Advertisement

ದೇರಳಕಟ್ಟೆ: ಯುವತಿಗೆ ಇರಿದು ಆತ್ಮಹತ್ಯೆಗೆತ್ನಿಸಿದ ಭಗ್ನಪ್ರೇಮಿ

10:24 AM Jun 29, 2019 | keerthan |

ಉಳ್ಳಾಲ: ವಿದ್ಯಾರ್ಥಿನಿಗೆ ಚೂರಿಯಿಂದ ಇರಿದ ಭಗ್ನ ಪ್ರೇಮಿಯೊಬ್ಬ ತಾನೂ ಕತ್ತು ಕೊಯ್ದು ಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ ದೇರಳಕಟ್ಟೆ ಸಮೀಪದ ಬಗಂಬಿಲ ಬಳಿ ಸಂಭವಿಸಿದೆ. ವಿದ್ಯಾರ್ಥಿನಿ ಸ್ಥಿತಿ ಗಂಭೀರವಾಗಿದ್ದು, ಯುವಕ ಅಪಾಯದಿಂದ ಪಾರಾಗಿದ್ದಾನೆ.

Advertisement

ದೇರಳಕಟ್ಟೆ ಬಗಂಬಿಲ ನಿವಾಸಿ, ಕಾರ್ಕಳದ ಖಾಸಗಿ ಕಾಲೇಜಿನ ವಿದ್ಯಾರ್ಥಿನಿ ದೀಕ್ಷಾ (20) ಇರಿತಕ್ಕೊಳಗಾದವರು. ಶಕ್ತಿನಗರ ರಾಮಶಕ್ತಿ ಮಿಷನ್‌ ಸಮೀಪದ ನಿವಾಸಿ ಸುಶಾಂತ್‌ (28) ಆರೋಪಿ. ಸಂಜೆಯ ವೇಳೆ ಯುವತಿ ರಸ್ತೆಯಲ್ಲಿ ಮನೆ ಕಡೆ ನಡೆದುಕೊಂಡು ಹೋಗುತ್ತಿದ್ದಾಗ ಈ ಘಟನೆ ನಡೆದಿದೆ.

ದೀಕ್ಷಾ ಕಾರ್ಕಳದ ಕಾಲೇಜಿನಲ್ಲಿ ಎಂಬಿಎ ಪದವಿ ವ್ಯಾಸಂಗ ನಡೆಸುತ್ತಿದ್ದು, ಎಂದಿನಂತೆ ದೇರಳಕಟ್ಟೆ ಕ್ಷೇಮ ನಿಲ್ದಾಣದಲ್ಲಿ ಬಸ್ಸಿನಿಂದ ಇಳಿದು ಆಸ್ಪತ್ರೆಯ ಹಿಂಬದಿಯಲ್ಲಿರುವ ಮನೆಗೆ ನಡೆದುಕೊಂಡು ಹೋಗುತ್ತಿದ್ದರು. ಈ ಸಂದರ್ಭ ಹಿಂದಿನಿಂದ ಸ್ಕೂಟರ್‌ನಲ್ಲಿ ಬಂದ ಸುಶಾಂತ್‌ ಚೂರಿಯಿಂದ ಇರಿದಿದ್ದು, ಸ್ಥಳೀಯರು ತಡೆಯಲು ಬಂದಾಗ ತಾನೂ ಕತ್ತು ಕೊಯ್ದು ಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ,

12 ಬಾರಿ ಇರಿದಿದ್ದ
ಸುಶಾಂತ್‌ ಸುಮಾರು 5 ಬಾರಿ ಇರಿದಾಗ ಯುವ ತಿಯು ರಸ್ತೆಯಲ್ಲೇ ಕುಸಿದು ಬಿದ್ದಳು. ಈ ಸಂದರ್ಭ ಆಸ್ಪತ್ರೆಯ ಹಿಂಬದಿಯಲ್ಲಿ ನಿಂತಿದ್ದ ಜನರು ಮತ್ತು ಆಸ್ಪತ್ರೆ ಸಿಬಂದಿ ಬೊಬ್ಬೆ ಹಾಕಿದ್ದು, ಸ್ಥಳೀಯರು ಕಲ್ಲು ಮತ್ತು ದೊಣ್ಣೆ ಹಿಡಿದು ತಿವಿಯದಂತೆ ಬೊಬ್ಬೆ ಹಾಕಿದರು. ಆಗ ಆತನು ಜನರನ್ನು ಹತ್ತಿರ ಬರದಂತೆ ಚೂರಿ ತೋರಿಸಿ ಹೆದರಿಸಿದ್ದ. ಬಳಿಕ ಕುಸಿದು ಬಿದ್ದಿದ್ದ ದೀಕ್ಷಾಳಿಗೆ ಇರಿಯುವುದನ್ನು ಮುಂದುವರಿಸಿದ್ದ.

ಈ ಸಂದರ್ಭ ಆಸ್ಪತ್ರೆಯ ನರ್ಸ್‌ ಒಬ್ಬರು ಯುವಕನನ್ನು ಎಳೆದಾಡಿದ್ದು, ಈ ಸಂದರ್ಭದಲ್ಲಿ ಕತ್ತು ಕೊಯ್ದುಕೊಂಡ ಸುಶಾಂತ್‌ ದೀಕ್ಷಾಳ ಮೇಲೆ ಬಿದ್ದು ಹೊರಳಾಡಿದ್ದಾನೆ. ಒಟ್ಟು 12 ಬಾರಿ ಇರಿದಿದ್ದಾನೆ ಎಂದು ಹೇಳಲಾಗುತ್ತಿದೆ. ಆಸ್ಪತ್ರೆಯ ಸಿಬಂದಿ ಮತ್ತು ಸ್ಥಳೀಯರು ತತ್‌ಕ್ಷಣವೇ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದರು, ಗಂಭೀರ ಸ್ಥಿತಿಯಲ್ಲಿದ್ದ ದೀಕ್ಷಾಳಿಗೆ ಪರಿಣಿತ ವೈದ್ಯರ ತಂಡದಿಂದ ಚಿಕಿತ್ಸೆ ನೀಡಲಾಗುತ್ತಿದೆ. ಸುಶಾಂತ್‌ಗೂ ಶಸ್ತ್ರಚಿಕಿತ್ಸೆ ಮಾಡಲಾಗಿದ್ದು, ಅಪಾಯದಿಂದ ಪಾರಾಗಿದ್ದಾನೆ ಎಂದು ವೈದ್ಯರು ತಿಳಿಸಿದ್ದಾರೆ.

Advertisement

ಸ್ಥಳಕ್ಕೆ ಕಮಿಷನರ್‌ ಸಂದೀಪ್‌ ಪಾಟೀಲ್‌, ಎಸಿಪಿ ರಾಮರಾವ್‌, ಉಳ್ಳಾಲ ಠಾಣಾಧಿಕಾರಿ ಗೋಪಿಕೃಷ್ಣ, ಕೊಣಾಜೆ ಠಾಣಾಧಿಕಾರಿ ರವೀಶ್‌ ಭೇಟಿ ನೀಡಿ ತನಿಖೆ ಆರಂಭಿಸಿದ್ದಾರೆ.  ಉಳ್ಳಾಲ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನೆ ಕುರಿತ ಸಾರ್ವಜನಿಕರು ಸೆರೆ ಹಿಡಿದ ವೀಡಿಯೊ ಈಗ ವೈರಲ್‌ ಆಗಿದೆ.

ನೃತ್ಯಪಟುವಾಗಿದ್ದ ಸುಶಾಂತ್‌
ನೃತ್ಯಪಟುವಾಗಿದ್ದ ಸುಶಾಂತ್‌ ದೀಕ್ಷಾಳಿಗೆ ಸುಮಾರು 6 ವರ್ಷಗಳಿಂದ ಪರಿಚಿತನಾಗಿದ್ದ. ಅಲೋಶಿಯಸ್‌ ಕಾಲೇಜಿನಿಂದಲೇ ಪರಿಚಿತನಾಗಿದ್ದ ಈತ ದೀಕ್ಷಾಳನ್ನು ಪ್ರೀತಿಸುತ್ತಿದ್ದ ಎನ್ನಲಾಗಿದೆ. ದೀಕ್ಷಾಳೂ ನೃತ್ಯ ತರಬೇತಿ ಪಡೆಯುತ್ತಿದ್ದು, ಈಕೆಯೊಂದಿಗೆ ಸಲುಗೆಯಿಂದ ಇದ್ದನಂತೆ. ಕೆಲವು ತಿಂಗಳಿನಿಂದ ದೀಕ್ಷಾ ಸುಶಾಂತ್‌ನಿಂದ ಅಂತರ ಕಾಯ್ದುಕೊಂಡಿದ್ದು, ಸ್ನಾತಕೋತ್ತರ ಪದವಿಗೆ ಕಾರ್ಕಳದಲ್ಲಿ ಸೇರಿದ ಬಳಿಕ ಈತ ಕಾರ್ಕಳದಲ್ಲಿ ಕಾಲೇಜಿನ ಪಕ್ಕ ಬಂದು ದೀಕ್ಷಾಳಿಗೆ ತೊಂದರೆ ನೀಡಿದ್ದ. ಈ ಕಾರಣಕ್ಕೆ ಆತನ ಮೇಲೆ ಅಲ್ಲಿನ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇರಿತಕ್ಕೆ ಸ್ಪಷ್ಟ ಕಾರಣ ತಿಳಿದು ಬಂದಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next