Advertisement

Tunnel: ಅಪಾಯಕಾರಿ “ಬಿಲ”ಗಳ ಕಥೆ- ರ‍್ಯಾಟ್‌-ಹೋಲ್‌ ಮೈನಿಂಗ್‌ ಎಂಬ ಡೆಡ್ಲಿ ಟ್ರ್ಯಾಪ್‌

09:40 PM Nov 28, 2023 | Team Udayavani |

ಅಸುರಕ್ಷಿತ ಎಂಬ ಕಾರಣಕ್ಕೆ ದೇಶದಲ್ಲಿ ಬ್ಯಾನ್‌ ಆಗಿದ್ದ ಗಣಿಗಾರಿಕೆಯ ವಿಧಾನವೊಂದು ಈಗ ಸುರಂಗದಡಿ ಸಿಲುಕಿದ್ದ 41 ಕಾರ್ಮಿಕರನ್ನು ಸುರಕ್ಷಿತವಾಗಿ ಹೊರತರುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಅಮೆರಿಕದಿಂದ ತರಿಸಲಾದ ಆಗರ್‌ ಮಷೀನ್‌ ಸೇರಿದಂತೆ ಹೈಟೆಕ್‌ ಯಂತ್ರಗಳು ಕೈಕೊಟ್ಟಾಗ ನೆರವಿಗೆ ಬಂದಿದ್ದೇ ಈ ರ‍್ಯಾಟ್‌-ಹೋಲ್‌ ಮೈನಿಂಗ್‌. ಏನಿದು ವಿಧಾನ? ಇದಕ್ಕೆ ನಿಷೇಧ ಹೇರಿದ್ದೇಕೆ ಎಂಬ ಮಾಹಿತಿ ಇಲ್ಲಿದೆ.

Advertisement

ಏನಿದು ರ‍್ಯಾಟ್‌ ಹೋಲ್‌ ಮೈನಿಂಗ್‌?
ಪುಟ್ಟ ಪುಟ್ಟ ಗುಂಡಿಗಳನ್ನು ಅಂದರೆ 4 ಅಡಿಗಿಂತಲೂ ಕಡಿಮೆ ಅಗಲದ ಹೊಂಡಗಳನ್ನು ಅಗೆದು, ಭೂಮಿಯ ಆಳಕ್ಕಿಳಿದು ಕಲ್ಲಿದ್ದಲನ್ನು ಹೊರತೆಗೆಯುವ ವಿಧಾನವಿದು. ಕೈಯ್ಯಲ್ಲೇ ಒಬ್ಬ ವ್ಯಕ್ತಿಗಷ್ಟೇ ಹೋಗಿ-ಬರಲು ಸಾಧ್ಯವಾಗುವಂಥ ಕಿರಿದಾದ ಗುಂಡಿಗಳನ್ನು ಅಗೆಯುವವರನ್ನು ರ‍್ಯಾಟ್‌-ಹೋಲ್‌ ಮೈನರ್ಸ್‌ ಎಂದು ಕರೆಯುತ್ತಾರೆ. ಗುಂಡಿ ಅಗೆದ ಬಳಿಕ ದಪ್ಪ ಹಗ್ಗ ಮತ್ತು ಬಿದಿರಿನ ಏಣಿಗಳ ಮೂಲಕ ಕಾರ್ಮಿಕನು ಗುಂಡಿಯೊಳಕ್ಕೆ ಇಳಿಯುತ್ತಾನೆ. ಕಲ್ಲಿದ್ದಲಿನ ಪದರವು ಸಿಕ್ಕಿದೊಡನೆ, ಅದನ್ನು ಹೊರತೆಗೆಯುವ ಕೆಲಸ ನಡೆಯುತ್ತದೆ. ಈ ಗುಂಡಿಗಳು ಕೆಲವೊಮ್ಮೆ 100ರಿಂದ 400 ಅಡಿ ಆಳವೂ ಇರುತ್ತದೆ.

ಅತ್ಯಂತ ಅಪಾಯಕಾರಿ
ಈ ವಿಧಾನವು ಅತ್ಯಂತ ಅಪಾಯಕಾರಿ ಎಂದು ಪರಿಗಣಿಸಲ್ಪಟ್ಟಿದೆ. ಏಕೆಂದರೆ, ಈ ಕಿರಿದಾದ ಗುಂಡಿಗೆ ಒಮ್ಮೆಗೆ ಒಬ್ಬ ಕಾರ್ಮಿಕನಷ್ಟೇ ಇಳಿಯಲು ಸಾಧ್ಯ. ಒಳಕ್ಕೆ ಹೋದ ಆತ ಹಲವು ಪ್ರಕರಣಗಳಲ್ಲಿ ಉಸಿರಾಟದ ತೊಂದರೆ, ಆಮ್ಲಜನಕದ ಕೊರತೆ ಮತ್ತು ಹಸಿವಿನಿಂದ ಮೃತಪಟ್ಟ ಉದಾಹರಣೆಗಳಿವೆ.

ಹಲವು ದುರಂತಗಳು
ಇದೊಂದು ಅವೈಜ್ಞಾನಿಕ ವಿಧಾನ ಎಂಬ ಕಾರಣಕ್ಕಾಗಿ 2014ರಲ್ಲೇ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ ರ‍್ಯಾಟ್‌-ಹೋಲ್‌ ಮೈನಿಂಗ್‌ಗೆ ನಿಷೇಧ ಹೇರಿತ್ತು. ಆದರೂ, ಮೇಘಾಲಯ, ಮಣಿಪುರ ಸೇರಿದಂತೆ ಈಶಾನ್ಯ ರಾಜ್ಯಗಳಲ್ಲಿ ಈಗಲೂ ಈ ವಿಧಾನ ಚಾಲ್ತಿಯಲ್ಲಿದೆ. 2018ರಲ್ಲಿ ಅಕ್ರಮ ಗಣಿಗಾರಿಕೆಯಲ್ಲಿ ತೊಡಗಿದ್ದ 15 ಮಂದಿ ಗಣಿಯೊಳಗೆ ಪ್ರವಾಹದ ನೀರು ತುಂಬಿದ ಕಾರಣ, ಒಳಗೆ ಸಿಲುಕಿಕೊಂಡಿದ್ದರು. 2 ತಿಂಗಳಿಗೂ ಅಧಿಕ ಕಾಲ ನಡೆದ ರಕ್ಷಣಾ ಕಾರ್ಯಾಚರಣೆಯಲ್ಲಿ ಕೊನೆಗೂ 2 ಮೃತದೇಹಗಳಷ್ಟೇ ಹೊರತೆಗೆಯಲು ಸಾಧ್ಯವಾಯಿತು. 2021ರಲ್ಲೂ 5 ಕಾರ್ಮಿಕರು ಸಿಲುಕಿಕೊಂಡು, ಆ ಪೈಕಿ 3 ಮೃತದೇಹಗಳಷ್ಟೇ ಸಿಕ್ಕಿದವು.

ನಿಷೇಧವಾಗಿದ್ದೇಕೆ?
ಇಲಿ ಬಿಲದ ಮಾದರಿಯ ಗುಂಡಿಗಳಲ್ಲಿ ಸಮರ್ಪಕ ಗಾಳಿ-ಬೆಳಕಿನ ವ್ಯವಸ್ಥೆ ಇರುವುದಿಲ್ಲ, ಕಾರ್ಮಿಕರು ಕೂಡ ಜೀವರಕ್ಷಕ ವ್ಯವಸ್ಥೆಗಳನ್ನು ಹೊಂದಿರುವುದಿಲ್ಲ. ಪರಿಣಾಮ, ಕಾರ್ಮಿಕರ ಪ್ರಾಣಹಾನಿ, ದುರಂತಗಳ ಸಂಖ್ಯೆ ಹೆಚ್ಚಳವಾಗುತ್ತಿದೆ. ಜತೆಗೆ, ಭೂಮಿಗೆ ಹಾನಿ, ಅರಣ್ಯ ನಾಶ ಮತ್ತು ಜಲಮಾಲಿನ್ಯಕ್ಕೂ ಇದು ಕಾರಣವಾಗುತ್ತಿದೆ ಎಂಬ ಕಾರಣಕ್ಕೆ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣವು 2014ರಲ್ಲಿ ರ‍್ಯಾಟ್‌ ಹೋಲ್‌ ಮೈನಿಂಗ್‌ಗೆ ನಿಷೇಧ ಹೇರಿ ಆದೇಶ ಹೊರಡಿಸಿತ್ತು.

Advertisement

ರ‍್ಯಾಟ್‌-ಹೋಲ್‌ ಮೈನಿಂಗ್‌ ನಿಷೇಧಗೊಂಡಿದ್ದು ಯಾವಾಗ?- 2014
ಈ ವಿಧಾನದಲ್ಲಿ ಗುಂಡಿಗಳು ಎಷ್ಟು ಅಗಲವಿರುತ್ತವೆ? – ಗರಿಷ್ಠ 4 ಅಡಿ
ಗುಂಡಿಗಳ ಆಳ ಎಷ್ಟಿರುತ್ತವೆ? – 100ರಿಂದ 400 ಅಡಿ

Advertisement

Udayavani is now on Telegram. Click here to join our channel and stay updated with the latest news.

Next