Advertisement

Ameenagada: ಸ್ವಂತ ಖರ್ಚಿನಲ್ಲಿ “ಗಣಿತ ಪ್ರಯೋಗಾಲಯ’ ಸ್ಥಾಪಿಸಿದ ಶಿಕ್ಷಕ

06:27 PM Aug 18, 2023 | Team Udayavani |

ಅಮೀನಗಡ: ಸೂಳೇಭಾವಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಗಣಿತ ಶಿಕ್ಷಕ ಮಹಾದೇವ ಬಸರಕೋಡ ಅವರು ತಮ್ಮ ಸ್ವಂತ ಖರ್ಚಿನಲ್ಲಿ “ಗಣಿತ ಪ್ರಯೋಗಾಲಯ’ ಸ್ಥಾಪಿಸಿ ಗಣಿತ ವಿಷಯವನ್ನು ಪ್ರಾಯೋಗಿಕವಾಗಿ ತಿಳಿಸಲು ಹೊಸದೊಂದು ಪ್ಲಾನ್‌ ಮಾಡಿದ್ದಾರೆ. ಒಟ್ಟು 608 ವಿದ್ಯಾರ್ಥಿಗಳು ಇಲ್ಲಿ ಅಧ್ಯಯನ ಮಾಡುತ್ತಿದ್ದು, ಇವರ ಈ ಪ್ರಯತ್ನಕ್ಕೆ ವಿದ್ಯಾರ್ಥಿಗಳು ಫುಲ್‌ ಖುಷ್‌ ಆಗಿದ್ದಾರೆ.

Advertisement

ಗಣಿತವನ್ನು ದೈನಂದಿನ ಜೀವನದ ಅನುಭವಕ್ಕೆ ಹೋಲಿಸಿ ಬೋಧಿಸಬೇಕು. ಗಣಿತದ ಮಾದರಿ, ಘನಾಕೃತಿಗಳನ್ನು ತಾವೇ ತಯಾರಿಸಿ, ವಿಸ್ತೀರ್ಣ, ಸುತ್ತಳತೆಯನ್ನು ಪ್ರಾಯೋಗಿಕವಾಗಿ ಅಳೆದು ಸಮಸ್ಯೆಗಳಿಗೆ ಪರಿಹಾರ ಕಂಡುಹಿಡಿಯುವಂತೆ ಪ್ರೇರೇಪಿಸಬೇಕು. ಗಣಿತವೆಂಬುದು ಪ್ರಾಯೋಗಿಕ ಅನುಭವವೆಂದು ಮನದಟ್ಟು ಮಾಡಬೇಕು. ಈ ರೀತಿ ಮಕ್ಕಳಿಗೆ ಆಸಕ್ತಿ ಮೂಡಿಸಿ ಆತ್ಮವಿಶ್ವಾಸ ತುಂಬಿದರೆ, ಯಾವ ವಿದ್ಯಾರ್ಥಿಗೂ ಗಣಿತ ಕಬ್ಬಿಣದ ಕಡಲೆಯಾಗದು. ಇದೆಲ್ಲ ವಿಚಾರಗಳೊಂದಿಗೆ ಶಿಕ್ಷಕ ಮಹಾದೇವ ಬಸರಕೋಡ ಅವರು “ಗಣಿತ ಪ್ರಯೋಗಾಲಯ’ ಆರಂಭಿಸಿದ್ದಾರೆ.

ಪ್ರಯೋಗಾಲಯವಾಗಿ ಪರಿವರ್ತನೆ: ಶಾಲೆಯಲ್ಲಿ ಬಳಕೆಗೆ ಬಾರದ ಕೊಠಡಿಯಿತ್ತು. ಇದನ್ನು ಗಮನಿಸಿದ ಶಿಕ್ಷಕ ಮಹಾದೇವ ಅವರು ಮುಖ್ಯೋಪಾಧ್ಯಾಯರ ಅನುಮತಿ ಪಡೆದು ಅದಕ್ಕೆ ಸುಣ್ಣ ಬಣ್ಣ ನೀಡಿ, ಕೊಠಡಿಗೆ ಹೊಸದೊಂದು ರೂಪ ನೀಡಿದ್ದಾರೆ. ಅದಕ್ಕೆ ವಿದ್ಯುತ್‌ ಸಂಪರ್ಕ ಕಲ್ಪಿಸಿ ಬೆಳಕಿನ ವ್ಯವಸ್ಥೆ ಮಾಡಿದ್ದಾರೆ. ಆ ಬಳಕೆಯಿಲ್ಲದೆ ಕೊಠಡಿಯೇ ಇಂದು ವಿದ್ಯಾರ್ಥಿಗಳಿಗೆ “ಗಣಿತ ಪ್ರಯೋಗಾಲಯ’ವಾಗಿ ಪರಿವರ್ತನೆಯಾಗಿದೆ.

ಪ್ರಯೋಗಾಲಯದಲ್ಲೇನಿದೆ?: ಪ್ರಯೋಗಾಲಯದಲ್ಲಿ ಗಣಿತಕ್ಕೆ ಸಂಬಂಧಿಸಿದಂತೆ ಗೋಡೆ ಚಿತ್ರಣ, ಗಣಿತ ತಜ್ಞರ
ಚಿತ್ರ, ಬಹುಭುಜಾಕೃತಿಗಳ ಗುಣಲಕ್ಷಣ ಸುಲಭವಾಗಿ ತಿಳಿಸುವ ಪೈತಾಗುರಸ್‌, ಥೆಲ್ಸ್‌ ಪ್ರಮೇಯ ಸೇರಿದಂತೆ ಇತರ ಪ್ರಮೇಯ ವಿವರಿಸುವ ಮತ್ತು ಸರ್ವಸಮತೆ ಮತ್ತು ಸಮರೂಪತೆ ವಿವರಿಸುವ ರಟ್ಟಿನ ಮಾದರಿಗಳು, ಮಕ್ಕಳೇ ಮಾಡಿದ ಘನಾಕೃತಿಗಳು, ಸಂಖ್ಯಾರೇಖೆ ವಿವರಿಸುವ ಮಾದರಿ, ವೃತ್ತದ ಪರಿಕಲ್ಪನೆ ತಿಳಿಸುವ ಗಣಿತ ಸೂತ್ರಗಳು, ಬಹುಭುಜಾಕೃತಿಗಳ ಮಾದರಿಗಳ ಪರಿಕಲ್ಪನೆಗಳು ಸೇರಿದಂತೆ ಗಣಿತ ವಿಷಯದ ಕಲಿಕೆ ಸುಲಭಗೊಳಿಸುವ ಹಲವಾರು ಪೀಠೊಪಕರಣಗಳು, ಬ್ಯಾನರ್‌ಗಳು
ಪ್ರಯೋಗಾಲಯದಲ್ಲಿವೆ. ಡಿಡಿಪಿಐ ದೊಡ್ಡಬಸಪ್ಪ ನೀರಲಕೇರಿ, ಡಿವೈಪಿಸಿ ಸಿ.ಆರ್‌. ಓಣಿ, ಜಿಲ್ಲಾ ಶಿಕ್ಷಣ ಇಲಾಖೆ ಅಧಿಕಾರಿ ಜಾಸ್ಮಿàನ ಕಿಲ್ಲೇದಾರ, ಹುನಗುಂದ ಬಿಇಒ ವೆಂಕಟೇಶ ಕೊಂಕಲ್‌, ಕ್ಷೇತ್ರ ಸಂಪನ್ಮೂಲ ಅಧಿಕಾರಿ ಶರಣು ಕಾರಿಕಲ್‌ ಸೇರಿದಂತೆ ಇತರೆ ಅಧಿಕಾರಿಗಳು ಬಳಕೆಗೆ ಬಾರದ ಕೊಠಡಿಗೆ ಆಕರ್ಷಣೆ ರೂಪ ಕೊಟ್ಟು “ಗಣಿತ ಪ್ರಯೋಗಾಲಯ’ವನ್ನಾಗಿ ರೂಪಿಸಿದ ಶಿಕ್ಷಕ ಮಹಾದೇವ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಕಲಿಕೆಗೆ ಸಹಕಾರಿ
“ಗಣಿತ ಪ್ರಯೋಗಾಲಯ’ ನಮ್ಮ ಕಲಿಕೆಗೆ ಸಹಕಾರಿಯಾಗಿದೆ ಎನ್ನುತ್ತಾರೆ ವಿದ್ಯಾರ್ಥಿಗಳಾದ ಲಕ್ಷ್ಮೀ ಪಾಟೀಲ, ವಿಜಯಕುಮಾರ ಭಾಪ್ರಿ, ಕಾವೇರಿ ಗೌಡರ, ಹಯಾಜ ಮಾಗಿ ಮತ್ತಿತರರು.

Advertisement

ಗಣಿತ ಬೋಧನೆಯಲ್ಲಿ ಗಣಿತ ಪ್ರಯೋಗಾಲಯ ಬಹಳಷ್ಟು ಮುಖ್ಯ ಪಾತ್ರ ನಿರ್ವಹಿಸುತ್ತದೆ ಮತ್ತು ಕ್ಲಿಷ್ಟ ಪರಿಕಲ್ಪನೆಗಳನ್ನು ಸುಲಭವಾಗಿ ಅರ್ಥೈಸಲು ಗಣಿತದ ಕಲಿಕೋಪಕರಣಗಳ ಪಾತ್ರ ದೊಡ್ಡದಿದೆ. ಮಕ್ಕಳ ಶೈಕ್ಷಣಿಕ ಹಿತದೃಷ್ಟಿಯಿಂದ ಗಣಿತ ಪ್ರಯೋಗಾಲಯ ಮಾಡಲಾಗಿದೆ. ಇದಕ್ಕೆ ಪ್ರಭಾರಿ ಉಪ ಪ್ರಾಚಾರ್ಯ ಇರಫಾನ್‌ ಕಲಬುರ್ಗಿ, ಗಣಿತ ಶಿಕ್ಷಕರಾದ ಎಚ್‌.
ಎಮ್‌. ಹಾಲನ್ನವರ, ಎಸ್‌.ಕೆ. ಅಬಕಾರಿ, ಇತರ ಎಲ್ಲ ಶಿಕ್ಷಕ ವೃಂದದವರು ಬೆಂಬಲ ನೀಡಿದ್ದಾರೆ.
ಮಹಾದೇವ ಬಸರಕೋಡ, ಶಿಕ್ಷಕ

ಗಣಿತ ಪ್ರಯೋಗಾಲಯ ಹಿರಿಯ ಶಿಕ್ಷಕ ಮಹಾದೇವ ಬಸರಕೋಡ ಅವರ ಕನಸಿನ ಕೂಸು. ಮಕ್ಕಳಿಗೆ ಗಣಿತವನ್ನು ಪ್ರಯೋಗಾತ್ಮಕವಾಗಿ ಕಲಿಸಿಕೊಡಬೇಕೆಂಬ ಚಿಂತನೆಯೊಂದಿಗೆ ತಮ್ಮ ಸ್ವಂತ ಖರ್ಚಿನಲ್ಲಿ ನಿರ್ಮಿಸಿದ್ದಾರೆ. ಮಾಡಿ ಕಲಿ, ನೋಡಿ ಕಲಿ ಎಂಬ ಅವರ ವಿಚಾರ ಮಕ್ಕಳಿಗೆ ಸಹಕಾರಿಯಾಗಿದೆ.ಸರ್ಕಾರಿ ಶಾಲೆಯಲ್ಲಿ ಗಣಿತ ಪ್ರಯೋಗಾಲಯ ಮಾಡಿದ್ದು, ಶ್ಲಾಘನೀಯ ಕಾರ್ಯ.

ಇರಫಾನ ಕಲಬುರ್ಗಿ, ಪ್ರಭಾರಿ ಉಪ ಪ್ರಾಚಾರ್ಯರು

*ಎಚ್‌.ಎಚ್‌.ಬೇಪಾರಿ

Advertisement

Udayavani is now on Telegram. Click here to join our channel and stay updated with the latest news.

Next