Advertisement

ದಂಡದ ಪ್ರಮಾಣ ಗಣನೀಯ ಹೆಚ್ಚಳ

11:25 AM Sep 14, 2019 | Team Udayavani |

ಗದಗ: ಕೇಂದ್ರ ಸರಕಾರ ಮೋಟಾರ್‌ ವಾಹನ ಕಾಯ್ದೆಗೆ ತಿದ್ದುಪಡಿ ತಂದಿದ್ದು, ದಂಡವನ್ನು ಗಣನೀಯವಾಗಿ ಹೆಚ್ಚಿಸಿದೆ. ಹೊಸ ಕಾಯ್ದೆಯನ್ನು ಜಿಲ್ಲೆಯಲ್ಲಿ ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸುವ ಮುನ್ನವೇ ಸಾರ್ವಜನಿಕರಿಗೆ ಬಿಸಿ ಮುಟ್ಟಿದೆ. ಗುರುವಾರದವರೆಗೆ 388 ಪ್ರಕರಣಗಳು ದಾಖಲಾಗಿದ್ದು, 3.19 ಲಕ್ಷ ರೂ. ಮೊತ್ತದಷ್ಟು ದಂಡ ವಿಧಿಸಲಾಗಿದೆ. ಹೀಗಾಗಿ ವಾಹನ ಸವಾರರು ಡಿಎಲ್, ವಾಹನಗಳ ವಿಮೆ ಹಾಗೂ ಎಮಿಷನ್‌ ಟೆಸ್ಟ್‌ ಪ್ರಮಾಣ ಪತ್ರಗಳಿಗೆ ಮುಗಿಬಿದ್ದಿದ್ದಾರೆ.

Advertisement

ಕೇಂದ್ರ ಸರಕಾರದ ಹೊಸ ಮೋಟರ ವಾಹನ ಕಾಯ್ದೆಯಂತೆ ದುಪ್ಪಟ್ಟು ಮೊತ್ತದ ದಂಡ ವಿಧಿಸಲಾಗುತ್ತಿಲ್ಲ. ಆದರೂ, ಅಲ್ಲಲ್ಲಿ ವಾಹನಗಳ ತಪಾಸಣೆ ನಡೆಸಿ, ವಿಧಿಸುತ್ತಿರುವ 1ರಿಂದ 2 ಸಾವಿರ ರೂ. ದಂಡದಿಂದ ಸಾರ್ವಜನಿಕರು ಬೆಚ್ಚಿ ಬಿದ್ದಿದ್ದಾರೆ. ಗದಗ- ಬೆಟಗೇರಿ ನಗರವೊಂದರಲ್ಲೇ 229 ಪ್ರಕರಣಗಳು ದಾಖಲಾಗಿದ್ದು, 1.87 ಲಕ್ಷ ರೂ. ದಂಡ ಸಂಗಹವಾಗಿದೆ. ಹೀಗಾಗಿ ಅಗತ್ಯ ದಾಖಲೆಗಳನ್ನು ಹೊಂದಲು ವಿವಿಧ ಕಚೇರಿಗಳ ಬಾಗಿಲು ತಟ್ಟುವಂತೆ ಮಾಡಿದೆ.

ಸದ್ಯ ವಾಹನ ಚಾಲನಾ ಪ್ರಮಾಣ ಪತ್ರವನ್ನು ಪ್ರಮುಖವಾಗಿ ಪರಿಗಣಿಸುತ್ತಿರುವ ಪೊಲೀಸರು ಹಾಗೂ ಆರ್‌ಟಿಒ ಅಧಿಕಾರಿಗಳು, ವಾಹನ ಚಲಾಯಿಸುವಾಗ ಸಿಕ್ಕಿ ಬೀಳುವ ಅಪ್ರಾಪ್ತರಿಗೆ ಬುದ್ಧಿ ಹೇಳಿ, ದಂಡ ವಿಧಿಸಲಾಗುತ್ತಿದೆ. ಜಿಲ್ಲೆಯಲ್ಲಿ ದಾಖಲಾಗಿರುವ 388 ಪ್ರಕರಣಗಳಲ್ಲಿ ಬಹುತೇಕ ಡಿಎಲ್, ಆರ್‌ಸಿ ಬುಕ್‌ ಇಲ್ಲದಿರುವುದಕ್ಕೆ ಸಂಬಂಧಿಸಿವೆ. ಇನ್ನುಳಿದಂತೆ ಹೆಲ್ಮೆಟ್ ಹಾಗೂ ವಾಹನ ವಿಮೆಯನ್ನು ಕಡ್ಡಾಯವಾಗಿ ಹೊಂದಿರುವಂತೆ ಸಾರ್ವಜನಿಕರಿಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಪೊಲೀಸರು ತೊಡಗಿಸಿಕೊಂಡಿದ್ದಾರೆ.

ಅಲ್ಲದೇ, ಇಷ್ಟುದಿನ ಗಣೇಶ ಉತ್ಸವ ಹಾಗೂ ಮೊಹರಂ ಭದ್ರತೆಯಲ್ಲಿ ತೊಡಗಿದ್ದ ಪೊಲೀಸ್‌ ಅಧಿಕಾರಿಗಳು, ಇದೀಗ ರಸ್ತೆ ಸಂಚಾರ ಮತ್ತು ಅಪರಾಧ ಪ್ರಕರಣಗಳತ್ತ ಗಮನ ಹರಿಸುತ್ತಿದ್ದಾರೆ. ಹೀಗಾಗಿ ಮುಂದಿನ ದಿನಗಳಲ್ಲಿ ವಾಹನಗಳ ತಪಾಸಣೆ ಮತ್ತಷ್ಟು ಬಿಗಿ ಹಾಗೂ ವ್ಯಾಪಕವಾಗಬಹುದು ಎನ್ನಲಾಗಿದೆ.

 

Advertisement

•ವೀರೇಂದ್ರ ನಾಗಲದಿನ್ನಿ

Advertisement

Udayavani is now on Telegram. Click here to join our channel and stay updated with the latest news.

Next