ಕೆ.ಆರ್.ನಗರ: ಸಾಲಿಗ್ರಾಮ ಮತ್ತು ಕೆ.ಆರ್ .ನಗರ ತಾಲೂಕಾದ್ಯಂತ ವಾರದಿಂದ ಎಡೆಬಿಡದೆ ಸುರಿಯುತ್ತಿರುವ ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿದೆ. ಕೆರೆ ಕಟ್ಟೆ, ಜಮೀನಿನಲ್ಲಿ ನೀರು ತುಂಬಿ ಹರಿಯುತ್ತಿದ್ದು, ಎತ್ತ ನೋಡಿದರೂ ಜಲ ದರ್ಶನವಾಗುತ್ತಿದೆ.
ಬಿಡುವಿಲ್ಲದೆ ಸುರಿಯುತ್ತಿರುವ ತುಂತುರು ಸಹಿತ ಜಡಿ ಮಳೆಗೆ ಮನೆಗಳ ಗೋಡೆ ಕುಸಿದು, ಸಾವಿರಾರು ಮರಗಳು ನೆಲಕ್ಕೆ ಉರುಳಿವೆ. ಇದರಿಂದ ಗ್ರಾಮಾಂತರ ಪ್ರದೇಶದಲ್ಲಿ ಕರೆಂಟ್ ಕೈಕೊಟ್ಟು ಜನತೆ ಕತ್ತಲೆಯಲ್ಲಿ ದಿನ ಕಳೆಯುವಂತಾಗಿದೆ. ಹೊಲದಲ್ಲಿ ನೀರು ನಿಂತು ಬೆಳೆ ನಷ್ಟವಾಗಿದೆ.
ಪಟ್ಟಣ ಹೊರತುಪಡಿಸಿ, ಗ್ರಾಮೀಣ ರಸ್ತೆಗಳ ಸ್ಥಿತಿ ಹೇಳತೀರದಾಗಿದೆ. ರಸ್ತೆಗಳಲ್ಲಿರುವ ಮೊಣಕಾಲುದ್ದ ಗುಂಡಿಯಲ್ಲಿ ನೀರು ನಿಂತು ವಾಹನ ಸವಾರರಿಗೆ ರಸ್ತೆ ಯಾವುದು, ಗುಂಡಿ ಯಾವುದು ತಿಳಿಯದೇ ಪರದಾಡುವಂತಾಗಿದೆ. ಕಾವೇರಿ ನದಿ ತೀರದಲ್ಲಿರುವ ಹೊಲ ಗದ್ದೆಗಳು ಜಲಾವೃತವಾಗಿವೆ.
ತಾತ್ಕಾಲಿಕ ಸೇತುವೆ ಕುಸಿತ: ತಂಬಾಕು, ಟೊಮೆಟೋ, ತರಕಾರಿ, ಭತ್ತದ ಬೆಳೆ ಮಳೆಯ ಆರ್ಭಟಕ್ಕೆ ನಲುಗಿದೆ. ರೈತರು ಸಾಕಷ್ಟು ನಷ್ಟ ಅನುಭಸುವಂತಾಗಿದೆ. ಹಾಸನ – ಮೈಸೂರು ರಸ್ತೆಯ ಅರಕೆರೆ ಗ್ರಾಮದ ಬಳಿ ಮುಖ್ಯರಸ್ತೆಯ ಸೇತುವೆ ಮುರಿದುಬಿದ್ದಿದ್ದರಿಂದ ರಸ್ತೆ ಪಕ್ಕದಲ್ಲೇ ನಿರ್ಮಿಸಿದ್ದ ತಾತ್ಕಾಲಿಕ ಸೇತುವೆ ಕುಸಿದು ಸಂಚಾರಕ್ಕೆ ಅಡಚಣೆ ಆಗಿದೆ.
ಜೆಸಿಬಿ ಯಂತ್ರ ನೀರಿನಲ್ಲಿ ಮುಳುಗಿದೆ: ಭಾರೀ ಮಳೆಗೆ ರಾತ್ರೋರಾತ್ರಿ ಕಾಲುವೆಯಲ್ಲಿ ನೀರು ಹೆಚ್ಚಿನ ಪ್ರಮಾಣದಲ್ಲಿ ನುಗ್ಗಿದ ಪರಿಣಾಮ ಕಾಮಗಾರಿ ನಡೆಸುತ್ತಿದ್ದ ಜೆಸಿಬಿ ಯಂತ್ರ ನೀರಿನಲ್ಲಿ ಮುಳುಗಿದೆ. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಗುತ್ತಿಗೆದಾರ ಚಂದ್ರೇಗೌಡ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ವಿಚಾರ ತಿಳಿಸಿದ್ದಾರೆ. ಸ್ಥಳಕ್ಕೆ ಆಗಮಿಸಿದ ನೀರಾವರಿ ಇಲಾಖೆ ಎಕ್ಸಿಕ್ಯೂಟಿವ್ ಎಂಜಿನಿಯರ್ ಈರಣ್ಣ, ಎಇಇ ಗುರುರಾಜ್, ರಾಷ್ಟ್ರೀಯ ಹೆದ್ದಾರಿ ಇಲಾಖೆ
ಅಧಿಕಾರಿಗಳು ರಸ್ತೆಗೆ ಅಡ್ಡಲಾಗಿ ಮಣ್ಣು ಸುರಿಸಿ, ವಾಹನಗಳು ಬೇರೆ ಮಾರ್ಗದಲ್ಲಿ ಸಂಚರಿಸಲು ಅನುಕೂಲ ಮಾಡಿದರು.
ಸಂಚಾರಕ್ಕೆ ಬದಲಿ ಮಾರ್ಗ: ಮೈಸೂರಿನಿಂದ ಹಾಸನಕ್ಕೆ ತೆರಳುವ ವಾಹನಗಳು ಪಟ್ಟಣದಿಂದ ಡೋರ್ನಹಳ್ಳಿ, ದೊಡ್ಡೇಕೊಪ್ಪಲು ಮಾರ್ಗವಾಗಿ ಹಾಗೂ ಕೆ.ಆರ್.ನಗರದಿಂದ ಮೈಸೂರಿಗೆ ತೆರಳುವ ವಾಹನಗಳು ಮುಳ್ಳೂರು, ದೊಡ್ಡೇಕೊಪ್ಪಲು ಮಾರ್ಗವಾಗಿ ಸಂಚಾರ ಮಾಡಲು ಸೂಚಿಸಲಾಗಿದೆ.