Advertisement

ಸಾರ್ವಜನಿಕ ಆಸ್ತಿ ಹಾನಿಯ ನಷ್ಟವನ್ನು ಭರಿಸುವ ಕಠಿನ ಕಾಯ್ದೆಬೇಕು

12:58 AM Feb 03, 2024 | Team Udayavani |

ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿ ಮಾಡಿರುವ ಬಂಧಿತ ಆರೋಪಿಗಳಿಗೆ ಜಾಮೀನು ಸಿಗಬೇಕಾದರೆ ಅವರಿಂದ ಹಾನಿಗೀಡಾದ ವಸ್ತುವಿನ ಮೌಲ್ಯಕ್ಕೆ ಸರಿಸಮಾನಾಗಿ ಹಣವನ್ನು ಠೇವಣಿ ಪಡೆಯಬೇಕು ಎಂಬ ಹೊಸ ನಿಯಮವನ್ನು ಕಾನೂನು ಆಯೋಗ ಕೇಂದ್ರ ಸರಕಾರಕ್ಕೆ ಶಿಫಾರಸು ಮಾಡಲು ಹೊರಟಿರುವುದು ಉತ್ತಮ ಬೆಳವಣಿಗೆ. ಹಲವು ಪ್ರಕರಣಗಳಲ್ಲಿ ಪ್ರತಿಭಟನೆ, ಬಂದ್‌ ವೇಳೆ ಸಾರ್ವಜನಿಕ ಆಸ್ತಿಪಾಸ್ತಿಗಳಿಗೆ ಹಾನಿ ಮಾಡಿ ಬಂಧಿತರಾದ ವ್ಯಕ್ತಿಗಳು ಜಾಮೀನು ಪಡೆದುಕೊಳ್ಳುವುದು ಸುಲಭದ ಸಂಗತಿಯಾಗಿದೆ. ಸಾರ್ವಜನಿಕ ಆಸ್ತಿಪಾಸ್ತಿಗಳ ಹಾನಿ ತಡೆ ಕಾಯ್ದೆಗೆ ತಿದ್ದುಪಡಿ ತಂದು ಈ ಅಂಶವನ್ನು ಸೇರಿಸಬೇಕೆಂದು ಕಾನೂನು ಆಯೋಗಕ್ಕೆ ಶಿಫಾರಸು ಮಾಡಲು ಮುಂದಾಗಿದೆ.

Advertisement

ಸದ್ಯ ಸಾರ್ವಜನಿಕ ಆಸ್ತಿಪಾಸ್ತಿಗಳ ಹಾನಿ ತಡೆ ಕಾಯ್ದೆ-1984 ಹಲ್ಲಿಲ್ಲದ ಹಾವಿನಂತಿದೆ. ಪ್ರತಿಭಟನೆ, ದೊಂಬಿ ವೇಳೆ ಸಾರ್ವಜನಿಕ ಆಸ್ತಿಪಾಸ್ತಿಗಳನ್ನು ಹಾನಿ ಮಾಡುವವರ ವಿರುದ್ಧ ಜೈಲು ಶಿಕ್ಷೆ ಮತ್ತು ದಂಡವನ್ನು ವಿಧಿಸಲಷ್ಟೇ ಅವಕಾಶ ಇದೆ. ಆದರೆ ಹಾನಿಯನ್ನು ಭರ್ತಿಗೊಳಿಸುವ ಯಾವ ಅವಕಾಶವೂ ಇಲ್ಲ. ಇತ್ತೀಚೆಗೆ ಉತ್ತರ ಪ್ರದೇಶ ಸರಕಾರ 2010 ಅಲಹಾಬಾದ್‌ ಹೈಕೋರ್ಟ್‌ ಆದೇಶವನ್ನು ಪರಿಗಣಿಸಿ, ಹಾನಿಯನ್ನು ಭರಿಸುವ ನಿಟ್ಟಿನಲ್ಲಿ ಅಧಿಕಾರಯುತ ಪ್ರಾಧಿಕಾರವೊಂದನ್ನು ರಚಿಸಿ ಆದೇಶ ಹೊರಡಿಸಿತ್ತು.

ದೇಶದಲ್ಲಿ ಆಸ್ತಿಪಾಸ್ತಿ ಹಾನಿ ಭರಿಸುವ ಸಂಬಂಧ ಕೇಂದ್ರೀಯ ಶಾಸನ ಇಲ್ಲದೆ ಇರುವುದು ಕೊರತೆ. 2009ರಲ್ಲಿ ಸುಪ್ರೀಂ ಕೋರ್ಟ್‌ ಎಲ್ಲ ಹೈಕೋರ್ಟ್‌ಗಳಿಗೆ ಮಾರ್ಗ ಸೂಚಿಯನ್ನು ಹೊರಡಿಸಿದ್ದು, ಇದರ ಪ್ರಕಾರ ಹಾನಿಯನ್ನು ಭರಿಸುವ ಸಂಬಂಧ ಹಾಲಿ ಅಥವಾ ನಿವೃತ್ತ ನ್ಯಾಯಮೂರ್ತಿಗಳನ್ನು “ಕ್ಲೇಮ್‌ ಕಮಿಶನರ್‌’ ಎಂದು ನೇಮಕ ಮಾಡಲು ಆದೇಶಿಸಿತು. ಇವರು ದೊಂಬಿಯ ವೇಳೆ ಹಾನಿಗೀಡಾದ ಸಾರ್ವಜನಿಕ ಆಸ್ತಿಪಾಸ್ತಿಗಳ ಮೌಲ್ಯವನ್ನು ಪರಿಶೋಧನೆ ನಡೆಸಿ ಹಾನಿಗೆ ಕಾರಣವಾದ ಸಂಘಟನೆ ಅಥವಾ ವ್ಯಕ್ತಿಯಿಂದ ಭರಿಸಬೇಕು ಎಂದು ನಿರ್ದೇಶಿಸಲಾಗಿದೆ.

ಭಾರೀ ಪ್ರಮಾಣದ ಆಸ್ತಿಪಾಸ್ತಿಗೆ ಹಾನಿಗೆ ಕಾರಣವಾಗುವ ಪ್ರತಿಭಟನೆ, ದೊಂಬಿಗೆ ಚಾಲನೆ ನೀಡಿದ, ಪ್ರಚೋದನೆ ನೀಡಿದ, ಜನರ ಗುಂಪನ್ನು ಕೆರಳಿಸಿದ ವ್ಯಕ್ತಿಯನ್ನು ಹೊಣೆ ಮಾಡಿ ಆತನಿಂದ ನಷ್ಟವನ್ನು ಭರಿಸಿಕೊಳ್ಳಬೇಕು ಎಂದು 2018ರಲ್ಲಿ ಸುಪ್ರೀಂಕೋರ್ಟ್‌ ಆದೇಶಿಸಿತ್ತು. 2020ರಲ್ಲಿ ಬೆಂಗಳೂರಿನಲ್ಲಿ ನಡೆದ ದೊಂಬಿಗೆ ಸಂಬಂಧಿಸಿದ ಹಾಗೆ ಇದೇ ಮಾದರಿಯ “ಕ್ಲೇಮ್‌ ಕಮಿಶನರ್‌’ ನ್ನು ನೇಮಕ ಮಾಡಲಾಗಿತ್ತು.

ಆದರೆ ಇಂಥ ಬಹುತೇಕ ಸಂದರ್ಭಗಳಲ್ಲಿ ಬೇರೆ ಬೇರೆ ಕಾರಣಗಳಿಂದಾಗಿ ಪ್ರಕರಣದ ಇತ್ಯರ್ಥವಾಗುವುದು ತಡವಾಗುತ್ತದೆ ಹಾಗೂ ಹಾನಿಯನ್ನು ಭರಿಸುವ ಪ್ರಕ್ರಿಯೆಗೆ ಅಡ್ಡಿಯಾಗುತ್ತದೆ. ಈ ನಡುವೆ, ಆರೋಪಿಯು ಜಾಮೀನು ಪಡೆದುಬಿಡುತ್ತಾನೆ. ಭಾರತೀಯ ಪ್ರಜಾಪ್ರಭುತ್ವದಲ್ಲಿ ಪ್ರತಿಭಟನೆ ನಡೆಸುವ ಹಕ್ಕು ಎಲ್ಲರಿಗೆ ಇದೆಯಾದರೂ, ಅದನ್ನೇ ಮುಂದಿಟ್ಟುಕೊಂಡು ಹಿಂಸಾಚಾರಕ್ಕಿಳಿಯುವ ಪ್ರವೃತ್ತಿ ಸಾಮಾನ್ಯವೆನಿಸಿದೆ. ಸಾರ್ವಜನಿಕ ಆಸ್ತಿಪಾಸ್ತಿಗಳಿಗೆ ಹಾನಿ ಮಾಡಿದರಷ್ಟೇ ಪ್ರತಿಭಟನೆ ಪೂರ್ಣಗೊಳ್ಳುತ್ತದೆ ಎಂಬ ವಿಕೃತ ಮನಃಸ್ಥಿತಿ ಹಲವರಿಗಿದೆ. ಹೀಗಾಗಿ ಕಠಿನ ಕಾನೂನು ರೂಪುಗೊಳ್ಳದೆ ಇದ್ದರೆ, ಮತ್ತೆ ಮತ್ತೆ ಇಂಥ ಘಟನೆಗಳು ನಡೆಯುತ್ತವೆ. ಈ ಹಿನ್ನೆಲೆಯಲ್ಲಿ ಕಾನೂನು ಆಯೋಗದ ಶಿಫಾರಸಿನಂತೆ ಆರೋಪಿಗೆ ಜಾಮೀನು ನೀಡುವ ಮೊದಲೇ ನಷ್ಟವನ್ನು ಭರಿಸುವ ವ್ಯವಸ್ಥೆ ಜಾರಿಗೆ ಬರಬೇಕು.

Advertisement
Advertisement

Udayavani is now on Telegram. Click here to join our channel and stay updated with the latest news.

Next