ಉಡುಪಿ: ಮಕ್ಕಳಿಗಾಗಿ ಉತ್ತಮ ಸಮಾಜ ಮತ್ತು ಪರಿಸರ ನಿರ್ಮಿಸುವ ಕುರಿತು ಜನ ಜಾಗೃತಿ, ಅರಿವು ಮೂಡಿಸಲು ವೃತ್ತಿ ಶಿಕ್ಷಣ ಮಾರ್ಗದರ್ಶಕರೊಬ್ಬರು ಬರೋಬ್ಬರಿ 40 ಸಾವಿರ ಕಿ.ಮೀ. ಕಾಲ್ನಡಿಗೆಯಲ್ಲಿ ಸಂಚರಿಸುವ ಸಂಕಲ್ಪ ಮಾಡಿದ್ದಾರೆ.
ಗುಜರಾತ್ ಮೂಲದ ಯೋಗೇನ್ ಶಾ ಈ ಸಂಕಲ್ಪ ಮಾಡಿರುವ ಶಿಕ್ಷಕ. ಅವರು ಈಗಾಗಲೇ 14 ಸಾವಿರ ಕಿ.ಮೀ. ನಡಿಗೆಯನ್ನು ಪೂರೈಸಿದ್ದು ಉಡುಪಿಯಿಂದ ದಕ್ಷಿಣ ಕನ್ನಡ ಜಿಲ್ಲೆಗೆ ಹೆಜ್ಜೆಯಿಟ್ಟಿದ್ದಾರೆ.
2002ರಲ್ಲಿ ಆಕ್ಸ್‌ಫರ್ಡ್‌ನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾಗ ಬೆನ್ನುಮೂಳೆ ಸವಕಲು ಕಾಯಿಲೆಯಿಂದ 2007ರಲ್ಲಿ ಭಾರತಕ್ಕೆ ವಾಪಸ್ ಆಗಿ ಯೋಗ, ದೈಹಿಕ ಶ್ರಮ ಹಾಗೂ ಕಾಲ್ನಡಿಗೆಯ ಮೂಲಕ ಕಾಯಿಲೆಗೆ ಪರಿಹಾರ ಕಂಡುಕೊಂಡರು. ಕೊರೊನಾಸಂದರ್ಭ ಮನುಷ್ಯ ಪ್ರಕೃತಿಗೆ ಹತ್ತಿರವಾಗುತ್ತಿರುವುದನ್ನು ಗಮನಿಸಿ, ದೇಶದ ಮಕ್ಕಳ ಭವಿಷ್ಯ ಇನ್ನಷ್ಟು ಉತ್ತಮವಾಗಬೇಕು ಎಂಬ ಪರಿಕಲ್ಪನೆಯಡಿ ಜನಜಾಗೃತಿ ಮೂಡಿಸಲು 2020ರ ಜೂನ್ 15ರಂದು ಗುಜರಾತ್‌ನ ವಡೋದರದಿಂದ ಪಾದಯಾತ್ರೆ ಆರಂಭಿಸಿದರು. ಚಂಡೀಗಢ ಮೂಲಕ ದಿಲ್ಲಿ ತಲುಪಿದ್ದರು. ಅನಂತರ ದಕ್ಷಿಣ ದಿಕ್ಕಿಗೆ ಸಾಗಿ, ಗೋವಾದ ಮೂಲಕ ಕರ್ನಾಟಕ ಪ್ರವೇಶ ಮಾಡಿದ್ದರು.
“ಉದಯವಾಣಿ’ ಜತೆ ಮಾತನಾಡಿದ ಯೋಗೇನ್ ಶಾ, ಮಕ್ಕಳಲ್ಲಿ ಆತ್ಮಸ್ಥೈರ್ಯ ತುಂಬುವ ಕೆಲಸ ಆಗಬೇಕು. ಪರಸರದ ಜತೆ ಜತೆ ಸರಳ ಜೀವನ ನಡೆಸುವುದು ಪ್ರಸ್ತುತ ಹೆಚ್ಚು ಅವಶ್ಯವಾಗಿದೆ. ಈ ಹಿನ್ನೆಲೆಯಲ್ಲಿ ಗ್ರಾಮೀಣ ಭಾಗದ ಜನರಲ್ಲಿ ಶಾಲಾ, ಕಾಲೇಜು ವಿದ್ಯಾರ್ಥಿಗಳಲ್ಲಿ ಅರಿವು, ಜಾಗೃತಿ ಮೂಡಿಸುವ ಕಾರ್ಯವನ್ನು ಮಾಡಿಕೊಂಡು ಬರುತ್ತಿದ್ದೇನೆ. ದಕ್ಷಿಣದಲ್ಲಿ ಕನ್ಯಾಕುಮಾರಿಯವರೆಗೂ ಕ್ರಮಿಸಿ ಅನಂತರ ಶ್ರೀಲಂಕಾ, ಬಾಂಗ್ಲಾ, ಭೂತಾನ್, ಯುಎಸ್‌ಎ ಸಹಿತ ಹಲವು ದೇಶಗಳಲ್ಲೂ ಪಾದಯಾತ್ರೆ ನಡೆಸಲಿದ್ದೇನೆ ಎಂದರು.