ಅಗೋ, ಆ ಹಳೆಯ ಬಸ್‌ಸ್ಟ್ಯಾಂಡಿನ ಪರಿಧಿಯ ಹೊರಗೆ ನಿಂತು ಬಸ್ಸು ಕಾಯುವ ನಾಲ್ಕು ಅಡಿ ಎತ್ತರದ ಹುಡುಗಿಯೇ,
ನಿನಗೆ ಈ ನಿನ್ನ ತೆರೆಮರೆಯ ಪ್ರೇಮಿ ಮಾಡುವ ನಮಸ್ಕಾರಗಳು. ನಿನ್ನ ಹೆಸರು ತಿಳಿದಿದ್ದರೆ ಮುದ್ದಿನಿಂದ ಅದೇ ಹೆಸರನ್ನು ಬಲಬದಿಗೋ ಎಡಬದಿಗೋ ಸರಳೀಕರಿಸಿ ಕರೆಯುತ್ತಿದ್ದೆ. ಆದರೆ ನನಗೆ ನಿನ್ನ ಹೆಸರನ್ನೂ ತಿಳಿಯುವಷ್ಟು ಸಲುಗೆ ಬೆಳೆದಿಲ್ಲ. ಆದರೂ ನನ್ನ ಮನಸ್ಸಿನಲ್ಲಿ ನಿನಗೊಂದು ಹೆಸರಿಟ್ಟಿದ್ದೇನೆ “ಸರಳ’ ಎಂದು! ನಿನ್ನ ನಿರಾಭರಣತೆಯ ಸಲುವಾಗಿಯೂ ನೀನು ಸರಳರೇಖೆಯಷ್ಟು ಸುಲಭವಾಗಿಯೂ ಇರುವುದರಿಂದ ನಾನು ನಿನಗೆ ಆ ಹೆಸರನ್ನು ಆಯ್ಕೆ ಮಾಡಿದ್ದೇನೆ.
ಅಂದು ಬೈಕಿನಲ್ಲಿ 40 ಕಿಲೋಮೀಟರ್ ವೇಗದಲ್ಲಿ ಚಲಿಸುತ್ತಿದ್ದಾಗ ಆ ದಾರಿಯ ತಿರುವಿನಲ್ಲಿ ನಿನ್ನ ಕಂಡೆ. ಆ ಬಳಿಕ ನಿನ್ನ ಗುಂಗಲ್ಲೇ ಬಿದ್ದು ನಿನ್ನ ಹಿಂದೆಯೇ ಸಾಕಷ್ಟು ತಿರುಗಾಡುತ್ತಿದ್ದೆ. ಲಘುಕೋನದಂತೆಯೇ ನಿನ್ನ ಮಾತು, ಲಂಬಕೋನದಂತೆಯೇ ನಿನ್ನ ನಡಿಗೆ, ವಿಶಾಲಕೋನದಂಥ ಈ ನನ್ನ ಹೃದಯಕ್ಕೆ ಕೈವಾರದ ಮೊನೆಯಂತೆ ಚುಚ್ಚಿತು. ನಿನ್ನನ್ನು ಅನಂತದಷ್ಟು ಪ್ರೀತಿಸತೊಡಗಿದೆ. ವೃತ್ತಾಕಾರದ ಮುಖ, ಶಂಖಾಕೃತಿಯ ಕಿವಿ, ತ್ರಿಭುಜಾಕೃತಿಯ ಮೂಗು, ವೆನ್ ನಕ್ಷೆಯಂತಹಾ ಆ ನಿನ್ನ ಕಣ್ಣುಗಳು, ಅರ್ಧದಷ್ಟು ತುಂಡಾಗಿ ಉಳಿದಿರುವ ಮೂವತ್ತೂಂದೂವರೆ ಹಲ್ಲುಗಳು ಇವೆಲ್ಲವೂ ನನಗೆ ಶೇಕಡಾ ನೂರರಷ್ಟು ಅಚ್ಚುಮೆಚ್ಚು.
ಕೋನಮಾಪಕದಲ್ಲೂ ಅಳೆಯಲಾಗದ ಸೌಂದರ್ಯ ನಿನ್ನದು. ನಿನ್ನ ಸೌಂದರ್ಯವನ್ನು “x’ ಎಂದು ತಿಳಿಯುವುದೇ ಸೂಕ್ತ ಎನಿಸುತ್ತದೆ. ನೀ ನಕ್ಕಾಗೆಲ್ಲ ಏರಿಕೆ ಕ್ರಮದಲ್ಲಿ ನಿನ್ನ ಮೇಲಿನ ಪ್ರೀತಿ ಏರುಗತಿಯಲ್ಲಿ ಸಾಗುತ್ತದೆ, ಆದರೆ ನನ್ನ ನೋವುಗಳೆಲ್ಲ ಇಳಿಕೆ ಕ್ರಮದಲ್ಲಿ ಇಳಿಯುತ್ತದೆ. ನೀನು ಸಿಗುತ್ತೀಯೋ ಇಲ್ಲವೋ ಎನ್ನುವುದು ಸೈನ್, ಕಾಸ್, ಟ್ಯಾನ್‌ಗಳ ಬಳಕೆಯಷ್ಟೇ ನಿಗೂಢವಾಗಿದೆ. ನಿನ್ನ ಇಷ್ಟಪಟ್ಟ ದಿನದಿಂದ ನನ್ನ ಜೀವನಪ್ರೀತಿ ಕೂಡುತ್ತಾ, ನೋವುಗಳೆಲ್ಲ ಕಳೆಯುತ್ತಾ, ಹರುಷ ಹುಮ್ಮಸ್ಸು ಗುಣಾಕಾರವಾಗಿ, ಸಮಸ್ಯೆ ನೋವುಗಳೆಲ್ಲ ಭಾಗಾಕಾರವಾಗಿ ಶೇಷದತ್ತ ದಾಪುಗಾಲಿಕ್ಕಿದೆ. ನಿನ್ನನ್ನು ಅರ್ಥಮಾಡಿಕೊಳ್ಳುವುದು ಬೀಜಗಣಿತದಷ್ಟೇ ಜಟಿಲವಾದರೂ ಅಂಕಗಣಿತದಷ್ಟೇ ಕುತೂಹಲವೂ ರೇಖಾಗಣಿತದಷ್ಟು ಸೂಕ್ಷ್ಮವೂ ಅನ್ನಿಸಿದೆ.
ಪ್ರೀತಿ, ಜವಾಬ್ದಾರಿ, ಮಮತೆ, ನಗು, ನೆಮ್ಮದಿಗಳೇ ನಮ್ಮಿಬ್ಬರ ನಡುವಿನ ಫಾರ್ಮುಲಾ ಆಗಲಿ. ನೀ ನನಗೆ ಸರಳಬಡ್ಡಿಯಷ್ಟು ಪ್ರೀತಿ ಕೊಡು, ನಾ ನಿನಗೆ ಚಕ್ರಬಡ್ಡಿಯಷ್ಟು ಮುದ್ದು ಮಾಡುವೆ. ನನಗೋ ಐಊಖ=ಖಊಖ ಮಾಡುವಾಸೆ. ನಿಮ್ಮದೇ ಮನೆಯ ಪಕ್ಕ ಆಗ್ನೇಯ ದಿಕ್ಕಿನತ್ತ ಇರುವ ಆ ಚಚೌಕಾಕಾರ ಆ ಕಾಂಪೌಂಡಿನ ಪುಟ್ಟ ತ್ರಿಭುಜಾಕಾರದ ಗುಡಿಯ ಬಳಿ ಮಂಗಳ”ಸೂತ್ರ’ ಹಿಡಿದು “ಗುರು’ವಾರ ಕಾದಿರುತ್ತೇನೆ. ನಿನಗೂ ನನ್ನ ಮೇಲೆ ಮನಸ್ಸಿದ್ದರೆ ನನ್ನ ಬಳಿ ಅರ್ಧ ಅಡಿಯೂ ಜಾಗ ಉಳಿಯದಂತೆ ನಿಂತು “ಐ ಲವ್ ಯೂ’ ಎಂದುಬಿಡು. ಇಲ್ಲ, ನಾಚಿಕೆಯಾಗುವುದೆಂದರೆ ನನ್ನ ಪಕ್ಕದಲ್ಲೇ ತಲೆ ತಗ್ಗಿಸಿಕೊಂಡು ಹಾದು ಒಮ್ಮೆ 45 ಡಿಗ್ರಿಯಷ್ಟು ತಿರುಗಿ ನಸುನಕ್ಕುಬಿಡು. ಉಳಿದ ಲೆಕ್ಕಾಚಾರವೆಲ್ಲ ನಾನೇ ಮಾಡಿಕೊಳ್ಳುವೆ.
ಅರ್ಜುನ್ ಶೆಣೈ