ಕಲಬುರಗಿ: ಜಿಲ್ಲಾದ್ಯಂತ ಆ. 10ರಂದು ರಾಷ್ಟ್ರೀಯ ಜಂತು ಹುಳು ನಿವಾರಣಾ ದಿನಾಚರಣೆ ಹಮ್ಮಿಕೊಳ್ಳಲಾಗಿದೆ. 19 ವರ್ಷದೊಳಗಿನ ಒಟ್ಟು 8.50 ಲಕ್ಷ ಮಕ್ಕಳಿಗೆ ಅಲ್ಟೆಂಡಾಜೋಲ್ ಮಾತ್ರೆ ನೀಡಲಾಗುವುದು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ| ಎಂ.ಕೆ. ಪಾಟೀಲ ತಿಳಿಸಿದರು.
ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲೆಯ 3098 ಅಂಗನವಾಡಿ ಕೇಂದ್ರಗಳು, 3604 ಶಾಲೆಗಳು, 191 ಕಾಲೇಜುಗಳ ಮೂಲಕ 1 ರಿಂದ 2 ವರ್ಷದೊಳಗಿನ 69,493 ಹಾಗೂ 3ರಿಂದ 19 ವರ್ಷದೊಳಗಿನ 7,81,088 ಮಕ್ಕಳಿಗೆ ಜಂತು ನಿವಾರಕ ಮಾತ್ರೆ ನುಂಗಿಸಲಾಗುವುದು. ಈ ಬಾರಿ ಖಾಸಗಿ ಶಾಲೆ ಮಕ್ಕಳಿಗೂ ಮಾತ್ರೆ ನೀಡಲಾಗುತ್ತಿದೆ ಎಂದು ತಿಳಿಸಿದರು.
ಜಂತು ಹುಳು ರೋಗ ಮುಖ್ಯವಾಗಿ ಕಲುಷಿತ ನೀರು, ಬರಿಗಾಲಿನಿಂದ ನಡೆಯುವುದು, ಅಶುದ್ಧ ಆಹಾರ ಸೇವನೆಯಿಂದ ಹರಡುತ್ತದೆ. ಜಂತು ಹುಳು ಬಾಧೆಯಿಂದ ಬಳಲುವ ಮಕ್ಕಳು ಸದಾ ಅನಾರೋಗ್ಯ ಪೀಡಿತರಾಗಿ ದೈಹಿಕ ಬೆಳವಣಿಗೆ ಕುಂಠಿತವಾಗುತ್ತದೆ. ಇದರಿಂದಾಗಿ ಕಲಿಕೆ ಕ್ಷಮತೆ ಕಡಿಮೆಯಾಗಿ ಮಕ್ಕಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಮಕ್ಕಳಿಗೆ 6 ತಿಂಗಳಿಗೊಂದು ಬಾರಿ ಅಲ್ಟೆಂಡಾಜೋಲ್ ಮಾತ್ರೆ ನುಂಗಿಸುವ ಮೂಲಕ ರೋಗ ನಿವಾರಣೆಗೆ ಪ್ರಯತ್ನಿಸಲಾಗುತ್ತಿದೆ ಎಂದು ತಿಳಿಸಿದರು.
ಎಲ್ಲ ಶಾಲೆ, ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳಿಗೆ ಮಾತ್ರೆ ನುಂಗಿಸುವಾಗ ಶೌಚದ ನಂತರ ಹಾಗೂ ಊಟಕ್ಕೆ ಮೊದಲು ಸ್ವತ್ಛವಾಗಿ ಕೈ ತೊಳೆಯುವ ಕ್ರಮಗಳನ್ನು ತಿಳಿಸಲಾಗುತ್ತಿದೆ. ವೈಯಕ್ತಿಕ ಸ್ವತ್ಛತೆ ಕುರಿತು ಸಹ ಜಾಗೃತಿ ಮೂಡಿಸಲಾಗುತ್ತಿದೆ. ಎರಡು ವರ್ಷದ ಒಳಗಿನ ಮಕ್ಕಳಿಗೆ ಅರ್ಧ ಹಾಗೂ ಮೂರು ವರ್ಷ ಮೇಲ್ಪಟ್ಟ ಮಕ್ಕಳಿಗೆ ಒಂದು ಅಲ್ಟೆಂಡಾಜೋಲ್ಮಾತ್ರೆ ನುಂಗಿಸಲಾಗುತ್ತದೆ. ಜಿಲ್ಲೆಯಲ್ಲಿ ಅಲ್ಟೆಂಡಾಜೋಲ್ ಮಾತ್ರೆ ಸಾಕಷ್ಟು ದಾಸ್ತಾನು ಇದ್ದು, ಅಂಗನವಾಡಿ, ಆಶಾ ಕಾರ್ಯಕರ್ತೆಯರು ಹಾಗೂ ಶಿಕ್ಷಕರಿಗೆ ಮಾತ್ರೆ ನುಂಗಿಸುವ ತರಬೇತಿ ನೀಡಲಾಗಿದೆ ಎಂದರು.
ಜಿಲ್ಲೆಯಲ್ಲಿ ಮುಂದುವರಿದ ಗ್ರಾಮ ಸ್ವರಾಜ್ ಅಭಿಯಾನದಡಿ ತೀವ್ರಗೊಂಡ ಮಿಷನ್ ಇಂದ್ರಧನುಷ ಮೊದಲ ಸುತ್ತು ಕಾರ್ಯಕ್ರಮವನ್ನು ಆ. 13, 14, 17 ಹಾಗೂ 18ರಂದು ಹಮ್ಮಿಕೊಳ್ಳಲಾಗಿದೆ. ಜಿಲ್ಲಾದ್ಯಂತ 28,82,478 ಜನರ ಸಮೀಕ್ಷೆ ಕೈಗೊಂಡು 1975 ಗರ್ಭಿಣಿಯರು, 2 ವರ್ಷದೊಳಗಿನ 9730 ಮಕ್ಕಳು, 5-6 ವರ್ಷದೊಳಗಿನ 6067 ಮಕ್ಕಳಿಗೆ ಲಸಿಕೆ ನೀಡಲು ಕ್ರಿಯಾ ಯೋಜನೆ ರೂಪಿಸಲಾಗಿದೆ.
ಇದಕ್ಕಾಗಿ 1026 ಲಸಿಕಾ ಕೇಂದ್ರ ಹಾಗೂ 287 ಸಂಚಾರಿ ಲಸಿಕಾ ತಂಡ ಸಹ ಸಿದ್ಧಪಡಿಸಲಾಗಿದೆ. ಸೆಪ್ಟೆಂಬರ್ ತಿಂಗಳಲ್ಲಿ 10, 11, 12 ಮತ್ತು 14ರಂದು ಎರಡನೇ ಸುತ್ತು ಹಾಗೂ ಅಕ್ಟೋಬರ್ ತಿಂಗಳಲ್ಲಿ 9, 10, 12 ಮತ್ತು 15ರಂದು ಮೂರನೇ ಸುತ್ತಿನ ತೀವ್ರಗೊಂಡ ಇಂದ್ರಧನುಷ ಲಸಿಕಾ ಕಾರ್ಯಕ್ರಮ ನಡೆಸಲಾಗುವುದು ಎಂದು ತಿಳಿಸಿದರು. ಆರ್‌ಸಿಎಚ್ ಅಧಿಕಾರಿ ಡಾ| ಅಂಬಾರಾಯ ರುದ್ರವಾಡಿ, ಸರ್ವೇಲನ್ಸ್ ಅಧಿಕಾರಿ ಡಾ| ತಾಳಿಕೋಟಿ, ತಾಲೂಕು ವೈದ್ಯಾಧಿಕಾರಿ ಡಾ| ರಾಜಕುಮಾರ ಸುದ್ದಿಗೋಷ್ಠಿಯಲ್ಲಿದ್ದರು.