ಹುಬ್ಬಳ್ಳಿ: ನಗರದ ಬಹುತೇಕ ರಸ್ತೆಗಳಲ್ಲಿ ಗುಂಡಿಗಳದ್ದೇ ಸಾಮ್ರಾಜ್ಯ. ನೀರು ಇನ್ನಿತರ ಸಂಪರ್ಕಕ್ಕೆ ಕಡಿತಗೊಂಡ ರಸ್ತೆಗಳು ಸಮರ್ಪಕ ದುರಸ್ತಿ ಇಲ್ಲದಿರುವುದು, ಗುಂಡಿ ಮುಚ್ಚಲು ಸ್ವತಃ ಪಾಲಿಕೆಯವರೇ ಮುಂದೆ ನಿಂತು ಚರಂಡಿ ತ್ಯಾಜ್ಯ ಮಣ್ಣು , ಕೆಂಪು ಮಣ್ಣು ಹಾಕಿಸಿ ರಸ್ತೆಯನ್ನು ಇನ್ನಷ್ಟು ರಾಡಿಮಯವಾಗಿಸಿದ್ದು, ವಾಹನ ಚಾಲಕರ ಪಾಡು ದೇವರಿಗೇ ಪ್ರೀತಿ ಎನ್ನುವಂತಾಗಿದೆ.
ರಸ್ತೆಗಳ ನಿರ್ಮಾಣಕ್ಕಾಗಿಯೇ ನೂರಾರು ಕೋಟಿ ಬಂದಿದೆ ಎಂಬ ಪ್ರಚಾರದ ನಡುವೆಯೂ ಅನೇಕ ರಸ್ತೆಗಳು ಸಂಚಾರಕ್ಕೆ ಯೋಗ್ಯವಲ್ಲದ ಸ್ಥಿತಿಗೆ ತಲುಪಿವೆ. ಸಿಮೆಂಟ್ ರಸ್ತೆ ನಿರ್ಮಾಣ ಮಾಡಿದ ಕಡೆಗಳಲ್ಲಿ ಅನುಸರಿಸಿದ ಅವೈಜ್ಞಾನಿಕ ಕ್ರಮದಿಂದಾಗಿ ಹಿಂದಿನ ಸ್ಥಿತಿಗಿಂತಲೂ ಹದಗೆಟ್ಟ ಸ್ಥಿತಿ ಎದುರಾಗಿದೆ. ಇವೆಲ್ಲದರ ಮಧ್ಯೆ ಪಾಲಿಕೆ ಮಾತ್ರ ತನಗೇನು ಸಂಬಂಧವೇ ಇಲ್ಲ ಎನ್ನುವಂತೆ ವರ್ತಿಸುತ್ತಿದೆ.
ಗುಂಡಿಗಳಿಗೆ ಕೊನೆ ಇಲ್ಲವೆ?: ನಗರದ ಪ್ರಮುಖ ಕೇಂದ್ರ ಸ್ಥಳ ಹಳೇ ಬಸ್‌ನಿಲ್ದಾಣದ ಎದುರಿನ ರಸ್ತೆ ಹದಗೆಟ್ಟು ಹೋಗಿದೆ. ಮೊದಲೇ ವಾಹನ ದಟ್ಟಣೆ ಹೆಚ್ಚಾಗಿರುವ ರಸ್ತೆಯಲ್ಲಿ ಗುಂಡಿಗಳಿದ್ದರೆ ವಾಹನ ಸಂಚಾರ ಇನ್ನಷ್ಟು ವಿಳಂಬವಾಗುತ್ತದೆ. ಕಿತ್ತೂರು ಚನ್ನಮ್ಮ ವೃತ್ತದಲ್ಲಿಯೂ ಅನೇಕ ಗುಂಡಿಗಳು ಬಿದ್ದಿದ್ದು ಸಂಚಾರಕ್ಕೆ ತೊಂದರೆ ಆಗುತ್ತಿದೆ.
ಅಂಬೇಡ್ಕರ್ ವೃತ್ತ ಹತ್ತಿರದ ಮಹಾಯೋಗಿ ವೇಮನ ಬೀದಿಯ ರಸ್ತೆಯಲ್ಲಿ ಮಳೆ ನೀರು ರಸ್ತೆಯ ಮೇಲೆ ಸಂಗ್ರಹವಾಗುವುದರಿಂದ ಸಮಸ್ಯೆ ಹೇಳತೀರದು. ರೈಲು ನಿಲ್ದಾಣ ಸಮೀಪದ ಅಂಡರ್‌ಬ್ರಿಡ್ಜ್ ರಸ್ತೆಯ ಮೇಲೆ ನೀರು ನಿಲ್ಲುತ್ತಿದೆ. ಒಳಚರಂಡಿ ನೀರು ರಸ್ತೆಯ ಮೇಲೆ ಹರಿದರೆ, ಮಳೆಗಾಲದಲ್ಲಿ ಮಳೆ ನೀರು ಕೂಡ ಇಲ್ಲಿ ಸೇರಿ ಸಮಸ್ಯೆಯನ್ನು ಇನ್ನಷ್ಟು ಉಲ್ಭಣಗೊಳಿಸುತ್ತದೆ. ಸುತ್ತಮುತ್ತಲಿನ ಅಂಗಡಿಯವರು ರಸ್ತೆಯ ಪಕ್ಕದಲ್ಲಿಯೇ ಕಸ ಸುರಿಯುವುದರಿಂದ ಸಮಸ್ಯೆ ಇನ್ನಷ್ಟು ಹೆಚ್ಚಾಗಿದೆ. ರಸ್ತೆಯ ಎರಡೂ ಬದಿಯ ಫುಟ್ಪಾತ್‌ಗಳು ಕಸ, ರಾಡಿಮಯವಾಗಿದ್ದರಿಂದ ಜನರು ಕೂಡ ಫುಟ್ಪಾತ್ ಬಿಟ್ಟು ರಸ್ತೆಯಲ್ಲಿಯೇ ಸಂಚರಿಸುವಂತಾಗಿದೆ. ಇದರಿಂದ ಟ್ರಾಫಿಕ್‌ಜಾಮ್ ಸಾಮಾನ್ಯವಾಗಿದೆ. ಇಲ್ಲಿ ಸೇವೆ ಸಲ್ಲಿಸುವ ಸಂಚಾರ ಪೋಲಿಸರು ಬೇಸತ್ತು ಹೋಗಿದ್ದಾರೆ. ರಸ್ತೆಯ ಮೇಲೆ ನೀರು ನಿಲ್ಲದೇ ಹರಿದು ಹೋಗುವಂತೆ ವ್ಯವಸ್ಥೆ ಮಾಡಬೇಕೆಂಬುದು ರಸ್ತೆಯಲ್ಲಿ ಸಂಚರಿಸುವವರ ಆಗ್ರಹವಾಗಿದೆ.
►ಪುಟ್ಟಪ್ಪ ಲಮಾಣಿ