Advertisement

ಪ್ರತಿಭಾವಂತರಿಗೊಂದು ಸಿನಿಮಾ ಸಂತೆ

11:07 AM Nov 28, 2017 | Team Udayavani |

ಈ ಕಲರ್‌ಫ‌ುಲ್‌ ಜಗತ್ತಿಗೆ ಕಾಲಿಡಬೇಕು ಅಂತ ಹಂಬಲಿಸುವ ಮಂದಿಗೆ ಲೆಕ್ಕವಿಲ್ಲ. ಆದರೆ, ಅಂತಹ ಪ್ರತಿಭಾವಂತರಿಗೆ ವೇದಿಕೆ ಸಿಗೋದು ಕಷ್ಟ. ಅಂತಹವರಿಗಾಗಿಯೇ ಈಗ “ಸಿನಿಮಾ ಸಂತೆ’ ಹೊಸದೊಂದು ವೇದಿಕೆ ಕಲ್ಪಿಸುತ್ತಿದೆ.  “ಸಿನಿ ಸೂರು’ ಎಂಬ ಸಂಸ್ಥೆ ಮೂಲಕ ನಡೆಯಲಿರುವ ಈ “ಸಿನಿಮಾ ಸಂತೆ’, ಹಲವು ಪ್ರಥಮಗಳಿಗೆ ಕಾರಣವಾಗಲು ಸಜ್ಜಾಗುತ್ತಿದೆ. ಡಿಸೆಂಬರ್‌ 9 ಹಾಗು 10 ರಂದು ಕಂಠೀರವ ಸ್ಟುಡಿಯೋದಲ್ಲಿ “ಸಿನಿಮಾ ಸಂತೆ’ಗೆ ಚಾಲನೆ ಸಿಗಲಿದೆ.

Advertisement

ಈ ಸಂತೆಯಲ್ಲಿ ಸಿನಿಮಾರಂಗದ ಎಲ್ಲಾ ವಿಭಾಗದ ತಂತ್ರಜ್ಞರು, ನಿರ್ದೇಶಕರು, ನಿರ್ಮಾಪಕರು, ಛಾಯಾಗ್ರಾಹಕರು, ಸಂಗೀತ ನಿರ್ದೇಶಕರು, ನೃತ್ಯ ನಿರ್ದೇಶಕರು, ಸಾಹಸ ನಿರ್ದೇಶಕರು, ಸಂಕಲನಕಾರರು, ಬರಹಗಾರರು, ಚಲನಚಿತ್ರ ಮಂದಿರದ ಮಾಲೀಕರು, ವಿತರಕರು, ಜಾಹಿರಾತುದಾರರ ಹಾಗು ಕಲಾವಿದರು ಒಂದೆಡೆ ಸೇರುತ್ತಿದ್ದಾರೆ. ಖ್ಯಾತ ನಿರ್ಮಾಪಕ,ನಿರ್ದೇಶಕರ ಮುಂದೆ ಪ್ರತಿಭಾವಂತರು ತಮ್ಮ ಪ್ರತಿಭೆ ತೋರಿಸಲು ಸೂಕ್ತ ವೇದಿಕೆ ಇದಾಗಿದೆ.

ಸಿನಿ ಸೂರು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕಿ ಅನುಪಮ ಶರಧಿ ಅವರಿಗೆ ಇದು ಮೊದಲ ಪ್ರಯತ್ನ. “ಚಿತ್ರರಂಗದ ಎಲ್ಲಾ ತಂತ್ರಜ್ಞರು, ಕಲಾವಿದರನ್ನು ಒಟ್ಟುಗೂಡಿಸುವ ಉದ್ದೇಶ ಮತ್ತು ಪ್ರತಿಭಾವಂತರಿಗೆ ಸೂಕ್ತ ವೇದಿಕೆ ಕಲ್ಪಿಸುವ ಪ್ರಯತ್ನಕ್ಕೆ ಕೈ ಹಾಕಿದ್ದೇವೆ. ಪ್ರತಿಭಾವಂತರಿಗೆ ಐದು ವೇದಿಕೆಗಳನ್ನು ಇಲ್ಲಿ ಕಲ್ಪಿಸಲಾಗಿದೆ. ಆ ಮೂಲಕ ತಮ್ಮೊಳಗಿನ ಪ್ರತಿಭೆಯನ್ನು ಹೊರ ಹಾಕುವ ಮೂಲಕ ತಮ್ಮ ಆಸೆ, ಆಕಾಂಕ್ಷೆ ಈಡೇರಿಸಿಕೊಳ್ಳಲು ಈ ಸಿನಿಮಾ ಸಂತೆ ಮುಖ್ಯ ಪಾತ್ರ ವಹಿಸಲಿದೆ ಎಂದು ವಿವರ ಕೊಡುತ್ತಾರೆ ಅನುಪಮ.

“ಈ ಸಿನಿಮಾ ಸಂತೆಗೆ ದಕ್ಷಿಣ ಭಾರತ ಚಲನಚಿತ್ರ ವಾಣಿಜ್ಯ ಮಂಡಳಿ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ, ನಿರ್ದೇಶಕ, ನಿರ್ಮಾಪಕರ ಸಂಘ, ಒಕ್ಕೂಟ ಸೇರಿದಂತೆ ಹಲವು ಸಂಘಟನೆಗಳು ಸಾಥ್‌ ಕೊಡುತ್ತಿವೆ. ಹೊಸಬರಿಗೆ ತಮ್ಮ ಪ್ರತಿಭೆ ತೋರಿಸಲು ವೇದಿಕೆ ರೂಪಿಸಿದ್ದು, ಅಲ್ಲಿ ಸಿನಿಮಾ ನಿರ್ದೇಶಕರು ಅವರ ಪ್ರತಿಭೆಯನ್ನು ಪರಿಶೀಲಿಸಬಹುದಾಗಿದೆ’ ಎಂಬುದು ಕುಮಾರ್‌ ಈಶ್ವರ್‌ ಮಾತು. ರಾಕ್‌ಲೈನ್‌ ವೆಂಕಟೇಶ್‌ ಅವರ ಸಹಕಾರ ಈ ಸಿನಿಮಾ ಸಂತೆಗೆ ಇದೆ.

ಸಾಕಷ್ಟು ಸಲಹೆಗಳನ್ನು ಸಹ ರಾಕ್‌ಲೈನ್‌ ಕೊಟ್ಟಿದ್ದಾರೆ. ಆಸಕ್ತರು ಬಸವೇಶ್ವರ ನಗರ ಪೊಲೀಸ್‌ಠಾಣೆ ಸಮೀಪ ಇರುವ “ಸಿನಿ ಸೂರು’ ಸಂಸ್ಥೆಯಲ್ಲಿ ನೋಂದಣಿ ಮಾಡಿಸಿಕೊಳ್ಳಬಹುದಾಗಿದೆ. ಈ ವೇದಿಕೆಯಲ್ಲಿ ಕಥೆ, ಕಾದಂಬರಿ, ನಾಟಕ ಮತ್ತು ಹಾಡು ಪ್ರದರ್ಶಿಸಲು ವ್ಯವಸ್ಥೆ ಮಾಡಲಾಗಿದೆ. ಗಾಯನ ಮಾಡಲು ಇಚ್ಛಿಸುವವರು, ನಿರ್ದೇಶಕ, ನಿರ್ಮಾಪಕರ ಎದುರು ತಮ್ಮ ಪ್ರತಿಭೆ ತೋರಿಸುವವರು ಮತ್ತು  ಮನೆ, ಕಚೇರಿ, ಹೊಲ, ತೋಟ, ಕ್ಲಬ್‌, ಹೋಟೆಲ್‌, ಬಾರ್‌, ಶಾಲೆ, ಕಾಲೇಜು, ಆಸ್ಪತ್ರೆ, ದೇವಸ್ಥಾನ, ಇನಿತರೆ ಸ್ಥಳ ಚಿತ್ರೀಕರಣಕ್ಕೆ ನೀಡುವರು

Advertisement

ಹಾಗು ಈ ಸಿನಿಮಾ ಸಂತೆಯ ವೇದಿಕೆಯಲ್ಲಿ ಸುಮಾರು 10 ನಿಮಿಷದ ಕಿರುಚಿತ್ರವನ್ನು ನಿರ್ಮಾಪಕರ ಎದರು ಪ್ರದರ್ಶಿಸುವವರು ಕಚೇರಿಯಲ್ಲಿ ನೋಂದಣಿ ಮಾಡಿಕೊಳ್ಳಬೇಕು. ಇದರೊಂದಿಗೆ ಇನ್ನು ಚಿತ್ರಂಗದ ಅನೇಕ ವಿಭಾಗಗಳ ಕುರಿತ ಪ್ರದರ್ಶನವನ್ನು ಏರ್ಪಡಿಸಲಾಗಿದೆ ಎನ್ನುತ್ತಾರೆ ಕುಮಾರ್‌. ಹಾಗಂತ ಇದು ಉಚಿತವಲ್ಲ. ಪ್ರತಿಯೊಬ್ಬರಿಗೂ 200 ರೂ.ಗಳ ಶುಲ್ಕವಿದೆ. ಈ ಶುಲ್ಕ ಪಡೆಯೋಕೆ ಕಾರಣ, ಕಂಠೀರವ ಸ್ಟುಡಿಯೋದಲ್ಲಿ ಸಾಕಷ್ಟು ಮಂದಿ ಅರ್ಜಿ ಪಡೆಯದೆ ಬಂದು, ಹೆಚ್ಚು ಗೊಂದಲ ಉಂಟು ಮಾಡಬಹುದು ಎಂಬ ಕಾರಣಕ್ಕೆ ಶುಲ್ಕ ನಿಗಧಿಪಡಿಸಲಾಗಿದೆಯಂತೆ.

Advertisement

Udayavani is now on Telegram. Click here to join our channel and stay updated with the latest news.

Next