Advertisement

ಸಕಲೇಶಪುರಕ್ಕೆ ಆಗಮಿಸಿದ ತಜ್ಞರ ತಂಡ

04:14 PM Nov 07, 2022 | Team Udayavani |

ಸಕಲೇಶಪುರ: ಕಳೆದೊಂದು ದಶಕದಿಂದ ಸಕಲೇಶಪುರ ಹಾಗೂ ಆಲೂರು ತಾಲೂಕುಗಳಲ್ಲಿ ಕಾಡುತ್ತಿರುವ ಕಾಡಾನೆ ಸಮಸ್ಯೆಗೆ ಶಾಶ್ವತ ಪರಿಹಾರ ಹುಡುಕುವ ನಿಟ್ಟಿನಲ್ಲಿ ತಜ್ಞರ ತಂಡ ತಾಲೂಕಿಗೆ ಆಗಮಿಸುತ್ತಿದ್ದು ಮುಂದೇನು ಎಂಬುದನ್ನು ಕಾದು ನೋಡಬೇಕಾಗಿದೆ. ಕಳೆದ ಒಂದು ದಶಕದಲ್ಲಿ ಕಾಡಾನೆಗಳ ದಾಳಿಯಿಂದ ಹಲವು ಸಾವು ನೋವುಗಳು ಸಂಭವಿಸಿದೆ.

Advertisement

ಕೋಟ್ಯಂತರ ಮೌಲ್ಯದ ಬೆಳೆ ನಷ್ಟವಾ ಗಿದೆ. ಕಳೆದ ವಾರ ತಾಲೂಕಿನ ಹೆಬ್ಬನಹಳ್ಳಿ ಗ್ರಾಮದ ಸಮೀಪ ಮನು ಎಂಬ ಯುವಕ ಕಾಡಾನೆ ದಾಳಿಗೆ ಬಲಿಯಾಗಿದ್ದು, ಇದು ಜನರ ಆಕ್ರೋಶ ಕ್ಕೆ ಕಾರಣವಾಗಿತ್ತು. ಈ ಹಿನ್ನೆಲೆ ಜಿಲ್ಲೆಯಲ್ಲಿ ಕಳೆದ ಒಂದು ವರ್ಷದಲ್ಲಿ ಮಾನವ ಪ್ರಾಣಿ ಸಂಘರ್ಷದಿಂದ ಉಂಟಾಗಿರುವ ಪ್ರಾಣ ಹಾನಿ ಮತ್ತು ವನ್ಯ ಪ್ರಾಣಿಗಳಿಂದ ಆಗಿರುವ ಬೆಳೆ ನಾಶ ಹಾಗೂ ಇನ್ನಿತರೇ ಮಾನವ ಪ್ರಾಣಿ ಸಂಘರ್ಷಕ್ಕೆ ಸಂಬಂಧಿಸಿದ ಪ್ರಕರಣಗಳ ಬಗ್ಗೆ ಅಧ್ಯಯನ ನಡೆಸಿ, ಈ ಸಮಸ್ಯೆಗೆ ಪರಿಹಾರ ಕ್ರಮ ಗಳನ್ನು ಒಳಗೊಂಡ ಒಂದು ವಿಸ್ತ್ರತವಾದ ವರದಿ ಸಲ್ಲಿಸಲು ರಚಿಸಲಾಗಿದ್ದ ತಂಡ ಹಾಸನ ಹಾಗೂ ಕೊಡಗು ಜಿಲ್ಲೆಗಳಲ್ಲಿ ಅಧ್ಯಯನ ನಡೆಸಲಿದ್ದು ಕಾಡಾನೆ ಸಮಸ್ಯೆಗೆ ಅಂತಿಮವಾಗಿ ಪರಿಹಾರ ಕಾಣುವ ನಿರೀಕ್ಷೆಯನ್ನು ಬೆಳೆಗಾರರು ಹೊಂದಿದ್ದಾರೆ.

ಅಧಿಕಾರಿಗಳ ತಂಡ: ಉನ್ನತ ಅಧಿಕಾರಿಗಳನ್ನು ಹೊಂದಿರುವ ತಂಡವು ಹಾಸನ ಮತ್ತು ಕೊಡಗು ಜಿಲ್ಲೆಗಳಲ್ಲಿ ಮಾನವ – ಪ್ರಾಣಿ ಸಂಘರ್ಷಕ್ಕೆ ಒಳಪಟ್ಟ ಪ್ರದೇಶಗಳಿಗೆ ಭೇಟಿ ನೀಡಿ ಅಧ್ಯಯನ ಕೈಗೊಂಡು, ಶಿಫಾರಸುಗಳನ್ನೊಳಗೊಂಡಂತೆ ವಿಸ್ತ್ರತ ವಾದ ವರದಿ ಸಲ್ಲಿಸಲಿದೆ. ತಂಡದ ಮುಖ್ಯಸ್ಥರಾಗಿ ರಾಜಕಿಶೋರ್‌ ಸಿಂಗ್‌, ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ,(ಅರಣ್ಯಪಡೆ ಮುಖ್ಯಸ್ಥರು) ಜಿ.ವಿ.ಪ್ರಧಾನ ಮುಖ್ಯ ಸಂರಕ್ಷಣಾಧಿಕಾರಿ ಅರಣ್ಯ ಸದಸ್ಯ ರಂಗರಾವ್‌, ಪ್ರೊ.ನಿಶಾಂತ್‌, ಐಐಎಸ್‌ಸಿ, ಎನ್‌ಸಿಎಫ್ ಸಂಸ್ಥೆಯ ಓರ್ವ ಪುತಿನಿಧಿ, ಡಬ್ಲ್ಯುಟಿಐ ಸಂಸ್ಥೆ ಪ್ರತಿನಿಧಿ, ಕೊಡಗು ವ್ಯಾಪ್ತಿಯ ಅರಣ್ಯ ಸಂರಕ್ಷಣಾಧಿಕಾರಿ, ಹಾಸನ ವ್ಯಾಪ್ತಿಯ ಅರಣ್ಯ ಸಂರಕ್ಷಣಾಧಿಕಾರಿ, ಶಾಶ್ವತಿ ಮಿಶ್ರಾ ಸೇರಿದಂತೆ ಅನೇಕ ಅಧಿಕಾರಿಗಳ ತಂಡ ಪರಿಹಾ ರೋಪಾಯ ಕ್ರಮಗಳ ಅಧ್ಯಯನ ಕೈಗೊಳ್ಳಲಿದ್ದಾರೆ.

ಒಂದು ವಾರದಲ್ಲಿ ಸರ್ಕಾರಕ್ಕೆ ವಿಸ್ತೃತ ವರದಿ: ಮಾನವ ಸಂಘರ್ಷ ತಡೆಗಟ್ಟಲು ವಿಸ್ತ್ರತ ವರದಿಯನ್ನು ಒಂದು ವಾರದಲ್ಲಿ ಸರ್ಕಾರಕ್ಕೆ ಸಲ್ಲಿಸಬೇಕಾಗಿದೆ. ಈ ಹಿನ್ನೆಲೆ ಅಧ್ಯಯನ ತಂಡವು ನ.7ರಂದು ಹಾಸನಕ್ಕೆ ತೆರಳಿ ಬೆಳಗ್ಗೆ 10 ಗಂಟೆಗೆ ಆನೆ ಮಾನವ ಸಂಘರ್ಷದ ಬಗ್ಗೆ ಪ್ರಾತ್ಯಕ್ಷಿಕೆ ಅಧಿಕಾರಿ ಸಿಬ್ಬಂದಿಗಳೊಂದಿಗೆ ಸಂವಾದ ನಡೆಸಲಿದೆ.

ಗ್ರಾಮಸ್ಥರೊಂದಿಗೆ ಚರ್ಚೆ: ಸಕಲೇಶಪುರ ತಾಲೂಕಿನ ಬೆಳಗೋಡು ಕ್ಷೇತ್ರಕ್ಕೆ ಭೇಟಿ ನೀಡಿ ಜನಪ್ರತಿನಿಧಿಗಳ ಮತ್ತು ಸಾರ್ವಜನಿಕರೊಂದಿಗೆ ಸಭೆ ನಡೆಸಲು ಯೋಜಿಸ ಲಾಗಿದೆ. ನಂತರ ತಂಡ ಆಲೂರು ತಾಲೂಕಿನ ನಾಗವಾರ ಹಿನ್ನೀರಿನ ಪ್ರದೇಶದಲ್ಲಿ ರೈಲ್ವೆ ಬ್ಯಾರಿಕೇಡ್‌ ನಿರ್ಮಿ ಸುತ್ತಿರುವ ಕ್ಷೇತ್ರಕ್ಕೆ ಭೇಟಿ ನೀಡಿ ಮತ್ತು ಮಾದಿಹಳ್ಳಿ, ಭರತ್ತೂರು, ನಾಗವಾರ ಗ್ರಾಮಗಳ ಗ್ರಾಮಸ್ಥರೊಂದಿಗೆ ಸಂವಾದ ನಡೆಸಲಿದೆ. ಸಂಜೆ ಚಂಗಡಿಹಳ್ಳಿ-ಯಸಳೂರು ಕ್ಷೇತ್ರಗಳಿಗೆ ಭೇಟಿ ನೀಡಿ ವಾಸ್ತವ್ಯ ಹೂಡಲಿದೆ.

Advertisement

ಅರಣ್ಯಾಧಿಕಾರಿಗಳೊಂದಿಗೆ ಚರ್ಚೆ: ನ.8 ರಂದು ತಂಡವು ಹಾಸನ ಜಿಲ್ಲೆಯ ವ್ಯಾಪ್ತಿಯಲ್ಲಿ ಅರಣ್ಯಾಧಿಕಾರಿಗಳೊಂದಿಗೆ ಮತ್ತು ತಂಡದ ಸದಸ್ಯರೊಂದಿಗೆ ಚರ್ಚೆ ನಡೆಸಲಿದೆ. ಕೊಡಗು ಜಿಲ್ಲೆಗೆ ತೆರಳಿ ಅರಣ್ಯಾಧಿಕಾರಿಗಳೊಂದಿಗೆ ಮತ್ತು ತಂಡದ ಸದಸ್ಯರೊಂದಿಗೆ ಸಭೆ ನಡೆಸಲಿದೆ. ನಂತರ ಮಾನವ-ವನ್ಯಪ್ರಾಣಿ ಸಂಘರ್ಷ ತಡೆಗಟ್ಟಲು ದುಬಾರೆ, ಎಡವನಾಡು, ಸಿದ್ಧಾಪುರ, ಅತ್ತೂರು ಮತ್ತು ನೆಲ್ಲಿ ಹುದಿಕೇರಿ ಗ್ರಾಮಗಳ ವ್ಯಾಪ್ತಿಯಲ್ಲಿ ಕಾಫಿ ತೋಟದ ರೈತರೊಂದಿಗೆ ಚರ್ಚೆ ಮತ್ತು ಮಡಿಕೇರಿ ಮತ್ತು ವಿರಾಜಪೇಟೆ ವಿಭಾಗದಲ್ಲಿ ಕ್ಷೇತ್ರ ತಪಾಸಣೆ ಮತ್ತು ವಾಸ್ತವ್ಯ ಹೂಡಲಿದೆ. ನ.9ರಂದು ಮಡಿಕೇರಿ ವನ್ಯಜೀವಿ, ವಿರಾಜಪೇಟೆ ಮತ್ತು ನಾಗರ ಹೊಳೆ ಹುಲಿ ಸಂರಕ್ಷಿತ ಪ್ರದೇಶಗಳ ವ್ಯಾಪ್ತಿಯಲ್ಲಿ ಆನೆ ಕಾರಿಡಾರ್‌ಗಳ ಕ್ಷೇತ್ರ ತಪಾಸಣೆ ನಡೆಸಿ ನಂತರ ಕೇಂದ್ರಸ್ಥಾನಕ್ಕೆ ಹಿಂತಿರುಗಲಿದೆ.

ಕಾಡಾನೆ ಸಮಸ್ಯೆ ಬಗೆಹರಿಸುವ ನೆಪದಲ್ಲಿ ಕಳೆದ 10 ವರ್ಷಗಳಿಂದ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕೇವಲ ಅಧ್ಯಯನ ಮಾಡಿಕೊಂಡು ಬಂದಿದೆ. ಇನ್ನು ಎಷ್ಟು ಬಾರಿ ಅಧ್ಯಯನ ಮಾಡಿದರು ಪ್ರಯೋಜನವಿಲ್ಲ, ಇದು ಅಂತಿಮ ಅಧ್ಯಯನವಾಗಬೇಕು ಹಾಗೂ ಕಾಡಾನೆ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗಬೇಕು. – ಯಡೇಹಳ್ಳಿ ಮಂಜುನಾಥ್‌, ಕಾಡಾನೆ ಸಮಸ್ಯೆ ಹೋರಾಟಗಾರ

ಸಿಎಂ ಬೊಮ್ಮಾಯಿಯವರು ವಿಶೇಷ ಕಾಳಜಿ ವಹಿಸಿ ಉನ್ನತ ಅರಣ್ಯಾಧಿಕಾರಿಗಳ ತಂಡವನ್ನು ಜಿಲ್ಲೆಗೆ ಕಳುಹಿಸಿಕೊಡುತ್ತಿದ್ದಾರೆ. ಈ ಬಾರಿ ಕಾಡಾನೆ ಸಮಸ್ಯೆ ಶಾಶ್ವತವಾಗಿ ಬಗೆಹರಿಯುವ ನಿರೀಕ್ಷೆಯಿದೆ. -ಎಚ್‌.ಎಂ ವಿಶ್ವನಾಥ್‌, ಮಾಜಿ ಶಾಸಕರು

– ಸುಧೀರ್‌ ಎಸ್‌.ಎಲ್‌

Advertisement

Udayavani is now on Telegram. Click here to join our channel and stay updated with the latest news.

Next