Advertisement
ಜ. 31ರಿಂದ ಫೆ. 6ರ ವರೆಗೆ ಪಜಿರಡ್ಕ ಶ್ರೀ ಸದಾಶಿವೇಶ್ವರ ದೇವಸ್ಥಾನದ ಪುನರ್ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವವು ನಿಗದಿಯಾಗಿದೆ. ಎಲ್ಲೆಡೆ ಸಿದ್ಧತೆಗಳು ನಡೆಯುತ್ತಿರುವಾಗಲೇ ಪಜಿರಡ್ಕ ದೇವಸ್ಥಾನಕ್ಕೆ ಹತ್ತಿರದ ಪ್ರದೇಶಗಳಲ್ಲಿ ಈವರೆಗೆ ಕಂಡಿರದ ವಾರಸುದಾರರಿಲ್ಲದ ಬಸವ ರಾತ್ರಿ ಹೊತ್ತು ಓಡಾಡುವುದು ಗೋಚರಿಸಿದೆ.
ಸಂಗಮ ಕ್ಷೇತ್ರ ಪಜಿರಡ್ಕಕ್ಕೆ 800 ವರ್ಷಗಳ ಇತಿಹಾಸವಿದೆ. ಇದು ನೇತ್ರಾವತಿ ಮತ್ತು ಮೃತ್ಯುಂಜಯ ನದಿ ಸಂಗಮ ಕ್ಷೇತ್ರವಾಗಿದೆ. ಹಿಂದೆ ಕ್ಷೇತ್ರದಲ್ಲಿ ಬಸವ ಉತ್ಸವ ರಥೋತ್ಸವಗಳು ನಡೆಯುತ್ತಿತ್ತಂತೆ. ಆದರೆ 1923ರಲ್ಲಿ ಪ್ರವಾಹ ಸಂಭವಿಸಿ ಕ್ಷೇತ್ರದ ರಥ ಸೇರಿದಂತೆ ಬಹುತೇಕ ಸೊತ್ತುಗಳು ನೀರಿನಲ್ಲಿ ಕೊಚ್ಚಿಹೋಗಿದ್ದವು ಎಂಬ ಉಲ್ಲೇಖವಿದೆ. ಬಳಿಕ ರಥೋತ್ಸವ ನಿಂತು ಹೋಗಿತ್ತಂತೆ. 2019ರಲ್ಲಿ ಮತ್ತೆ ದೇವಸ್ಥಾನ ಪ್ರವಾಹಕ್ಕೆ ತುತ್ತಾಗಿತ್ತು. ಮೊದಲನೆಯ ಪ್ರವಾಹ ಸಂಭವಿಸಿ ಪ್ರಸಕ್ತ 100 ವರ್ಷದ ಬಳಿಕ ದೇವಸ್ಥಾನ ಬ್ರಹ್ಮಕಲಶೋತ್ಸವಕ್ಕೆ ದಿನ ನಿಗದಿಯಾಗಿರುವ ಸಂದರ್ಭ ಬಸವ ಕಂಡುಬಂದಿರುವುದು ಕಾಕತಾಳೀಯ ಎಂಬಂತಾಗಿದೆ.
Related Articles
ಬ್ರಹ್ಮಕಲಶೋತ್ಸವದ ಶುಭ ಸಂದರ್ಭದಲ್ಲಿ ಇಂತಹದ್ದೊಂದು ವಿಶೇಷ ನಡೆದಿದ್ದು ಕುತೂಹಲ ಮೂಡಿಸಿದೆ. ಈ ಬಸವ ಯಾರಿಗೂ ತೊಂದರೆ ಮಾಡುತ್ತಿಲ್ಲ. ಆದರೆ ಎಲ್ಲಿಂದ ಬಂದಿದೆ ಎಂಬುದು ತಿಳಿದಿಲ್ಲ. ಬ್ರಹ್ಮಕಲಶೋತ್ಸವ ಸಂದರ್ಭ ಈ ಘಟನೆ ಊರಿನ ಮಂದಿಗೆ ಅಚ್ಚರಿ ಮೂಡಿಸಿದೆ ಎಂದು ಸಮಿತಿ ಕಾರ್ಯಾಧ್ಯಕ್ಷ ತುಕರಾಮ್ ಸಾಲ್ಯಾನ್ ಉದಯವಾಣಿ ಪತ್ರಿಕೆಗೆ ತಿಳಿಸಿದ್ದಾರೆ.
Advertisement