ಜಗಳೂರು: ಕುಟುಂಬ ಆಧಾರ ಸ್ತಂಭವಾಗಿದ್ದ ತಂದೆ ತೀರಿಕೊಂಡು ಒಂದು ವರ್ಷ ಕಳೆದಿದೆ, ಬಡತನ ಕಾಡುತ್ತಿದೆ, ಕೂಲಿ-ನಾಲಿಯಿಂದ ತಾಯಿ ಸಂಸಾರ ಸಾಗಿಸುತ್ತಿದ್ದಾಳೆ. ಇಂತಹ ಕ್ಲಿಷ್ಟಕರ ವಾತಾವರಣದ ನಡುವೆಯೂ ವಿದ್ಯಾರ್ಥಿಯೊಬ್ಬ ಅತ್ಯುತ್ತಮ ಸಾಧನೆ ಮಾಡುವ ಮೂಲಕ ಇತರೆ ವಿದ್ಯಾರ್ಥಿಗಳಿಗೆ ಮಾದರಿಯಾಗಿದ್ದಾನೆ!
ತಾಲೂಕಿನ ಮುಸ್ಟೂರು ಗ್ರಾಮದ ಕೆ.ಎಂ.ತಿಪ್ಪೇಸ್ವಾಮಿ ಎಂಬ ಗ್ರಾಮೀಣ ಪ್ರದೇಶದ ವಿದ್ಯಾರ್ಥಿ, ಪ್ರತಿಭೆಗೆ ಬಡತನ ಅಡ್ಡಿಯಾಗಲ್ಲ ಎಂಬುದನ್ನು ಸಾಬೀತುಪಡಿಸಿದ್ದಾನೆ. ಕುಂಬಾರ ಸಮುದಾಯದ ಟೈಲರ್ ಮುಸ್ಟೂರು ನೆಂಬಾಕ್ಷಮ್ಮ ಎಂಬ ದಂಪತಿಯ ಪುತ್ರ ಕೆ.ಎಂ.ತಿಪ್ಪೇಸ್ವಾಮಿ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಇತರೇ ವಿದ್ಯಾರ್ಥಿಗಳಿಗಿಂತ ಅತಿ ಹೆಚ್ಚು ಅಂಕಗಳಿಸಿ ತಾಲೂಕಿಗೆ ಪ್ರಥಮ ಸ್ಥಾನ ಪಡೆದು ಹೆಗ್ಗಳಿಕೆ ಪಾತ್ರನಾಗಿದ್ದಾನೆ.
ಚಿಕ್ಕಂದಿನಿಂದಲೂ ಈತ ಪ್ರತಿಭಾನ್ವಿತ ವಿದ್ಯಾರ್ಥಿ. ಎಸ್ಸೆಸ್ಸೆಲ್ಸಿಯಲ್ಲಿ 582 ಅಂಕ ಗಳಿಸಿ ಉತ್ತಮ ಸಾಧನೆ ಮಾಡಿದ್ದಾನೆ. 1ರಿಂದ 10ನೇ ತರಗತಿಯವರೆಗೆ ಸ್ವ ಗ್ರಾಮದಲ್ಲಿ ಕನ್ನಡ ಮಾಧ್ಯಮದಲ್ಲಿ ಓದಿ ಪಿಯುಸಿಯಲ್ಲಿ ವಿಜ್ಞಾನ ವಿಭಾಗವನ್ನು ಆಯ್ಕೆ ಮಾಡಿಕೊಂಡು ದ್ವಿತೀಯ ಪಿಯುಸಿಯಲ್ಲಿ 567 ಅಂಕಪಡೆದಿದ್ದಾನೆ. ಕನ್ನಡ-90, ಇಂಗ್ಲಿಷ್ -90, ಭೌತಶಾಸ್ತ್ರ-100, ರಸಾಯನಶಾಸ್ತ್ರ-97, ಗಣಿತ-94, ಜೀವಶಾಸ್ತ್ರ-96, ಅಂಕಪಡೆದು ಶೇ.94.50ರಷ್ಟು ಅಂಕ ಪಡೆದು ಸಾಧನೆ ಮಾಡಿದ್ದಾನೆ.
ನನ್ನ ತಂದೆಯೇ ಸ್ಫೂರ್ತಿ: ವೃತ್ತಿಯಲ್ಲಿ ಟೈಲರ್ ಆಗಿದ್ದ ನನ್ನ ತಂದೆ ರಾತ್ರಿ ಇಡೀ ಬಟ್ಟೆ ಹೊಲೆಯುತ್ತಿದ್ದರು. ನನರ ಆಗ್ಬೇಡ. ಚೆನ್ನಾಗಿ ಓದೆಕು. ಸಾಧನೆ ಮಾಡ್ಬೇಕು ಎಂದು ಹೇಳುತ್ತಿದ್ದರು. ಅವರ ಸಲಹೆಯಂತೆ ಕಠಿಣ ಪರಿಶ್ರಮದಿಂದ ಓದಿದೆ. ಶ್ರಮಕ್ಕೆ ತಕ್ಕ ಪ್ರತಿಫಲ ಸಿಕ್ಕಿದೆ. ಆದರೆ ಈ ಸಂಭ್ರಮ ಹಂಚಿಕೊಳ್ಳಲು ನನ್ನ ಕಣ್ಮುಂದೆ ತಂದೆ ಇಲ್ಲ ಎಂದು ಗದ್ಗದಿತನಾದ ತಿಪ್ಪೇಸ್ವಾಮಿ.
ಉಪನ್ಯಾಸರ ಮಾರ್ಗದರ್ಶನ: ಬಡ ವಿದ್ಯಾರ್ಥಿ ಎಂದು ತಿಳಿದು ನಮ್ಮ ಕಾಲೇಜಿನ ಎಲ್ಲ ಉಪನ್ಯಾಸಕರು ನನ್ನ ಬಗ್ಗೆ ಹೆಚ್ಚಿನ ಕಾಳಜಿ ಹೊಂದಿದ್ದರು. ಅವರ ಉತ್ತಮ ಮಾರ್ಗದರ್ಶನ ಈ ಸಾಧನೆಗೆ ಪ್ರೇರಣೆಯಾಯಿತು. ರಾತ್ರಿ ಬೇಗ ಮಲಗಿ ಬೇಗೆ ಏಳುತ್ತಿದ್ದೆ. ಪರೀಕ್ಷೆ ಸಮೀಪಿಸುತ್ತಿದ್ದಂತೆ ಮಧ್ಯೆ ರಾತ್ರಿ 2.30ರ ವರೆಗೆ ನಿರಂತರವಾಗಿ ಅಧ್ಯಯನ ಮಾಡುತ್ತಿದ್ದೆ ಎಂದು ಅಭ್ಯಾಸದ ಕ್ರಮದ ಬಗ್ಗೆ ಅನುಭವ ಹಂಚಿಕೊಂಡ.
ಐಎಎಸ್ ಆಗುವ ಆಸೆ: ಶಾಲಾ ಫೀಜು ಸೇರಿದಂತೆ ಇತರೇ ಖರ್ಚುಗಳಿಗೆ ತಪ್ಪದೇ ಕೂಲಿ ಮಾಡಿ ಹಣ ಕೊಟ್ಟ ನನ್ನ ತಾಯಿ ಯಾವುದಕ್ಕೂ ನನಗೆ ಕೊರೆತೆ ಮಾಡಿಲ್ಲ. ಎಷ್ಟು ಬೇಕಾದರೂ ಓದು ಬಡತನ ಇದೆ ಎಂದು ಹಿಂಜರಿಯಬೇಡ ಎಂದು ಆತ್ಮವಿಶ್ವಾಸದ ಮಾತುನಾಡುತ್ತಾರೆ. ಆದರೆ ಡಾಕ್ಟರಂತಹ ಕೋಸ್‌ಗಳಿಗೆ ಪ್ರವೇಶ ಪಡೆಯಲು ನಮ್ಮಂತಹ ಬಡವರಿಂದ ಕಷ್ಟ ಸಾಧ್ಯ.
ಈ ಉದ್ದೇಶಕ್ಕಾಗಿ ನೀಟ್ ಬರೆಯಲಿಲ್ಲ. ಕೇವಲ ಸಿಇಟಿ ಬರೆದಿದ್ದೇನೆ. ಡಾಕ್ಟರ್ ಆಗದಿದ್ದರೂ ಕೂಡಾ ಬಿವಿಎಸಿ ಡಾಕ್ಟರ್ ಆಗುತ್ತೇನೆ. ಕೆಲಸ ಹಿಡಿದ ನಂತರ ಐಎಎಸ್ ಆಗಬೇಕೆಂಬ ಮಹಾದಾಸೆ ನನ್ನದು. ಅದನ್ನು ಪೂರೈಸುತ್ತೇನೆಂದು ತನ್ನ ಭವಿಷ್ಯದ ಬಗ್ಗೆ ತಿಪ್ಪೇಸ್ವಾಮಿ ಆತ್ಮವಿಶ್ವಾಸ ವ್ಯಕ್ತಪಡಿಸಿದ.
ವಿದ್ಯಾರ್ಥಿ ತಿಪ್ಪೇಸ್ವಾಮಿಗೆ ಈ ಸದ್ಯ ಬಡತನ ಕಾಡುತ್ತಿದೆ. ಮುಂದಿನ ವಿದ್ಯಾಭ್ಯಾಸಕ್ಕೆ ಆರ್ಥಿಕ ಸಹಾಯಬೇಕಿದೆ. ಸಹಾಯ ಮಾಡಲಿಚ್ಚಿಸುವವರು ಕೆ.ಎಂ.ತಿಪ್ಪೇಸ್ವಾಮಿ, ಅಕೌಂಟ್ ನಂಬರ್ (10760101017098)ಗೆ ಪ್ರಗತಿ ಕೃಷ್ಣ ಗ್ರಾಮೀಣ ಬ್ಯಾಂಕ್ ಮುಸ್ಟೂರು ಇಲ್ಲಿ ಜಮಾ ಮಾಡಬಹುದು.