವೆಲ್ಲರೂ ಸ್ವಾರ್ಥಿಗಳೇ. ಇನ್ನೂ ನಮ್ಮ ಸೌಜನ್ಯತೆಯೂ ಸಂಪೂರ್ಣವಾಗಿ ಮರೆಯಾಗುವುದು ಪ್ರಯಾಣದ ಆರಂಭ ಮತ್ತು ಅಂತ್ಯದಲ್ಲಿ.
ಬಸ್ಸಿನಲ್ಲಿ ಕುಳಿತವರಲ್ಲಿ ನನ್ನ ಬ್ಯಾಗನ್ನು ಹಿಡಿದುಕೊಳ್ಳುತ್ತೀರಾ ಎಂಬ ಸೌಜನ್ಯತೆಯ ಮಾತನ್ನು ಹೇಳದೇ ದಡಕ್ಕನೆ ಅವರ ಮಡಿಲಿಗೆ ಬ್ಯಾಗ್ ಇಡುತ್ತೇವೆ. ಎರಡು – ಮೂರು ಬ್ಯಾಗನ್ನು ಹಿಡಿದುಕೊಂಡವರ ಮಡಿಲಿಗೆ ಇನ್ನೊಂದು ಬ್ಯಾಗ್ ನೀಡುವಾಗಲಂತೂ ಬ್ಯಾಗಿನ ಭಾರವನ್ನಾದರೂ ಅಂದಾಜಿಗೆ ಹೇಳಬಹುದು. ಆದರೆ ಅವರ ಮನದ ಭಾರ ಹೇಳತೀರದು. ಮತ್ತೂಮ್ಮೆ ಕಟುಕರಂತೆ ವರ್ತಿಸುವುದು ನಮ್ಮ ಪ್ರಯಾಣದಲ್ಲಿ ಬೆನ್ನಿನ ಭಾರವನ್ನಿಳಿಸಿದ ವ್ಯಕ್ತಿಗೆ ಥ್ಯಾಂಕ್ಸ್ ಬಿಡಿ ನಗುಮುಖದಲ್ಲೂ ವಂದಿಸದೆ ಬ್ಯಾಗನ್ನು ಎಳೆದುಕೊಂಡು ಬಸ್ಸು ಇಳಿಯುವಾಗ.
ಬ್ಯಾಗ್ ಹಿಡಿದುಕೊಂಡ ವ್ಯಕ್ತಿ ನಿಮ್ಮಿಂದ ಥ್ಯಾಂಕ್ಸ್ ಅಪೇಕ್ಷಿಸುತ್ತಾನೋ ಇಲ್ಲವೋ ಎರಡನೇ ವಿಷಯ. ಆದರೆ ನಾವು ಸೌಜನ್ಯತೆಯಿಂದ ನಡೆದುಕೊಳ್ಳುವ ಪರಿ ಮಾತ್ರ ಖಂಡಿತವಾಗಿಯೂ ನಮ್ಮ ವ್ಯಕ್ತಿತ್ವವನ್ನು ಪ್ರತಿಬಿಂಭಿಸುತ್ತದೆ. ಬೆಳಗ್ಗೆ ಸರಿಯಾದ ಸಮಯಕ್ಕೆ ಕಾಲೇಜು-ಆಫೀಸಿಗೆ ತಲುಪುವ ಅವಸರ, ಇಪ್ಪತ್ತರ ವಯಸ್ಸಲ್ಲೇ ಅಂಟಿಕೊಂಡ ಅರವತ್ತರ ಮರೆವು, ಬ್ಯಾಗನ್ನು ನೀಡುವಾಗ ಬಾರದ ಥ್ಯಾಂಕ್ಸ್ ಹೇಳಲು ಬರುವ ಅಪರಿಚಿತ ಭಾವ.
ಇಂತಹ ದಿನನಿತ್ಯದ ಸಣ್ಣ ಪುಟ್ಟ ವಿಚಾರಗಳಲ್ಲಿ ನಾವು ಸೋಲುತ್ತಿರುವುದರಿಂದಲೇ ದಿನದಿಂದ ದಿನಕ್ಕೆ ನಮ್ಮ ಸಮಾಜದಲ್ಲಿ ಮಾನವೀಯ ಸಂಬಂಧಗಳು, ಮಾನವೀಯ ಗುಣಗಳು ಕಣ್ಮರೆಯಾಗಿ ನಾವು ಮನುಷ್ಯ ಪ್ರಪಂಚದಿಂದ ರಾಕ್ಷಸ ಪ್ರಪಂಚಕ್ಕೆ ಪಯಣಿಸುತ್ತಿದ್ದೆವೆಯೇ ಎಂಬ ಭಾವ ಭಾಸವಾಗುತ್ತಿದೆ.
-ವಿಧಿಶ್ರೀ
ಮಂಗಳೂರು ವಿವಿ