Advertisement

ಮೀನುಗಾರಿಕೆ ತಾತ್ಕಾಲಿಕ ಸ್ಥಗಿತ, ದಡದತ್ತ ವಾಪಾಸಾಗುತ್ತಿವೆ ಬೋಟುಗಳು

09:52 AM Mar 28, 2020 | mahesh |

ಮಲ್ಪೆ: ಕೋವಿಡ್-19 ಹಾಮಾರಿ ಇದೀಗ ಕರಾವಳಿಯ ಮೀನುಗಾರಿಕೆ ಉದ್ಯಮ ಕ್ಷೇತ್ರವನ್ನು ಕೂಡ ತತ್ತರಿಸುವಂತೆ ಮಾಡಿದೆ. ಕೊರೊನಾ ಭೀತಿಯ ಕಾರಣ ಹೆಚ್ಚು ಜನರು ಸೇರುವ ಸ್ಥಳಗಳಲ್ಲಿ ಕಟ್ಟೆಚ್ಚರ ವಹಿಸಲು ಜಿಲ್ಲಾಧಿಕಾರಿಗಳ ಆದೇಶದಂತೆ ಮೀನುಗಾರಿಕೆಯನ್ನು ತಾತ್ಕಾ ಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಈ ನಿಟ್ಟಿನಲ್ಲಿ ಮಲ್ಪೆ ಬಂದರಿನಲ್ಲಿ ಈಗಾಗಲೇ ಮೀನುಗಾರಿಕೆ ಮುಗಿಸಿ ಬಂದ ಬೋಟುಗಳು ವಾಪಾಸು ಮತ್ತೆ ಮೀನುಗಾರಿಕೆಗೆ ತೆರಳುತ್ತಿಲ್ಲ. ಮೀನುಗಾರಿಕೆ ಮುಗಿಸಿ ಬಂದ ಬೋಟುಗಳು ಮೀನು ಬಂದರಿನಲ್ಲಿ ಖಾಲಿ ಮಾಡಲು ಅವಕಾಶವನ್ನು ನೀಡಲಾಗಿದೆ. ಶೇ. 55ರಷ್ಟು ಬೋಟುಗಳು ಈಗಾಗಲೇ ದಡದಲ್ಲಿ ಲಂಗರು ಹಾಕಿದ್ದು ಮುಂದಿನ ಎರಡು ಮೂರು ದಿನಗಳಲ್ಲಿ ಬಹುತೇಕ ಎಲ್ಲ ಬೋಟುಗಳು ದಡ ಸೇರಲಿವೆ. ಜಿಲ್ಲಾಧಿಕಾರಿಗಳು ಮುಂದಿನ ಆದೇಶ ನೀಡುವವರೆಗೆ ರಜೆ ಮುಂದುವರಿಯುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

Advertisement

ಮೀನಿನ ಮೌಲ್ಯವೂ ಕುಸಿತ
ಮೀನಿನ ಕ್ಷಾಮದಿಂದ ಸಂಕಷ್ಟಕ್ಕೀಡಾಗಿರುವ ಮೀನುಗಾರಿಕೆಗೆ ಕೊರೊನಾ ಮತ್ತಷ್ಟು ಸಂಕಷ್ಟವನ್ನು ತಂದೊಡ್ಡಿದೆ. ಕೆಲವು ದಿನಗಳಿಂದ ಹಲವು ದೇಶ ಮತ್ತು ರಾಜ್ಯಗಳಿಗೆ ಮೀನು ರಫ್ತುಗೊಳ್ಳದ ಕಾರಣ ಮೀನಿನ ಬೇಡಿಕೆ ಕುಸಿದು ಮಾರುಕಟ್ಟೆ ಮೌಲ್ಯಕ್ಕಿಂತ ಕಡಿಮೆ ಬೆಲೆಗೆ ಮಾರಾಟ ಮಾಡಬೇಕಾದ ಪರಿಸ್ಥಿತಿ ಎದುರಾಗಿದೆ.

ಇತ್ತ ಫಿಶ್‌ಮಿಲ್‌ ಮತ್ತು ಕಟ್ಟಿಂಗ್‌ ಶೆಡ್‌ಗಳು ಕೂಡ ಬಂದ್‌ ಮಾಡಲು ನಿರ್ಧರಿಸಿದ್ದು ಮೀನುಗಾರರು ತಂದ ಯಾವುದೇ ಮೀನಿಗೆ ದರ ಸಿಗುತ್ತಿಲ್ಲ. ಪ್ರಮುಖವಾಗಿ ಮಲ್ಪೆ ಬಂದರಿನಿಂದ ಕೇರಳ ಮತ್ತು ತಮಿಳುನಾಡು ಮಾರುಕಟ್ಟೆಗೆ ಅಪಾರ ಪ್ರಮಾಣದ ಮೀನನ್ನು ರಫ್ತು ಮಾಡಲಾಗುತ್ತಿದೆ. ಕೇರಳ ಮಾರುಕಟ್ಟೆ ಬಂದ್‌ ಆಗಿದ್ದರಿಂದ ಇಲ್ಲಿನ ಮೀನಿನ ಬೇಡಿಕೆ ಸಂಪೂರ್ಣ ಕುಸಿದಿದೆ. ಕರಾವಳಿಯ ಮಲ್ಪೆ, ಮಂಗಳೂರು ಮತ್ತು ಉತ್ತರ ಕನ್ನಡ ಬಂದರುಗಳಿಂದ ಅಪಾರ ಪ್ರಮಾಣದ ವಿವಿಧ ಜಾತಿಯ ಮೀನುಗಳು ಚೀನ, ಅಮೆರಿಕಾ, ಜಪಾನ್‌, ಯುರೋಪ್‌ ರಾಷ್ಟ್ರಗಳಿಗೆ ರಫ್ತಾಗುತ್ತಿದೆ. ನಮ್ಮ ಕರಾವಳಿಯ ಮೀನುಗಳಿಗೆ ಈ ದೇಶದಲ್ಲಿ ಭಾರೀ ಬೇಡಿಕೆಯೂ ಇದೆ. ರಾಜ್ಯದ ಕರಾವಳಿಯಲ್ಲಿ ಸಿಗುವ ಬೊಂಡಾಸ, ಕಪ್ಪೆ ಬೊಂಡಾಸ, ಪಾಂಪ್ಲೆಟ್‌, ರಿಬ್ಬನ್‌ ಫಿಶ್‌, ಸಿಗಡಿ, ರಾಣಿ ಮೀನು, ಅರಣೆ ಸೇರಿದಂತೆ ಹಲವಾರು ಜಾತಿಯ ಮೀನುಗಳಿಗೆ ಈ ದೇಶದಲ್ಲಿ ದೊಡ್ಡ ಮಟ್ಟದ ಮಾರುಕಟ್ಟೆ ಇದೆ ಆದರೆ ಪ್ರಸ್ತುತ ಇಲ್ಲಿಗೂ ಸರಿಯಾದ ಪ್ರಮಾಣದಲ್ಲಿ ರಫ್ತು ಆಗುತ್ತಿಲ್ಲ.

ಫಿಶ್‌ಮಿಲ್‌ ಘಟಕ ಸ್ಥಗಿತ
ಮೀನುಗಾರಿಕೆಗೆ ಸಂಬಂಧಿಸಿದಂತೆ ಫಿಶ್‌ಮಿಲ್‌ ಘಟಕಗಳು, ಕಟ್ಟಿಂಗ್‌ ಶೆಡ್‌ ತಮ್ಮ ಘಟಕವನ್ನು ಸ್ಥಗಿತಗೊಳಿಸಲು ನಿರ್ಧರಿಸಿವೆ. ಶೇ.50ರಷ್ಟು ಬೋಟುಗಳು ಸಮುದ್ರದಲ್ಲಿದ್ದು ಅವು ಇನ್ನಷ್ಟೇ ದಕ್ಕೆಗೆ ಆಗಮಿಸಲಿದ್ದು ಈ ಹಿನ್ನೆಲೆಯಲ್ಲಿ ಫಿಶ್‌ಮಿಲ್‌ ಘಟಕಗಳು ಮಾ. 25ರವರೆಗೆ ಮಾತ್ರ ಚಟುವಟಿಕೆಯನ್ನು ನಡೆಸಲಿದ್ದು ಬಳಿಕ ಬಂದ್‌ ಆಗಲಿವೆ.

ಮೀನಿನ ಬೇಡಿಕೆ ಕುಸಿದಿದ್ದರಿಂದ ತಂದ ಮೀನಿಗೆ ಸೂಕ್ತ ದರ ಸಿಗದೆ ನಷ್ಟ ಉಂಟಾಗುತ್ತಿದೆ. ಬಂದರಿನಲ್ಲಿ ನಿತ್ಯ ಸಾವಿರಾರು ಸಂಖ್ಯೆಯಲ್ಲಿ ಜನ ಸೇರುತ್ತಾರೆ. ಕೋವಿಡ್-19ದ ಭೀತಿ ಇರುವುದರಿಂದ ಈ ಸಮಯದಲ್ಲಿ ಬಂದರಿನಲ್ಲಿ ನಡೆಯುವ ಮೀನುಗಾರಿಕೆ ಚಟುವಟಿಕೆ ಅಪಾಯಕಾರಿ, ಜಿಲ್ಲಾಧಿಕಾರಿಗಳ ಸೂಚನೆಯಂತೆ ಮೀನುಗಾರಿಕೆಯನ್ನು ಸ್ಥಗಿತಗೊಳಿಸಲು ನಿರ್ಧರಿಸಿದ್ದೇವೆ.
-ಕೃಷ್ಣ ಎಸ್‌. ಸುವರ್ಣ, ಅಧ್ಯಕ್ಷರು, ಮಲ್ಪೆ ಮೀನುಗಾರರ ಸಂಘ

Advertisement

ಡೀಸೆಲ್‌ ಪೂರೈಕೆ ಸ್ಥಗಿತ
ಕೊರೊನಾ ನಿಯಂತ್ರಣದ ಸಲುವಾಗಿ ಈಗಾಗಲೇ ಮೀನುಗಾರಿಕೆ ಮುಗಿಸಿ ಬಂದ ಬೋಟುಗಳು ಮತ್ತೆ ಮೀನುಗಾರಿಕೆ ತೆರಳದಂತೆ ಜಿಲ್ಲಾಧಿಕಾರಿಗಳು ಆದೇಶ ನೀಡಿದ್ದಾರೆ. ಸೋಮವಾರದಿಂದ ಬೋಟುಗಳಿಗೆ ಡಿಸೇಲ್‌ ಪೂರೈಕೆಯನ್ನು ಸ್ಥಗಿತಗೊಳಿಸಲಾಗಿದೆ. ಲಾರಿ ಮೂಲಕ ಬರುವ ಹೊರರಾಜ್ಯದ ಮೀನು ಮಾರಾಟಕ್ಕೂ ನಿರ್ಬಂಧ ಹೇರಲಾಗಿದೆ.
-ಶಿವಕುಮಾರ್‌, ಸಹಾಯಕ ನಿರ್ದೇಶಕರು, ಮೀನುಗಾರಿಕೆ ಇಲಾಖೆ

Advertisement

Udayavani is now on Telegram. Click here to join our channel and stay updated with the latest news.

Next