Advertisement

ಜಿಲ್ಲಾಧಿಕಾರಿಯವರ ಜತೆ ಒಂದು ದಿನ ಕಳೆಯುವ ಅವಕಾಶ ಪಡೆದ ವಿದ್ಯಾರ್ಥಿನಿ!

09:55 PM Sep 15, 2022 | Team Udayavani |

ಚಾಮರಾಜನಗರ: ವಿಶ್ವ ಯುವ ಕೌಶಲ್ಯ ದಿನಾಚರಣೆಯ ಅಂಗವಾಗಿ ನಡೆಸಲಾದ ಪ್ರಬಂಧ ಸ್ಪರ್ಧೆಯಲ್ಲಿ ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದ ಕೊಳ್ಳೇಗಾಲದ ಜೆಎಸ್ಎಸ್ ಮಹಿಳಾ ಕಾಲೇಜಿನ ವಿದ್ಯಾರ್ಥಿನಿ ಜೆ. ಅಗ್ನೀಶ್ ಸಾರ ಅವರಿಗೆ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರೊಂದಿಗೆ ಒಂದು ದಿನ ಇದ್ದು ಜಿಲ್ಲಾಡಳಿತದ ಕಾರ್ಯ ವೈಖರಿ ವೀಕ್ಷಿಸುವ ಅಪೂರ್ವ ಅವಕಾಶ ದೊರೆಯಿತು.

Advertisement

ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ, ಕೊಳ್ಳೇಗಾಲ ಜೆಎಸ್‌ಎಸ್ ಮಹಿಳಾ ಕಾಲೇಜಿನ ಪ್ರಥಮ ಬಿ.ಕಾಂ ವಿದ್ಯಾರ್ಥಿನಿಯಾಗಿರುವ ಜೆ. ಅಗ್ನೀಶ್ ಸಾರಾ ಅವರನ್ನು ಜಿಲ್ಲಾಧಿಕಾರಿಗಳೊಂದಿಗೆ ಒಂದು ದಿನ ಎಂಬ ಕಾರ್ಯಕ್ರಮಕ್ಕೆ ಆಯ್ಕೆ ಮಾಡಲಾಗಿತ್ತು. ಜಿಲ್ಲಾ ಕೌಶಲ್ಯ ಅಭಿವೃದ್ದಿ, ಉದ್ಯಮ ಶೀಲತೆ ಮತ್ತು ಜೀವನೋಪಾಯ ಇಲಾಖೆ ಈ ಸ್ಪರ್ಧೆ ಏರ್ಪಡಿಸಿತ್ತು. ಈ ಹಿನ್ನೆಲೆಯಲ್ಲಿ ಗುರುವಾರ, ಜಿಲ್ಲಾಧಿಕಾರಿಯವರೊಂದಿಗೆ ಇದ್ದು ಜಿಲ್ಲಾಧಿಕಾರಿಯವರ ದಿನದ ಎಲ್ಲಾ ಕಾರ್ಯ ಚಟುವಟಿಕೆಗಳಲ್ಲಿ ಭಾಗವಹಿಸಿ ಜಿಲ್ಲಾಧಿಕಾರಿಯವರ ಕಾರ್ಯ ಕಲಾಪಗಳನ್ನು ಹತ್ತಿರದಲ್ಲಿ ನೋಡುವ ಅವಕಾಶ ಸಾರಾಗೆ ದೊರಕಿತು.

ಬೆಳಗ್ಗೆ ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾಧಿಕಾರಿ ಕಚೇರಿಗೆ ಪೋಷಕರೊಂದಿಗೆ ಆಗಮಿಸಿದ ಅಗ್ನೀಶ್ ಸಾರಾರನ್ನು ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಹೂಗುಚ್ಚ ನೀಡಿ ಸ್ವಾಗತಿಸಿದರು. ಆತ್ಮೀಯವಾಗಿ ಮಾತನಾಡಿದ ಜಿಲ್ಲಾಧಿಕಾರಿಯವರು ಮುಂದೆ ಏನಾಗಬೇಕೆಂದು ಬಯಸಿದ್ದೀರ ಎಂದು ಅಗ್ನೀಶ್ ಸಾರ ಅವರನ್ನು ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಅಗ್ನೀಶ್ ಸಾರ ಚಾರ್ಟೆಡ್ ಅಕೌಂಟೆಂಟ್ ಆಗಬೇಕು ಎಂದು ಕೊಂಡಿದ್ದೇನೆ ಎಂದರು.

ಬಳಿಕ ಜಿಲ್ಲಾಧಿಕಾರಿಯವರೊಂದಿಗೆ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ವಾಲ್ಮೀಕಿ ಭವನ ನಿರ್ವಹಣಾ ಸಮಿತಿ, ಗಿರಿಜನರ ಶೈಕ್ಷಣಿಕ ಅಭಿವೃದ್ದಿ ಸಂಬಂಧ ಸಭೆ, ದಸರಾ, ಮಹಾಲಯ ಅಮವಾಸ್ಯೆ, ದೀಪಾವಳಿ ಜಾತ್ರೆ ಪೂರ್ವಭಾವಿ ಸಭೆ ಸೇರಿದಂತೆ ಇತರೆ ಸಭೆಗಳಲ್ಲಿ ಅಗ್ನೀಶ್ ಸಾರ ಅವರು ಜಿಲ್ಲಾಧಿಕಾರಿಗಳ ಪಕ್ಕದಲ್ಲೇ ಕುಳಿತು ವೀಕ್ಷಿಸಿದರು. ಸಭೆ ಸಂದರ್ಭದಲ್ಲಿ ಟಿಪ್ಪಣಿ ಸಹ ಮಾಡಿಕೊಳ್ಳುತ್ತಿದ್ದರು.

ಜಿಲ್ಲಾಧಿಕಾರಿಯವರ ಕಚೇರಿಯಲ್ಲಿಯೂ ಜಿಲ್ಲಾಧಿಕಾರಿಯವರೊಂದಿಗಿದ್ದು ಹತ್ತಿರದಿಂದ ಆಡಳಿತ ಕಾರ್ಯಗಳನ್ನು ವೀಕ್ಷಿಸಿದರು. ಸಭೆಗಳ ಬಳಿಕ ಸಂಜೆ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರು ಅಗ್ನೀಶ್ ಸಾರ ಅವರನ್ನು ಸನ್ಮಾನಿಸಿ ಆತ್ಮೀಯವಾಗಿ ಬೀಳ್ಕೊಟ್ಟರು. ಮುಂದಿನ ಭವಿಷ್ಯ ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು.

Advertisement

ಇದೇ ವೇಳೆ ಅನಿಸಿಕೆ ಹಂಚಿಕೊಂಡ ಅಗ್ನೀಶ್ ಸಾರಾ, ಜಿಲ್ಲಾಧಿಕಾರಿಯವರೊಂದಿಗೆ ಇಡೀ ಒಂದು ದಿನ ಇದ್ದು ಕಾರ್ಯ ಆಡಳಿತ ವೀಕ್ಷಿಸಲು ನನಗೆ ಅನುವು ಮಾಡಿಕೊಟ್ಟಿದ್ದು ದೊಡ್ಡ ಅವಕಾಶವಾಗಿದೆ. ಇದು ನನಗೆ ಅತ್ಯಂತ ಸಂತಸ ತಂದಿದೆ. ಅವಕಾಶ ನೀಡಿದ ಜಿಲ್ಲಾಧಿಕಾರಿಗಳು, ಜಿಲ್ಲಾ ಕೌಶಲ್ಯ ಅಭಿವೃದ್ದಿ ಇಲಾಖೆಗೆ ಧನ್ಯವಾದಗಳು. ನನಗೆ ಬೆಂಬಲವಾಗಿ ನಿಂತಿರುವ ನನ್ನ ಪೋಷಕರಿಗೂ ಸಹ ವಂದನೆಗಳನ್ನು ತಿಳಿಸುತ್ತೇನೆ ಎಂದರು.

ಜಿಲ್ಲಾಧಿಕಾರಿಯವರು ಎಲ್ಲಾ ಸಭೆ ಕಾರ್ಯಗಳಲ್ಲಿ ಪಾಲ್ಗೊಂಡು ತಾಳ್ಮೆ, ಸಹನೆಯಿಂದ ಮಾಹಿತಿ ಪಡೆಯುವ ಹಾಗೂ ಸಲಹೆ ಸೂಚನೆಗಳನ್ನು ನೀಡುವ ವೈಖರಿಯನ್ನು ಹತ್ತಿರದಿಂದ ನೋಡುವ ಸದವಕಾಶ ದೊರೆಯಿತು. ಇದು ನನಗೆ ಸ್ಪೂರ್ತಿದಾಯಕವಾಗಿದೆ ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಎಸ್. ಕಾತ್ಯಾಯಿನಿದೇವಿ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಎಸ್. ಸುಂದರ್ ರಾಜ್, ಡಿವೈಎಸ್‌ಪಿ ಪ್ರಿಯದರ್ಶಿನಿ ಸಾಣೆಕೊಪ್ಪ, ಜಿಲ್ಲಾ ಕೌಶಲ್ಯಾಧಿಕಾರಿ ಎ. ಮಹಮ್ಮದ್ ಅಕ್ಬರ್, ಅಗ್ನೀಶ್ ಸಾರಾ ಅವರ ತಂದೆ ಜೋಸೆಫ್ ಅಲೆಕ್ಸಾಂಡರ್, ತಾಯಿ ಶರ್ಮಿಳಾ, ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next