ಮೈಸೂರು: ನಿರಂತರ ಮಳೆಯಿಂದ ಹೆಚ್ಚಿನ ಪ್ರಮಾಣದಲ್ಲಿ ನೀರು ಸಂಗ್ರಹವಾಗಿರುವ ನಗರದ ಕುಕ್ಕರಹಳ್ಳಿ ಕೆರೆಗೆ ಕರ್ನಾಟಕ ಎಂಜಿನಿಯರಿಂಗ್ ಸಂಶೋಧನಾ ಕೇಂದ್ರ (ಕೆಇಆರ್‌ಎಸ್) ಹಿರಿಯ ಎಂಜಿನಿಯರ್ ಹಾಗೂ ತಜ್ಞರ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿತು.
ಕೆರೆ ಏರಿಯ ಭದ್ರತೆ ಕುರಿತಂತೆ ಅವಲೋಕಿಸಿ ಪರೀಕ್ಷೆಗಾಗಿ 4 ಸ್ಥಳಗಳಿಂದ ಮಣ್ಣಿನ ಮಾದರಿ ಸಂಗ್ರಹಿಸಲಾಗಿದೆ. ಒಂದು ವಾರದಲ್ಲಿ ಇದರ ಫಲಿತಾಂಶ ದೊರೆಯುವ ನಿರೀಕ್ಷೆ ಇದೆ. ಅಧಿಕ ನೀರು ಸಂಗ್ರಹ: ಇತ್ತೀಚೆಗೆ ಸುರಿದ ಧಾರಾಕಾರ ಮಳೆಯಿಂದ 2-3 ದಶಕಗಳ ಬಳಿಕ ಮೊದಲ ಬಾರಿಗೆ ಈ ಕೆರೆಯಲ್ಲಿ ಅಪಾಯ ಮಟ್ಟಕ್ಕಿಂತ ಹೆಚ್ಚಿನ ಪ್ರಮಾಣದ ನೀರು ಸಂಗ್ರಹವಾಗಿದೆ.
ನಿರ್ವಹಣೆ ಕೊರತೆ ಹಾಗೂ ಬಳಕೆ ಮಾಡದ ಹಿನ್ನೆಲೆಯಲ್ಲಿ ಕೆರೆಗೆ ಅಳವಡಿಸಿದ್ದ ತೂಬು ಕೈಕೊಟ್ಟಿದ್ದರಿಂದ ಹೆಚ್ಚು ವರಿ ನೀರು ಕೆರೆಯಿಂದ ಸರಾಗವಾಗಿ ಹೊರ ಹೋಗಲಾಗದೆ ಅಪಾಯದ ಮಟ್ಟಕ್ಕೇರಿತ್ತು. ಕೆರೆಯ ಆವರಣದಲ್ಲಿರುವ ಮೈಸೂರು ವಿಶ್ವವಿದ್ಯಾಲಯದ ಯುಜಿಸಿ ಕೇಂದ್ರಕ್ಕೂ ನೀರು ನುಗ್ಗಿತ್ತು. ಹುಣಸೂರು ರಸ್ತೆಗೆ ಹೊಂದಿಕೊಂಡಂತಿರುವ ವಾಯುವಿಹಾರಿಗಳ ಮಾರ್ಗ ನೀರಿನಲ್ಲಿ ಮುಳುಗಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಭದ್ರತೆಯ ದೃಷ್ಟಿಯಿಂದ ವಾಯು ವಿಹಾರಿಗಳ ಪ್ರವೇಶ ನಿರ್ಬಂಧಿಸಲಾಗಿದೆ.
ಲ್ಯಾಬ್‌ಗ ಮಾದರಿ ರವಾನೆ: ಈ ತಂಡವು ಕೆರೆಯ ಏರಿ, ತೂಬು, ಕೆರೆಯಲ್ಲಿನ ನೀರಿನ ಪ್ರಮಾಣ, ಕೆರೆ ಏರಿಯಿಂದ ಸೋರಿಕೆಯಾ ಗುತ್ತಿರುವ ನೀರು, ಬೋಗಾದಿ ರಸ್ತೆಗೆ ಹೊಂದಿಕೊಂಡಂತ್ತಿರುವ ಚರಂಡಿಗೆ ಹರಿದು ಬರುತ್ತಿರುವ ಅಂತರ್ಜಲವನ್ನು ಸೂಕ್ಷ್ಮವಾಗಿ ಪರಿಶೀಲಿಸಿದೆ. ಬಳಿಕ ಕೆರೆಯಿಂದ ನೀರು ಸೋರಿಕೆಯಾಗುತ್ತಿರುವ ಶಂಕೆ ಮೇರೆಗೆ ಮಣ್ಣಿನ ಪರೀಕ್ಷೆ ನಡೆಸಲು ಮಾದರಿ ಸಂಗ್ರಹಿಸಲಾಯಿತು. ಕೆರೆ ಏರಿಯ ಮಧ್ಯಭಾಗ ಹಾಗೂ ತಳಭಾಗದಲ್ಲಿ ಎರಡು ಅಡಿ ಗುಂಡಿ ತೋಡಿ ಮಣ್ಣನ್ನು ಪ್ರಯೋಗಾಲ ಯಕ್ಕೆ ರವಾನಿಸಿದೆ.
ಯಾವುದೇ ಅಪಾಯವಿಲ್ಲ; ಮೇಲ್ನೋಟಕ್ಕೆ ಕೆರೆಗೆ ಯಾವುದೇ ಅಪಾಯವಿಲ್ಲ. ಕೆರೆ ಏರಿಯೂ ಸುಭದ್ರವಾಗಿದೆ. ಕೆರೆ ನೀರಿನಿಂದ ಏರಿಗೆ ಅಪಾಯವಾಗಿದ್ದರೆ ಏರಿ ಬಿರುಕು ಬಿಟ್ಟಿರುತ್ತಿತ್ತು. ಆದರೆ, ಕೆರೆ ಏರಿ ಮೇಲೆ ಎಲ್ಲಿಯೂ ಸಣ್ಣ ಬಿರುಕೂ ಪತ್ತೆಯಾಗಿಲ್ಲ. ಇಲ್ಲಿಯ ನೀರಿನ ಮಟ್ಟದಿಂದ 5-7 ಅಡಿ ಎತ್ತರದಲ್ಲಿ ಏರಿ ಇದೆ. ಆದ್ದರಿಂದ ಸುಲಭವಾಗಿ ಏರಿಗೆ ತೊಂದರೆ ಆಗಲ್ಲ ಎಂದು ತಜ್ಞರ ತಂಡ ಅಭಿಪ್ರಾಯಪಟ್ಟಿದೆ.
ಕೋಡಿಯೇ ಇಲ್ಲ: ಕೆರೆಗೆ ಕೋಡಿಯೇ ಇಲ್ಲದಿರುವುದನ್ನು ಗಮನಿಸಿದ ತಜ್ಞರ ತಂಡ, ಪ್ರತಿಯೊಂದು ಕೆರೆ ನಿರ್ಮಾಣ ಮಾಡುವಾಗಲೂ ಹೆಚ್ಚುವರಿ ನೀರು ಹರಿದು ಹೋಗಲು ಕೋಡಿ ಕಟ್ಟೆ ನಿರ್ಮಿಸಲಾಗುತ್ತದೆ. ಕೆರೆ ಸುರಕ್ಷತೆ ದೃಷ್ಟಿಯಿಂದ ಕೋಡಿ ಕಟ್ಟೆ ಅನಿವಾರ್ಯವಾಗಿದೆ. ಹೀಗಾಗಿ ಕೆರೆಯ ಹಳೆಯ ನಕ್ಷೆ ಪಡೆದು, ಸರ್ವೇ ಮಾಡಿಸುವಂತೆ ವಿಶ್ವವಿದ್ಯಾಲಯದ ಅಧಿಕಾರಿಗಳಿಗೆ ಸಲಹೆ ನೀಡಿದೆ.ಮೈಸೂರು ವಿವಿ ಎಂಜಿನಿಯರ್ ಗಳಾದ ಶಿವೇಗೌಡ, ಶಿವಪ್ರಸಾದ್, ವಿವಿ ತೋಟಗಾರಿಕಾ ವಿಭಾಗದ ಸಹಾಯಕ ನಿರ್ದೇಶಕ ಮುಜಾವರ್ ಇನ್ನಿತರರು ಇದ್ದರು.